ಪುಟ್ಟಕ್ಕನ ಮಗಳಾಗಿ ಬಂದ 'ಪಾರು' !
'ಪಾರು' ಧಾರಾವಾಹಿಯ ನಾಯಕಿ ಮೋಕ್ಷಿತಾ ಪೈ ಈಗ ಸೀರಿಯಲ್ ಜೊತೆಗೆ ಸಿನಿಮಾಗಳಲ್ಲೂ ಬ್ಯುಸಿಯಾಗಿದ್ದಾರೆ. ಮೋಕ್ಷಿತಾ ಪೈ ಕಿರುತೆರೆ ಜೊತೆಗೆ ಬೆಳ್ಳಿತೆರೆಯಲ್ಲೂ ಮಿಂಚಲು ಮುಂದಾಗಿದ್ದಾರೆ. ಪ್ರೇಕ್ಷಕರ ಮೆಚ್ಚಿನ 'ಪಾರು' ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ಸುದ್ದಿ ಹೊಸತೇನೂ ಅಲ್ಲ.
'ಪಾರು' ಧಾರಾವಾಹಿ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದ ಮೋಕ್ಷಿತಾ ಪೈಗೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುವ ಆಫರ್‌ಗಳು ಬಂದವು. ಆದರೆ, ಕಥೆ, ಪಾತ್ರಗಳ ಬಗ್ಗೆ ಬಹಳ ಕಾಳಜಿ ವಹಿಸುವ ಮೋಕ್ಷಿತಾ ಹಲವು ಚಿತ್ರಗಳಲ್ಲಿ ನಟಿಸುವ ಅವಕಾಶಗಳನ್ನು ಬಿಟ್ಟುಕೊಟ್ಟಿದ್ದಾರೆ. ಈಗಾಗಲೇ ಮೋಕ್ಷಿತಾ ನಟಿಸಿದ ಚಿತ್ರವೊಂದು ರಿಲೀಸ್‌ಗೆ ಸಜ್ಜಾಗಿದೆ.
ವಿಜಯ್ ದುನಿಯಾ ನಿರ್ದೇಶನದ ಚಿತ್ರವೊಂದರಲ್ಲಿ ಮೋಕ್ಷಿತಾ ಪೈ ನಟಿಸಲಿದ್ದು, ಆ ಸಿನಿಮಾ ಯಾವುದು.? ಯಾವಾಗ ಶೂಟಿಂಗ್ ಆರಂಭವಾಗುತ್ತದೆ ಎಂಬುದು ಇನ್ನೂ ಯಾರಿಗೂ ಮಾಹಿತಿ ಇಲ್ಲ. ಆದರೆ ಈಗಾಗಲೇ ಮೋಕ್ಷಿತಾ ಪೈ 'ನಿರ್ಭಯಾ 2' ಎಂಬ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರ ಸದ್ಯಕ್ಕೆ ರಿಲೀಸ್ ಆಗಲು ರೆಡಿಯಾಗಿದ್ದು, ಯಾವಾಗ ಎಂದು ತಿಳಿದು ಬಂದಿಲ್ಲ.

'ಪಾರು' ಆಗಿ ಫೇಮಸ್ ಆದ ನಟಿ!
ಮೋಕ್ಷಿತಾ ಪೈ ನಟಿಸಿದ ಮೊದಲ ಧಾರಾವಾಹಿಯೇ ಹಿಟ್ ಆಗಿದ್ದು, 'ಪಾರು' ಎಂದೇ ಜನ ಗುರುತಿಸುತ್ತಾರೆ. ವಿನಯಾ ಪ್ರಸಾದ್, ಎಸ್ ನಾರಾಯಣ್ ಸೇರಿದಂತೆ ತಾರಾ ಬಳಗವಿರುವ ಧಾರಾವಾಹಿಯಲ್ಲಿ ಪಾರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದು, ಮುಂದೆ ದೊಡ್ಡ ಸ್ಟಾರ್ ಆಗುವ ಕನಸು ಕಾಣುತ್ತಿದ್ದಾರೆ. 'ಪಾರು' ಧಾರಾವಾಹಿಯಲ್ಲಿ ಅಭಿನಯಿಸುವ ಮೂಲಕ ಮೋಕ್ಷಿತಾ ಪೈ ಮನೆ ಮಗಳಾಗಿ ಬಿಟ್ಟಿದ್ದಾರೆ. ಕಿರುತೆರೆಯಲ್ಲಿ ಸಿಕ್ಕ ಬಲದಿಂದಲೇ ಸ್ಯಾಂಡಲ್‌ವುಡ್‌ಗೂ ಪಾದಾರ್ಪಣೆ ಮಾಡಿದ್ದಾರೆ.

'ಪಾರು'ಗೆ ಪುಟ್ಟಕ್ಕನ ಮಗಳ ಸ್ಥಾನ!
ಸದ್ಯ 'ಪಾರು' ಧಾರಾವಾಹಿಯಲ್ಲಿ ಎಲ್ಲರ ನೆಚ್ಚಿನ ನಟಿಯಾಗಿರುವ ಮೋಕ್ಷಿತಾ ಪೈ, ಇದೀಗ ಮತ್ತೊಂದು ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲು ಮುಂದಾಗಿದ್ದಾರೆ. 'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಕೂಡ ಅದ್ಭುತವಾಗಿ ಮೂಡಿ ಬರುತ್ತಿದೆ. ಈಗಾಗಲೇ ಧಾರಾವಾಹಿಯ ಪಾತ್ರಧಾರಿಗಳನ್ನು ಸಹ ಪರಿಚಯಿಸಲಾಗಿದೆ. ಆದರೆ ಇದೀಗ ಹೊಸ ಸುದ್ದಿ ಏನೆಂದರೆ, 'ಪಾರು' ಕೂಡ ಪುಟ್ಟಕ್ಕನ ಮಗಳು ಎಂಬುದು. ಅದು ಹೇಗೆ ಸಾಧ್ಯ..? ಹಾಗಾದರೆ ಪುಟ್ಟಕ್ಕನಿಗೆ ನಾಲ್ಕು ಜನ ಹೆಣ್ಣು ಮಕ್ಕಳಾ ಅಂತ ಯೋಚಿಸುತ್ತಿದ್ದೀರಾ.. ಅಷ್ಟೆಲ್ಲಾ ಯೋಚಿಸುವ ಬದಲು ಮುಂದೆ ಓದಿ ನಿಮಗೆ ಗೊತ್ತಾಗುತ್ತೆ.

ಹಿಟ್ ಧಾರಾವಾಹಿ 'ಪುಟ್ಟಕ್ಕನ ಮಕ್ಕಳು'!
'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಈಗಾಗಲೇ ಸೂಪರ್ ಡೂಪರ್ ಆಗಿ ಹಿಟ್ ಆಗಿದೆ. ಕೇವಲ ಕನ್ನಡ ಮಾತ್ರವಲ್ಲದೇ ತೆಲುಗು, ಮಲಯಾಳಂ ಭಾಷೆಗಳಲ್ಲೂ ಹೆಸರು ಮಾಡಿದೆ. ಹೌದು.. 'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಕೇವಲ ಕನ್ನಡದಲ್ಲಿ ಮೂಡಿಬರುತ್ತಿಲ್ಲ. ಈ ಧಾರಾವಾಹಿ ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲೂ ಮೂಡಿ ಬರುತ್ತಿದೆ. ಆದರೆ ಪಾತ್ರಧಾರಿಗಳು ಆಯಾ ಭಾಷೆಯ ನಟ-ನಟಿಯರಿದ್ದಾರೆ ಅಷ್ಟೇ. ಇದೀಗ ಈ ಧಾರಾವಾಹಿಯನ್ನು ಮತ್ತೊಂದು ಭಾಷೆಯಲ್ಲೂ ಪ್ರಸಾರ ಮಾಡಲು ಸಿದ್ಧತೆ ನಡೆಯುತ್ತಿದೆ. ತಮಿಳು ಭಾಷೆಯಲ್ಲೂ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯನ್ನು ಚಿತ್ರೀಕರಿಸಿ, ಪ್ರಸಾರ ಮಾಡಲು ಸಜ್ಜಾಗಿದೆ.

ತಮಿಳಿನಲ್ಲಿ ಪುಟ್ಟಕ್ಕನ ಮಗಳಾದ 'ಪಾರು'!
'ಪಾರು' ಚಿತ್ರದ ಮೋಕ್ಷಿತಾ ಪೈ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದಲ್ಲದೇ, ಈಗ ತಮಿಳು ಕಿರುತೆರೆಗೂ ಪಾದಾರ್ಪಣೆ ಮಾಡಲಿದ್ದಾರಂತೆ. ತಮಿಳಿನಲ್ಲಿ 'ಪುಟ್ಟಕ್ಕನ ಮಕ್ಕಳು' ಅವತರಣಿಕೆಯನ್ನು ಪ್ರಸಾರ ಮಾಡಲು ನಿರ್ಧರಿಸಿದ್ದು, ಇದರಲ್ಲಿ ಮೋಕ್ಷಿತಾ ಪೈ ಕೂಡ ನಟಿಸಲಿದ್ದಾರೆ ಎಂದು ಸುದ್ದಿಯಾಗಿದೆ. ಆದರೆ, ತಮಿಳಿನ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯ ಹೆಸರಾಗಲಿ, ಪಾತ್ರಧಾರಿಗಳ ಬಗ್ಗೆ ಆಗಲಿ, ಇನ್ನೂ ಯಾವುದೇ ಮಾಹಿತಿಯನ್ನು ಧಾರಾವಾಹಿಯ ತಂಡ ಬಿಟ್ಟುಕೊಟ್ಟಿಲ್ಲ. ಕನ್ನಡದ ಮನೆ ಮಗಳಾಗಿದ್ದ 'ಪಾರು' ಇನ್ಮುಂದೆ ತಮಿಳಿಗರ ಪ್ರೀತಿಯ ಮಗಳಾಗುತ್ತಾಳಾ ಎಂದು ಕಾದು ನೋಡಬೇಕಿದೆ.


Click it and Unblock the Notifications











