Seetha Rama Serial: ಸೀತಾಳ ಜ್ವರ.. ಸಿಹಿಯ ಶುಗರ್.. ಬದುಕಿನ ಪಾಠಕ್ಕೆ ರಾಮ್ ಇನ್ನಷ್ಟು ಹತ್ತಿರ..!
ಸೀತಾ-ರಾಮ್ ಒಂದಾಗುವುದಕ್ಕೆ ಸಿಹಿಯೇ ಸೇತುವೆ. ಎಷ್ಟೇ ಸಲ ಇಬ್ಬರು ಕಿತ್ತಾಡಿಕೊಂಡರು ಸಿಹಿಯ ಕಾರಣಕ್ಕೆ ಒಂದಾಗಿದ್ದಾರೆ. ಅಡ್ವಾನ್ಸ್ ಸ್ಯಾಲರಿ ವಿಚಾರವಾಗಿ ಸೀತಾ ಮತ್ತು ರಾಮ್ ನಡುವೆ ಮನ:ಸ್ತಾಪ ಉಂಟಾಗಿತ್ತು. ಭಾರ್ಗವಿಯಿಂದಾಗಿ ಸೀತಾಳ ಮನಸ್ಸು ಭಾರವಾಗಿತ್ತು. ಆದರೆ, ಇದ್ಯಾವುದು ರಾಮನಿಗೆ ಗೊತ್ತಿರಲಿಲ್ಲ. ಅಶೋಕ ಹೇಳುವುದಕ್ಕೆ ಹೋದಾಗಲೂ ಕೇಳಿಸಿಕೊಳ್ಳುವ ತಾಳ್ಮೆಯೂ ಇರಲಿಲ್ಲ. ನಂಬಿಕೆಯೂ ಬರಲಿಲ್ಲ.
ಸೀತಾಳ ಮನಸ್ಸಿಗೂ ಭಾರ್ಗವಿ ಮಾತುಗಳು ತುಂಬಾ ನೋವು ಕೊಟ್ಟಿದೆ. ಯಾರ ಬಳಿಯೂ ಹಂಚಿಕೊಳ್ಳದ ಸೀತಾ, ದೇವರ ಬಳಿ ಹಂಚಿಕೊಳ್ಳುವುದಕ್ಕೆ ಹೋಗಿದ್ದಳು. ಆಗಲೂ ರಾಮನೇ ಎದುರಿಗೆ ಸಿಕ್ಕಿದ್ದ. ಆಫೀಸ್‌ನಲ್ಲಿ ಆಗಿದ್ದು ಯಾವುದನ್ನು ಹೇಳದೆ, ರಾಮನ ಮನಸ್ಸಿಗೆ ನೋವು ಕೊಟ್ಟು ಹೋಗಿಬಿಟ್ಟಳು ಸೀತಾ. ಆದರೂ, ಕಷ್ಟಕಾಲದಲ್ಲಿ ಕೈಬಿಡಲ್ಲ ಎಂದುಕೊಂಡೇ ರಾಮ ಮನೆಗೆ ಬಂದಾಗಿದೆ.

ಜ್ವರದಿಂದ ಬಳಲುತ್ತಿರುವ ಸೀತಾ
ಸೀತಾಗೆ ಅದೊಂದು ದೊಡ್ಡ ಬೇಸರ ಕಾಡಿತ್ತು. ಯಾರ ಬಳಿಯೂ ಏನು ಅನ್ನಿಸಿಕೊಳ್ಳದ ಸೀತಾಗೆ ಸಂಬಂಧ ಕಟ್ಟುವ ರೀತಿ ಭಾರ್ಗವಿ ಮಾತನಾಡಿದ್ದಳು. ಇದರಿಂದ ನೊಂದಿದ್ದ ಸೀತಾ, ರಾತ್ರಿಯಿಡೀ ಯೋಚನೆ ಮಾಡುತ್ತಾ ಬೆಳಗ್ಗೆ ಏಳುವಷ್ಟರಲ್ಲಿ ಜ್ವರ ಬಂದಿತ್ತು. ಆ ಜ್ವರದಲ್ಲಿಯೂ ಮನೆಯಲ್ಲಿಯೇ ಕೆಲಸ ಮಾಡುವುದಕ್ಕೆ ಪ್ರಯತ್ನ ಪಟ್ಟಿದ್ದಳು.
ಫ್ರೆಂಡ್ ಕರೆಗೆ ಮನೆಗೆ ಬಂದ ರಾಮ್
ರಾಮ್‌ಗೆ ಈ ವಿಚಾರ ಗೊತ್ತಿರಲಿಲ್ಲ. ಮೊದಲು ಪ್ರಿಯಾ ಹೇಳಿದಳು. ಆದರೆ ರಾಮ್‌ಗೆ ಏನು ಮಾಡಬೇಕೆಂಬುದು ಮಾತ್ರ ಗೊತ್ತಾಗಲೇ ಇಲ್ಲ. ಕಾಲ್ ಮಾಡುವುದಾ ಬೇಡವಾ ಎಂಬ ಗೊಂದಲದಲ್ಲಿಯೇ ಇದ್ದ. ಆದರೂ, ಸಿಹಿಗೆ ಕಾಲ್ ಮಾಡಿದಾಗ, ಸಿಹಿಯ ಆತಂಕ ಕಾಣಿಸಿತ್ತು. "ಸೀತಮ್ಮನಿಗೆ ಹುಷಾರಿಲ್ಲ, ಬಿದ್ದು ಬಿಟ್ಟಳು. ನಂಗೆ ಫುಲ್ ಭಯ ಆಗೋಯ್ತು. ಅಜ್ಜಿ ತಾತ ಬೇರೆ ಇಲ್ಲ. ಸೀತಮ್ಮನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗ್ಬೇಕಾ ಫ್ರೆಂಡ್" ಎಂದಿದ್ದಾಳೆ.

ಸೀತಾ ಮುಂದೆ ಕೊಟ್ಟ ಬಿಲ್ಡಪ್ ಎಲ್ಲಾ ಠುಸ್
ಸಿಹಿಯ ಮಾತಲ್ಲಿ ಆತಂಕವಿತ್ತು. ಅದಕ್ಕಿಂತ ಮುಖ್ಯವಾಗಿ ಸೀತಾಗೆ ಯಾರು ಇಲ್ಲ ಅನ್ನೋದು ರಾಮ್‌ಗೆ ಅರ್ಥವಾಗಿತ್ತು. ಇಂಥ ಸಮಯದಲ್ಲಿ ಸುಮ್ಮನೆ ಕೂರುವುದಕ್ಕೆ ರಾಮ್ ಮನಸ್ಸು ತಡೆಯಲಿಲ್ಲ. ಸೀದಾ ಮನೆಗೆ ಬಂದೇ ಬಿಟ್ಟ. ಸೀತಾಳಿಗೆ ಮೊದಲಿಗೆ ಕೊಂಚ ಕೋಪವೆನಿಸಿದರು ಅದು ಹೆಚ್ಚು ಸಮಯ ಇರಲಿಲ್ಲ. ಕಡೆಯಲ್ಲಿ ಸೀತಾಳನ್ನು ರೆಸ್ಟ್ ಮಾಡಲು ಹೇಳಿ, ತಾನು, ಸಿಹಿ ಎಲ್ಲಾ ಕೆಲಸ ಮಾಡುವುದಾಗಿ ತಿಳಿಸಿದ. ಆದರೆ, ಸಿಹಿಗೆ ಇಂಜೆಕ್ಷನ್ ಹಾಕುವುದಕ್ಕೆ ರಾಮ್‌ಗೆ ಧೈರ್ಯ ಸಾಕಾಗಲಿಲ್ಲ. ಆ ನೋವು ತಡೆಯಲಾಗಲಿಲ್ಲ. ಇಂಜೆಕ್ಷನ್ ಬಿಟ್ಟು ಮಾತ್ರೆಯ ಆಪ್ಶನ್ ಕೇಳಿದಾಗ, ಸೀತಾಳೇ ಮುಂದೆ ಬಂದು ಇಂಜೆಕ್ಷನ್ ಹಾಕಿದ್ದಾಳೆ.
ಅವಲಕ್ಕಿ ಪವಲಕ್ಕಿ ಹೇಳಿ ಕಾಳು ಹುಡುಕುವ ರಾಮ
ಸೀತಾಳಿಗೆ ಎದ್ದೇಳುವುದಕ್ಕೂ ಶಕ್ತಿ ಇಲ್ಲ. ಜ್ವರ ಜಾಸ್ತಿಯಾಗಿ ಮಲಗಿಬಿಟ್ಟಳು. ರಾಮ್‌ಗೆ ಈಗ ಅಡುಗೆ ಮಾಡುವ ಚಾಲೆಂಜ್. ಅಡುಗೆಗೆ ಏನೆಲ್ಲಾ ಹಾಕಬೇಕು ಎಂಬುದನ್ನು ಸಿಹಿ ಹೇಳಿಕೊಡುತ್ತಾ ಇದ್ದಳು. ಆದರೆ, ರಾಮ್‌ಗೆ ಹೆಸರುಬೇಳೆ, ತೊಗರುಬೇಳೆಯ ಪರಿಚಯವಿರಲಿಲ್ಲ. ಅವಲಕ್ಕಿ ಪವಲಕ್ಕಿ ಆಡಿ, ಅದರ ಮೂಲಕ ಕಂಡು ಹಿಡಿದಿದ್ದಾನೆ. ಒಟ್ಟಿನಲ್ಲಿ ಸಿಹಿ ಮತ್ತೆ ರಾಮ್ ಸೇರಿ ಹೆಸರಿಡುವುದಕ್ಕೆ ಆಗದಂತ ಅಡುಗೆಯನ್ನೇನೋ ತಯಾರು ಮಾಡಿದ್ದಾರೆ. ಜ್ವರದಲ್ಲಿ ನಾಲಿಗೆ ರುಚಿ ಕಳೆದುಕೊಂಡಿರುವ ಸೀತಾ ಈಗ ಅಡುಗೆಯ ರುಚಿ ಹಿಡಿಯಬೇಕಿದೆ.


Click it and Unblock the Notifications











