Gattimela: ಗಟ್ಟಿಮೇಳ 'ಅಮ್ಮ' ಸ್ವಾತಿ ಅವರ ಹಿನ್ನೆಲೆ ಇಲ್ಲಿದೆ!
ನಟಿ ಸ್ವಾತಿ ಯಾರಿಗೆ ಗೊತ್ತಿಲ್ಲ ಹೇಳಿ.. ಮೃದು ವ್ಯಕ್ತಿತ್ವದ ಸದಾ ನಗುತ್ತಿರುವ ಸ್ವಾತಿ ಅವರು 1995ರಿಂದ ಹಿಡಿದು ಇಂದಿನವರೆಗೂ ಸ್ಯಾಂಡಲ್‌ವುಡ್ ಹಾಗೂ ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ. ಸ್ವಾತಿ ಅವರ ರೀತಿ ನೀತಿಯೆ ಡಿಫರೆಂಟ್.
ಸ್ವಾತಿ ನೂರಾರು ಧಾರಾವಾಹಿಗಳಲ್ಲಿ ನಟಿಸಿದ್ದು, ಮೊದಲು ನಾಯಕಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಈಗ ತಾಯಿ ಪಾತ್ರದಲ್ಲಿ ನಟಿಸುತ್ತಿರುವ ಸ್ವಾತಿಯವರು ನೋಡುವುದಕ್ಕೆ ಈಗಲೂ ಅಂದಿನಂತೆಯೇ ಕಾಣುತ್ತಾರೆ. ಈಗಲೂ ಅದೇ ಸೌಂದರ್ಯವನ್ನು ಮೇಂಟೈನ್ ಮಾಡುತ್ತಿದ್ದಾರೆ.
ಸ್ವಾತಿ, ಗುರುದತ್ ಅವರನ್ನು ಮದುವೆಯಾಗಿದ್ದು, ಇವರಿಗೆ ಈಗಾಗಲೇ 18 ವರ್ಷದ ಮಗನಿದ್ದಾನೆ ಎಂದರೆ ನೀವು ನಂಬುತ್ತೀರಾ. ನಂಬದಿದ್ದರೂ ಇದು ಸತ್ಯ. ತಮ್ಮೆತ್ತರಕ್ಕೆ ಬೆಳೆದ ಮಗನಿದ್ದರೂ ಇನ್ನೂ ಯಂಗ್ ಆಗಿ ಕಾಣುತ್ತಾರೆ ಸ್ವಾತಿ. ಹಾಗಾದರೆ ಸ್ವಾತಿ ಅವರ ಕಿರುತೆರೆ ಜರ್ನಿ ಹೇಗಿತ್ತು ಅಂತ ನೋಡೋಣ ಬನ್ನಿ...

ನಟಿ ಸ್ವಾತಿ ಅವರು ಕಾಲೇಜಿನಲ್ಲಿ ಓದುತ್ತಿದ್ದಾಗ, ಅದೇ ಕಾಲೇಜಿನ ಲ್ಯಾಬ್ ಟೆಕ್ನಿಷಿಯನ್ ಆಗಿ ನಟ ಕರಿಬಸವಯ್ಯ ಅವರು ಕೆಲಸ ಮಾಡುತ್ತಿದ್ದರು. ಅವರ ಸಹಾಯದ ಮೂಲಕ ಸುನೀಲ್ ಪುರಾಣಿಕ್ ಅವರ ಪೊಲೀಸ್ ಡೈರಿ ಧಾರಾವಾಹಿಗೆ ಬಣ್ಣ ಹಚ್ಚಿದರು. ಇದು ಸ್ವಾತಿ ಅವರ ಮೊದಲ ಧಾರಾವಾಹಿ. ಆದರೆ ಮೊದಲು ಪ್ರಸಾರವಾಗಿದ್ದು ಮಾತ್ರ ನೀ ಬರೆದ ಪಾತ್ರ ನಾನಲ್ಲ ಎಂಬ ಧಾರಾವಾಹಿ. ಈ ಕಿರುತೆರೆ ಪಯಣದಲ್ಲಿ ಸ್ವಾತಿ ಅವರು ಇಂದಿನವರೆಗೂ ಸುಮಾರು 450ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಸ್ವಾತಿ ಅವರು ನಟಿಸಿದ್ದಾರೆ.
'ಮನೆತನ' ಧಾರಾವಾಹಿಯಲ್ಲಿ ಪೂಜಾ ಎಂಬ ನಾಯಕಿ ಪಾತ್ರದಲ್ಲಿ ಸ್ವಾತಿ ನಟಿಸಿದ್ದರು. ಇದೇ ಸಂದರ್ಭದಲ್ಲಿ ಜನನಿ ಧಾರಾವಾಹಿಯಲ್ಲಿಯೂ ಕಾಣಿಸಿಕೊಂಡಿದ್ದರು. ಇದಾದ ನಂತರ ಹುಲಿವಾನ್ ಚಂದ್ರಶೇಖರ ಅವರ ನಿರ್ದೇಶನದ 'ಮಲೆಗಳಲ್ಲಿ ಮದುಮಗಳು' ಧಾರಾವಾಹಿಯಲ್ಲೂ ನಟಿಸಿದರು. ಇದಾದ ನಂತರ ಸಾಲು ಸಾಲಾಗಿ ಧನಲಕ್ಷ್ಮೀ, ಸುಮಂಗಲಿ, ಮೋಹನ್ ಮಾಡಿದ ಮರ್ಡರ್, ಪಿ. ಶೇಷಾದ್ರಿ ಅವರ ಪ್ರಿಯಾ, ಟಿ ಎನ್ ಸೀತಾರಾಮ್ ಅವರ ಪತ್ತೇದಾರಿ ಪ್ರಭಾಕರ್, ಭಾರ್ಗವ ಅವರ ಉಯ್ಯಾಲೆ ಧಾರಾವಾಹಿಗಳಲ್ಲಿ ನಟಿಸಿದರು.

ಸ್ವಾತಿ ಅವರು ಮೊದಲು ನಟಿಸಿದ ಸಿನಿಮಾ ಕ್ರೌರ್ಯ. ಗಿರೀಶ್ ಕಾಸರವಳ್ಳಿ ಅವರ ಕ್ರೌರ್ಯ ಚಿತ್ರದಲ್ಲಿ ನಟಿಸಿದರು. ಪುನೀತ್ ರಾಜ್ ಕುಮಾರ್ ಅವರು ಚಕ್ರವ್ಯೂಹ ಚಿತ್ರದಲ್ಲೂ ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಷ್ಟೇ ಅಲ್ಲದೇ, ಪಡ್ಡೆಹುಲಿ, ತಾರಕ್, ಅನಂತು ವರ್ಸಸ್ ನಸ್ರುತ್, ರಾಜ್ ವಿಷ್ಣು, ಹರಿಶ್ಚಂದ್ರ, ಗೀತಾ, ರಾಮಾರ್ಜುನ, ಯುವರತ್ನ, ಐ ಲವ್ ಯೂ ರಚ್ಚು ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಸದ್ಯ ಬೆಂಕಿ, ಫಾರ್ ರಿಜಿಸ್ಪ್ರೇಷನ್ ಚಿತ್ರಗಳಲ್ಲೂ ನಟಿಸುತ್ತಿದ್ದಾರೆ.
ಸುಮಾರು ಹತ್ತು ವರ್ಷಗಳ ಕಾಲ ಮದುವೆ, ಮನೆ, ಸಂಸಾರ, ಮಕ್ಕಳು ಅಂತ ಸ್ವಾತಿ ಅವರು ನಟನೆಯಿಂದ ಬ್ರೇಕ್ ತೆಗೆದುಕೊಂಡಿದ್ದರು. 2003 ರಿಂದ 2014ರ ವರೆಗೆ ನಟನೆಯಿಂದ ದೂರ ಉಳಿದಿದ್ದರು. ಮತ್ತೆ ಕಿರುತೆರೆಗೆ ಬಂದು ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ ಸ್ವಾತಿ ಅವರು ನಿಜ ಜೀವನದಲ್ಲೂ ತಾಯಿಯಾಗಿದ್ದರು. ಅಭಿನಯದಲ್ಲೂ ತಾಯಿ ಪಾತ್ರ ಮಾಡುತ್ತಿದ್ದಾರೆ. ಶ್ರೀರಸ್ತು ಶುಭಮಸ್ತು, ಬ್ರಹ್ಮಗಂಟು, ಮನಸಾರೆ, ನಮ್ಮನೆ ಯುವರಾಣಿ, ಬೆಟ್ಟದ ಹೂ, ಗಟ್ಟಿಮೇಳ ಸೇರಿದಂತೆ ಹಲವು ಧಾರಾವಾಹಿಗಳಿಗೆ ಬಣ್ಣ ಹಚ್ಚಿದ್ದಾರೆ. ಪ್ರಸ್ತುತ ಗಟ್ಟಿಮೇಳ ಹಾಗೂ ಬೆಟ್ಟದ ಹೂ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.


Click it and Unblock the Notifications











