Ramachari Serial: 'ರಾಮಾಚಾರಿ' ಬಾಳಲ್ಲಿ ಬಂದೇ ಬಿಟ್ಟಳು ಸೀತಾ; ಇನ್ನು ಚಾರುಲತಾ ಗತಿಯೇನು?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳ ಪೈಕಿ 'ರಾಮಾಚಾರಿ'ಯೂ ಒಂದು. ಕೆಎಸ್ ರಾಮ್ ಜೀ ನಿರ್ದೇಶನದಲ್ಲಿ ಪ್ರಸಾರವಾಗುತ್ತಿರುವ 'ರಾಮಾಚಾರಿ' ಧಾರಾವಾಹಿಯಲ್ಲಿ ರಿತ್ವಿಕ್ ಕೃಪಾಕರ್ ನಾಯಕ ರಾಮಚಾರಿ ಪಾತ್ರದಲ್ಲಿ ನಟಿಸಿದರೆ, ಮೌನ ಗುಡ್ಡೆಮನೆ ನಾಯಕಿ ಚಾರುಲತಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
'ರಾಮಾಚಾರಿ' ಧಾರಾವಾಹಿಯ ಪ್ರತಿ ಸಂಚಿಕೆಯೂ ವಿಶೇಷತೆಯಿಂದ ಕೂಡಿದ್ದು, ಕಿರುತೆರೆ ವೀಕ್ಷಕರಿಗೆ ಮನರಂಜನೆಯ ರಸದೌತಣ ಸಿಗುವುದಂತೂ ನಿಜ. ಇನ್ನು ಇತ್ತೀಚೆಗಿನ ಸಂಚಿಕೆಯಲ್ಲಿ ರಾಮಾಚಾರಿಯ ತಲೆಯಲ್ಲಿ ಇರುವ ಎರಡು ಸುಳಿಯ ಬಗ್ಗೆ ಕಥೆ ನಡೆಯುತ್ತಿದೆ. ಹೌದು, ನಾಯಕ ರಾಮಾಚಾರಿಯ ತಲೆಯಲ್ಲಿ ಎರಡು ಸುಳಿ ಇರುವ ಕಾರಣ ಅವನಿಗೆ ಎರಡು ಮದುವೆ ಆಗುತ್ತದೆ ಎಂದು ಮನೆಯವರೆಲ್ಲಾ ಚಾರುಲತಾಳನ್ನು ರೇಗಿಸುತ್ತಾರೆ. ಮನೆಯವರ ಮಾತು ಕೇಳಿ ಚಾರುಲತಾ ಕಣ್ಣೀರು ಹಾಕುತ್ತಾಳೆ. ಜೊತೆಗೆ ರಾಮಾಚಾರಿ ಇನ್ನೊಂದು ಮದುವೆಯಾಗುವುದನ್ನು ಆಕೆಗೆ ಊಹಿಸಲು ಕೂಡಾ ಕಷ್ಟವಾಗುತ್ತಿದೆ.

ಇದರ ಬೆನ್ನಲ್ಲೇ ಧಾರಾವಾಹಿ ಕಥೆಯಲ್ಲಿ ಮಹತ್ತರವಾದ ತಿರುವೊಂದು ಎದುರಾಗಿದೆ. ಹೌದು, ರಾಮಾಚಾರಿಯ ಬದುಕಿನಲ್ಲಿ ಸೀತಾಳ ಆಗಮನವಾಗಿದೆ. ರಾಮಾಚಾರಿ ಆಫೀಸ್‌ಗೆ ಹೋಗುತ್ತಿರುವಾಗ ದಾರಿಯಲ್ಲಿ ಜನರ ಗುಂಪೊಂದು ಕಾಣಿಸುತ್ತದೆ. ಅಲ್ಲಿ ಹೋಗಿ ನೋಡಿದಾಗ ಕಾರೊಂದು ಆಕ್ಸಿಡೆಂಟ್ ಆಗಿರುವುದು ಕಾಣಿಸುತ್ತದೆ. ಕಾರು ಚಲಾಯಿಸುತ್ತಿದ್ದ ಸೀತಾ ಎನ್ನುವ ಹುಡುಗಿಗೆ ಅಪಘಾತವಾಗಿದ್ದು ರಾಮಾಚಾರಿ ಅವಳನ್ನು ರಾಮಾಚಾರಿ ಎತ್ತಿಕೊಂಡು ಆಸ್ಪತ್ರೆಗೆ ಸೇರಿಸುತ್ತಾನೆ. ಆದರೆ ಆಸ್ಪತ್ರೆಯಲ್ಲಿ ಏನೋ ಸಮಸ್ಯೆ ಆಗಿದ್ದು ಎಂಡಿ ಬಂದು ಕ್ಷಮೆ ಕೇಳುವವರೆಗೂ ನಾವು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡುವುದಿಲ್ಲ ಎಂದು ಡಾಕ್ಟರ್ ಪಟ್ಟು ಹಿಡಿದು ಕುಳಿತಿರುತ್ತಾರೆ. ರಾಮಾಚಾರಿ ಅವರಿಗೆ ಸರಿಯಾಗಿ ಬೈದು, ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ನೀಡುವಂತೆ ಮಾಡುತ್ತಾನೆ.
ಆಸ್ಪತ್ರೆಗೆ ಸೀತಾ ಮನೆಯವರು ಬರುತ್ತಾರೆ. ತನ್ನ ಮಗಳಿಗೆ ರಾಮಾಚಾರಿಯೇ ಅಪಘಾತ ಮಾಡಿದ್ದು ಎಂದು ಗ್ರಹಿಸಿದ ಸೀತಾ ತಂದೆ ಆತನಿಗೆ ಹೊಡೆಯುತ್ತಾನೆ. ಆಗ ಸ್ವತ: ಸೀತಾ ತನ್ನ ಅಪ್ಪನನ್ನು ತಡೆದು ನನ್ನನ್ನು ಆಸ್ಪತ್ರೆಗೆ ಸೇರಿಸಿದ್ದು ರಾಮಾಚಾರಿ. ಅಪಘಾತವಾದಾಗ ಅಲ್ಲಿದ್ದವರೆಲ್ಲಾ ಮುಂದೇನು ಎಂದು ಯೋಚಿಸುತ್ತಿದ್ದಾಗ ರಾಮಾಚಾರಿಯೇ ಬಂದು ಆಸ್ಪತ್ರೆಗೆ ಸೇರಿಸಿದ್ದು ಎಂದು ಸೀತಾ ವಿವರಿಸುತ್ತಾಳೆ.
ಇನ್ನು ಅಪಾಯದಿಂದ ತನ್ನನ್ನು ಕಾಪಾಡಿ, ಬದುಕಿ ಉಳಿಯುವಂತೆ ಮಾಡಿದ ರಾಮಾಚಾರಿಯನ್ನು ಸೀತಾ ಇಷ್ಟಪಟ್ಟಿದ್ದಾಳೆ. ಮುಂದೆ ಅದು ಪ್ರೀತಿಯಾಗಿ ತಿರುಗಿದರೂ ಆಶ್ಚರ್ಯವಿಲ್ಲ. ಆದರೆ, ಈಗಾಗಲೇ ಮದುವೆಯಾಗಿರುವ ರಾಮಾಚಾರಿ ಬದುಕಿನಲ್ಲಿ ಸೀತಾಳ ಆಗಮನ ಯಾವ ರೀತಿ
ಆಗಲಿದೆ? ರಾಮಾಚಾರಿಗೆ ಮದುವೆ ಆಗಿದೆ ಎಂದು ಸೀತಾಗೆ ತಿಳಿಯಲಿದೆಯಾ? ತಿಳಿದರೆ ಆಕೆಯ ರೆಸ್ಪಾನ್ಸ್ ಹೇಗಿರಲಿದೆ? ಎಂಬುದೆಲ್ಲಾ ಮುಂದಿನ ದಿನಗಳಲ್ಲಿ ತಿಳಿಯಬೇಕಿದೆ.
ರಾಮಾಚಾರಿಯೇ ತನ್ನ ಪ್ರಾಣ ಎಂದು ತಿಳಿದಿರುವ ಚಾರುಲತಾಗೆ ಈ ವಿಚಾರ ತಿಳಿದರೆ ಏನಾಗಬಹುದು? ತನ್ನ ಪತಿಯ ಬದುಕಿನಲ್ಲಿ ಸೀತಾಳ ಆಗಮನವಾಗದೇ ಇರುವುದಕ್ಕೆ ಚಾರುಲತಾ ಏನು ಮಾಡುತ್ತಾಳೆ ಎಂಬುದೆಲ್ಲಾ ಮುಂದಿನ ದಿನಗಳಲ್ಲಿ ತಿಳಿಯಬೇಕಿದೆ.
ಅಂದ ಹಾಗೇ ರಾಮಾಚಾರಿಯ ಬದುಕಿನಲ್ಲಿ ಸೀತಾ ಆಗಿ ಬಂದಿರುವ ಈಕೆ ಯಾರೆಂಬ ಕುತೂಹಲವೂ ವೀಕ್ಷಕರಿಗಿದೆ. ಸೀತಾ ಆಗಿ ನಟಿಸುವ ಮೂಲಕ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಈಕೆಯ ಹೆಸರು ನಿಖಿತಾ ಸ್ವಾಮಿ. ಈ ಹಿಂದೆ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ "ಗಂಗೆ ಗೌರಿ" ಧಾರಾವಾಹಿಯಲ್ಲಿ ನಿಖಿತಾ ಸ್ವಾಮಿ ನಟಿಸಿದ್ದರು. ಇದರ ಹೊರತಾಗಿ ಬಿಗ್ ಬಾಸ್ ವಿನ್ನರ್ ಒಳ್ಳೆ ಹುಡುಗ ಪ್ರಥಮ್ ಅಭಿನಯಿಸಿರುವ 'ಫಸ್ಟ್‌ನೈಟ್ ವಿಥ್ ದೆವ್ವ' ಸಿನಿಮಾದಲ್ಲಿಯೂ ನಿಖಿತಾ ಸ್ವಾಮಿ ನಟಿಸಿದ್ದಾರೆ.


Click it and Unblock the Notifications











