Seetharama ; ಅಂಜಲಿಯನ್ನು ಕಾಡಿಸುತ್ತಿರುವ ರುದ್ರಪ್ರತಾಪ್ : ಸಿಹಿಗೆ ರಾಮ್ ಮೇಲೆ ಹುಸಿ ಮುನಿಸು..!
ಸೀತಾರಾಮ ಧಾರಾವಾಹಿಯಲ್ಲಿ ಸೀತಾ ಮತ್ತು ರಾಮ್ ಎಂಗೇಜ್ ಮೆಂಟ್ ಅದ್ಧೂರಿಯಾಗಿ ನೆರವೇರಿದೆ. ಸೀತಾಳಿಗೆ ಮದುವೆಯಾಗುತ್ತಿರುವುದಕ್ಕೆ ಅಜ್ಜಿ ಶಾಂತಮ್ಮ ಹಾಗೂ ಮೂರ್ತಿ ತಾತನಿಗೆ ಖುಷಿ ಇದೆ.
ಒಂಟಿಯಾಗಿ ಜೀವನ ಕಳೆಯುತ್ತಿರುವ ಸೀತಾಳನ್ನು ಕಂಡು ಅಜ್ಜಿ ಶಾಂತಮ್ಮ ಸಾಕಷ್ಟು ದೇವರುಗಳಿಗೆ ಹರಕೆಯನ್ನು ಹೊತ್ತಿದ್ದರು. ಸೀತಾಳ ಬದುಕಲ್ಲಿ ಎಲ್ಲವೂ ಒಳ್ಳೆಯದಾಗಲಿ ಅವಳಿಗೂ ಮದುವೆಯಾಗಲಿ ಎಂದು ಬಯಸಿದ್ದರು. ಈಗ ಅಜ್ಜಿಯ ಕೂಗು ದೇವರಿಗೆ ಕೇಳಿಸಿದ್ದು, ಸೀತಾ ಬಾಳಲ್ಲಿ ರಾಮ್ ಎಂಟ್ರಿ ಆಗಿದ್ದಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಇಬ್ಬರ ಮದುವೆಯೂ ಕೂಡ ನೆರವೇರಿದೆ.
ದೇವರಾಯನ ದುರ್ಗಕ್ಕೆ ಬಂದ ಸೀತಾ
ಹೀಗಾಗಿ ಅಜ್ಜಿ ದೇವರಿಗೆ ತಾಳಿ ಮಾಡಿಸಿ ಹಾಕುವುದಾಗಿ ಹೊತ್ತಿದ್ದ ಹರಕೆಯನ್ನು ಸೀತಾಳಿಗೆ ತೀರಿಸಲು ಹೇಳಿದ್ದಾರೆ. ಸೀತಾ ಕೂಡ ಒಪ್ಪಿ ವಠಾರದವರೊಂದಿಗೆ ದೇವರಾಯನ ದುರ್ಗಕ್ಕೆ ಹೊರಟಿದ್ದಾರೆ. ಸೀತಾಳೊಂದಿಗೆ ಅವರ ಅತ್ತಿಗೆ ಸುಜಾತ ಕೂಡ ಬರುತ್ತೀನಿ ಎಂದಿದ್ದಾಳೆ. ಇದು ಸಿಹಿಗೆ ಸ್ವಲ್ಪವೂ ಇಷ್ಟವಿಲ್ಲ. ಆದರೂ, ಸುಮ್ಮನಿದ್ದಾಳೆ. ಇನ್ನು ರಾಮ್ ಮೇಲೆ ಸಿಹಿಗೆ ಕೋಪವಿದೆ. ಹೀಗಾಗಿ ರಾಮ್ ಫೋನ್ ಕಾಲ್ ರಿಸೀವ್ ಮಾಡದೇ ಸೀತಾಳಿಗೂ ಮಾತನಾಡಲು ಬಿಡದೇ ಸತಾಯಿಸುತ್ತಿದ್ದಾಳೆ. ವಠಾರದವರೊಂದಿಗೆ ಸೀತಾ ಸಿಹಿ ಟಿಟಿ ಮಾಡಿಕೊಂಡು ದೇವಸ್ಥಾನಕ್ಕೆ ಹೊರಟಿದ್ದಾರೆ.

ರಾಮ್ ಮೇಲೆ ಕಡಿಮೆಯಾಗದ ಸಿಹಿ ಕೋಪ
ಈ ಮಧ್ಯೆ ತಿಂಡಿಗೆಂದು ನಿಲ್ಲಿಸಿದಾಗ ರಾಮ್ ಸೀತಾಳನ್ನು ಭೇಟಿ ಮಾಡಿದ್ದಾನೆ. ಸ್ಮಾರ್ಟ್ ವಾಚ್ ಅನ್ನು ಸೀತಾಳಿಗೆ ಗಿಫ್ಟ್ ಮಾಡಿದ್ದಾನೆ. ಸೀತಾ ಕೂಡ ಉಡುಗೊರೆಯನ್ನು ಒಪ್ಪಿಕೊಂಡಿದ್ದಾಳೆ. ಆದರೆ, ಸಿಹಿ ರಾಮ್ ಮೇಲೆ ತುಂಬಾನೇ ಕೋಪ ತೋರಿಸಿದ್ದಾಳೆ. ವಠಾರದ ಜನ ಸಿಹಿಗೆ ಸೀತಾ ಮದುವೆಯಾದ ಮೇಲೆ ರಾಮ್ ಮನೆಗೆ ಹೋಗುತ್ತೀಯಾ ಸ್ವಲ್ಪ ಒಳ್ಳೆಯ ಬುದ್ಧಿ ಕಲಿತುಕೊ ಎಂದು ಬಾಯಿ ಮಾತಿಗೆ ಹೇಳಿದ್ದಾರೆ. ಇದನ್ನೇ ಸಿಹಿ ಸೀರಿಯಸ್ ಆಗಿ ತೆಗೆದುಕೊಂಡಿದ್ದಾಳೆ. ಇದೇ ಪ್ರಶ್ನೆಯನ್ನು ಸೀತಾ ಬಳಿ ಕೇಳಿದ್ದಾಳೆ. ಆಗ ರಾಮ್ ನಾನು ನಿಮ್ಮ ಮನೆಯಲ್ಲಿ ಇಲ್ಲವಾದರೆ, ನೀವಿಬ್ಬರು ನಮ್ಮ ಮನೆಯಲ್ಲಿ ಎಲ್ಲಿಯಾದರೂ ಓಕೆ ಆದರೆ, ಮದುವೆಯಾದ ಬಳಿಕ ನಾವು ಮೂವರೂ ಒಟ್ಟಿಗೆ ಇರುತ್ತೇವೆ ಎಂದು ಹೇಳಿ ಸಮಾಧಾನ ಮಾಡುತ್ತಾನೆ.
ಸಿಹಿಯನ್ನು ಬಿಟ್ಟು ಹೋದ ಸೀತಾ
ಇನ್ನು ಸೀತಾಳಿಗೆ ರಾಮ್ ಪದೇ ಪದೇ ಫೋನ್ ಮಾಡಿ ಮಾತನಾಡಿಸುತ್ತಿರುತ್ತಾನೆ. ಸಿಹಿ ಒಬ್ಬಳೇ ಸಿಕ್ಕಾಗಲೆಲ್ಲಾ ಸುಜಾತ ಬೇಕಂತಲೇ ಸಿಹಿಯನ್ನು ಹೆದರಿಸುತ್ತಿರುತ್ತಾಳೆ. ಮದುವೆಯಾದ ಮೇಲೆ ನಿಮ್ಮಮ್ಮ ಹಾಗೂ ರಾಮ್ ಸಿಂಗಾಪುರ, ದುಬೈ ಅಂತ ಸುತ್ತಾಡುತ್ತಾರೆ. ನಿನ್ನನ್ನು ಯಾಕೆ ಕರೆದುಕೊಂಡು ಹೋಗುತ್ತಾರೆ ಎಂದೆಲ್ಲಾ ಹೇಳುತ್ತಿರುತ್ತಾಳೆ. ಇನ್ನು ಸೀತಾ ಸಿಹಿಗೆ ಪರೀಸ್ಥಿತಿಯನ್ನು ಅರ್ಥ ಮಾಡಿಸುತ್ತಾಳೆ. ರಾಮ್ ಒಳ್ಳೆಯವರು ನೀನೇ ಸುಮ್ಮನೆ ಅವರ ಮೇಲೆ ಕೋಪ ಮಾಡಿಕೊಂಡಿದ್ದೀಯಾ ಎಂದು ಹೇಳುತ್ತಾಳೆ. ಆಗ ಸಿಹಿಗೂ ಅರ್ಥವಾಗುತ್ತದೆ. ಇನ್ನು ಸಹಿ ಮತ್ತು ಸುಜಾತ ಇಬ್ಬರನ್ನೇ ಬಿಟ್ಟು ಸೀತಾ ಬೆಟ್ಟದ ಮೇಲೆ ದೇವಸ್ಥಾನಕ್ಕೆ ಹೋಗಿದ್ದಾಳೆ.

ಅಂಜಲಿಯನ್ನು ಗೋಳಾಡಿಸುತ್ತಿರುವ ರುದ್ರಪ್ರತಾಪ್
ಇತ್ತ ಅಂಜಲಿಗೆ ಜ್ವರ ಬಂದಿದ್ದು, ರೂಮಿನಲ್ಲಿ ಒಬ್ಬಳೇ ಇದ್ದಾಳೆ. ಯಾರೇ ಕರೆದರೂ ರೂಮಿನಿಂದ ಆಚೆ ಹೋಗಲು ಬಯಸದ ಅಂಜಲಿ ರುದ್ರಪ್ರತಾಪ್ ಗೆ ಫೋನ್ ಮಾಡುತ್ತಲೇ ಇದ್ದಾಳೆ. ಆದರೆ, ರುದ್ರಪ್ರತಾಪ್ ಬೇಕಂತಲೇ ಅವಳ ಫೋನ್ ರಿಸೀವ್ ಮಾಡುತ್ತಿಲ್ಲ. ರಾಮ್ಗೆ ಗ್ರಹಚಾರ ಬಿಡಿಸಲು ಈ ಕೆಲಸ ಮಾಡಿದ್ದು, ಅಂಜಲಿಯನ್ನು ಗೋಳಾಡಿಸುತ್ತಿದ್ದಾನೆ. ಸತ್ಯ ಅರಿಯದ ಅಂಜಲಿ ರುದ್ರಪ್ರತಾಪ್ ಬಲೆಯಲ್ಲಿ ಸಿಲುಕಿದ್ದಾಳೆ. ಮುಂದೆ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.


Click it and Unblock the Notifications











