ಗಂಡನ ಮನೆಯಲ್ಲಿ ಸತ್ಯಗೆ ಹೆಜ್ಜೆ-ಹೆಜ್ಜೆಗೂ ಅಗ್ನಿ ಪರೀಕ್ಷೆ!
ಸತ್ಯ ಧಾರಾವಾಹಿಯಲ್ಲಿ ಗುರುಗಳು ಹೇಳಿದರೂ ಕೂಡ, ಸೀತಾ, ಕಾರ್ತಿಕ್ ಗೆ ಸತ್ಯ ಮೇಲೆ ಕೊಂಚವೂ ನಂಬಿಕೆ ಬಂದಿಲ್ಲ. ಈಗಲೂ ಸತ್ಯಳನ್ನು ಕಾರ್ತಿಕ್ ಹಾಗೂ ಸೀತಾ ದ್ವೇಷಿಸುತ್ತಿದ್ದಾರೆ. ಅಲ್ಲೇ ಡ್ರಾ, ಅಲ್ಲೇ ಬಹುಮಾನ ಎನ್ನುವ ಸತ್ಯಗೆ ಈಗ ಬಾಯಿ, ಕೈ ಎಲ್ಲಾ ಕಟ್ಟಿ ಹಾಕಿದ ಹಾಗೆ ಆಗಿದೆ.
ಇತ್ತ ಕೀರ್ತನಾಗೆ ಸತ್ಯ ಮಾಡಿದ ಪ್ರಸಾದವನ್ನು ದೇವರು ಸ್ವೀಕರಿಸಿದ ವಿಚಾರವೇ ತಲೆಯಲ್ಲಿ ಗುಯ್ ಗುಡುತ್ತಿದೆ. ತಾನು ಪ್ಲಾನ್ ಮಾಡಿ ಬೇಕಂತಲೇ ಸತ್ಯ ಮಾಡುವ ಪ್ರಸಾದ ಉಕ್ಕದೇ, ಸೀದು ಹೋಗುವಂತೆ ಮಾಡಿದ್ದಳು. ಆದರೂ ಕೂಡ ಸೀದು ಹೋಗಿದ್ದ ಪ್ರಸಾದವನ್ನೇ ದೇವರಿಗೆ ಪ್ರಿಯವಾಯಿತಲ್ಲ ಎಂದು ಯೋಚಿಸುತ್ತಿದ್ದಾಳೆ.
ಬಾಲನ ಕಥೆ ಯಾರಿಗೂ ಬೇಡ ಅನ್ನುವಂತಿದೆ. ದಿವ್ಯಾಗೆ ಸತ್ಯವನ್ನೂ ಹೇಳೋಕಾಗುತ್ತಿಲ್ಲ. ನಿಜ ಹೇಳಿದರೆ, ಒಟ್ಟಿಗೆ ಬಾಳೋದಕ್ಕೂ ಆಗುವುದಿಲ್ಲ. ಆಕೆಯನ್ನು ರಾಯಲ್ ಆಗಿ ನೋಡಿಕೊಳ್ಳುವುದಕ್ಕೆ ಬಾಲನ ಜೇಬು ಸಂಪೂರ್ಣವಾಗಿ ಖಾಲಿಯಾಗಿದೆ. ಈಗ ಹಣಕ್ಕಾಗಿ ಏನು ಮಾಡುವುದು ಎಂಬ ತಲೆ ನೋವೇ ಹೆಚ್ಚಾಗಿದೆ.

ಕೀರ್ತನಾ ಬೆನ್ನತ್ತಿದ ಬಾಲ!
ಬಾಲ ಬೇರೆ ದಾರಿ ಇಲ್ಲದೇ, ಮತ್ತೆ ಕೀರ್ತನಾಗೆ ಕರೆ ಮಾಡಿದ್ದಾನೆ. ಕೀರ್ತನಾ ಬಳಿ ಹಣಕ್ಕಾಗಿ ಮತ್ತೆ ಬೇಡಿಕೆ ಇಟ್ಟಿದ್ದಾನೆ. ಆದರೆ, ಕೀರ್ತನಾ ಹಣ ಕೊಡುವುದಕ್ಕೆ ಒಪ್ಪುತ್ತಿಲ್ಲ. ನಿನ್ನ ಹುಡುಗಿಯನ್ನ ಕರೆದುಕೊಂಡು ಹೋದಮೇಲೆ ಡೀಲ್ ಮುಗೀತು. ನನಗೂ ನಿನಗೂ ಇನ್ಯಾವ ವ್ಯವಹಾರವೂ ಇಲ್ಲ ಎನ್ನುತ್ತಾಳೆ. ಆದರೆ ಬಾಲ ಪ್ರತಿಕ್ರಿಯಿಸಿ, ದಿವ್ಯಾ ಸಿಕ್ಕಾಪಟ್ಟೆ ಕಾಸ್ಟ್ಲಿ ಹುಡುಗಿ. ಅವಳನ್ನ ಮೇಂಟೈನ್ ಮಾಡೋದಕ್ಕೆ ನನಗೆ ಹಣ ಬೇಕು. ದಿವ್ಯಾಳನ್ನು ಸಂಪೂರ್ಣವಾಗಿ ಕಟ್ಟಿ ಹಾಕುವವರೆಗೂ ನೀವು ಹಣ ಕೊಡಲೇಬೇಕು ಎನ್ನುತ್ತಾನೆ.

ಬಾಲನಿಗೆ ಆಟ ಕೀರ್ತನಾಗೆ ಪ್ರಾಣ ಸಂಕಟ!
ಇದಕ್ಕೆ ಕೀರ್ತನಾ ಒಪ್ಪದಿದ್ದಾಗ ಬೇರೆ ದಾರಿ ಇಲ್ಲದೇ, ಬ್ಲ್ಯಾಕ್ ಮೇಲ್ ಮಾಡುತ್ತಾನೆ. ಹಣ ಕೊಡದಿದ್ದರೆ, ನಿಮ್ಮ ತಂದೆಯ ಬಳಿ ಬಂದು ನಡೆದ ಎಲ್ಲಾ ವಿಚಾರವನ್ನೂ ಹೇಳುತ್ತೇನೆ ಎನ್ನುತ್ತಾನೆ. ಇದಕ್ಕೆ ಹೆದರಿದ ಕೀರ್ತನಾ ಹಣ ಕೊಡಲು ಒಪ್ಪುತ್ತಾಳೆ. ಆದರೆ ಮತ್ತೆ ಮತ್ತೆ ಕೇಳಬಾರದು ಎಂದು ಹೇಳುತ್ತಾಳೆ. ಈ ಮಾತಿಗೆ ಬಾಲ ಹಾಗೆಲ್ಲಾ ಆಗೋದಿಲ್ಲ. ನಾನು ದಿವ್ಯಾಳನ್ನು ಸಂಪೂರ್ಣವಾಗಿ ನನ್ನ ಕಡೆಗೆ ಒಲಿಸಿಕೊಳ್ಳುವವರೆಗೂ ನೀವು ನಾನು ಕೇಳಿದಷ್ಟು ಹಣ ಕೊಡಬೇಕು. ಇಲ್ಲದಿದ್ದರೆ, ಸೀದಾ ನಿಮ್ಮ ತಂದೆಯ ಬಳಿ ಬರುತ್ತೇನೆ. ನಡೆದ ಘಟನೆಯನ್ನು ವಿವರಿಸುತ್ತೇನೆ ಎಂದು ಹೆಸರಿಸುತ್ತಾನೆ. ಇದಕ್ಕೆ ಕೀರ್ತನಾ ಹೆದರಿಕೊಂಡು ಹಣ ಕೊಡಲು ಮುಂದಾಗುತ್ತಾಳೆ.

ಜಾನಕಿ ಜೊತೆ ಕಷ್ಟ ಹಂಚಿಕೊಂಡ ಸತ್ಯ!
ಸತ್ಯಗೆ ಏನು ಮಾಡಬೇಕು ಎಂಬುದೇ ಗೊತ್ತಾಗುತ್ತಿಲ್ಲ. ಜಾನಕಿ ಸತ್ಯಗೆ ಕರೆ ಮಾಡಿದ್ದು, ಸತ್ಯ ಕಣ್ಣೀರು ಹಾಕಿದ್ದಾಳೆ. ನಡೆದ ಘಟನೆಗಳನ್ನೆಲ್ಲಾ ವಿವರಿಸಿದ್ದಾಳೆ. ದಿವ್ಯಾ ಓಡಿ ಹೋಗಲು, ಕಾರ್ತಿಕ್ ಮದುವೆ ಸತ್ಯ ಜೊತೆಗೆ ಆಗಿದ್ದು ಎಲ್ಲವೂ ಪ್ಲಾನ್ ಮಾಡಿರುವುದು, ಸತ್ಯ ತನ್ನಿಷ್ಟದಂತೆ ಈ ಮದುವೆಯಾಗಿದ್ದಾಳೆ ಎಂದು ಕಾರ್ತಿಕ್ ತಿಳಿದುಕೊಂಡಿರುವುದನ್ನೂ ಸಹ ಹೇಳಿ ಗೋಳಾಡುತ್ತಾಳೆ. ಅತ್ತೆ ಕಷ್ಟ ಕೊಟ್ಟರೆ ಪರವಾಗಿಲ್ಲ, ಗಂಡನೂ ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ಹೇಳಿದ್ದಾಳೆ. ಈ ಮಾತುಗಳನ್ನು ಕೇಳಿ ಜಾನಕಿ ಬೇಸರಗೊಂಡಿದ್ದಾಳೆ.

ಸತ್ಯ ಮಾತು ಕೇಳಿದ ಊರ್ಮಿಳಾ!
ಇತ್ತ ಸತ್ಯ ಹಾಗೂ ಜಾನಕಿ ಫೋನ್‌ನಲ್ಲಿ ಮಾತನಾಡುತ್ತಿರುವುದನ್ನು ಊರ್ಮಿಳಾ ಕೇಳಿಸಿಕೊಂಡಿದ್ದಾಳೆ. ಸತ್ಯ ಎಷ್ಟು ಒದ್ದಾಡುತ್ತಿದ್ದಾಳೆ. ಅವಳಿಗೆ ಇಲ್ಲಿ ಯಾರು ಸಪೋರ್ಟ್ ಮಾಡುತ್ತಿಲ್ಲ. ಕಾರ್ತಿಕ್ ಕೂಡ ಸತ್ಯಳನ್ನ ಒಪ್ಪಿಕೊಂಡಿಲ್ಲ ಎಂದು ಊರ್ಮಿಳಾ ಬೇಸರ ಮಾಡಿಕೊಂಡಿದ್ದಾಳೆ. ಮುಂದೆ ಸೀರಿಯಲ್ ಏನಾಗುತ್ತೆ.? ಹೇಗೆ ಸೀತಾ ಹಾಗೂ ಕಾರ್ತಿಕ್ ಸತ್ಯಳನ್ನು ಒಪ್ಪಿಕೊಳ್ಳುತ್ತಾರೋ, ಇಲ್ಲವೋ ಎಂದು ನೋಡಬೇಕಿದೆ.


Click it and Unblock the Notifications











