Archana Jois: ಬೆಳ್ಳಿತೆರೆಯಲ್ಲಿ ಬ್ಯುಸಿ ಕಿರುತೆರೆಯ ತ್ರಿಪುರ ಸುಂದರಿ
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮಹಾದೇವಿ' ಧಾರಾವಾಹಿ ಯಾರಿಗೆ ನೆನಪಿಲ್ಲ ಹೇಳಿ? ವೈಷ್ಣವಿ ಗೌಡ ಅವರು ನಾಯಕಿ ನಟಿಯಾಗಿ ನಟಿಸಿದ್ದ 'ದೇವಿ' ಧಾರಾವಾಹಿ ನಂತರ 'ಮಹಾದೇವಿ' ಎಂಬ ಧಾರಾವಾಹಿ ಮೂಲಕ ಶೃತಿ ನಾಯ್ಡು ಹಾಗೂ ಇಂದಿರ ರಮೇಶ ಅವರು ಕಿರುತೆರೆ ವೀಕ್ಷಕರನ್ನು ರಂಜಿಸಿದರು.
ತಮ್ಮ ಧಾರಾವಾಹಿ ಮೂಲಕ ಹೊಸ ಪ್ರತಿಭೆಗಳನ್ನು ಮುಂಚೂಣಿಗೆ ತರುವ ನಿರ್ದೇಶಕರು, 'ಮಹಾದೇವಿ' ಧಾರಾವಾಹಿಯಲ್ಲಿ ಅರ್ಚನಾ ಜೋಯಿಸ್ ಅವರನ್ನು ಅಭಿನಯ ರಂಗಕ್ಕೆ ಪರಿಚಯಿಸಿದರು. 'ಮಹಾದೇವಿ' ಧಾರಾವಾಹಿಯಲ್ಲಿ ಲೀಡ್ ರೋಲ್‌ನಲ್ಲಿ ನಟಿಸಿದ್ದ ಅರ್ಚನಾ ಜೋಯಿಸ್ ಕಾಣಿಸಿದ್ದು ಕೇವಲ 100 ಎಪಿಸೋಡ್ ಆದರೂ ಅದರಿಂದ ಅವರು ಸಾಕಷ್ಟು ವಿಚಾರಗಳನ್ನು ಕಲಿತುಕೊಂಡಿದ್ದರು.
KGF ಚಿತ್ರದಲ್ಲಿ ನಟಿಸಿದ ಪ್ರತಿಯೊಬ್ಬರು ಪ್ರೇಕ್ಷಕರ ಮನದಲ್ಲಿ ಜಾಗ ಮಾಡಿಕೊಂಡಿದ್ದಾರೆ. ಅದರಲ್ಲೂ ರಾಕಿ ತಾಯಿ ಶಾಂತಮ್ಮ ಪಾತ್ರವನ್ನು ಯಾರಿಂದಲೂ ಮರೆಯೋಕೆ ಸಾಧ್ಯವಿಲ್ಲ.

ಎಲ್ಲಾ ಕ್ರೆಡಿಟ್ ಅವ್ರಿಗೆ ಸಲ್ಲಬೇಕು
"ನನಗೆ ನಟನೆ ಎಂದರೇನು ತಿಳಿದಿರಲಿಲ್ಲ. ನಿರ್ದೇಶಕರಾದ ಶ್ರುತಿ ನಾಯ್ಡು ಹಾಗೂ ಇಂದಿರಾ ರಮೇಶ ಅವರು ನಟನೆ ಎಂದರೇನು ಹೇಳಿಕೊಟ್ಟವರು. ಇಂದು ನಾನು ನಟನಾ ಕ್ಷೇತ್ರದಲ್ಲಿ ಏನೇ ಹೆಸರು ಮಾಡಿದರು ಅದರ ಎಲ್ಲಾ ಕ್ರೆಡಿಟ್ ಅವರಿಬ್ಬರಿಗೆ ಸಲ್ಲಬೇಕು" ಎಂದು ಹೇಳಿಕೊಳ್ಳುವ ಅರ್ಚನಾ ಜೋಯಿಸ್ ಸದ್ಯ ಬೆಳ್ಳಿತೆರೆಯಲ್ಲಿ ಸಕತ್ ಬ್ಯುಸಿಯಾಗಿದ್ದಾರೆ.

ಅದ್ಭುತ ಡ್ಯಾನ್ಸರ್ ಅರ್ಚನಾ
ನಿಜವಾಗಿಯೂ ಅರ್ಚನಾ ಜೋಯಿಸ್‌ಗೆ ನಟನೆಗಿಂತಲೂ ನೃತ್ಯದಲ್ಲಿ ಬಹಳ ಆಸಕ್ತಿ ಇತ್ತು. ಸ್ನೇಹಿತೆಯ ಒತ್ತಾಯದ ಮೇರೆಗೆ ಆಡಿಶನ್ ಕೊಟ್ಟಾಗ ಸೆಲೆಕ್ಟ್ ಆಗಿದ್ದು ಜೀವನದ ಒಂದು ಹೊಸ ಆಯಾಮಕ್ಕೆ ಮುನ್ನಡೆ ಎಂದು ಹೇಳಬಹುದು. ಮಾಯಾ ರಾವ್ ಇನ್ಸ್ಟಿಟ್ಯೂಟ್ ಆಫ್ ಕಥಕ್ ಅಂಡ್ ಕೊರಿಯೋಗ್ರಾಫಿ ಅಲ್ಲಿ ಪದವಿ ಪಡೆದಿರುವ ಅರ್ಚನಾ ಭರತನಾಟ್ಯವಷ್ಟೇ ಅಲ್ಲದೆ ಕಥಕ್ ಹಾಗೂ ಕಂಟೆಂಪರರಿ ಡಾನ್ಸ್ ಕೂಡ ಕಲಿತಿದ್ದಾರೆ. ಹತ್ತಾರು ಕಾರ್ಯಕ್ರಮಗಳನ್ನು ನೀಡಿ ಸೈ ಎನಿಸಿಕೊಂಡಿರುವ ಅರ್ಚನಾ 'ಮಹಾದೇವಿ' ಧಾರಾವಾಹಿ ನಂತರ ಕಿರುತೆರೆ ವೀಕ್ಷಕರ ಪಾಲಿಗೆ ಪ್ರೀತಿಯ ತ್ರಿಪುರ ಸುಂದರಿ. ದೃಷ್ಟಿ ಆರ್ಟ್ ಸೆಂಟರ್ ಮತ್ತು ನಾಟ್ಯ ತಂಡದ ಮೂಲಕ ಇದುವರೆಗೂ 300ಕ್ಕೂ ಅಧಿಕ ಕಾರ್ಯಕ್ರಮಗಳನ್ನು ನೀಡಿರುವ ಹೆಗ್ಗಳಿಕೆ ಇವರಿಗಿದೆ.

KGF ಶಾಂತಮ್ಮ ಆಗಿ ಅರ್ಚನಾ
'ಮಹಾದೇವಿ' ಧಾರವಾಹಿಯಲ್ಲಿ ತ್ರಿಪುರ ಸುಂದರಿ ಎಂದು ಗುರುತಿಸಿಕೊಂಡ ನಂತರ ಅರ್ಚನಾ ಜೋಯಿಸ್ ಮುಂದೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ದುರ್ಗಾ' ಎಂಬ ಧಾರವಾಹಿಯಲ್ಲಿ ನಾಯಕಿ ದುರ್ಗಾ ಆಗಿ ನಟಿಸಿದರು. ನಂತರ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 1 ಹಾಗೂ ಕೆಜಿಎಫ್ ಚಾಪ್ಟರ್ 2 ರಲ್ಲಿ ಯಶ್ ಅವರ ತಾಯಿ ಪಾತ್ರಕ್ಕೆ ಜೀವ ತುಂಬಿದ್ದ ಅರ್ಚನಾ ಜೋಯಿಸ್ ಮುಂದೆ ಕರುನಾಡಿನಾದ್ಯಂತ ಮನೆ ಮಾತಾದರು.

'ಘೋಸ್ಟ್' ಚಿತ್ರದಲ್ಲೂ ನಟನೆ
'ಮಹಾದೇವಿ' ಧಾರವಾಹಿ ನಂತರ ಅವರಿಗೆ ಹೆಚ್ಚು ಪಾಪುಲಾರಿಟಿ ಕೊಟ್ಟಿದ್ದು ಕೆಜಿಎಫ್ ಸಿನಿಮಾ. ಅದರಲ್ಲಿ ಯಶ್ ಅವರ ತಾಯಿ ಪಾತ್ರವನ್ನು ಮಾಡಿ ತಮ್ಮ ಭಾವನಾತ್ಮಕ ಅಭಿನಯದ ಮೂಲಕ ಜನರ ಮನ ಸೆಳೆದರು. ಇದೀಗ 'ಕಲಾಂತಕ', 'ಮುಂದೆ ಒಂದು ದಿನ', 'ನಕ್ಷೆ', 'ವಿಜಯರಥ', '#ಮ್ಯೂಟ್' ಸಿನಿಮಾಗಳಲ್ಲಿ ಬಣ್ಣ ಹಚ್ಚಿರುವ ಅರ್ಚನಾ ಜೋಯಿಸ್ ಇದೇ ಫೆಬ್ರವರಿ 10 ರಂದು ಬಿಡುಗಡೆಯಾದ 'ಹೊಂದಿಸಿ ಬರೆಯಿರಿ" ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಇದರ ಜೊತೆಗೆ ಶಿವರಾಜ್ ಕುಮಾರ್ ಅವರ ಮುಂದಿನ ಸಿನಿಮಾ 'ಘೋಸ್ಟ್'ನಲ್ಲಿಯೂ ಈಕೆ ನಟಿಸಿದ್ದು ಇದರಲ್ಲಿ ಪತ್ರಕರ್ತೆಯಾಗಿ ಮೋಡಿ ಮಾಡಲಿದ್ದಾರೆ.


Click it and Unblock the Notifications











