ಹೊಸ ಪಾತ್ರ, ಹೊಸ ಧಾರಾವಾಹಿ ಎಂದ ಹಿರಿಯ ನಟಿ ವನಿತಾ ವಾಸು. 'ಅಮೃತಧಾರೆ' ಕಥೆಯೇನು?
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳ ಪೈಕಿ 'ಅಮೃತಧಾರೆ' ಧಾರಾವಾಹಿಯೂ ಒಂದು. 'ಅಮೃತಧಾರೆ' ಧಾರಾವಾಹಿಯಲ್ಲಿ ನಾಯಕ ಗೌತಮ್ ದಿವಾನ್ ಅವರ ತಾಯಿ ಶಕುಂತಲಾ ಆಗಿ ಅಭಿನಯಿಸುತ್ತಿದ್ದಾರೆ ವನಿತಾ ವಾಸು. ಶಕುಂತಲಾ ಎನ್ನುವ ನೆಗೆಟಿವ್ ರೋಲ್‌ನಲ್ಲಿ ಅಭಿನಯಿಸುತ್ತಿರುವ ವನಿತಾ ವಾಸು ಇದೀಗ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ.
ಹೌದು, ಉದಯ ವಾಹಿನಿಯಲ್ಲಿ ಪ್ರಸಾರವಾಗಲಿರುವ ಹೊಚ್ಚ ಹೊಸ ಧಾರಾವಾಹಿ 'ಅನುಪಲ್ಲವಿ' ಯಲ್ಲಿ ಖಳನಾಯಕಿಯಾಗಿ ನಟಿಸಲಿದ್ದಾರೆ ವನಿತಾವಾಸು. ಈಗಾಗಲೇ ಧಾರಾವಾಹಿಯ ಪ್ರೋಮೋವನ್ನು ವಾಹಿನಿ ರಿಲೀಸ್ ಮಾಡಿದ್ದು, ಅದರಲ್ಲಿ ವಿಭಿನ್ನ ಲುಕ್ ಮೂಲಕ ಮನ ಸೆಳೆದಿದ್ದಾರೆ ವನಿತಾ ವಾಸು. ಧಾರಾವಾಹಿಯ ಲುಕ್‌ನ ಫೋಟೋವನ್ನು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ಈಕೆ "ಹೊಸ ಪಾತ್ರ, ಹೊಸ ಧಾರಾವಾಹಿ, ಶೀಘ್ರದಲ್ಲಿ ಉದಯ ವಾಹಿನಿಯಲ್ಲಿ ಪ್ರಸಾರವಾಗಲಿದೆ" ಎಂದು ಬರೆದುಕೊಂಡಿದ್ದಾರೆ.

ಸಿನಿಮಾ ಮೂಲಕ ನಟನೆಯ ನಂಟು ಬೆಳೆಸಿಕೊಂಡಿರುವ ವನಿತಾವಾಸು ಸೀರಿಯಲ್ ಗೆ ಕಾಲಿಟ್ಟಿದ್ದು ಖಳನಾಯಕಿಯಾಗಿ. 20 ವರ್ಷದ ಮೊದಲು ಈಟಿವಿ ವಾಹಿನಿಯಲ್ಲಿ ಪ್ರಸಾರಗೊಂಡ 'ಮನೆಯೊಂದು ಮೂರು ಬಾಗಿಲು' ಧಾರಾವಾಹಿಯಲ್ಲಿ ಆಶಾ ಆಗಿ ನಟಿಸಿರುವ ಈಕೆ ಖಡಕ್ ರೋಲ್ ಮೂಲಕ ವೀಕ್ಷಕರ ಮನ ಸೆಳೆದಿದ್ದರು. ನಂತರ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸರಸ್ವತಿ ಲಕ್ಷ್ಮಿ ಪ್ರಿಯೆ' ಧಾರಾವಾಹಿಯಲ್ಲೂ ಅತ್ತೆ ಸರಸ್ವತಿಯಾಗಿ ನಟಿಸಿದ ಈಕೆ ಅಲ್ಲೂ ಕಾಣಿಸಿಕೊಂಡಿದ್ದು ನೆಗೆಟಿವ್ ರೋಲ್ ನಲ್ಲಿ. ತದ ನಂತರ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸಂಘರ್ಷ' ಧಾರಾವಾಹಿಯಲ್ಲಿ ಬೈರಾದೇವಿ ಎಂಬ ಪಾತ್ರದಲ್ಲಿ ಅಭಿನಯಿಸಿದ ವನಿತಾ ವಾಸು ನೆಗೆಟಿವ್ ರೋಲ್ ಮೂಲಕ ಮತ್ತೆ ವೀಕ್ಷಕರ ಮನ ಸೆಳೆದಿದ್ದರು.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಬ್ರಹ್ಮಗಂಟು' ಧಾರಾವಾಹಿಯಲ್ಲಿ ನಾಯಕ ಲಕ್ಕಿ ಅಲಿಯಾಸ್ ಲಕ್ಷ್ಮಣನ ದೊಡ್ಡಮ್ಮ ರೇವತಿಯಾಗಿಯೂ ನಟಿಸಿದ್ದ ಈಕೆ ವಿಭಿನ್ನ ರೀತಿಯ ಪಾತ್ರದ ಮೂಲಕ ವೀಕ್ಷಕರಿಗೆ ಮಗದಷ್ಟು ಹತ್ತಿರವಾಗಿದ್ದರು. ವನಿತಾವಾಸು ಅವರ ಸೀರಿಯಲ್ ಪಯಣ ಪೌರಾಣಿಕ ಧಾರಾವಾಹಿಯಿಂದ ಹೊರತಾಗಿಲ್ಲ.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಯಡಿಯೂರು ಶ್ರೀ ಸಿದ್ಧಲಿಂಗೇಶ್ವರ' ಧಾರಾವಾಹಿಯಲ್ಲಿ ದುರ್ಜರ ಎನ್ನುವ ರಾಕ್ಷಸಿ ಪಾತ್ರವನ್ನು ಮಾಡಿರುವ ಈಕೆ ವೀಕ್ಷಕರ ಮೆಚ್ಚುಗೆಗೂ ಪಾತ್ರರಾಗಿದ್ದರು. 'ಆಗಂತುಕ' ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ನತ್ತ ಮುಖ ಮಾಡಿದ ವನಿತಾ ವಾಸು ಅವರ ನಟನಾ ಪಯಣಕ್ಕೆ ಮೂವತ್ತೇಳರ ಹರೆಯ.
'ಚಿರಂಜೀವಿ ಸುಧಾಕರ್', 'ಕಾಡಿನ ಬೆಂಕಿ', 'ಉತ್ಕರ್ಷ', 'ಗೋಲ್ ಮಾಲ್ ರಾಧಾಕೃಷ್ಣ', 'ಚಪಲ ಚೆನ್ನಿಗರಾಯ', 'ಮಣ್ಣಿನ ದೋಣಿ', 'ಯಾರಿಗೂ ಹೇಳ್ಬೇಡಿ', 'ಬೆಳದಿಂಗಳ ಬಾಲೆ', 'ಚಿಟ್ಟೆ', 'ತುಂಟಾಟ', 'ಅಸುರ', 'ಮೆಜೆಸ್ಟಿಕ್', 'ಜೂಟ್', 'ಏಕಾಂಗಿ', 'ಮೊನಲಿಸಾ', 'ಶುಭಂ', 'ಆಕಾಶಗಂಗೆ', 'ಬಿಂದಾಸ್' ಸೇರಿದಂತೆ ಐವತ್ತಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ವನಿತಾ ವಾಸು ಬಣ್ಣ ಹಚ್ಚಿದ್ದಾರೆ. ಪುನೀತ್ ರಾಜ್ ಕುಮಾರ್ ಅಭಿನಯದ 'ಹುಡುಗರು' ಸಿನಿಮಾದಲ್ಲಿ ವನಿತಾ ವಾಸು ನಟಿಸಿದ್ದು ಇದು ಅವರ ಕೊನೆಯ ಸಿನಿಮಾ ಹೌದು. ತದ ನಂತರ ಸಿನಿಲೋಕದಿಂದ ದೂರವಿರುವ ಈಕೆ ಸದ್ಯ ಸೀರಿಯಲ್ ನಲ್ಲಿ ಬ್ಯುಸಿಯಾಗಿದ್ದಾರೆ.


Click it and Unblock the Notifications










