'ಜೊತೆ ಜೊತೆಯಲಿ' ಕಥೆ ಅಂತ್ಯ: ಇನ್ಮುಂದೆ ಆ ಸಮಯಕ್ಕೆ ಬರುವ ಹೊಸ ಧಾರಾವಾಹಿ ಯಾವ್ದು ಗೊತ್ತಾ?
ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ 'ಜೊತೆ ಜೊತೆಯಲಿ' ಕಳೆದ 4 ವರ್ಷಗಳಿಂದ ವೀಕ್ಷಕರನ್ನು ರಂಜಿಸಿತ್ತು. ಇದೀಗ ಆ ಧಾರಾವಾಹಿಯನ್ನು ಮುಗಿಸುವ ನಿರ್ಧಾರಕ್ಕೆ ತಂಡ ಬಂದಿದೆ. ಈಗಾಗಲೇ ಶೂಟಿಂಗ್ ಮುಕ್ತಾಯವಾಗಿದ್ದು ಸದ್ಯ ಸಿದ್ಧ ಇರುವ ಎಪಿಸೋಡ್‌ಗಳು ಪ್ರಸಾರವಾಗುತ್ತಿದೆ. ಇನ್ನು ಮುಂದೆ ಜೀ ಕನ್ನಡ ವಾಹಿನಿಯಲ್ಲಿ ರಾತ್ರಿ 10 ಗಂಟೆ ಸ್ಲಾಟ್‌ಗೆ ಹೊಸ ಕಥೆ ಶುರುವಾಗಲಿದೆ.
ಒಂದ್ಕಾಲದಲ್ಲಿ ಕನ್ನಡ ಕಿರುತೆರೆಯ ನಂಬರ್ ವನ್ ಧಾರಾವಾಹಿ ಎನಿಸಿಕೊಂಡಿದ್ದ 'ಜೊತೆ ಜೊತೆಯಲಿ' ನಿಧಾನವಾಗಿ ಕೆಳಗಿಳಿದಿತ್ತು. ಅನಿರುದ್ಧ್ ತಂಡದ ಜೊತೆ ಕಿರಿಕ್ ಮಾಡಿಕೊಂಡು ಹೊರ ನಡೆದ ಮೇಲೆ ಧಾರಾವಾಹಿಯ ಬಗೆಗಿನ ಕುತೂಹಲ ಮತ್ತಷ್ಟು ಕಮ್ಮಿ ಆಗಿತ್ತು. ಆದರೂ ಕೂಡ ಕಳೆದ ಐದಾರು ತಿಂಗಳಿನಿಂದ ಧಾರಾವಾಹಿ ವೀಕ್ಷಕರನ್ನು ರಂಜಿಸುವ ಕೆಲಸ ಮಾಡಿತು. ಇದೀಗ ಧಾರಾವಾಹಿಗೆ ಶುಭಂ ಹಾಡುವ ಸಮಯ ಬಂದಿದೆ.

ದಿಢೀರನೇ ಕಥೆಗೊಂದು ಕ್ಲೈಮ್ಯಾಕ್ಸ್ ಕೊಡಲು ತಂಡ ಮುಂದಾಗಿದೆ. ಈ ವಾರವೇ 'ಜೊತೆ ಜೊತೆಯಲಿ' ಕಥೆ ಮುಗಿಯಲಿದ್ದು ಮುಂದಿನ ವಾರದಿಂದ ಆ ಸಮಯಕ್ಕೆ ವಾಹಿನಿಯಲ್ಲಿ ಹೊಸದೊಂದು ಕಥೆ ಶುರುವಾಗುತ್ತಿದೆ. ಈಗಾಗಲೇ ಅದರ ಪ್ರೋಮೊ ಕೂಡ ರಿಲೀಸ್ ಆಗಿದೆ. ಮೊದಲಿಗೆ ರಾತ್ರಿ 8.30ಕ್ಕೆ ಪ್ರಸಾರ ಆರಂಭಿಸಿದ್ದ 'ಜೊತೆ ಜೊತೆಯಲಿ' ಧಾರಾವಾಹಿ ನಂತರ 9.30ಕ್ಕೆ ಶಿಫ್ಟ್ ಆಗಿತ್ತು. ಇತ್ತೀಚೆಗೆ 'ಭೂಮಿಗೆ ಬಂದ ಭಗವಂತ' ಧಾರಾವಾಹಿ ಬೇಗ ಪ್ರಸಾರ ಮಾಡುವಂತೆ ವೀಕ್ಷಕರು ಮನವಿ ಮಾಡಿದ ಮೇಲೆ 'ಜೊತೆ ಜೊತೆಯಲಿ' ಪ್ರಸಾರದ ಸಮಯ ಮತ್ತೆ ಬದಲಾಗಿತ್ತು.
ಬರ್ತಿದೆ ಹೊಸ ಕಥೆ
ಜೀ ಕನ್ನಡ ವಾಹಿನಿಯಲ್ಲಿ ಈಗಾಗಲೇ ಸಾಕಷ್ಟು ಧಾರಾವಾಹಿಗಳು ಬಂದಿವೆ. ಬರುತ್ತಲೇ ಇವೆ. ಮುಂದೆ ಕೂಡ ಬರುತ್ತದೆ. ಸದ್ಯ 'ಜೊತೆ ಜೊತೆಯಲಿ' ಕಥೆ ಮುಗಿತ್ತಿದ್ದು ಆ ಜಾಗಕ್ಕೆ 'ಸೌಭಾಗ್ಯವತಿ ಭವ' ಎನ್ನುವ ಹೊಸ ಕಥೆ ಬರಲಿದೆ. ಅಂದಹಾಗೆ ಇದು ಅಚ್ಚ ಕನ್ನಡ ಧಾರಾವಾಹಿ ಅಲ್ಲ. ಬದಲಿಗೆ ತೆಲುಗು ಧಾರಾವಾಹಿಯ ಡಬ್ಬಿಂಗ್ ವರ್ಷನ್.

ಮುಖ್ಯ ಪಾತ್ರದಲ್ಲಿ ಕನ್ನಡ ನಟ
ಕೆಲ ಕನ್ನಡ ಕಲಾವಿದರು ನಟಿಸಿರುವುದರಿಂದ ಇದನ್ನು ಕನ್ನಡಕ್ಕೆ ಡಬ್ ಮಾಡಿದರೆ ಯಶಸ್ವಿ ಆಗುವ ಲೆಕ್ಕಾಚಾರ ನಡೀತಿದೆ. ಈ ಹಿಂದೆ ಕನ್ನಡದಲ್ಲಿ ಡಬ್ಬಿಂಗ್ ಕಾರ್ಯಕ್ರಮ ಪ್ರಸಾರಕ್ಕೆ ಅವಕಾಶ ಇರಲಿಲ್ಲ. ನಂತರ ಅವಕಾಶ ಸಿಕ್ಕಿತ್ತು. ಈಗಾಗಲೇ ಸಾಕಷ್ಟು ಬೇರೆ ಭಾಷೆಯ ಧಾರಾವಾಹಿಗಳು ಕನ್ನಡಕ್ಕೆ ಡಬ್ ಆಗಿ ಪ್ರಸಾರ ಕಾಣುತ್ತಿವೆ. ಅದೇ ಸಾಲಿಗೆ 'ಸೌಭಾಗ್ಯವತಿ ಭವ' ಕೂಡ ಸೇರಿಕೊಳ್ತಿದೆ.
'ಚಿರಂಜೀವಿ ಲಕ್ಷ್ಮೀ ಸೌಭಾಗ್ಯವತಿ'
'ಮಿಸ್ಟರ್ ಆಂಡ್ ಮಿಸಸ್ ರಂಗೇಗೌಡ', 'ನಮ್ಮನೆ ಯುವರಾಣಿ' ಧಾರಾವಾಹಿಗಳಲ್ಲಿ ನಟಿಸಿದ್ದ ರಾಘವೇಂದ್ರ ಈ ಧಾರಾವಾಹಿಯಲ್ಲೂ ನಟಿಸಿದ್ದಾರೆ. ಜೀ ತೆಲುಗು ವಾಹಿನಿಯಲ್ಲಿ 'ಚಿರಂಜೀವಿ ಲಕ್ಷ್ಮೀ ಸೌಭಾಗ್ಯವತಿ' ಹೆಸರಿನಲ್ಲಿ ಈ ಧಾರಾವಾಹಿ ಪ್ರಸಾರವಾಗುತ್ತಿದೆ. ಇದನ್ನು ಕನ್ನಡಕ್ಕೆ ಡಬ್ ಮಾಡಿ ಜೊತೆ ಜೊತೆಯಲಿ ಬದ್ಲು ರಾತ್ರಿ 10 ಗಂಟೆಗೆ ಪ್ರಸಾರ ಮಾಡುವ ಸಾಧ್ಯತೆಯಿದೆ.

'ಸೌಭಾಗ್ಯವತಿ ಭವ' ಕಥೆ ಏನು?
ಮಿತ್ರಾನಂದನ ಹಾಗೂ ಭಾಗ್ಯಲಕ್ಷ್ಮಿ ಜೋಡಿಯ ಪ್ರೀತಿ, ಮದುವೆಯ ಕಥೆ ಈ ಧಾರಾವಾಹಿಯಲ್ಲಿದೆ. ಡಬ್ಬಿಂಗ್ ಗುಣಮಟ್ಟ ಚೆನ್ನಾಗಿದ್ದು ಧಾರಾವಾಹಿ ಕನ್ನಡ ವೀಕ್ಷಕರ ಮನಗೆಲ್ಲುವ ಸುಳಿವು ಸಿಗುತ್ತಿದೆ. ಇದು ಕೂಡ ಮೆಗಾ ಧಾರಾವಾಹಿಯಾಗಿದ್ದು ತೆಲುಗಿನಲ್ಲಿ ಬಹಳ ಅದ್ಧೂರಿಯಾಗಿ ಮೂಡಿ ಬರ್ತಿದೆ.


Click it and Unblock the Notifications











