ಕನ್ನಡದಿಂದ ತೆಲುಗು ಕಿರುತೆರೆಗೆ ಹಿರಿಯ ನಟ ಸುನಿಲ್ ಪುರಾಣಿಕ್ ಜಂಪ್!
'ನಾಗಪಂಚಮಿ' ಧಾರಾವಾಹಿ ಮೂಲಕ ತೆಲುಗು ಕಿರುತೆರೆಯಲ್ಲಿ ಮಿಂಚುತ್ತಿದ್ದಾರೆ ಕನ್ನಡದ ನಟ ಸುನಿಲ್ ಪುರಾಣಿಕ್. ಕನ್ನಡ ಕಿರುತೆರೆ ಜೊತೆಗೆ ಹಿರಿತೆರೆಯಲ್ಲೂ ಬಹಳಷ್ಟು ಹೆಸರು ಮಾಡಿರುವ ಹಿರಿಯ ನಟ ಸುನಿಲ್ ಪುರಾಣಿಕ್ ಇದೀಗ ಕನ್ನಡದಿಂದ ತೆಲುಗು ಕಿರುತೆರೆಗೆ ಜಂಪ್ ಮಾಡಿದ್ದಾರೆ.
ಧಾರಾವಾಹಿ ಆರಂಭವಾಗಿ ಕೆಲವೇ ದಿನ ಕಳೆದಿದ್ದು, ಅದರಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೆ ಅವರು ನಟಿಸಿರುವ 'ಕಬ್ಜ' ಸಿನಿಮಾವೂ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡಿರುವುದರಿಂದ ಇವರನ್ನು ಪರಭಾಷೆಯಲ್ಲೂ ಅಭಿಮಾನಿಗಳು ಸುಲಭವಾಗಿ ಗುರುತಿಸಿ ಪ್ರಶಂಸಿಸುತ್ತಿದ್ದಾರಂತೆ.

ಅಂದ ಹಾಗೇ ಸುನೀಲ್ ಪುರಾಣಿಕ್ ಅವರಿಗೆ 'ನಾಗಪಂಚಮಿ' ಧಾರಾವಾಹಿಯಲ್ಲಿ ನಟಿಸುವ ಅವಕಾಶ ದೊರಕಿದ್ದು ಅವರ ಸೊಸೆ ದೀಪಾ ಅವರಿಂದ. ಆಕೆ ಪ್ರಸ್ತುತ ತೆಲುಗು ಕಿರುತೆರೆಯಲ್ಲಿ ಕೆಲಸ ಮಾಡುತ್ತಿದ್ದಾಳೆ. ಆಕೆ ಕೆಲಸ ಮಾಡುವ ಪ್ರೊಡಕ್ಷನ್ ಹೌಸ್ ಕಂದು ಪಾತ್ರಕ್ಕೆ ನಟರನ್ನು ಹುಡುಕುತ್ತಿದ್ದಾಗ ಸುನಿಲ್ ಪುರಾಣಿಕ್ ಅವರ ಫೋಟೋ ನೋಡಿ ಲುಕ್ ಟೆಸ್ಟ್‌ಗೆ ಕರೆದರು. ಸುನಿಲ್ ಅವರು ಹೋದಾಗ ಲುಕ್ ಟೆಸ್ಟ್ ನಲ್ಲಿ ಸೆಲೆಕ್ಟ್ ಕೂಡಾ ಆದರು.
ಜನ ಮೆಚ್ಚಿದ್ದು ಖುಷಿ ನೀಡಿದೆ
'ನಾಗಪಂಚಮಿ' ಧಾರಾವಾಹಿ ಪ್ರಸಾರ ಶುರುವಾಗಿ ಸದ್ಯಕ್ಕೆ ತಿಂಗಳಾಗುತ್ತಾ ಬಂದಿದೆ. ಜನ ಈ ಧಾರಾವಾಹಿಯನ್ನು ಬಹಳ ಇಷ್ಟಪಟ್ಟು ನೋಡುತ್ತಿದ್ದಾರೆ. ಟಿ ಆರ್ ಪಿ ಕೂಡ ಚೆನ್ನಾಗಿದೆ. ಹಾಗಾಗಿ ನಮಗೂ ಖುಷಿ ಇದೆ ಎಂದು ಸಂತಸ ವ್ಯಕ್ತಪಡಿಸುತ್ತಾರೆ ಸುನಿಲ್ ಪುರಾಣಿಕ್.
'ನಾಗಪಂಚಮಿ' ವಿಶಿಷ್ಟ ಧಾರಾವಾಹಿ
'ನಾಗಪಂಚಮಿ' ಸಾಮಾನ್ಯ ಧಾರಾವಾಹಿ ಅಲ್ಲ. ಒಂದಷ್ಟು ಸೂಪರ್ ನ್ಯಾಚುರಲ್ ಎಲಿಮೆಂಟ್‌ಗಳ ಜೊತೆಗೆ ಇದರಲ್ಲಿ ಮಾನವ ಮೌಲ್ಯಗಳೂ ತುಂಬಾನೇ ಇವೆ. ಮಾನವ ಸಂಬಂಧದ ಬಗ್ಗೆಯೂ ಬಹಳಷ್ಟು ವಿಚಾರಗಳನ್ನು ಇದು ಪ್ರತಿಬಿಂಬಿಸುತ್ತದೆ ಎಂಬುದು ಸುನಿಲ್ ಪುರಾಣಿಕ್ ಅವರ ಅಂಬೋಣ.

'ಕಬ್ಜ' ಚಿತ್ರದ ಮೂಲಕ ಈಗಾಗಲೇ ತೆಲುಗು ಕಿರುತೆರೆ ಹಾಗೂ ಎಲ್ಲಾ ಪ್ರೇಕ್ಷಕರನ್ನು ಮುಟ್ಟಿರುವ ನಟ ಸುನಿಲ್ ಪುರಾಣಿಕ್ ಅವರನ್ನು ಇದೀಗ 'ನಾಗಪಂಚಮಿ' ಧಾರಾವಾಹಿ ಮೂಲಕವು ಜನ ಅಷ್ಟೇ ಆದರದಿಂದ ಸ್ವಾಗತಿಸಿರುವುದು ಖುಷಿಯ ವಿಚಾರ.
ತೆಲುಗು ಕಿರುತೆರೆಯಲ್ಲಿ ಸುನಿಲ್ ಪುರಾಣಿಕ್
ತೆಲುಗು ಕಿರುತೆರೆಯಲ್ಲಿ ಈಗಾಗಲೇ ಬಹಳಷ್ಟು ಕನ್ನಡದ ನಟರು ನಟಿಸುತ್ತಿರುವುದು ವಿಶೇಷ. ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಭಾಗಗಳಲ್ಲಿ ತೆಲುಗು ಧಾರಾವಾಹಿಗಳನ್ನು ಜನ ನೋಡುತ್ತಿದ್ದಾರೆ. ಹಾಗಾಗಿ ತೆಲುಗು ಮತ್ತು ಕನ್ನಡ ಒಂದೊಳ್ಳೆಯ ಸಹೋದರ ಸಂಬಂಧವನ್ನು ಹೊಂದಿದೆ ಅಂದರೆ ಖಂಡಿತಾ ತಪ್ಪಾಗಲಾರದು ಎಂಬುದು ಸುನಿಲ್ ಪುರಾಣಿಕ್
ಅವರ ಅಭಿಪ್ರಾಯ.


Click it and Unblock the Notifications











