Seetharama; ಸೀತಾ ಬಾಡಿಗೆ ತಾಯಿ ಎಂದು ತಿಳಿದ ಸೂರಿ : ಸಿಹಿ ಶ್ಯಾಮ್ ಪಾಲಾಗುತ್ತಾಳಾ..?
ಸೀತಾರಾಮ ಧಾರಾವಾಹಿಯಲ್ಲಿ ಈಗಾಗಲೇ ಸಿಹಿ ಹುಟ್ಟಿನ ಗುಟ್ಟು ಗುಟ್ಟಾಗಿರದೇ ಬಯಲಾಗಿದೆ. ಈಗ ಶ್ಯಾಮ್ ಅದೇನೇ ಆಗಲೀ ಸಿಹಿಯನ್ನು ಕರೆದುಕೊಂಡು ಬರುತ್ತೀನಿ ಎಂದು ರಾಮ್ ಮನೆ ಕಡೆಗೆ ಹೊರಟಿದ್ದಾನೆ. ಚಾಂದಿನಿ ಹೇಳಿದ್ದೆಲ್ಲಾ ಸತ್ಯ ಎಂದು ತಿಳಿದ ಬಳಿಕ ಸಿಹಿಯನ್ನು ಪಡೆದುಕೊಳ್ಳಬೇಕು ಎಂದು ಶಾಲಿನಿ ಮುಂದಾಗಿದ್ದಾಳೆ. ಸೀತಾಳ ಮೇಲಿನ ಸಿಟ್ಟಿಗೆ ಶಾಲಿನಿ ಸಿಹಿಯನ್ನು ಅವಳಿಂದ ಕಸಿದುಕೊಳ್ಳುತ್ತಾಳಾ..? ಅಷ್ಟಕ್ಕೂ ಶಾಲಿನಿ ಸೀತಾಳನ್ನು ದ್ವೇಷಿಸಲು ಅಸಲಿ ಕಾರಣ ಏನು ಎಂಬ ಗೊಂದಲ ವೀಕ್ಷಕರಲ್ಲಿ ಮೂಡಿದೆ.
ಮನೆಗೆ ಬಂದು ಸಿಹಿ ಬೇಕು ಎಂದ ಶ್ಯಾಮ್
ಶ್ಯಾಮ್ ಮನೆಗೆ ಬಂದು ಸಂಯಮದಿಂದ ಮಗುವನ್ನು ಕೇಳುವ ಬದಲು, ಸಿಹಿ ಹೆಸರನ್ನು ಕಿರುಚಿ ಕೂಗುತ್ತಾನೆ. ಇದರಿಂದ ಮನೆಯವರೆಲ್ಲಾ ಗಾಬರಿಯಾಗಿದ್ದಾರೆ. ಸೀತಾ ಬಂದು ಇದು ಯಾಕೆ ಹೀಗೆ ಕಿರುಚುತ್ತಿದ್ದೀರಾ ಎಂದು ಕೇಳಿದ್ದಕ್ಕೆ, ಇನ್ನು ನಾಟಕ ಮಾಡುವ ಅಗತ್ಯವಿಲ್ಲ. ಸಿಹಿಯನ್ನು ಕಳಿಸಿಕೊಡಿ. ನಾನು ಸಿಹಿಯನ್ನು ಕರೆದುಕೊಂಡು ಹೋಗಲು ಬಂದಿದ್ದೀನಿ ಎಂದು ಹೇಳುತ್ತಾನೆ. ಸೀತಾ ಆತಂಕದಲ್ಲಿದ್ದು, ಸಿಹಿ ಕೂಡ ಶ್ಯಾಮ್ ಕೂಗಾಟಕ್ಕೆ ನಡುಗಿದ್ದಾಳೆ. ರಾಮ್ ಬಂದ ಕೂಡಲೇಸಿಹಿ ಅಪ್ಪನ ತೋಳು ಸೇರಿದ್ದಾಳೆ. ಆದರೆ, ಶ್ಯಾಮ್ ನನ್ನ ಮಗಳನ್ನು ನಿಮ್ಮ ಬಳಿಯೇ ಇಟ್ಟುಕೊಂಡು ನನ್ನನ್ನು ನರಳಿಸಿದ್ದು ಸಾಕು. ಸಿಹಿಯನ್ನು ನಾನು ಕರೆದುಕೊಂಡು ಹೋಗುತ್ತೇನೆ ಎಂದು ಹಠ ಮಾಡಿದ್ದಾನೆ.

ಸೀತಾಳನ್ನು ಮೋಸಗಾತಿ ಎಂದ ಶಾಲಿನಿ
ಹಿಂದೆಯೇ ಬಂದ ಶಾಲಿನಿ ಕೂಡ ಸಿಹಿ ಬಳಿ ಹೋಗಿ ಪುಟ್ಟ ನೀನು ನಮ್ಮ ಮಗಳು. ನಮ್ಮ ಜೊತೆಗೆ ಬಾ. ಆ ಮನೆಯಲ್ಲಿ ಇರಲು ನಿನಗೆ ಇಷ್ಟ ತಾನೇ. ನಾನು ನಿನಗೆ ಹೊಸ ಹೊಸ ಬಟ್ಟೆಗಳನ್ನು ಕೊಡಿಸುತ್ತೇನೆ ಎಂದು ಕರೆಯುತ್ತಾಳೆ. ಸಿಹಿ ಇಲ್ಲ ನಾನು ಬರೋದಿಲ್ಲ ಎಂದು ಹೇಳುತ್ತಾಳೆ. ಆಗ ಸೀತಾ ಸಿಹಿ ನನ್ನ ಮಗಳು ಅವಳು ಎಲ್ಲಿಗೂ ಬರಲ್ಲ. ಯಾರ ಜೊತೆಗೂ ಹೋಗಲ್ಲ ಎಂದು ಹೇಳುತ್ತಾಳೆ. ಈ ಮಾತಿಗೆ ಶಾಲಿನಿ ಸಾಕು ಸೀತಾ ಇಷ್ಟು ದಿನ ನಮ್ಮ ಮಗುವನ್ನು ಇಟ್ಟುಕೊಂಡಿದ್ದು ಸಾಕು. ಅವಳ ಮೈಯ್ಯಲ್ಲಿ ಹರಿಯುತ್ತಿರುವುದು ನಮ್ಮ ರಕ್ತ ಎಂದು ಹೇಳುತ್ತಾಳೆ. ಸೀತಾ ಹೆತ್ತಾಗ ಎಷ್ಟು ಫೋನ್ ಮಾಡಿದರೂ ಬಾರದ ನೀವು ಈಗ ಬಂದಿದ್ದೀರಾ ಎಂದು ಪ್ರಶ್ನಿಸಿದ್ದಕ್ಕೆ, ಶಾಲಿನಿ ನಮ್ಮ ಮಗುವನ್ನು ನೀನೇ ಇಟ್ಟುಕೊಂಡು ಮಾಡಿದ ಮೋಸ ಸಾಕು ಎಂದು ಸೀತಾಳದ್ದೇ ತಪ್ಪು ಎಂಬಂತೆ ಮಾತನಾಡುತ್ತಾಳೆ.
ಸಿಹಿ ತನ್ನ ಮಗಳು ಎಂದು ವಾದ ಮಾಡಿದ ಸೀತಾ
ಆಗ ಸುಮ್ಮನಿರದ ಸೀತಾ ನೀವು ಮಾಡಿದ ತಪ್ಪಿಗೆ ನಾನು ಸಿಹಿಯನ್ನು ನನ್ನ ಬಳಿಯೇ ಇಟ್ಟುಕೊಳ್ಳಬೇಕಾಯ್ತು. ಆರು ವರ್ಷದಿಂದ ಅವಳನ್ನು ಸಾಕಿದ್ದೀನಿ. ನಾನು ಅವಳನ್ನು ಹೆತ್ತ ತಾಯಿ. ಸಿಹಿ ನಿಮ್ಮ ಜೊತೆಗೆ ಯಾವುದೇ ಕಾರಣಕ್ಕೂ ಬರುವುದಿಲ್ಲ ಎಂದು ಹೇಳುತ್ತಾಳೆ. ರಾಮ್ ಕೂಡ ಇದೇ ಮಾತನ್ನು ಹೇಳುತ್ತಾನೆ. ಸಿಹಿ ನಮ್ಮ ಮಗಳು ಅವಳನ್ನು ಬಿಟ್ಟುಕೊಡುವ ಮಾತೇ ಇಲ್ಲ ಎಂದು ಹೇಳುತ್ತಾನೆ. ಆಗ ಶಾಲಿನಿ ನಮಗೂ ಲೀಗಲ್ ಆಗಿ ಮಗುವನ್ನು ಪಡೆದುಕೊಳ್ಳುವುದು ಗೊತ್ತಿದೆ ಎಂದು ಹೇಳುತ್ತಾಳೆ.
ಸೂರಿ ಪಂಚಾಯ್ತಿಯಲ್ಲಿ ಯಾರಿಗೆ ನ್ಯಾಯ
ತಕ್ಷಣವೇ ಭಾರ್ಗವಿ ಕೂಗಾಡುತ್ತಾಳೆ. ಇಲ್ಲೇನು ಆಗುತ್ತಿದೆ. ಇದೆಲ್ಲಾ ಮಾವನಿಗೆ ಗೊತ್ತಾದರೆ ಪರೀಸ್ಥಿತಿ ಕೆಟ್ಟದಾಗಿರುತ್ತದೆ ಎಂದು ಬೈಯುತ್ತಾಳೆ. ಅಷ್ಟರಲ್ಲಿ ಸೂರಿ ತಾತ ಅಲ್ಲಿಗೆ ಬರುತ್ತಾರೆ. ವಿಚಾರವನ್ನು ಮುಚ್ಚಿಡಲು ಯತ್ನಿಸಿದಾಗ ಶ್ಯಾಮ್ ಸೂರಿ ತಾತನ ಬಳಿ ಸೀತಾ ಬಾಡಿಗೆ ತಾಯಿ ಮೂಲಕ ಸಿಹಿಗೆ ಜನ್ಮ ನೀಡಿದ್ದು, ತಮಗೆ ಮೋಸ ಮಾಡಿದ್ದಾಳೆ ಎಂದು ಹೇಳಿದ್ದಾನೆ. ಈ ಮಾತನ್ನು ಕೇಳಿದ ಸೂರಿ ತಾತ ಸೀತಾಳನ್ನು ಪ್ರಶ್ನೆ ಮಾಡಿದ್ದು, ಈಗ ಸೂರಿ ತಾತ ಪಂಚಾಯ್ತಿ ಮಾಡಲಿದ್ದು, ಯಾರಿಗೆ ನ್ಯಾಯ ಕೊಡಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.


Click it and Unblock the Notifications











