ಕನ್ನಡದ ಹಿರಿಯ ನಟಿ ಗಿರಿಜಾ ಲೋಕೇಶ್‌ಗೆ ಗೌರವ ಡಾಕ್ಟರೇಟ್
ಚಂದನವನದ ಹಿರಿಯ ನಟಿ ಗಿರಿಜಾ ಲೋಕೇಶ್ ಅವರಿಗೆ ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ಘೋಷಿಸಿದೆ. ಸರಿಸುಮಾರು ಕಳೆದ ಐದು ದಶಕಗಳಿಂದ ನಟನಾ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ಗಿರಿಜಾ ಲೋಕೇಶ್ ಅವರು ನಾಯಕ ನಟಿಯಿಂದ ಹಿಡಿದು ಪೋಷಕ ನಟಿಯವರೆಗೆ ವಿವಿಧ ರೀತಿಯ ಪಾತ್ರಗಳಿಗೆ ಜೀವ ತುಂಬಿ ಸೈ ಎನಿಸಿಕೊಂಡಿದ್ದಾರೆ.
ಹೀಗಿರುವಾಗ ಗಿರಿಜಾ ಲೋಕೇಶ್ ಅವರಿಗೆ ಗೌರವ ಡಾಕ್ಟರೇಟ್ ಸಿಕ್ಕುತ್ತಿರುವುದು ಖುಷಿಯ ವಿಚಾರ. ಅಂದ ಹಾಗೇ ಗಿರಿಜಾ ಲೋಕೇಶ್ ಅವರಿಗೆ ಪ್ರಶಸ್ತಿ ಪಡೆದಿರುವುದು ಇದು ಮೊದಲೇನಲ್ಲ. ಈಗಾಗಲೇ ಗಿರಿಜಾ ಅವರಿಗೆ ರಾಷ್ಟ್ರ ಪ್ರಶಸ್ತಿ, ರಾಜ್ಯ ಪ್ರಶಸ್ತಿ, ನಾಟಕ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಹೀಗೆ ಹತ್ತು ಹಲವು ಪ್ರಶಸ್ತಿಗಳು ದೊರಕಿದೆ.

'ಬಚೂರಿನ ಪೋಸ್ಟಾಪೀಸು' ಸಿನಿಮಾದ ಮೂಲಕ ಚಂದನವನಕ್ಕೆ ಕಾಲಿಟ್ಟ ಗಿರಿಜಾ ಲೋಕೇಶ್ ಅವರು ಮುಂದೆ 'ಕಾಕನ ಕೋಟೆ', 'ನಂಜುಂಡಿ ಕಲ್ಯಾಣ', 'ಅನುಕೂಲಕ್ಕೊಬ್ಬ ಗಂಡ', 'ರಾಮಾಚಾರಿ', 'ಹಳ್ಳಿಮೇಷ್ಟ್ರು', 'ಮನ ಮೆಚ್ಚಿದ ಸೊಸೆ', 'ಮಣ್ಣಿನ ದೋಣಿ', 'ಗಂಗಾ ಯಮುನಾ', 'ಗಟ್ಟಿಮೇಳ', 'ಸಿದ್ಲಿಂಗು', 'ಸಂಗೊಳ್ಳಿ ರಾಯಣ್ಣ', 'ಭಜರಂಗಿ', 'ಗಜಕೇಸರಿ', 'ಕೃಷ್ಣ ರುಕ್ಕು', 'ಕಿರಗೂರಿನ ಗಯ್ಯಾಳಿಗಳು', 'ಜಾನ್ ಜಾನಿ ಜನಾರ್ಧನ್', 'ಸೀತಾರಾಮ ಕಲ್ಯಾಣ', 'ಪೊಗರು' ಹೀಗೆ ಮೂವತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ ಗಿರಿಜಾ ಲೋಕೇಶ್.
ಅಂದ ಹಾಗೇ ಗಿರಿಜಾ ಲೋಕೇಶ್ ಅವರ ನಟನಾ ಪಯಣ ಕೇವಲ ಹಿರಿತೆರೆಗೆ ಮಾತ್ರ ಸೀಮಿತವಲ್ಲ. ದಶಕಗಳ ಹಿಂದೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಜೊತೆಜೊತೆಯಲಿ' ಧಾರಾವಾಹಿಯಲ್ಲಿ ನಾಯಕಿ ಶಾಲಿನಿಯ ಅಮ್ಮನಾಗಿ ನಟಿಸುವ ಮೂಲಕ ಕಿರುತೆರೆಗೆ ಕಾಲಿಟ್ಟರು. ಮುಂದೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸುಬ್ಬಲಕ್ಷ್ಮಿ ಸಂಸಾರ' ಧಾರಾವಾಹಿಯಲ್ಲಿ ನಾಯಕ ಗುರುಮೂರ್ತಿಯ ಅಮ್ಮನಾಗಿ ನಟಿಸಿದ ಈಕೆ ಮೂರು ವರ್ಷಗಳ ಕಾಲ ಆ ಪಾತ್ರದ ಮೂಲಕ ವೀಕ್ಷಕರ ಮನ ಸೆಳೆದರು.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಇವಳು ಸುಜಾತ' ಧಾರಾವಾಹಿಯಲ್ಲಿ ಬಣ್ಣ ಹಚ್ಚಿದ ಗಿರಿಜಾ ಲೋಕೇಶ್ ಅವರು ನಂತರ ಕಾಣಿಸಿಕೊಂಡಿದ್ದು 'ಸತ್ಯ' ಧಾರಾವಾಹಿಯಲ್ಲಿ. ಮೂರು ವರ್ಷಗಳ ಕಾಲ 'ಸತ್ಯ' ಧಾರಾವಾಹಿಯಲ್ಲಿ ನಾಯಕಿ ಸತ್ಯಳಾ ಅಜ್ಜಿ ಗಿರಿಜಮ್ಮ ಆಗಿ ಅಭಿನಯಿಸಿ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದ ಇವರು 'ಸುಂದರಿ', 'ಜೇನುಗೂಡು', 'ಪ್ರೀತಿಯ ಅರಸಿ' ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ್ದಾರೆ.
ಸದ್ಯ 'ನೂರು ಜನ್ಮಕೂ' ಧಾರಾವಾಹಿಯಲ್ಲಿ ನಾಯಕ ಚಿರಂಜೀವಿ ಅಜ್ಜಿಯಾಗಿ ಅಭಿನಯಿಸುವ ಮೂಲಕ ಕಿರುತೆರೆಯಲ್ಲಿ ಬ್ಯುಸಿಯಾಗಿರುವ ಗಿರಿಜಾ ಲೋಕೇಶ್ ಅವರು ರಂಗಭೂಮಿ ಕಲಾವಿದೆಯಾಗಿ ಸೈ ಎನಿಸಿಕೊಂಡವರು. ಕೇವಲ ಕನ್ನಡ ನಾಟಕಗಳಲ್ಲದೆ, ಅವರು ಉರ್ದು, ತಮಿಳು, ತೆಲುಗು ಮತ್ತು ಮಲಯಾಳಂ ನಾಟಕಗಳಲ್ಲಿಯೂ ಬಣ್ಣ ಹಚ್ಚಿದ್ದಾರೆ ಗಿರಿಜಾ ಲೋಕೇಶ್.
ರಂಗಭೂಮಿ ಕಲಾವಿದೆಯಾಗಿ ನಟನಾ ನಂಟು ಬೆಳೆಸಿಕೊಂಡು ಚಂದನವನದಲ್ಲಿ ನಾಯಕಿ, ಪೋಷಕ ನಟಿಯಾಗಿ ಮೋಡಿ ಮಾಡಿರುವ ಗಿರಿಜಾ ಲೋಕೇಶ್ ಅವರು ಇದೀಗ ಕಳೆದೊಂದು ದಶಕಗಳಿಂದ ಕಿರುತೆರೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಇಂತಿಪ್ಪ ಅದ್ಭುತ ಕಲಾವಿದೆಗೆ ಗೌರವ ಡಾಕ್ಟರೇಟ್ ಸಿಕ್ಕಿರುವುದು ಖುಷಿಯ ಸಂಗತಿ ಹೌದು.


Click it and Unblock the Notifications











