BBK12: ಸೀಕ್ರೆಟ್ ಆಗಿ ಮನೆ ಒಳಗೆ ಬಂದು ಕ್ಲಾಟ್ಲೆ ಕೊಟ್ಟ ಧ್ರುವಂತ್, ರಕ್ಷಿತಾ; ಮನೆ ಮಂದಿ ಶಾಕ್
ಬಿಗ್‌ಬಾಸ್ ಕನ್ನಡ ಸೀಸನ್ 12ರಲ್ಲಿ ಸೀಕ್ರೆಟ್ ರೂಮ್ ಕಾನ್ಸೆಪ್ಟ್ ನಡೀತಿದೆ. ಧ್ರುವಂತ್ ಹಾಗೂ ರಕ್ಷಿತಾ ಎಲಿಮಿನೇಟ್ ಆಗಿದ್ದಾರೆ ಎಂದು ಮನೆಮಂದಿ ಮುಂದೆ ಬಿಂಬಿಸಿ ಅವರಿಬ್ಬರನ್ನು ಸೀಕ್ರೆಟ್ ರೂಮ್‌ನಲ್ಲಿ ಇಡಲಾಗಿದೆ. ಈ ಬಗ್ಗೆ ಕೆಲವರಿಗೆ ಅನುಮಾನ ಬಂದಿದೆ. ಆದರೂ ಕನ್ಫರ್ಮ್ ಇಲ್ಲ.
ಮನೆಯಲ್ಲಿ ತಮ್ಮ ಬಗ್ಗೆ ಸ್ಪರ್ಧಿಗಳು ಏನೆಲ್ಲಾ ಮಾತನಾಡುತ್ತಾರೆ ಎನ್ನುವುದನ್ನು ಧ್ರುವಂತ್ ಹಾಗೂ ರಕ್ಷಿತಾ ಕದ್ದು ಕೇಳಿಸಿಕೊಳ್ಳುತ್ತಿದ್ದಾರೆ. ದಿನದ 24 ಗಂಟೆ ಮನೆಯೊಳಗೆ ಏನೆಲ್ಲಾ ಆಗುತ್ತದೆ ಎನ್ನುವುದನ್ನು ಗಮನಿಸುತ್ತಿದ್ದಾರೆ. ಇದೀಗ ಬಿಗ್‌ಬಾಸ್ ಆಣತಿಯಂತೆ ಇಬ್ಬರೂ ಮನೆ ಒಳಗೆ ಇರುವ ಸ್ಪರ್ಧಿಗಳಿಗೆ ಕ್ವಾಟ್ಲೆ ಕೊಡಲು ಆರಂಭಿಸಿದ್ದಾರೆ.

ಸೀಕ್ರೆಟ್ ರೂಮ್‌ನಲ್ಲಿರುವ ಧ್ರುವಂತ್ ಹಾಗೂ ರಕ್ಷಿತಾಗೆ ಬಿಗ್‌ಬಾಸ್ ಹೊಸ ಟಾಸ್ಕ್ ಕೊಟ್ಟಿದ್ದಾರೆ. ಅದಕ್ಕಿಂತ ದೊಡ್ಡ ಶಿಕ್ಷೆ ಮನೆ ಮಂದಿಗೆ ಎದುರಾಗಿದೆ. ಮನೆಯಲ್ಲಿರುವ ಎಲ್ಲರನ್ನು ಗಾರ್ಡನ್ ಏರಿಯಾಗೆ ಕಳುಹಿಸಿ ಧ್ರುವಂತ್ ಹಾಗೂ ರಕ್ಷಿತಾ ಇಬ್ಬರಿಗೂ ಮನೆ ಒಳಗೆ ಹೋಗುವಂತೆ ಬಿಗ್‌ಬಾಸ್ ಹೇಳಿದ್ದಾರೆ. ಇಬ್ಬರೂ ಸೇರಿ ಮನೆಯಲ್ಲಿ ಕಸ ಸುರಿದು, ಗಲೀಜು ಮಾಡಿ ಬರುವಂತೆ ಸೂಚಿಸಿದ್ದಾರೆ. ಅದರಂತೆ ಅವರಿಬ್ಬರು ಸಾಧ್ಯವಾದಷ್ಟು ಕಸ ಹಾಕಿ ಬಂದಿದ್ದಾರೆ. ಬಳಿಕ ಮನೆಮಂದಿಯನ್ನು ಒಳಗೆ ಕಳುಹಿಸಿ ಸ್ವಚ್ಛ ಮಾಡುವ ಟಾಸ್ಕ್ ಕೊಡಲಾಗಿದೆ. ಕೊಂಚ ಹೆಚ್ಚು ಕಮ್ಮಿ ಆದರೂ ವಾರದ ಲಕ್ಷುರಿ ಬಜೆಟ್ ಕಳೆದುಕೊಳ್ಳಬೇಕಾಗುತ್ತದೆ.
ಬಾಗಿಲು ತೆಗೆಯುತ್ತಿದ್ದಂತೆ ಒಳಗೆ ಹೋದವರಿಗೆ ಶಾಕ್ ಕಾದಿದೆ. ಕೆಲವೇ ನಿಮಿಷಗಳಲ್ಲಿ ಮನೆ ಎಷ್ಟು ಗಲೀಜು ಆಗಿಬಿಟ್ಟಿದೆ ಎಂದು ಹುಬ್ಬೇರಿಸಿದ್ದಾರೆ. ಪೊರಕೆ, ಬಕೆಟ್ಟು ಹಿಡಿದು ಸ್ವಚ್ಛಗೊಳಿಸುವ ಕೆಲಸ ಆರಂಭಿಸಿದ್ದಾರೆ. ಅದನ್ನು ಸೀಕ್ರೆಟ್ ರೂಮ್‌ನಲ್ಲಿ ಕೂತು ನೋಡಿ ಧ್ರುವಂತ್, ರಕ್ಷಿತಾ ಎಂಜಾಯ್ ಮಾಡುತ್ತಿದ್ದಾರೆ. ಹೊಸ ಪ್ರೋಮೊದಲ್ಲಿ ಇದನ್ನು ನೋಡಬಹುದು.
ಈ ವಾರ ಕಾವ್ಯಾ ಕ್ಯಾಪ್ಟನ್ ಆಗಿ ಆಯ್ಕೆ ಆಗಿದ್ದಾರೆ ಎಂದು ಹೇಳಲಾಗ್ತಿದೆ. ಈ ಬಗ್ಗೆ ಖಚಿತ ಮಾಹಿತಿ ಇಲ್ಲ. ಇನ್ನು 'ಪ್ಯಾರ್' ಚಿತ್ರತಂಡ ಬಿಗ್‌ಬಾಸ್ ಮನೆಗೆ ಬಂದು ಹೋಗಿದೆ. ರಾಶಿಕಾ ನಟನೆಯ ಈ ಚಿತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಬಿಗ್‌ಬಾಸ್ ಮನೆಯಲ್ಲೇ ಚಿತ್ರದ ಹಾಡನ್ನು ಬಿಡುಗಡೆ ಮಾಡಲಾಗಿದೆ. ನಾಯಕ ಭರತ್ ಕೂಡ ಸಾಥ್ ಕೊಟ್ಟಿದ್ದಾರೆ.
ಇತ್ತ ಸೀಕ್ರೆಟ್ ರೂಮ್‌ನಲ್ಲಿ ಧ್ರುವಂತ್ ಹಾಗೂ ರಕ್ಷಿತಾ ನಡುವೆ ಫೈಟ್ ನಡೆಯುತ್ತಲೇ ಇದೆ. ಹಿಂದಿನ ಎಪಿಸೋಡ್‌ನಲ್ಲಿ ಜೋಡಿಗಳ ಆಯ್ಕೆ ವಿಚಾರದಲ್ಲಿ ಇಬ್ಬರೂ ಜಗಳ ಮಾಡಿದ್ದರು. ರಕ್ಷಿತಾ ಕೂಗಾಡಿ ರಂಪ ರಾದ್ದಾಂತ ಮಾಡಿದ್ದು ಗೊತ್ತೇಯಿದೆ. ಮೊದಲಿನಿಂದಲೂ ಇಬ್ಬರ ನಡುವೆ ಅಷ್ಟಕ್ಕಷ್ಟೆ. ಇದೀಗ ಸೀಕ್ರೆಟ್ ರೂಮ್‌ನಲ್ಲೇ ಇಬ್ಬರೇ ಇರುವುದರಿಂದ ಕಿರಿಕ್ ಹೆಚ್ಚಾಗುತ್ತಿದೆ.
ಇಬ್ಬರು ಮತ್ತೆ ಮನೆ ಒಳಗೆ ಯಾವಾಗ ಎಂಟ್ರಿ ಕೊಡುತ್ತಾರೆ ಎನ್ನುವುದು ಕುತೂಹಲ ಮೂಡಿಸಿದೆ. ಈಗಾಗಲೇ ಕೆಲವರಿಗೆ ಸೀಕ್ರೆಟ್ ರೂಮ್ ವಿಚಾರ ಅನುಮಾನ ಮೂಡಿಸಿದೆ. ಹಾಗಾಗಿ ಇಬ್ಬರು ಮತ್ತೆ ವಾಪಸ್ ಆಗುವುದು ಮನೆ ಮಂದಿಗೆ ಶಾಕ್ ಕೊಡಬೇಕು ಎಂದು ವೀಕ್ಷಕರು ಬಯಸುತ್ತಿದ್ದಾರೆ. ಇಷ್ಟು ದಿನ ನಾವು ನಂಬಿದ್ದು ಸುಳ್ಳು ಎನ್ನುವಂತಹ ಶಾಕ್ ಆಗಿರಬೇಕು ಎಂದು ಬಯಸುತ್ತಿದ್ದಾರೆ.
ಈಗಾಗಲೇ ಸೀಸನ್ 12 ಬರೋಬ್ಬರಿ 80 ದಿನ ಪೂರೈಸಿ ಮುನ್ನುಗ್ಗುತ್ತಿದೆ. ಶೀಘ್ರದಲ್ಲೇ ಫ್ಯಾಮಿಲಿ ರೌಂಡ್ ಕೂಡ ಬರಲಿದೆ. ಗಿಲ್ಲಿ ಈ ಬಾರಿ ಟ್ರೋಫಿ ಗೆಲ್ಲುವುದು ಪಕ್ಕಾ ಎಂದು ಸಾಕಷ್ಟು ಜನ ಹೇಳುತ್ತಿದ್ದಾರೆ. ಆದರೆ ಬಿಗ್‌ಬಾಸ್ ಮನೆಯಲ್ಲಿ ಎಲ್ಲವೂ ನಾವು ಊಹಿಸಿದಂತೆ ನಡೆಯುವುದಿಲ್ಲ. ಈ ಹಿಂದೆ ಕೂಡ ಅಚ್ಚರಿಯ ಫಲಿತಾಂಶಗಳು ಹೊರಬಂದಿದೆ.


Click it and Unblock the Notifications











