ಸೀತಾರಾಮ ಮುಗಿಯುತ್ತಿದ್ದಂತೆಯೇ ಗೃಹಸ್ಥಾಶ್ರಮಕ್ಕೆ ಕಾಲಿಡಲು ರೆಡಿಯಾದ ವೈಷ್ಣವಿ ಗೌಡ, ಮದುವೆ ಶಾಸ್ತ್ರಗಳು ಆರಂಭ..!
ತಮ್ಮ ಒರಿಜಿನಲ್ ಹೆಸರನ್ನೇ ಮರೆಯಾಗಿಸುವಂತೆ ಅಗ್ನಿಸಾಕ್ಷಿ ಧಾರಾವಾಹಿಯ ಸನ್ನಿಧಿ ಎಂದೇ ಖ್ಯಾತಿಯನ್ನ ಗಳಿಸಿದವರು ವೈಷ್ಣವಿ ಗೌಡ. ತಮ್ಮ ಅಭಿನಯದಿಂದ ಕನ್ನಡಿಗರ ಮನೆ ಮತ್ತು ಮನವನ್ನ ತಲುಪಿದ ವೈಷ್ಣವಿ ಗೌಡ ಭರ್ಜರಿ ಕಾಮಿಡಿ ಎಂಬ ಕಾರ್ಯಕ್ರಮದ ನಿರೂಪಕಿಯೂ ಹೌದು. ಬಿಗ್ ಬಾಸ್ ನ ಮಾಜಿ ಸ್ಫರ್ಧಿಯೂ ಹೌದು. ಕಿರುತೆರೆಯಿಂದ ಹಿರಿತೆರೆಗೆ ತೆರಳಿ ಆ ನಂತರ ಮತ್ತೆ ಮರಳಿ ಕಿರುತೆರೆಗೆ..
ಬಂದ ವೈಷ್ಣವಿ ಗೌಡ ಸದ್ಯಕ್ಕೆ ಸೀತಾ ಎಂದೇ ಜನಪ್ರಿಯರಾಗಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ತಮಗೆ ಹೆಸರು-ಕೀರ್ತಿಯನ್ನು ನೀಡಿದ ಸೀತಾರಾಮ ಧಾರಾವಾಹಿಗೆ ಭಾವಪೂರ್ಣ ವಿದಾಯವನ್ನು ಕೂಡ ಹೇಳಿದ್ದಾರೆ.

ಇಂಥಾ ವೈಷ್ಣವಿ ಗೌಡ ಸದ್ಯ ಹೊಸ ಬದುಕಿಗೆ ಮುನ್ನುಡಿ ಬರೆಯಲು ಅಣಿಯಾಗಿದ್ದಾರೆ. ಹೌದು, ಕೆಲ ದಿನಗಳ ಹಿಂದೆ ಅನುಕೂಲ್ ಮಿಶ್ರಾ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ವೈಷ್ಣವಿ ಗೌಡ ಸದ್ಯ ಸೀತಾರಾಮ ಧಾರಾವಾಹಿ ಮುಗಿದ ಬೆನ್ನಲ್ಲೇ ಮದುವೆಯಾಗಲು ಮುಂದಾಗಿದ್ದಾರೆ.
ವೈಷ್ಣವಿ ಗೌಡ ಅವರ ಮದುವೆಯ ಶಾಸ್ತ್ರಗಳು ಆರಂಭ ಆಗಿದ್ದು ಚಪ್ಪರ ಪೂಜೆ ಮತ್ತು ಅರಿಶಿನ ಶಾಸ್ತ್ರ ನೆರವೇರಿದೆ. ತಮ್ಮ ವಿವಾಹಪೂರ್ವ ಶಾಸ್ತ್ರದ ಫೋಟೊಗಳನ್ನು ವೈಷ್ಣವಿ ಗೌಡ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಕಿರುತೆರೆ ನಟಿ ಸಿತಾರ ಸೇರಿ ಅನೇಕರು ವೈಷ್ಣವಿ ಗೌಡ ಅವರಿಗೆ ಶುಭಾಶಯವನ್ನು ಕೋರುತ್ತಿದ್ದಾರೆ.
ಅಂದ್ಹಾಗೇ ವೈಷ್ಣವಿ ಗೌಡ ಮದುವೆಯಾಗುತ್ತಿರುವ ಹುಡುಗನ ಹೆಸರು ಅನುಕೂಲ್ ಮಿಶ್ರಾ. ಏರ್ ಫೋರ್ಸ್ನಲ್ಲಿ ಇವರು ಕೆಲಸ ಮಾಡುತ್ತಾರೆ. ಉತ್ತರ ಭಾರತದ ಛತ್ತಿಸ್ಗಡದವರಾದ ಅನುಕೂಲ್ ಮತ್ತು ಬೆಂಗಳೂರಿನ ವೈಷ್ಣವಿ ಗೌಡ ನಡುವೆ ಸಂಬಂಧ ಬೆಸೆದಿದ್ದು ಮ್ಯಾಟ್ರಿಮೋನಿ.ಇಬ್ಬರದ್ದು ಪಕ್ಕಾ ಅರೆಂಜ್ ಮ್ಯಾರೇಜ್.
ಈ ಕುರಿತು ಹಿಂದೆ ಸಂದರ್ಶನದಲ್ಲಿ ಮಾತನಾಡಿದ್ದ ವೈಷ್ಣವಿ ಗೌಡ ನಮ್ಮದು ಲವ್ ಮ್ಯಾರೇಜ್ ಅಲ್ಲ ಬದಲಿಗೆ ಅರೆಂಜ್ ಮ್ಯಾರೇಜ್, ಮ್ಯಾಟ್ರಿಮೋನಿಯಲ್ಲಿ ನಮ್ಮ ಜಾತಕ ಅದಲು ಬದಲಾದ ನಂತರ ಅಪ್ಪ- ಅಮ್ಮ ನೋಡಿದರು ಆ ನಂತರ ಅವರಿಗೂ ಇಷ್ಟವಾಗಿ ಮದುವೆಯನ್ನು ನಿಶ್ಚಯಿಸಿದರು ಎಂದು ಹೇಳಿದ್ದರು.
ನಾವು ಇಬ್ಬರು ಪರಿಚಯವಾಗಿ ಸುಮಾರು ಒಂದು ವರ್ಷವಾಯ್ತು, ಅಲ್ಲಿಂದ ಇಲ್ಲಿಯವರೆಗೆ ಟೈಮ್ ತಗೆದುಕೊಂಡು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡಿದ್ದೇವೆ ಎಂದು ಹೇಳಿದ್ದ ವೈಷ್ಣವಿ ಗೌಡ ಸದ್ಯ ಗ್ರಹಸ್ಥಾಶ್ರಮಕ್ಕೆ ಕಾಲಿಡುತ್ತಿದ್ದಾರೆ.
ಇನ್ನು ಮದುವೆಯ ನಂತರ ವೈಷ್ಣವಿ ಗೌಡ ಕಿರುತೆರೆಯಲ್ಲಿ ಮುಂದುವರೆಯುತ್ತಾರಾ ? ಸೀರಿಯಲ್‌ಗಳನ್ನು ಮಾಡುತ್ತಾರಾ ? ಮದುವೆಯ ನಂತರ ವೈಷ್ಣವಿ ಗೌಡ ವಿದೇಶದಲ್ಲಿ ಠಿಕಾಣಿ ಹೂಡುತ್ತಾರಾ ? ಎಂಬ ಇತ್ಯಾದಿ ಪ್ರಶ್ನೆಗಳು ಹಲವರಲ್ಲಿದೆ.
ಈ ಪ್ರಶ್ನೆಗಳಿಗೆ ಕೆಲ ದಿನಗಳ ಹಿಂದೆ ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಉತ್ತರವನ್ನು ನೀಡಿದ್ದ ವೈಷ್ಣವಿ ಗೌಡ ಕರ್ನಾಟಕದ ಜನ ನನಗೆ ಇಷ್ಟೊಂದು ಪ್ರೀತಿ ಕೊಟ್ಟಿದ್ದಾರೆ, ಅದೆಲ್ಲ ಮರೆಯಲು ಸಾಧ್ಯ ಇಲ್ಲ ಎಂದು ಹೇಳಿದ್ದಾರೆ. ನನ್ನ ದೇಶ, ನನ್ನ ಜಾಗದಲ್ಲಿ ನನಗೆ ಇಷ್ಟೆಲ್ಲ ಸಿಗುತ್ತಿರುವಾಗ ನಾನ್ಯಾಕೇ ದೇಶ ಬಿಡಬೇಕು ಎಂದು ಪ್ರಶ್ನೆ ಕೇಳಿದ್ದರು.
ಮುಂದುವರೆದು ನನ್ನ ಕೊನೆಯ ಉಸಿರು ಇರುವವರೆಗೂ ನಾನು ಕನ್ನಡ ಇಂಡಸ್ಟ್ರೀಯಲ್ಲಿಯೇ ಕೆಲಸ ಮಾಡುತ್ತೇನೆ, ಕಲಾ ಸೇವೆಯನ್ನು ಮಾಡುತ್ತೇನೆ, ನಿಮ್ಮೆಲ್ಲರನ್ನು ಮನರಂಜಿಸುವ ಕೆಲಸವನ್ನು ಮಾಡುತ್ತೇನೆ ಎಂದು ಹೇಳಿದ್ದರು. ಈ ಮೂಲಕ ಮದುವೆಯ ನಂತರ ಕೂಡಾ ತಾವು ಅಭಿನಯಿಸುವುದಾಗಿ ವೈಷ್ಣವಿ ಗೌಡ ಸ್ಪಷ್ಟಪಡಿಸಿದ್ದರು.
ಒಟ್ನಲ್ಲಿ ಸದ್ಯ ವೈಷ್ಣವಿ ಗೌಡ ಅವರ ಮನೆಯಲ್ಲಿ ಮದುವೆಯ ಶಾಸ್ತ್ರಗಳು ಆರಂಭವಾಗಿದ್ದು, ಇವರ ಮದುವೆಗೆ ಕಿರುತೆರೆ ಸೇರಿ ಕನ್ನಡ ಚಿತ್ರರಂಗದ ಹಲವು ತಾರೆಯರು ಆಗಮಿಸುವ ನಿರೀಕ್ಷೆ ಇದೆ. ತಮ್ಮ ಮದುವೆ ದಿನಾಂಕ ಮತ್ತು ಸ್ಥಳದ ಮಾಹಿತಿಯನ್ನು ವೈಷ್ಣವಿ ಗೌಡ ಮಾಧ್ಯಮದವರ ಜೊತೆ ಇನ್ನು ಹಂಚಿಕೊಂಡಿಲ್ಲ.


Click it and Unblock the Notifications











