Seetha Rama ; ದೇವಿಯ ಕಣ್ಣಾಮುಚ್ಚಾಲೆ ಆಟದಲ್ಲಿ ಸಿಲುಕಿದ ಸೀತಾ-ಸಿಹಿ...!
ಸೀತಾರಾಮ ಧಾರಾವಾಹಿಯಲ್ಲಿ ಸೀತಾ ಮತ್ತು ರಾಮನ ಮದುವೆಗೆ ಭಾರ್ಗವಿ ಅದ್ಧೂರಿ ತಯಾರಿಗಳನ್ನು ಮಾಡುತ್ತಿದ್ದಾಳೆ. ಸೊಸೆಯ ಸ್ವಾಗತಕ್ಕೆ ದೇಸಾಯಿ ಕುಟುಂಬ ಸಜ್ಜಾಗಿದೆ.ಭಾರ್ಗವಿಯ ಎರಡು ಮುಖದ ಬಗ್ಗೆ ಸಂಪೂರ್ಣವಾದ ಸತ್ಯಗಳು ಗೊತ್ತಿದ್ದರೂ ಅಶೋಕನಿಗೆ ಸಾಕ್ಷಿ ಇಲ್ಲದೇ ರಾಮನ ಬಳಿ ನಿಜವನ್ನು ಹೇಳಲು ಸಾಧ್ಯವಾಗುತ್ತಿಲ್ಲ.ರಾಮ ಮದುವೆಯನ್ನು ಸೀತಾಳ ಜೊತೆಗೆ ಮಾಡಲು ಭಾರ್ಗವಿಯೇ ಒಪ್ಪಿರುವುದು ಮುಂದಿನ ಅಪಾಯದ ಸೂಚನೆ ಆದರೆ ಅದೇನು ಎಂಬುದು ಅರ್ಥವಾಗದೇ ಅಶೋಕ್ ಚಿಂತಿಸುತ್ತಿದ್ದಾನೆ.
ಅಮ್ಮನನ್ನು ಹುಡುಕಿ ಹೊರಟ ಸಿಹಿ
ಇನ್ನು ಸೀತಾ ಮತ್ತು ವಠಾರದವರು ದೇವರಾಯನ ದುರ್ಗಕ್ಕೆ ಆಗಮಿಸಿದ್ದು, ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದ್ದಾರೆ. ಸೀತಾ ಕೂಡ ಶಾಂತಜ್ಜಿಯ ಹರಕೆಯನ್ನು ಈಡೇರಿಸಿದ್ದಾಳೆ. ಇನ್ನೂ ಸಮಯವಿರುವ ಕಾರಣ ಬೆಟ್ಟದ ಮೇಲೆ ಹೋಗಿ ಅಲ್ಲಿರುವ ದೇವಿಯ ದರ್ಶನ ಪಡೆಯೋಣ ಎಂದು ಹೊರಡುತ್ತಾರೆ. ಬೆಟ್ಟ ಹತ್ತುವ ವೇಳೆ ಸುಜಾತಳಿಗೆ ಸುಸ್ತಾಗಿ ತಾನು ಇಲ್ಲೆ ಇರುವುದಾಗಿ ಹೇಳುತ್ತಾಳೆ. ಆಗ ಸೀತಾ ಸಿಹಿಗೂ ಕೂಡ ಇಲ್ಲೇ ಇರು ಬೇಗ ಬರುತ್ತೇವೆ ಎಂದು ಹೇಳಿ ಮಿಕ್ಕವರೆಲ್ಲಾ ಬೆಟ್ಟದ ಮೇಲಿನ ದೇವಸ್ಥಾನಕ್ಕೆ ಹೊರಡುತ್ತಾರೆ. ಸ್ವಲ್ಪ ಹೊತ್ತಿಗೆ ಸುಜಾತ ನಿದ್ದೆಗೆ ಜಾರುತ್ತಾಳೆ ಆಗ ಸಿಹಿ ಅಮ್ಮನನ್ನು ನೋಡಬೇಕು ಎಂದು ಬೆಟ್ಟದ ಮೇಲೆ ಹೋಗುತ್ತಾಳೆ.

ಮಗಳು ಕಾಣದೇ ಕಂಗಾಲಾದ ಸೀತಾ
ಸೀತಾ ದೇವರ ದರ್ಶನ ಮುಗಿಸಿಕೊಂಡು ಕೆಳಗೆ ಬಂದು ನೋಡುತ್ತಾಳೆ. ಆದರೆ, ಅಲ್ಲಿ ಸಿಹಿ ಕಾಣುವುದಿಲ್ಲ. ಸುಜಾತಳನ್ನು ಕೇಳಿದ್ದಕ್ಕೆ ತನಗೇನು ಗೊತ್ತಿಲ್ಲ ಎಂದು ಹೇಳುತ್ತಾಳೆ. ಸಿಹಿಯನ್ನು ಹುಡುಕುತ್ತಾ ಸೀತಾ ಕೆಳಗೆ ಹೋಗುತ್ತಾಳೆ. ಸಿಹಿ ಅಮ್ಮನನ್ನು ಹುಡುಕುತ್ತಾ ಮೇಲೆ ಹೋಗುತ್ತಾಳೆ. ಇಬ್ಬರೂ ವಿರುದ್ಧ ದಾರಿಯಲ್ಲಿ ಇರುವುದರಿಂದ ಇಬ್ಬರೂ ಸಿಗುವುದಿಲ್ಲ. ಸೀತಾಳಿಗೆ ಮಗಳು ಎಲ್ಲೂ ಕಾಣಿಸದೆ ಹೋದಾಗ ಆತಂಕ ಶುರುವಾಗುತ್ತದೆ. ಸಿಹಿ ಎಲ್ಲಿಗೆ ಹೋದಳು ಅವಳಿಗೇನಾದರೂ ಅಪಾಯ ಉಂಟಾಗಿದೆಯಾ ಎಂದು ಆತಂಕಗೊಳ್ಳುತ್ತಾಳೆ. ವಠಾರದ ಜನರೂ ಕೂಡ ಸಿಹಿಯನ್ನು ಹುಡುಕುತ್ತಾರೆ. ದೇವಸ್ಥಾನದ ಕಚೇರಿಯಲ್ಲೂ ಮಗು ಬಗ್ಗೆ ವಿಚಾರಿಸುತ್ತಾರೆ. ಆದರೆ, ಯಾರಿಗೂ ಸಿಹಿ ಬಗ್ಗೆ ಮಾಹಿತಿ ಇರುವುದಿಲ್ಲ.
ದೇವಿಯ ಕಣ್ಣಾಮುಚ್ಚಾಲೆ ಆಟ ತಾಯಿ ಮಗಳಿಗೆ ಪ್ರಾಣ ಸಂಕಟ
ಸೀತಾ ದೇವರ ಬಳಿ ತಾನು ಮದುವೆ ನಿರ್ಧಾರ ಮಾಡಿರುವುದು ಎಷ್ಟು ಸರಿ ಎಂದು ತಿಳಿದುಕೊಳ್ಳಲು ಯಾವುದಾದರೂ ಕ್ಲೂ ಕೊಡು ಎಂದು ಬೇಡಿ ಕೊಂಡಿರುತ್ತಾಳೆ. ಅದಕ್ಕೆ ಈಗ ದೇವರು ಈ ಮದುವೆಯ ನಿರ್ಧಾರ್ ತಪ್ಪು ಎಂದು ಹೇಳಲು ಸಿಹಿ ಕಾಣೆಯಾಗುವಂತೆ ಮಾಡಿದೆ ಎಂದು ತಪ್ಪಾಗಿ ಸೀತಾ ಭಾವಿಸುತ್ತಾಳೆ. ಸಿಹಿ ಇಲ್ಲದೇ ತನ್ನ ಕೈಯಲ್ಲಿ ಜೀವಿಸಲು ಸಾಧ್ಯವಿಲ್ಲ. ತನಗೆ ಯಾರೂ ಬೇಡ ಸಿಹಿ ಒಬ್ಬಳೇ ಸಾಕು ಎಂದು ಹುಡುಕಾಡುವುದನ್ನು ಮುಂದುವರೆಸುತ್ತಾಳೆ. ದೇವರ ಕಣ್ಣಾ ಮುಚ್ಚಾಲೆ ಆಟದಲ್ಲಿ ಸೀತಾ ಮತ್ತು ಸಿಹಿ ನಲುಗಿ ಹೋಗುತ್ತಾರೆ.

ಸೀತಾ-ಸಿಹಿಗಾಗಿ ಬಂದ ರಾಮ
ಇತ್ತ ಸೀತಾ ಯಾವುದೇ ಅಪ್ ಡೇಟ್ಸ್ ನೀಡಿಲ್ಲ ಎಂದು ರಾಮ ಫೋನ್ ಮಾಡುತ್ತಾನೆ. ಆದರೆ, ಸೀತಾ ಸರಿಯಾಗಿ ರೆಸ್ಪಾನ್ಸ್ ಮಾಡುವುದಿಲ್ಲ. ತನ್ನ ಸ್ಮಾರ್ಟ್ ವಾಚ್ ಮೂಲಕ ಸೀತಾ ಹೃದಯ ಬಡಿತ ಹೆಚ್ಚಾಗಿದ್ದನ್ನು ತಿಳಿದುಕೊಂಡು ಅಲ್ಲೇನೋ ಸಮಸ್ಯೆ ಆಗಿರಬೇಕು ಎಂದು ತಾನೂ ದೇವರಾಯನ ದುರ್ಗಕ್ಕೆ ಬರುತ್ತಾನೆ. ಅಷ್ಟೊತ್ತಿಗೆ ಸಿಹಿ ಕೆಳಗೆ ಬಂದಿರುತ್ತಾಳೆ, ಸೀತಾ ಮಗಳನ್ನು ಹುಡುಕುತ್ತಾ ಮೇಲೆ ಹೋಗಿರುತ್ತಾಳೆ. ಫ್ರೆಂಡ್ ಬಂದಿದ್ದನ್ನು ನೋಡಿದ ಸಿಹಿಗೆ ಖುಷಿಯಾಗುತ್ತದೆ. ಇಬ್ಬರೂ ಸೀತಾಳನ್ನು ಹುಡುಕಿ ಖುಷಿಯಾಗಿ ಬರುತ್ತಾರೆ.


Click it and Unblock the Notifications











