ಕಣ್ಣೇದುರು ನವಜೋಡಿಯ ರೊಮ್ಯಾನ್ಸ್ ; ನನ್ನ ಮಾಜಿ ಬಾಯ್‌ಫ್ರೆಂಡ್‌ನ ಇಲ್ಲಿಗೆ ಕಳಿಸಿ- ಬಿಗ್ ಬಾಸ್‌ಗೆ ಸ್ಫರ್ಧಿಯ ಮನವಿ
''ಬಿಗ್ ಬಾಸ್'' ಮನೆಗೆ ಒಬ್ಬೊಬ್ಬರು ಒಂದೊಂದು ಉದ್ದೇಶಕ್ಕೆ ಹೋಗುತ್ತಾರೆ. ಕೆಲವರು ''ಬಿಗ್ ಬಾಸ್''ನಲ್ಲಿ ಹಣ ಸಿಗುತ್ತೆ ಎನ್ನುವ ಉದ್ದೇಶದಿಂದ ಹೋದರೆ, ಇನ್ನು ಕೆಲವರು ''ಬಿಗ್ ಬಾಸ್''ನ ಪ್ರತಿಷ್ಠೆಯಾಗಿ ಸ್ವೀಕರಿಸುತ್ತಾರೆ. ಮನೆಯೊಳಗೆ ಹೋಗುತ್ತಾರೆ. ಕೆಲವರು ಟ್ರೋಫಿ ಗೆಲ್ಲುವ ಉದ್ದೇಶದಿಂದ ಹೋದರೆ, ಕೆಲವರು ತಮ್ಮ ಆತ್ಮ ವಿಮರ್ಷೆ ಮಾಡಿಕೊಳ್ಳಲು ಹೋಗುತ್ತಾರೆ. ಮತ್ತೂ ಕೆಲವರು ''ಬಿಗ್ ಬಾಸ್'' ಮನೆಗೆ ಪ್ರೀತಿ ಮಾಡಲು ಹೋಗುತ್ತಾರೆ.
ಇದಕ್ಕೆ ಕೈಗನ್ನಡಿ ಎಂಬಂತೆ ಇಲ್ಲಿಯವರೆಗೆ ಬೇರೆ ಬೇರೆ ಭಾಷೆಯಲ್ಲಿ ನಡೆದ ''ಬಿಗ್ ಬಾಸ್'' ಕಾರ್ಯಕ್ರಮದಲ್ಲಿ ಹಲವರಿಗೆ ಪ್ರೇಮಾಂಕುರವಾಗಿದೆ. ಹಲವು ಪ್ರೇಮಕಥೆಗಳಿಗೆ ''ಬಿಗ್ ಬಾಸ್'' ಮನೆ ಸಾಕ್ಷಿಯಾಗಿದೆ. ಆ ಪೈಕಿ ಮನೆಯ ಹೊರಗಡೆ ಬಂದ ನಂತರ ಪ್ರೀತಿಯನ್ನು ಮುಂದುವರೆಸಿ ಮದುವೆಯಾದವರು ಎಷ್ಟು.. ? ಪ್ರೀತಿಯನ್ನು ಮರೆತು ಬೇರೆ ದಿಕ್ಕಿನಲ್ಲಿ ಮುನ್ನಡೆದವರೆಷ್ಟು..? ಎನ್ನುವುದು ಬೇರೆ ವಿಚಾರ ಆದರೂ ''ಬಿಗ್ ಬಾಸ್'' ಒಂದು ರೀತಿ ಲವರ್ಸ್ ಸ್ಪಾಟ್ ಎಂಬಂತೆ ಹಲವರಿಗೆ ಹಲವು ಸಲ ಭಾಸವಾಗಿದೆ.

ಈ ಬಾರಿಯ ''ಬಿಗ್ ಬಾಸ್'' ಕೂಡ ಇದರಿಂದ ಹೊರತಾಗಿಲ್ಲ. ಕನ್ನಡದಲ್ಲಿ ವೈಲ್ಡ್ ಕಾರ್ಡ್ ಸದಸ್ಯ ಸೂರಜ್ ಸಿಂಗ್ ಹೃದಯ ಕದಿಯಲು ರಾಶಿಕಾ ಕಸರತ್ತು ಮಾಡುತ್ತಿದ್ದರೆ ಹಿಂದಿಯಲ್ಲಿ ಮಾಡೆಲ್ ನಟಿ ನೆಹಾಲ್ ಚುಡಾಸಮಾ ಮತ್ತು ಬಸೀರ್ ಅಲಿ ನಡುವೆ ಈಗಾಗಲೇ ಆತ್ಮೀಯತೆ ಹೆಚ್ಚಾಗಿದೆ. ಇಬ್ಬರ ನಡುವೆ ಪ್ರೇಮಾಂಕುರವೂ ಆದಂತೆ ಇದೆ.
ಇದಕ್ಕೆ ಪುರಾವೆ ಎನ್ನುವಂತೆ ಬಸೀರ್ ಅಲಿ ಮೂರೊತ್ತು ನೆಹಾಲ್ ಹಿಂದೆಯೇ ತಿರುಗುತ್ತಿದ್ದಾರೆ. ನೆಹಾಲ್ ಕೂಡ ಬಸಿರ್ ಮಡಿಲಿನಲ್ಲಿಯೇ ನೆಮ್ಮದಿ ಹುಡುಕುತ್ತಿದ್ದಾರೆ. ಇವರಿಬ್ಬರ ಈ ಪ್ರೀತಿ-ಆತ್ಮೀಯತೆ ''ಬಿಗ್ ಬಾಸ್'' ಮನೆಯಲ್ಲಿರುವ ಮತ್ತೊಬ್ಬ ಸ್ಫರ್ಧಿ ತಾನ್ಯ ಮಿತ್ತಲ್ ಅವರಿಗೆ ಅವರ ಮಾಜಿ ಪ್ರಿಯಕರನನ್ನು ನೆನಪಿಸಿದೆ.
ಹೀಗಾಗಿಯೇ ''ಬಿಗ್ ಬಾಸ್'' ಬಳಿ ತಾನ್ಯಾ ಮಿತ್ತಲ್ ಮನವಿಯನ್ನು ಮಾಡಿಕೊಂಡಿದ್ದಾರೆ. ನಾನು ಈ ಮನೆಯಲ್ಲಿ ಒಬ್ಬಂಟಿಯಾಗಿದ್ದೇನೆ, ದಯಮಾಡಿ ನನ್ನ ಮಾಜಿ ಪ್ರಿಯಕರನನ್ನು ಈ ಮನೆಗೆ ಕಳುಹಿಸಿ ಕೊಡಿ ಎಂದು ಹೇಳಿದ್ದಾರೆ.
ತಾನ್ಯಾ ಮಿತ್ತಲ್ ಅವರ ಈ ವಿಶೇಷ ವಿಚಿತ್ರ ಮನವಿಯನ್ನು ಕೇಳಿ ಮನೆಯ ಉಳಿದ ಸದಸ್ಯರೆಲ್ಲಾ ಗೊಳ್ಳೆಂದು ನಕ್ಕಿದ್ದಾರೆ. ಈಗ ಮಾಜಿ ಪ್ರೇಮಿ ಕೂಡ ನಡೆಯುತ್ತಂತೆ ಎಂದು ತಾನ್ಯಾ ಅವರ ಕಾಲೆಳೆದಿದ್ದಾರೆ.

ಅಂದ್ಹಾಗೇ ''ಬಿಗ್ ಬಾಸ್'' ಬಳಿ ಬಾಯ್ ಫ್ರೆಂಡ್‌ಗಾಗಿ ಬೇಡಿಕೆ ಇಟ್ಟಿರುವ ಈ ತಾನ್ಯಾ ಮಿತ್ತಲ್ ಹಿಂದಿ ನೆಲದ ಉದ್ಯಮಿ.. ಭಾಷಣಗಾರ್ತಿ. 2018ರ ಮಿಸ್ ಟೂರಿಸಂ ಏಷ್ಯಾ ಪ್ರಶಸ್ತಿ ವಿಜೇತೆ. ''ಮಹಾಕುಂಭ ಮೇಳ''ದಲ್ಲಿ ಕಾಲ್ತುಳಿತವಾದಾಗ ಹಲವಾರು ಜನರ ರಕ್ಷಣೆಯನ್ನು ತಾವು ಮಾಡಿರುವುದಾಗಿ ತಾನ್ಯ ಈ ಹಿಂದೆ ಹೇಳಿಕೊಂಡಿದ್ದರು. ಆ ನಂತರ ''ಪಹಲ್ಗಾಮ್''ನಲ್ಲಿ ಭಯೋತ್ಪಾದಕರ ದಾಳಿ ನಡೆದಾಗ ಉಗ್ರರಿಗೆ ಯಾವ ಧರ್ಮವೂ ಇರುವುದಿಲ್ಲ ಎಂದು ಹೇಳಿ ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದರು.
ಇವರನ್ನು ಮನೆಯ ಬೇರೆ ಸದಸ್ಯರಿಗೆ ಮತ್ತು ಪ್ರೇಕ್ಷಕರಿಗೆ ''ಆಧ್ಯಾತ್ಮಿಕ ಪ್ರಭಾವಿ'' ವ್ಯಕ್ತಿ ಅಂದರೆ ''Spiritual Influencer'' ಎಂದು ಪರಿಚಯಿಸಲಾಗಿದೆ. ಬಿಗ್ ಬಾಸ್ ಮನೆಯಲ್ಲಿರಲು 800 ಸೀರೆಗಳನ್ನು ತೆಗೆದುಕೊಂಡು ಬಂದಿರುವುದಾಗಿ ಮನೆಯನ್ನು ಪ್ರವೇಶಿಸಿದ ಮೊದಲ ದಿನ ತಾನ್ಯಾ ಹೇಳಿದ್ದರು.
ಇನ್ನುಳಿದಂತೆ ಹಿಂದಿ ''ಬಿಗ್ ಬಾಸ್'' ಮನೆಯಿಂದ ಈಗಾಗಲೇ ನಾಲ್ಕು ಜನ ಮನೆಯಿಂದ ಹೊರ ಬಂದಿದ್ದಾರೆ. ವೈಲ್ಡ್ ಕಾರ್ಡ್ ಸ್ಫರ್ಧಿಗಳಾಗಿ ಇಬ್ಬರು ಮನೆಯನ್ನು ಪ್ರವೇಶಿಸಿದ್ದಾರೆ. ಈ ವಾರ ಯಾರು ಹೊರಗಡೆ ಬರುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ. ತಾನ್ಯಾ ಮಿತ್ತಲ್ ಅವರ ಈ ಬಾಯ್‌ಫ್ರೆಂಡ್ ಬೇಡಿಕೆಯ ಕುರಿತು ಕೂಡ ಸಲ್ಮಾನ್ ಖಾನ್ ಮಾತನಾಡುವ ಸಾಧ್ಯತೆ ಇದೆ.


Click it and Unblock the Notifications











