ಡ್ಯಾನ್ಸ್ ರಿಯಾಲಿಟಿ ಶೋವಿಗೆ 'ಸೀತಾರಾಮ' ನಟಿ ಎಂಟ್ರಿ ಕೊಟ್ಟಿದ್ದೇಕೆ? ಏನಂತಾರೆ ಮೇಘನಾ?
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಸೀತಾರಾಮ' ಧಾರಾವಾಹಿಯು ವಿಭಿನ್ನ ಕಥಾಹಂದರದ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆಯುತ್ತಿದೆ. 'ಸೀತಾರಾಮ' ಧಾರಾವಾಹಿಯಲ್ಲಿ ನಾಯಕಿ ಸೀತಾಳ ಸ್ನೇಹಿತೆ ಪ್ರಿಯಾ ಪಾತ್ರದಲ್ಲಿ ನಟಿಸುತ್ತಿರುವ ಬೆಡಗಿ ಹೆಸರು ಮೇಘನಾ ಶಂಕರಪ್ಪ.
ಮಾತು ಜೋರು, ಮನಸ್ಸು ಮೃದು ಆಗಿರುವ ಪ್ರಿಯಾ ತನ್ನ ಮನೆಯ ಪರಿಸ್ಥಿತಿಯಿಂದಾಗಿ ಸಾಕಷ್ಟು ನೋವನ್ನು ಅನುಭವಿಸಿದ್ದಾಳೆ. ಸೀತಾಳ ಜೊತೆಗೆ ರಾಮ್‌ನ ಆಫೀಸ್‌ನಲ್ಲಿ ಕೆಲಸ ಮಾಡುತ್ತಿರುವ ಪ್ರಿಯಾಗೆ ಕೋಟ್ಯಾಧೀಶ್ವರ ಹುಡುಗನ ಕೈ ಹಿಡಿಯುವ ಕನಸು. ಒಳ್ಳೆಯ ಬದುಕು ಕಟ್ಟಿಕೊಳ್ಳುವ ಬಯಕೆಯಿರುವ ಈ ಬೆಡಗಿ ಹಿಂದೆ ಮುಂದೆ ಆಲೋಚನೆ ಮಾಡದೇ ಮಾತಾಡಿ ಪಜೀತಿಗೆ ಒಳಗಾಗುವಾಕೆ. ಇದು ಸೀತಾರಾಮ ಧಾರಾವಾಹಿಯ ಪ್ರಿಯಾ ಪಾತ್ರದ ಸಂಕ್ಷಿಪ್ತ ಪರಿಚಯ.

ನಾಯಕ ರಾಮನ ಸ್ನೇಹಿತ ಅಶೋಕನ ಕೈ ಹಿಡಿದಿರುವ ಪ್ರಿಯಾ ಅದ್ಭುತ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದಾರೆ. ಇದರ ಜೊತೆಗೆ ಜೀ ಕನ್ನಡ ವಾಹಿನಿಯಲ್ಲಿ ಶುರುವಾಗಿರುವ ಹೊಚ್ಚ ಹೊಸ ರಿಯಾಲಿಟಿ ಶೋ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಗ್ರ್ಯಾಂಡ್ ಪ್ರೀಮಿಯರ್ ಶೋವಿನ ಸ್ಪರ್ಧಿಯಾಗಿ ಈಕೆ ಕಾಣಿಸಿಕೊಂಡಿದ್ದಾರೆ. ಈ ವಿಚಾರವನ್ನು ಸ್ವತಃ ಮೇಘನಾ ಶಂಕರಪ್ಪ ಅವರೇ ಹೇಳಿಕೊಂಡಿದ್ದಾರೆ.
"ಈ ಬಾರಿಯ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಗ್ರ್ಯಾಂಡ್ ಪ್ರೀಮಿಯರ್ ಶೋವಿನಲ್ಲಿ ನಾನು ಸ್ಪರ್ಧಿಯಾಗಿ ಕಾಣಿಸಿಕೊಳ್ಳಲಿದ್ದೇನೆ. ಇದು ನಾನ್ ಡ್ಯಾನ್ಸರ್ಸ್ ಶೋ ಆಗಿದೆ. ಸೋ ಯಾರೆಲ್ಲಾ ಪಾರ್ಟಿಸಿಪೇಟ್ ಮಾಡ್ತಿದ್ದಾರೆ ಎಂಬ ಕ್ಯೂರಿಯೋಸಿಟಿ ಎಲ್ಲರಿಗೂ ಇರುತ್ತೆ. ಅಫ್ ಕೋರ್ಸ್ ನನಗೂ ಇದೆ. ಯಾರೆಲ್ಲಾ ಹೇಗೆ ಫರ್ಪಮ್ ಮಾಡ್ತಾರೆ ಎಂದು ನೋಡುವುದಕ್ಕೂ ನನಗೆ ಸಿಕ್ಕಾಪಟ್ಟೆ ಕುತೂಹಲ ಇದೆ. ಯಾಕೆಂದರೆ ಇದು ನಾನ್ ಡ್ಯಾನ್ಸರ್ಸ್ ಶೋ. ಡ್ಯಾನ್ಸಿಂಗ್ ಸಾಮರ್ಥ್ಯ ಎಲ್ಲರದ್ದೂ ಹೇಗಿದೆ ಎಂದು ನೋಡ್ಬೇಕಲ್ವಾ. ಯಾಕೆಂದರೆ, ನನ್ನ ನೆಕ್ಸ್ಟ್ ಸ್ಟೆಪ್ಸ್ ಎಲ್ಲಾ ಕ್ಯಾಕುಲೇಟ್ ಮಾಡ್ಕೊಂಡು ಮೂವ್ ಮಾಡ್ಬೇಕು. ನಾನು ಆಲ್ ರೆಡಿ ಹೇಳಿದೀನಿ. ಈ ಶೋ ವಿನ್ನರ್ ನಾನು" ಎಂದು ನಟಿ ಮೇಘನಾ ಶಂಕರಪ್ಪ ಹೇಳಿಕೊಂಡಿದ್ದಾರೆ.
ಇನ್ನು 'ನಮ್ಮನೆ ಯುವರಾಣಿ' ಧಾರಾವಾಹಿಯಲ್ಲಿ ಖಳನಾಯಕಿ ನೇತ್ರಾ ಪಾತ್ರದ ಮೂಲಕ ಮೋಡಿ ಮಾಡಿದ್ದ ಮೇಘನಾ ಶಂಕರಪ್ಪ ಕಿರುತೆರೆ ಪಯಣ ಶುರುವಾಗಿದ್ದು 'ಕಿನ್ನರಿ' ಧಾರಾವಾಹಿಯ ಮೂಲಕ. ತದ ನಂತರ 'ಕೃಷ್ಣ ತುಳಸಿ', 'ರತ್ನಗಿರಿ ರಹಸ್ಯ', 'ದೇವಯಾನಿ', 'ಸಿಂಧೂರ' ಧಾರಾವಾಹಿಗಳಲ್ಲಿ ಅಭಿನಯಿಸಿರುವ ಮೇಘನಾ ಶಂಕರಪ್ಪ ನಿರೂಪಕಿಯಾಗಿಯೂ ಗುರುತಿಸಿಕೊಂಡಿರುವ ಬೆಡಗಿ.

ಸದ್ಯ ಪ್ರಿಯಾ ಪಾತ್ರದ ಮೂಲಕ ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ಮೇಘನಾ ಶಂಕರಪ್ಪ ನೆಗೆಟಿವ್ ಪಾತ್ರ ಮಾತ್ರವಲ್ಲದೇ ಪಾಸಿಟಿವ್ ಪಾತ್ರಗಳ ಮೂಲಕ ಬಣ್ಣದ ಜಗತ್ತಿನಲ್ಲಿ ಗುರುತಿಸಿಕೊಂಡಾಕೆ. ಇದರ ಜೊತೆಗೆ ಡ್ಯಾನ್ಸ್ ಬಾರದಿರುವ ಮೇಘನಾ ಡಿಕೆಡಿ ರಿಯಾಲಿಟಿ ಶೋ ಸ್ಪರ್ಧಿಯಾಗಿದ್ದು, ಯಾವ ರೀತಿಯಾಗಿ ಕುಣಿಯುತ್ತಾರೆ? ಹೇಗೆ ತೀರ್ಪುಗಾರರ ಮನ ಸೆಳೆಯುತ್ತಾರೆ ಎಂದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.


Click it and Unblock the Notifications











