ಸತ್ಯಭಾಮಾ ಆಗಿ ಕಿರುತೆರೆಗೆ ಮರಳಿದ ವಿನಯಾ ಪ್ರಸಾದ್
ಅರಸನಕೋಟೆ ಅಖಿಲಾಂಡೇಶ್ವರಿ ಆಗಿ ಕಿರುತೆರೆಯಲ್ಲಿ ಗುರುತಿಕೊಂಡಿದ್ದ ನಟಿ ವಿನಯಾಪ್ರಸಾದ್ ಇದೀಗ ಸತ್ಯಭಾಮೆಯಾಗಿ ಬದಲಾಗಿದ್ದಾರೆ. ಹೌದು, ಜೀ ಕನ್ನಡ ವಾಹಿನಿಯಲ್ಲಿ ದಿಲೀಪ್ ರಾಜ್ ಅವರ ನಿರ್ಮಾಣದಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ 'ಪಾರು'ವಿನಲ್ಲಿ ಅಖಿಲಾಂಡೇಶ್ವರಿಯಾಗಿ ನಟಿಸಿರುವ ವಿನಯಾ ಪ್ರಸಾದ್ ಇದೀಗ ಮಗದೊಂದು ಧಾರಾವಾಹಿಯಲ್ಲಿ ಬಣ್ಣ ಹಚ್ಚಿದ್ದಾರೆ. 'ಪಾರು' ಧಾರಾವಾಹಿಯ ನಂತರ ಕಿರುತೆರೆಯಿಂದ ದೂರವಿದ್ದ ವಿನಯಾ ಪ್ರಸಾದ್ ಇದೀಗ ಮತ್ತೆ ಕಿರುತೆರೆಗೆ ಮರಳಿದ್ದಾರೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ರಾಮಾಚಾರಿ'ಯಲ್ಲಿ ಸತ್ಯಭಾಮಾ ಎನ್ನುವ ಹೊಸ ಪಾತ್ರದ ಆಗಮನವಾಗಿದ್ದು, ಆ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ ವಿನಯಾಪ್ರಸಾದ್. ನಾಯಕ ರಾಮಾಚಾರಿಯ ತಂದೆ ನಾರಾಯಣಾಚಾರ್ ಅವರಿಗೆ ಇನ್ನೊಬ್ಬ ಹೆಂಡತಿಯಿದ್ದು, ಅದು ಸತ್ಯಭಾಮಾ ಎಂದು ಧಾರಾವಾಹಿ ಕತೆ ಸಾಗುತ್ತಿದೆ. ಆ ಸತ್ಯಭಾಮಾ ಪಾತ್ರಕ್ಕೆ ಜೀವ ತುಂಬುವ ಮೂಲಕ ನಟಿ ವಿನಯಾ ಪ್ರಸಾದ್ ಕಿರುತೆರೆಗೆ ಕಂ ಬ್ಯಾಕ್ ಆಗಿದ್ದಾರೆ .

ಬರೋಬ್ಬರಿ ಆರು ವರ್ಷಗಳ ಕಾಲ ಅಖಿಲಾಂಡೇಶ್ವರಿಯಾಗಿ ಅಭಿನಯಿಸಿ, ಕಿರುತೆರೆ ವೀಕ್ಷಕರ ಮನ ಸೆಳೆದಿರುವ ವಿನಯಾ ಪ್ರಸಾದ್ ಅವರು ಇದೀಗ ಸತ್ಯಭಾಮೆಯಾಗಿ ಕಿರುತೆರೆಗೆ ಮರಳಿರುವುದು ಸೀರಿಯಲ್ ಪ್ರಿಯರಿಗೆ ಖುಷಿ ತಂದಿದೆ. ಅಂದ ಹಾಗೇ ವಿನಯಾ ಪ್ರಸಾದ್ ಅವರ ಬಣ್ಣದ ಲೋಕದ ಪಯಣ ಶುರುವಾಗಿದ್ದು ಹಿರಿತೆರೆಯಿಂದ.
ಜಿ ವಿ ಅಯ್ಯರ್ ಅವರ 'ಮಧ್ವಾಚಾರ್ಯ' ಸಿನಿಮಾದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ ವಿನಯಾ ಪ್ರಸಾದ್ ತದ ನಂತರ ಸಾಲು ಸಾಲು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. 'ಕಾಲೇಜ್ ಹೀರೋ', 'ಗಣೇಶನ ಮದುವೆ', 'ಪೊಲೀಸನ ಹೆಂಡ್ತಿ', 'ನೀನು ನಕ್ಕರೆ ಹಾಲು ಸಕ್ಕರೆ', 'ಗಣೇಶನ ಮದುವೆ', 'ಗೌರಿ ಗಣೇಶ', 'ಮೈಸೂರು ಜಾಣ', 'ಸೂರ್ಯೋದಯ', 'ಯಾರಿಗೂ ಹೇಳ್ಬೇಡಿ', 'ಕಲ್ಯಾಣೋತ್ಸವ', 'ಮುತ್ತಿನಂಥ ಹೆಂಡತಿ', 'ಮಹಾ ಎಡಬಿಡಂಗಿ' ಸಿನಿಮಾಗಳಲ್ಲಿ ಈಕೆ ಬಣ್ಣ ಹಚ್ಚಿದರು.
'ಆತಂಕ' ಮತ್ತು 'ಬಣ್ಣದ ಹೆಜ್ಜೆಗಳು' ಚಿತ್ರದಲ್ಲಿನ ನಟನೆಗಾಗಿ ಉತ್ತಮ ನಟಿ ಪ್ರಶಸ್ತಿಯನ್ನು ಕೂಡಾ ಈಕೆ ಪಡೆದುಕೊಂಡಿದ್ದಾರೆ. 'ಸಾವಿತ್ರಿ' ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟ ವಿನಯಾ ಪ್ರಸಾದ್ ನಂತರ 'ಶಕ್ತಿ', 'ಸ್ತ್ರೀ', 'ನಂದಗೋಕುಲ', 'ಅನುಪಮಾ', 'ಬಂಗಾರ','ನಿತ್ಯೋತ್ಸವ','ಸುಂದರಿ' ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿ ಸೈ ಎನಿಸಿಕೊಂಡಿದ್ದಾರೆ. ಮುಂದೆ ಅರಸನಕೋಟೆ ಅಖಿಲಾಂಡೇಶ್ವರಿಯಾಗಿ ಕಿರುತೆರೆಯಲ್ಲಿ ಮೋಡಿ ಮಾಡಿದ ವಿನಯಾ ಪ್ರಸಾದ್ ಮಲಯಾಳಂ ಧಾರಾವಾಹಿಯಲ್ಲಿಯೂ ಅಭಿನಯಿಸಿದ್ದಾರೆ.
ನಟನೆಯ ಹೊರತಾಗಿ ಗಾಯಕಿಯಾಗಿಯೂ ವಿನಯಾ ಪ್ರಸಾದ್ ಗುರುತಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ನಿರೂಪಕಿಯಾಗಿಯೂ ಮೋಡಿ ಮಾಡಿರುವ ಈಕೆ ಕೆಲವೊಂದು ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿದ್ದಾರೆ.


Click it and Unblock the Notifications











