Just In
Don't Miss!
- News
ಹಿರಿಯೂರು ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಹೊಸ ರೂಪ
- Sports
ಐಎಸ್ಎಲ್: ನಾರ್ತ್ಈಸ್ಟ್ vs ಮೋಹನ್ ಬಾಗನ್, Live ಸ್ಕೋರ್
- Finance
ಗಣರಾಜ್ಯೋತ್ಸವಕ್ಕೆ ಬಿಎಸ್ಎನ್ಎಲ್ನಿಂದ ವಿಶೇಷ ಆಫರ್
- Automobiles
ಭಾರೀ ಬದಲಾವಣೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದೆ ನ್ಯೂ ಜನರೇಷನ್ ಸ್ಕಾರ್ಪಿಯೋ
- Lifestyle
ನೀವು ಬಳಸಬಹುದಾದ ಡೈರಿ ಉತ್ಪನ್ನವಲ್ಲದ ಹಾಲುಗಳ ಬಗ್ಗೆ ಇಲ್ಲಿದೆ ಮಾಹಿತಿ
- Education
Republic Day Speech And Essay Ideas: ಗಣರಾಜ್ಯೋತ್ಸವ ಪ್ರಯುಕ್ತ ಭಾಷಣ ಮತ್ತು ಪ್ರಬಂಧ ಬರೆಯಲು ಇಲ್ಲಿದೆ ಮಾಹಿತಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ನಿಜಜೀವನದಲ್ಲೂ ಅವಮಾನ ಎದುರಿಸಿದ 'ಬ್ರಹ್ಮಗಂಟು' ಗುಂಡಮ್ಮನ ಕಣ್ಣೀರ ಕಥೆ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಬ್ರಹ್ಮಗಂಟು' ಧಾರಾವಾಹಿಯಲ್ಲಿ 'ಗುಂಡಮ್ಮ', 'ಜಂಬೂ ಸವಾರಿ' ಅಂತೆಲ್ಲ ನಾಯಕಿ ಗೀತಾಗೆ ಹೀಯಾಳಿಸುವ ಸನ್ನಿವೇಶಗಳಿವೆ. ಗುಂಡಮ್ಮನಾಗಿ ಎಲ್ಲರಿಂದ ಅವಮಾನಕ್ಕೆ ಒಳಗಾಗಿ ಆಗಾಗ ಕಣ್ಣೀರು ಸುರಿಸುವ ಗೀತಾ ನಿಜ ಜೀವನದಲ್ಲೂ ಅಂಥದ್ದೇ ಪರಿಸ್ಥಿತಿ ಎದುರಿಸಿದ್ದಾರೆ.
ದೇಹದ ಆಕಾರವನ್ನೇ ಕಾರಣವಾಗಿ ಇಟ್ಟುಕೊಂಡು ಅನೇಕರು ಗೀತಾ ಬಗ್ಗೆ ಲೇವಡಿ ಮಾಡಿದ್ದಾರಂತೆ. ಆಗ ಎಷ್ಟೋ ಬಾರಿ ಮೂಲೆ ಸೇರಿ ಆಕೆ ಕಣ್ಣೀರಿಟ್ಟಿದ್ದೂ ಇದೆ.
ಚಿಕ್ಕ ವಯಸ್ಸಿನಲ್ಲಿ ಆದ ಒಂದು ಪೆಟ್ಟಿನಿಂದ ಇಂದು ದಪ್ಪಗೆ ಆಗಿರುವ ಗೀತಾ ಭಾರತಿ ಭಟ್, ತಮ್ಮ ಜೀವನದಲ್ಲಿ ತಾವು ಎದುರಿಸಿರುವ ಅವಮಾನ, ಅದರಿಂದ ಆಕೆ ಹೊರ ಬಂದ ಬಗೆ ಬಗ್ಗೆ 'ಕುಟುಂಬದ ಕುಟುಂಬ' ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ. ಮುಂದೆ ಓದಿರಿ...

ಗೀತಾ ಭಾರತಿ ಭಟ್ ಕುರಿತು
'ಬ್ರಹ್ಮಗಂಟು' ಧಾರಾವಾಹಿಯ ನಾಯಕಿ ಗೀತಾ (ಗುಂಡಮ್ಮ) ರವರ ನಿಜನಾಮ ಗೀತಾ ಭಾರತಿ ಭಟ್. ಕಾರ್ಕಳದಲ್ಲಿ ಹುಟ್ಟಿದ ಗೀತಾ ಭಾರತಿ ಭಟ್ ಬೆಳೆದಿದ್ದೆಲ್ಲ ಬೆಂಗಳೂರಿನಲ್ಲಿ. ಸದ್ಯ ಧಾರಾವಾಹಿಯಲ್ಲಿ ನಟಿಸುತ್ತಿರುವ ಗೀತಾ ಭಾರತಿ ಭಟ್ ಗಾಯಕಿ ಕೂಡ ಹೌದು.

ಮುಂಚೆ 'ಗುಂಡಮ್ಮ' ಅಂತ ಯಾರಾದರೂ ಕರೆದರೆ..?
'ಬ್ರಹ್ಮಗಂಟು' ಧಾರಾವಾಹಿಯಿಂದ ಕರ್ನಾಟಕದ ಮೂಲೆಮೂಲೆಯಲ್ಲಿಯೂ ಗುಂಡಮ್ಮ ಅಂತಲೇ ನಟಿ ಗೀತಾ ಜನಪ್ರಿಯತೆ ಗಳಿಸಿದ್ದಾರೆ. ಆದ್ರೆ, ಈ ಧಾರಾವಾಹಿ ಬರುವ ಮುನ್ನ ಯಾರಾದರೂ ಅವರನ್ನ ಗುಂಡಮ್ಮ ಅಂತ ಕರೆದರೆ 'ಯಾಕೆ ಹೀಗೆ ಕರೆಯುತ್ತಾರೋ?' ಅಂತ ಬೇಸರ ಮಾಡಿಕೊಳ್ತಿದ್ರಂತೆ. ಆದ್ರೀಗ, ಧಾರಾವಾಹಿಯಿಂದ 'ಗುಂಡಮ್ಮ' ಅಂತ ಕರೆದರೆ ಖುಷಿ ಪಡ್ತಾರಂತೆ ನಟಿ ಗೀತಾ ಭಾರತಿ ಭಟ್.

'ಗುಂಡುಮಣಿ' ಅಂದ್ರೆ ಕಿರಿಕಿರಿ ಆಗೋದು!
''ಚಿಕ್ಕವಯಸ್ಸಿನಲ್ಲಿ ನನ್ನನ್ನ ಗುಂಡುಮಣಿ ಅಂತ ಕರೆಯುತ್ತಿದ್ದರು. ಆಗ ನನಗೆ ಅದು ತುಂಬಾ ಕಿರಿಕಿರಿ ಆಗುತ್ತಿತ್ತು. ಈಗ 'ಬ್ರಹ್ಮಗಂಟು' ಧಾರಾವಾಹಿಯಿಂದ ಜನ ನನ್ನ ಗುಂಡಮ್ಮ ಅಂತ ಕರೆದಾಗ ಖುಷಿ ಆಗುತ್ತೆ'' ಅಂತ 'ಕುಟುಂಬದ ಕುಟುಂಬ' ಸಂಚಿಕೆಯಲ್ಲಿ ಗೀತಾ ಭಾರತಿ ಭಟ್ ಹೇಳಿದ್ದಾರೆ.

ಯಾರೂ ಹತ್ತಿರ ಸೇರಿಸುತ್ತಿರಲಿಲ್ಲ.!
ಇಂದು 'ಬ್ರಹ್ಮಗಂಟು' ಧಾರಾವಾಹಿಯಿಂದ ಗೀತಾರನ್ನ ಕರ್ನಾಟಕದ ಜನತೆ ಇಷ್ಟ ಪಡುತ್ತಿದ್ದಾರೆ. ಆದ್ರೆ, ಕೆಲವೇ ಕೆಲವು ವರ್ಷಗಳ ಹಿಂದೆ ಇದೇ ಗೀತಾ ರನ್ನ ಯಾರೂ ಹತ್ತಿರ ಸೇರಿಸುತ್ತಿರಲಿಲ್ಲವಂತೆ. ಫ್ರೆಂಡ್ಸ್ ಆಗಲು ಇಷ್ಟ ಪಡುತ್ತಿರಲಿಲ್ಲವಂತೆ.

ದಪ್ಪಗಿರುವ ಒಂದೇ ಕಾರಣಕ್ಕೆ.!
''ನಾನು ದಪ್ಪ ಇದ್ದೀನಿ ಅನ್ನೋ ಒಂದು ಕಾರಣಕ್ಕೆ ನನ್ನನ್ನ ದೂರ ಇಡುತ್ತಿದ್ದರು. ಆಗ ನಾನು ಇಷ್ಟೊಂದು ಸೋಷಿಯಲ್ ಆಗಿ ಇರುತ್ತಿರಲಿಲ್ಲ. ಸೋಷಿಯಲ್ ಆಗಿ ಇರಲು ಶುರು ಮಾಡಿದ್ದು ನನ್ನ ಮೇಲೆ ನಾನು ಜೋಕ್ ಮಾಡಿಕೊಳ್ಳಲು ಕಲಿತಾಗ...'' ಅಂತಾರೆ ಗೀತಾ ಭಾರತಿ ಭಟ್.

ಮುಂಚೆ ಮೂಲೆಯಲ್ಲಿ ಕೂತು ಅಳುತ್ತಿದ್ದೆ
''ಮುಂಚೆ ಬೇರೆಯವರು ನನ್ನನ್ನ ಆಡಿಕೊಂಡು ನಕ್ಕಾಗ, ಬೇಜಾರು ಮಾಡಿಕೊಂಡು ಮೂಲೆಯಲ್ಲಿ ಕೂತು ಅಳುತ್ತಿದ್ದೆ. ನೀನು ಸಣ್ಣ ಆಗಬೇಕು ಅಂತ ಮನೆಯಲ್ಲೂ ಹೇಳುತ್ತಿದ್ದರು. ಎಲ್ಲ ಕಡೆಯಿಂದಲೂ ಪ್ರೆಶರ್ ಬೀಳುತ್ತಿದ್ದಾಗ ಬೇಸರ ಆಗುತ್ತಿತ್ತು. ಕಾಲೇಜಿಗೆ ಬಂದಾಗ ನನಗೆ ಅನಿಸಿದ್ದು ಏನು ಅಂದ್ರೆ ನಮ್ಮ ಮೇಲೆ ನಾವೇ ಜೋಕ್ ಮಾಡಿಕೊಂಡು ನಕ್ಕರೆ, ಬೇರೆಯವರು ಆಡಿಕೊಳ್ಳುವ ಧೈರ್ಯ ಮಾಡಲ್ಲ ಅಂತ. ಬೇರೆಯವರು ನನ್ನ ಮೇಲೆ ಜೋಕ್ ಮಾಡಿ ನಗುವುದಕ್ಕಿಂತ ಮುಂಚೆ ನನ್ನ ಮೇಲೆ ನಾನೇ ನಕ್ಕು ಬಿಡ್ತಿದ್ದೆ'' - ಗೀತಾ ಭಾರತಿ ಭಟ್, ನಟಿ

ಒಂದು ಪೆಟ್ಟಿನಿಂದ ಇಷ್ಟೆಲ್ಲ ಆಗಿದ್ದು.!
''ಚಿಕ್ಕವಯಸ್ಸಿನಲ್ಲಿ ನಾನು ಬಾಸ್ಕೆಟ್ ಬಾಲ್ ಆಡುತ್ತಿದ್ದೆ. ಬಾಸ್ಕೆಟ್ ಬಾಲ್ ಆಡುವಾಗ ಕಾಲು ಜಾರಿ ಬಿದ್ದೆ. ನಂತರ ಡಾಕ್ಟರ್ ಹತ್ತಿರ ಹೋದಾಗ ಆಪರೇಷನ್ ಮಾಡಬೇಕು ಎಂದರು. ನಾಲ್ಕು ತಿಂಗಳು ಬೆಡ್ ರೆಸ್ಟ್ ನಲ್ಲಿದ್ದೆ. ಅಲ್ಲಿಂದ ನಾನು ದಪ್ಪ ಆಗಲು ಶುರು ಆಗಿದ್ದು. ಮುಂಚೆಯಿಂದಲೂ ನಾನು ಗುಂಡುಗುಂಡಾಗಿ ಇದ್ದೆ. ಆದ್ರೆ, ಈ ಘಟನೆಯ ನಂತರ ನನ್ನ ತೂಕ ಹೆಚ್ಚಾಗಲು ಶುರು ಆಯ್ತು'' - ಗೀತಾ ಭಾರತಿ ಭಟ್, ನಟಿ

ಭಯ ಇತ್ತು
''ನಾನು ನಟಿಯಾಗುತ್ತೇನೆ ಅಂತ ಯಾವತ್ತೂ ಅಂದುಕೊಂಡಿರಲಿಲ್ಲ. ಟಿವಿಯಲ್ಲಿ ನನ್ನನ್ನ ನೋಡಿದಾಗ ಎಷ್ಟು ಜನ ನನ್ನನ್ನ ಆಡಿಕೊಂಡು ನಗ್ತಾರೋ ಅಂತ ಭಯ ಇತ್ತು. ಆದ್ರೆ, ಧಾರಾವಾಹಿ ನೋಡಿದ್ಮೇಲೆ ಜನರಿಂದ ಬಂದ ಪ್ರತಿಕ್ರಿಯೆ ಕೇಳಿ ತುಂಬಾ ಖುಷಿ ಆಯ್ತು'' - ಗೀತಾ ಭಾರತಿ ಭಟ್, ನಟಿ

ಗೀತಾ ಹೇಳಿದ ಜೀವನದ ಪಾಠ
''ನಮ್ಮನ್ನ ನಾವು ಪ್ರೀತಿಸಿದರೆ, ಬೇರೆಯವರು ನಮ್ಮನ್ನ ಪ್ರೀತಿಸುತ್ತಾರೆ. ನಮ್ಮ ಜೀವನವನ್ನ ನಾವು ಪ್ರೀತಿಸಬೇಕು. ಆಗ ಎಲ್ಲವೂ ಪಾಸಿಟಿವ್ ಆಗಿ ಕಾಣಲು ಶುರು ಆಗುತ್ತೆ. ರೇಗಿಸುವವರನ್ನ ಕೇರ್ ಮಾಡಬಾರದು'' - ಗೀತಾ ಭಾರತಿ ಭಟ್, ನಟಿ

ಜೀ ಕುಟುಂಬ ಅವಾರ್ಡ್ಸ್
ಅಂದ್ಹಾಗೆ, 'ಜೀ ಕುಟುಂಬ ಅವಾರ್ಡ್ಸ್'ನಲ್ಲಿ ಗೀತಾ ನಾಮ ನಿರ್ದೇಶನಗೊಂಡಿದ್ದಾರೆ. ನಿಮಗೆ ಗೀತಾ ನಟನೆ ಇಷ್ಟವಾಗಿದ್ದರೆ, ಎಸ್.ಎಂ.ಎಸ್ ಕುಳುಹಿಸಿ, ವೋಟ್ ಮಾಡಿ, ಗೆಲ್ಲಿಸಿ...