ವಿಭಿನ್ನ ಪಾತ್ರದ ಮೂಲಕ ಕಿರುತೆರೆಗೆ ಕಂ ಬ್ಯಾಕ್ ಮಾಡಿದ ಹರಿಣಿ ಶ್ರೀಕಾಂತ್
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳ ಪೈಕಿ 'ಗೌರಿಶಂಕರ' ಧಾರಾವಾಹಿಯೂ ಒಂದು. ವಿಭಿನ್ನ ಕಥಾಹಂದರದ ಜೊತೆಗೆ ಪಾತ್ರವರ್ಗದ ಮೂಲಕವೂ ಈ ಧಾರಾವಾಹಿಯು ಕಿರುತೆರೆ ವೀಕ್ಷಕರ ಮನೆ, ಮನ ಸೆಳೆಯುತ್ತಿದೆ. ಹೀಗಿರುವಾಗ ಈ ಧಾರಾವಾಹಿಯಲ್ಲಿ ಇದೀಗ ಹೊಸ ಪಾತ್ರದ ಎಂಟ್ರಿಯಾಗಿದೆ. ಹೌದು, ಭೈರಾದೇವಿ ಎನ್ನುವ ಪಾತ್ರದ ಆಗಮನವಾಗಿದ್ದು, ವಿಭಿನ್ನ ಲುಕ್ ಮೂಲಕ ಕಿರುತೆರೆಗೆ ಕಾಲಿಟ್ಟಿದ್ದಾರೆ ನಟಿ ಹರಿಣಿ ಶ್ರೀಕಾಂತ್.
ಅಮ್ಮನಾಗಿ, ಅತ್ತೆಯಾಗಿ ಕಿರುತೆರೆಯಲ್ಲಿ ಮೋಡಿ ಮಾಡಿರುವ ಹರಿಣಿ ಶ್ರೀಕಾಂತ್ ಅವರು ಇದೇ ಮೊದಲ ಬಾರಿಗೆ ಹೊಸ ಅವತಾರದಲ್ಲಿ ಕಿರುತೆರೆ ವೀಕ್ಷಕರ ಮುಂದೆ ಬಂದಿದ್ದಾರೆ. ಹೌದು, ಭೈರಾದೇವಿ ಎನ್ನುವ ಒರ್ವ ಪ್ರಭಾವಿ ಮಹಿಳೆಯ ಪಾತ್ರದಲ್ಲಿ ಕಿರುತೆರೆಯಲ್ಲಿ ಕಾಣಿಸಿಕೊಂಡಿರುವ ಹರಿಣಿ ಶ್ರೀಕಾಂತ್ ಅವರ ಹೊಸ ಲುಕ್ ಕಂಡು ಕಿರುತೆರೆ ವೀಕ್ಷಕರು ಫಿದಾ ಆಗಿದ್ದಾರೆ.

ಅಂದ ಹಾಗೇ ಹರಿಣಿ ಶ್ರೀಕಾಂತ್ ಅವರು ನಿರೂಪಕರಾಗಿ ಕಿರುತೆರೆಯ ನಂಟು ಬೆಳೆಸಿಕೊಂಡವರು. ದೂರದರ್ಶನದ ಸವಿನೆನಪು ಕಾರ್ಯಕ್ರಮದ ನಿರೂಪಕರಾಗಿ ಕಿರುತೆರೆಗೆ ಕಾಲಿಟ್ಟ ಈಕೆ ಮೊದಲ ಬಾರಿ ಬಣ್ಣ ಹಚ್ಚಿದ್ದು 'ಪ್ರತಿಭೆ' ಧಾರಾವಾಹಿಯಲ್ಲಿ. ನಂತರ "ಆತ್ಮ" ಎನ್ನುವ ಧಾರಾವಾಹಿಯಲ್ಲಿಯೂ ಅಭಿನಯಿಸಿರುವ ಹರಿಣಿ ಶ್ರೀಕಾಂತ್ ಅವರಿಗೆ ನಟನೆ ಒಲಿಯುವುದು ಕಷ್ಟ ಎಂದೆನಿಸಿತು. ಮುಂದೆ ನಟನೆಗೆ ವಿದಾಯ ಹೇಳಿದ ಹರಿಣಿ ಶ್ರೀಕಾಂತ್ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.
ಮುಂದೆ ಪತಿ ಶ್ರೀಕಾಂತ್ ಅವರು ನೀಡಿದ ಪ್ರೋತ್ಸಾಹ, ಬೆಂಬಲದಿಂದ ಮತ್ತೆ ನಟನೆಯತ್ತ ಮುಖ ಮಾಡಿದ ಹರಿಣಿ ಶ್ರೀಕಾಂತ್ ಅವರು ಮತ್ತೆ ಹಿಂತಿರುಗಿ ನೋಡಿದ್ದಿಲ್ಲ. ನಟಿ ಹರಿಣಿ ಶ್ರೀಕಾಂತ್ ಅವರು ಅಭಿನಯಿಸಿದ್ದು ಬೆರಳೆಣಿಕೆಯಷ್ಟು ಧಾರಾವಾಹಿಗಳಲ್ಲಷ್ಟೇ ಆದರೂ ನಟಿಸಿರುವಂತಹ ಪಾತ್ರಗಳ ಮೂಲಕ ವೀಕ್ಷಕರ ಮನ ಸೆಳೆದಿದ್ದಾರೆ.
ಈಟಿವಿ ಧಾರಾವಾಹಿಯಲ್ಲಿ ಪ್ರಸಾರವಾಗುತ್ತಿದ್ದ 'ಮಿಂಚು' ಧಾರಾವಾಹಿಯಲ್ಲಿ ಕಾತ್ಯಾಯಿನಿ ಎನ್ನುವ ಕುಂಟಿಯ ಪಾತ್ರದಲ್ಲಿ ಅಭಿನಯಿಸಿದ್ದ ಇಂದಿಗೂ ಆ ಪಾತ್ರದ ಮೂಲಕವೂ ವೀಕ್ಷಕರ ಮನದಲ್ಲಿ ಶಾಶ್ವತ ಸ್ಥಾನ ಪಡೆದುಕೊಂಡಿದ್ದಾರೆ. ಜೊತೆಗೆ "ಮಿಂಚು" ಧಾರಾವಾಹಿಯ ನಟನೆಗೆ 'ಆರ್ಯಭಟ' ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

'ಸಂಬಂಧ', 'ಚಿಕ್ಕಮ್ಮ', 'ಪುಟ್ಟಗೌರಿ ಮದುವೆ', 'ಮಿಥುನರಾಶಿ', 'ನಾಗಿಣಿ', 'ಮರಳಿ ಮನಸ್ಸಾಗಿದೆ' ಧಾರಾವಾಹಿಯಲ್ಲಿ ಅಭಿನಯಿಸಿರುವ ಹರಿಣಿ ಶ್ರೀಕಾಂತ್ ''ಪುಟ್ಟಗೌರಿ ಮದುವೆ' ಧಾರಾವಾಹಿಯಲ್ಲಿ ನಾಯಕಿ ಗೌರಿ ಅಮ್ಮನಾಗಿ ನಟಿಸಿರುವ ಈಕೆ ಆ ಪಾತ್ರದ ಮೂಲಕ ವೀಕ್ಷಕರ ಮನ ಸೆಳೆದಿದ್ದಾರೆ. ಇನ್ನು ಸೂಪರ್ ನ್ಯಾಚುರಲ್ ಧಾರಾವಾಹಿ 'ನಾಗಿಣಿ'ಯಲ್ಲಿಯೂ ಅಮ್ಮನಾಗಿ ಅಭಿನಯಿಸಿರುವ ಹರಿಣಿ ಶ್ರೀಕಾಂತ್ ಈಕೆ ಜೀ ಕುಟುಂಬ ಅವಾರ್ಡ್ ಕಾರ್ಯಕ್ರಮದಲ್ಲಿ ಮನೆ ಮೆಚ್ಚಿದ ಅಮ್ಮ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
'ಭಜರಂಗಿ','ಮೀರಾ ಮಾಧವ', 'ಸಂಜು ವೆಡ್ಸ್ ಗೀತಾ', 'ಭೂಮಿ ತಾಯಿ', 'ಅಂಗುಲಿಮಾಲ', 'ಜೈ ಮಾರುತಿ 800', 'ಅಂಜನಿ ಪುತ್ರ', 'ಅನಂತು v/s ನುಸ್ರತ್', 'ಚಾರ್ಲಿ 777' ಹೀಗೆ ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ನಟಿಸಿರುವ ಹರಿಣಿ ಶ್ರೀಕಾಂತ್ ಮನೋಜ್ಞ ನಟನೆಯ ಮೂಲಕ ಹಿರಿತೆರೆಯಲ್ಲಿ ಮೋಡಿ ಮಾಡಿದ್ದಾರೆ. ಇದೀಗ ಭೈರಾದೇವಿ ಆಗಿ ಕಿರುತೆರೆಗೆ ಮರಳಿರುವ ಹರಿಣಿ ಶ್ರೀಕಾಂತ್ ಅವರು ಬಣ್ಣ ಹಚ್ಚಿದ್ದು ಬೆರಳೆಣಿಕೆಯಷ್ಟು ಧಾರಾವಾಹಿಗಳಲ್ಲಷ್ಟೇ ಆದರೂ ಅಭಿನಯಿಸಿದ ಪಾತ್ರಗಳ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದಾರೆ.


Click it and Unblock the Notifications










