Seetharama ; ಒಂದಾದ ಅಕ್ಕ-ತಂಗಿ : ಅಶೋಕ್ ಗೆ ಸತ್ಯಜಿತ್ ಕೊಟ್ಟ ಆ ಸಾಕ್ಷಿ ಯಾವುದು..?
ಸೀತಾರಾಮ ಧಾರಾವಾಹಿಯಲ್ಲಿ ಸಿಹಿಯ ಅಸ್ತಿಯನ್ನು ಅದರಲ್ಲಿ ಹಣ ಇರಬಹುದು ಎಂದು ತಪ್ಪಾಗಿ ತಿಳಿದು ಸುಬ್ಬಿ ಮನೆಯವರೇ ಕಳ್ಳತನ ಮಾಡಿರುತ್ತಾರೆ. ಮನೆಗೆ ಬಂದು ಓಪನ್ ಮಾಡಿ ನೋಡಿದಾಗ ಅದರಲ್ಲಿ ಬೂದಿ ಇದೆ ಎಂದು ಬೇಸರ ಮಾಡಿಕೊಳ್ಳುತ್ತಾರೆ. ಆದರೆ, ಸುಬ್ಬಿಯ ತಾತ ಅದು ಯಾರದ್ದೋ ಅಸ್ತಿ. ಅಸ್ತಿಯನ್ನೆಲ್ಲಾ ಮನೆಗೆ ತರಬೇಡಿ ಎಂದು ಬೈಯುತ್ತಾನೆ. ಅದನ್ನು ಯಾವುದಾದರೂ ಕೆರೆಗೋ, ನದಿಗೋ ಬಿಸಾಡುವಂತೆ ಹೇಳುತ್ತಾರೆ. ಆದರೆ, ಸುಬ್ಬಿ ಅಸ್ತಿಯನ್ನು ತೆಗೆದು ಜೋಪಾನವಾಗಿ ಇಡುತ್ತಾಳೆ.
ಕೊನೆಗೂ ಒಂದಾದ ಅಕ್ಕ-ತಂಗಿಯರು
ದೇವಸ್ಥಾನದಿಂದ ನೇರವಾಗಿ ಸುಬ್ಬಿ ಮನೆಗೆ ಬರುವ ಸಿಹಿ, ಸುಬ್ಬಿಯ ಸ್ನೇಹ ಬೆಳೆಸಲು ಪ್ರಯತ್ನಿಸುತ್ತಾಳೆ. ಆದರೆ ಸುಬ್ಬಿ ಮಾತು ಮಾತಿಗೂ ಸಿಹಿಯ ಮಾತುಗಳನ್ನು ಒಪ್ಪಲು ತಯಾರಿರುವುದಿಲ್ಲ. ಸಿಹಿ ನಾನು ನೀನು ನೋಡಲು ಒಂದೇ ತರ ಇದ್ದೀವಿ ಎಂದರೂ ಕೇಳುವುದಿಲ್ಲ. ಸುಬ್ಬಿ ನಾನೇ ಬೇರೆ, ನೀನೇ ಬೇರೆ ಎನ್ನುತ್ತಾಳೆ. ಇನ್ನು ಸಿಹಿ ನಾನು ನಿನಗೆ ಬಿಟ್ಟು ಬೇರೆ ಯಾರಿಗೂ ಕಾಣಿಸುವುದಿಲ್ಲ. ನಿನಗೆ ಮಾತ್ರ ಕಾಣಿಸುತ್ತಿದ್ದೇನೆ. ಅದು ಯಾಕೆ ಎಂದು ಗೊತ್ತಿಲ್ಲ ಎಂದು ಮಾತನಾಡಿ, ಸುಬ್ಬಿಯ ಮನವೊಲಿಸುತ್ತಾಳೆ. ಇವತ್ತಿನಿಂದ ನಾನು ನೀನು ಫ್ರೆಂಡ್ಸ್ ಆಗಿರೋಣ ಎಂದು ಎಂದು ಕೈ ಹಿಡಿದುಕೊಳ್ಳುತ್ತಾಳೆ. ಯಾವ ವಸ್ತುವನ್ನೂ ಮುಟ್ಟಲು ಆಗದ ಸಿಹಿ ಸುಬ್ಬಿಯನ್ನು ಸ್ಪರ್ಶಿಸುತ್ತಾಳೆ. ಈಗ ಅಕ್ಕ-ತಂಗಿ ಇಬ್ಬರೂ ಒಂದಾಗಿದ್ದಾರೆ.

ವಠಾರಕ್ಕೆ ಆಗಮಿಸಿದ ಸೀತಾ-ರಾಮ
ಇತ್ತ ರಾಮ್, ಸೀತಾ ಮನಸ್ಸಿಗೆ ಖುಷಿಯಾಗಲಿ ಎಂಬ ಕಾರಣಕ್ಕೆ ವಠಾರಕ್ಕೆ ಕರೆದುಕೊಂಡು ಬರುತ್ತಾನೆ. ಶಾಂತಜ್ಜಿ ಮತ್ತು ಮೂರ್ತಿ ತಾತ ಇಬ್ಬರೂ ತಲೆ ಮೇಲೆ ಕೈ ಹೊತ್ತು ಕುಳಿತಿರುತ್ತಾರೆ. ಸೀತಾ ಬೆಳ್ಳಿ ಗೊಂಬೆಯನ್ನು ಎತ್ತುಕೊಂಡು ಮನೆಗೆ ಬಂದು ಮಾತನಾಡಿಸುತ್ತಾಳೆ. ಸಿಹಿ ಜೊತೆಗೂ ಮಾತನಾಡಿ ಎಂದಾಗ ಶಾಂತಜ್ಜಿ ಕಣ್ಣೀರು ಹಾಕುತ್ತಾರೆ. ಆದರೆ ಯಾಕೆ ಅಳುತ್ತಿದ್ದಾರೆ ಎಂಬುದು ಸೀತಾಳಿಗೆ ಅರ್ಥವಾಗುವುದಿಲ್ಲ. ಇನ್ನು ಸೀತಾ ಮತ್ತು ರಾಮ್ ತಮ್ಮ ಮನೆಯನ್ನು ನೋಡಲು ಹೋಗುತ್ತಾರೆ. ಮನೆ ಧೂಳು ಹಿಡಿದಿದ್ದನ್ನು ಕಂಡು ಕ್ಲೀನ್ ಮಾಡಲು ಮುಂದಾಗುತ್ತಾರೆ. ರಾಮ್ ಗೆ ಸಿಹಿಯ ನೆನಪಾಗಿ ಬೇಸರವಾಗುತ್ತದೆ.
ಸತ್ಯಜಿತ್ ತಂದು ಕೊಟ್ಟ ಸಾಕ್ಷಿ ಏನು..?
ಸತ್ಯಜಿತ್ ಇನ್ಮುಂದೆ ಕುಡಿಯುವುದಿಲ್ಲ ಎಂದು ಹೇಳಿದ್ದರೂ ಕೂಡ ಈಗ ಮತ್ತೆ ಮನೆಯಲ್ಲಿ ಮದ್ಯ ಸೇವಿಸುತ್ತಾ ಕುಳಿತಿರುತ್ತಾನೆ. ಅಶೋಕ್ ಇದನ್ನು ನೋಡಿ, ಸತ್ಯ ಚಿಕ್ಕಪ್ಪ, ಕುಡಿಯುವುದನ್ನು ನೀವು ಬಿಟ್ಟರೆ ಮಾತ್ರವೇ ನಾವು ಸಿಹಿ ಸಾವಿನ ಹಿಂದೆ ಇರುವ ಸತ್ಯವನ್ನು ತಿಳಿಯಲು ಸಾಧ್ಯವಾಗುತ್ತದೆ ಎಂದು ಹೇಳುತ್ತಾನೆ. ಆಗ ಸತ್ಯ ಹಾರ್ಡ್ ಡಿಸ್ಕ್ ಒಂದನ್ನು ಅಶೋಕ್ ಗೆ ನೀಡುತ್ತಾನೆ. ಸಿಸಿಟಿವಿ ಫುಟೇಜ್ ನ ಹಾರ್ಡ್ ಡಿಸ್ಕ್ ಇದು ಎಂದು ಹೇಳುತ್ತಾನೆ. ಇದನ್ನು ನೋಡಿದ ಅಶೋಕ್ ಖುಷಿ ಪಡುತ್ತಾನೆ.
ಭಾರ್ಗವಿ ಆಟಕ್ಕೆ ಸೋಲು ಎದುರಾಗುತ್ತಾ..?
ಸತ್ಯಜಿತ್ ಮತ್ತು ಅಶೋಕ್ ಮಾತನಾಡಿದ್ದನ್ನು ಭಾರ್ಗವಿ ಕೇಳಿಸಿಕೊಳ್ಳುತ್ತಾಳೆ. ಸತ್ಯ ತನ್ನ ಹಿಂದೆ ಈ ಕೆಲಸವನ್ನೆಲ್ಲಾ ಮಾಡುತ್ತಿದ್ದಾನಾ ಎಂದು ಗಾಬರಿಯಾಗುತ್ತಾಳೆ. ಸಿಹಿ ಸಾವಿನ ಬಗ್ಗೆ ಸತ್ಯ ಗೊತ್ತಾದರೆ, ತನಗೆ ಬಹಳ ಕಷ್ಟ ಎಂಬ ನಿಜ ಸಂಗತಿ ಈಗ ಭಾರ್ಗವಿಗೆ ಗೊತ್ತಾಗಿದೆ. ಈಗ ಸಿಹಿ ಮತ್ತು ಸುಬ್ಬಿ, ಇತ್ತ ಅಶೋಕ್ ಮತ್ತು ಸತ್ಯಜಿತ್ ನಾಲ್ವರು ಒಂದಾಗುತ್ತಿದ್ದು, ಇನ್ಮುಂದೆ ಭಾರ್ಗವಿಯ ಆಟಗಳಿಗೆ ಬ್ರೇಕ್ ಬೀಳುತ್ತಾ..? ಭಾರ್ಗವಿ ಕಳೆದ 25 ವರ್ಷಗಳಿಂದ ಮಾಡಿದ ಕೆಲಸಗಳೆಲ್ಲಾ ಬಯಲಾಗುತ್ತಾ ಎಂಬ ಕುತೂಹಲ ಮೂಡಲು ಶುರುವಾಗಿದೆ.


Click it and Unblock the Notifications











