'ಅಗ್ನಿಸಾಕ್ಷಿ'ಯ ಇಶಿತಾ ವರ್ಷಗೆ ಫೋಟೊಗ್ರಫಿ ಕಡೆ ಒಲವು; ತಾಂಜಾನಿಯಾ ಅನುಭವ ಹೇಗಿತ್ತು?
ನಟಿ ಇಶಿತಾ ವರ್ಷ ಅವರು ಈಗಂತೂ ಸಫಾರಿಯಲ್ಲಿ ಹಾಗೂ ವೈಲ್ಡ್ ಲೈಫ್ ಫೋಟೋಶೂಟ್‌ಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. 'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ಮಾಯಾ ಪಾತ್ರದಲ್ಲಿ ಕಾಣಿಸಿಕೊಂಡ ನಟಿ ಇಶಿತಾ ವರ್ಷ ನಂತರ ಮುರುಗನ್ ಎಂಬುವವರನ್ನು ಮದುವೆಯಾದರು.
ವಿವಾಹದ ಬಳಿಕ ಧಾರಾವಾಹಿಗಳ ಜೊತೆಗೆ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದರು. ನಂತರ ಈ ನಟಿ 'ಸರಸು' ಧಾರಾವಾಹಿಯಲ್ಲಿ ಅತಿಥಿ ಪಾತ್ರಕ್ಕೆ ಜೀವ ತುಂಬಿದರು. ಸದ್ಯಕ್ಕೆ ಕಿರುತೆರೆಯಿಂದ ಇಶಿತಾ ವರ್ಷ ದೂರವೇ ಉಳಿದಿದ್ದಾರೆ.

ಈಗಂತೂ ಆಫ್ರಿಕಾದ ಕಾಡು ಮೇಡುಗಳಲ್ಲಿ ಅಡ್ಡಾಡುತ್ತಿರುವ ಇವರು ಕತ್ತಿಗೊಂದು ಕ್ಯಾಮೆರಾ ಸಿಕ್ಕಿಸಿಕೊಂಡು ವೈಲ್ಡ್ ಲೈಫ್ ಫೋಟೋಗ್ರಫಿ ಮಾಡುತ್ತಿದ್ದಾರೆ. ಹಲವು ಅದ್ಭುತ ಕ್ಷಣಗಳನ್ನು ಸೆರೆ ಹಿಡಿವ ಛಾಯಾಗ್ರಾಹಕಿ ಆಗಿದ್ದಾರೆ. ಅದರಲ್ಲೂ ಮೃಗಗಳ ಫೋಟೋಗಳೊಂದಿಗೆ ಇದೀಗ ತಮ್ಮ ಫೋಟೋಗಳನ್ನು ಕ್ಲಿಕ್ಕಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿದ್ದಾರೆ. ಇತ್ತೀಚೆಗೆ ಇಶಿತಾ ವರ್ಷ ತಾವು ಭೇಟಿ ಕೊಟ್ಟ ಸೆರಂಗಟಿ ಎಂಬ ಜಾಗದ ಬಗ್ಗೆ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ತಾಂಜಾನಿಯಾದ ಸೆರಂಗೆಟಿ ಎಂಬ ಜಾಗದಲ್ಲಿ ಪ್ರಾಣಿಗಳ ದೊಡ್ಡ ಹಿಂಡು ವಲಸೆ ಬಂದಿರುವುದಕ್ಕೆ ನಟಿ ಇಶಿತಾ ವರ್ಷ ಸಾಕ್ಷಿಯಾಗಿದ್ದರು. "ಈ ಕ್ಷಣವನ್ನು ನಾನೆಂದಿಗೂ ಮರೆಯುವುದಿಲ್ಲ. ಈ ಜಾಗಕ್ಕೆ ವಲಸೆ ಬಂದ ಪ್ರಾಣಿಗಳ ಹಿಂಡು ನೋಡಿ ನನಗಂತೂ ಆಶ್ಚರ್ಯವಾಯಿತು. ಆಹಾರ ಮತ್ತು ನೀರನ್ನು ಹುಡುಕಿಕೊಂಡು ಚಿರತೆಗಳು, ಹುಲಿ ಹಾಗೂ ಹೆಸರಗತ್ತೆಗಳು ಹಿಂಡು ಹಿಂಡಾಗಿ ಈ ಜಾಗಕ್ಕೆ ಬಂದ ಕ್ಷಣ ಅವಿಸ್ಮರಣೀಯ" ಎಂದು ಖಾಸಗಿ ವಾಹಿನಿಯ ಜೊತೆಗಿನ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಜೊತೆಗೆ "ಈ ಜಾಗದಲ್ಲಿ ಚಿಕ್ಕ ಚಿಕ್ಕ ಹುಲ್ಲುಗಳು ಚೆನ್ನಾಗಿ ಬೆಳೆದಿವೆ. ಹಾಗಾಗಿ ಸಸ್ಯಾಹಾರಿ ಪ್ರಾಣಿಗಳಿಗೆ ಇದೊಂದು ಒಳ್ಳೆಯ ತಾಣ. ಸಸ್ಯಹಾರಿ ಪ್ರಾಣಿಗಳು ತಮ್ಮ ವಂಶವಾಹಿನಿಯನ್ನು ಬೆಳೆಸುತ್ತಿದ್ದಂತೆಯೇ ಅರ್ಧ ಮಾಂಸಾಹಾರಿ ಪ್ರಾಣಿಗಳು ಇಲ್ಲಿಗೆ ಬಂದು ನೆಲೆಸುತ್ತವೆ. ಇದು ನಮಗೆ ಸಸ್ಯರಾಶಿ ಹಾಗೂ ಜೀವಿಗಳ ಜೀವನ ಚಕ್ರಕ್ಕೆ ಸರಿಯಾದ ನಿದರ್ಶನ" ಎಂದು ಕಿರುತೆರೆ ನಟಿ ಇಶಿತಾ ವರ್ಷ ಹೇಳಿದ್ದಾರೆ.

"ಅಷ್ಟೇ ಅಲ್ಲ ಈ ಜಾಗ ಹೆಚ್ಚು ಕಮ್ಮಿ 30,000 ಸ್ಕ್ವೇರ್ ಕಿಲೋಮೀಟರ್‌ಗಳ ತಾಣವಾಗಿದ್ದು, ಇಲ್ಲಿ ಮಾಸಾಯಿ ಎಂಬ ಕಮ್ಯೂನಿಟಿಯ ಜನರನ್ನು ಮಾತನಾಡುವ ಅವಕಾಶ ಸಿಕ್ಕಿತು. ಅವರು ಈ ಸಸ್ಯರಾಶಿ ಹಾಗೂ ಜೀವ ಜಂತುಗಳನ್ನು ಯಾವ ರೀತಿ ರಕ್ಷಿಸುವಲ್ಲಿ ತಮ್ಮ ಶ್ರಮ ಹಾಕುತ್ತಾರೆ. ಎಲ್ಲ ವಿಚಾರಗಳನ್ನು ತಿಳಿದು ಸಮಾಧಾನವಾಯಿತು. ಅವರೊಂದಿಗಿನ ಮಾತುಕತೆ ಹಾಗೂ ಒಂದಷ್ಟು ಫೋಟೋಶೂಟ್ ಜೀವನದುದ್ದಕ್ಕೂ ನೆನಪಿಟ್ಟುಕೊಳ್ಳುವ ನಿಧಿ" ಎಂದು ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಮಾತನಾಡುವಾಗ ಇಶಿತಾ ವರ್ಷ ಹೇಳಿಕೊಂಡಿದ್ದಾರೆ.
"ಈ ರೀತಿಯ ಸಾಂಸ್ಕೃತಿಕ ಕೊಡು - ಕೊಳ್ಳುವಿಕೆ ಹಾಗೂ ಪ್ರಕೃತಿಯಲ್ಲಿ ವನ್ಯ ಜೀವ ರಾಶಿಗಳ ಸಹಜ ಜೀವನವನ್ನು ಬಹಳ ಹತ್ತಿರದಿಂದ ಅಷ್ಟೇ ಸಹಜವಾಗಿ ನೋಡಲು ಸಿಕ್ಕ ಅವಕಾಶ ನನಗೆ ನನ್ನ ಜೀವನವನ್ನು ವಿಭಿನ್ನ ರೀತಿಯಲ್ಲಿ ಹೊಸ ಚಿಂತನೆಯಲ್ಲಿ ನೋಡುವ ದೃಷ್ಟಿಕೋನ ಕೊಟ್ಟಿದೆ. ಈ ನೆನಪುಗಳು ಜೀವನದಿದ್ದಕ್ಕೂ ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುವುದಂತು ನಿಜ. ಇಂತಹ ಅನುಭವಗಳಿಗೆ ಸದಾ ಋಣಿ" ಎಂದಿದ್ದಾರೆ ನಟಿ ಇಶಿತಾ ವರ್ಷ.
ಕಿರುತೆರೆಯಲ್ಲಿ ಅಷ್ಟೇನೂ ಕಾಣಿಸಿಕೊಳ್ಳದಿದ್ದರೂ ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ಆ್ಯಕ್ಟಿವ್ ಆಗಿದ್ದಾರೆ. ತಮ್ಮ ಇನ್‌ಸ್ಟಾಗ್ರಾಂ ಅಕೌಂಟಿನಲ್ಲಿ ಈ ರೀತಿ ತಾವು ತೆಗೆಯುವ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ. ಇತ್ತೀಚೆಗೆ ಈ ವನ್ಯಜೀವಿಗಳೊಂದಿಗೆ ಸೀರೆಯಲ್ಲಿಯೂ ಫೋಟೋಶೂಟ್ ಮಾಡಿಸಿಕೊಂಡ ನಟಿ ಇಶಿತಾ ವರ್ಷ ಬಹಳ ವೈರಲ್ ಆಗಿದ್ದರು. ನಟನೆಯಲ್ಲಷ್ಟೇ ಅಲ್ಲದೆ ಛಾಯಾಗ್ರಾಹಣದಲ್ಲೂ ಬಹಳಷ್ಟು ಆಸಕ್ತಿ ಹೊಂದಿರುವ ಇವರು ಬಹಳಷ್ಟು ಯುವ ವೈಲ್ಡ್ ಲೈಫ್ ಛಾಯಾಗ್ರಾಹಕರಿಗೆ ಸ್ಪೂರ್ತಿ ಎಂದರೆ ತಪ್ಪಾಗಲ್ಲ.


Click it and Unblock the Notifications