ಮೊದಲ ಮಗುವಿನ ನಿರೀಕ್ಷೆಯಲ್ಲಿ 'ಮಂಗಳ ಗೌರಿ ಮದುವೆ' ಖ್ಯಾತಿಯ ನಟಿ ರಾಧಿಕಾ ಶ್ರವಂತ್
ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾಗಿರುವ 'ಮಂಗಳ ಗೌರಿ ಮದುವೆ' ಸೀರಿಯಲ್ ನಲ್ಲಿ ಸೌಂದರ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ನಟಿ ರಾಧಿಕಾ ಶ್ರವಂತ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಸಂತಸದ ಸುದ್ದಿಯನ್ನು ರಾಧಿಕಾ ಮತ್ತು ಶ್ರವಂತ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ನಟಿ ರಾಧಿಕಾ 2020 ಫೆಬ್ರವರಿಯಲ್ಲಿ ನಟ ಮತ್ತು ನಿರ್ದೇಶಕ ಶ್ರವಂತ್ ಜೊತೆ ಹಸೆಮಣೆ ಏರಿದ್ದರು. ಹಲವು ದಿನಗಳಿಂದ ಪ್ರೀತಿಯಲ್ಲಿದ್ದ ಈ ಜೋಡಿ, ಮನೆಯವರ ಒಪ್ಪಿಗೆ ಮೇರೆಗೆ ಅದ್ದೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದುರು. ಇದೀಗ ಈ ಸುಂದರ ಜೋಡಿ ಸಿಹಿ ಸುದ್ದಿಯೊಂದಿಗೆ ಅಭಿಮಾನಿಗಳ ಮುಂದೆ ಬಂದಿದ್ದಾರೆ.
ಸುಂದರವಾದ ಫೋಟೋಶೂಟ್ ಮೂಲಕ ರಾಧಿಕಾ-ಶ್ರವಂತ್ ಜೋಡಿ ಸಂತಸ ಹಂಚಿಕೊಂಡಿದ್ದಾರೆ. ಅಂದಹಾಗೆ ರಾಧಿಕಾ ಧಾರಾವಾಹಿಗಳಲ್ಲಿ ನೆಗೆಟಿವ್ ಪಾತ್ರಗಳಲ್ಲಿ ಫೇಮಸ್ ಆಗಿದ್ದರು. ಮದುವೆಯಾದ ಬಳಿಕ ರಾಧಿಕಾ ಧಾರಾವಾಹಿಯಿಂದ ಹೊರಬಂದಿದ್ದಾರೆ.

ಮಂಗಳ ಗೌರಿ ಧಾರಾವಾಹಿ ಜೊತೆಗೆ 'ಶ್ರೀವಿಷ್ಣು ದಶಾವತಾರ' ಸೀರಿಯಲ್ ನಲ್ಲೂ ನಟಿಸುತ್ತಿದ್ದರು. ಸೀರಿಯಲ್ ಮಾತ್ರವಲ್ಲದೆ ಸಿನಿಮಾದಲ್ಲೂ ನಟಿಸಿದ್ದಾರೆ. ವಿನಯ್ ರಾಜ್ ಕುಮಾರ್ ಅಭಿನಯದ 'ಗ್ರಾಮಾಯಣ' ಚಿತ್ರದಲ್ಲಿ ರಾಧಿಕಾ ನಟಿಸಿದ್ದಾರೆ.

ಕಿರುತೆರೆ ಲೋಕದಲ್ಲೂ ಫೇಮಸ್ ಆಗಿದ್ದ ಶ್ರವಂತ್ ಪತಿ, ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. 2008 ರಲ್ಲಿ ಬಿಡುಗಡೆ ಆದ 'ಚಿಕ್ಕಮಗಳೂರ ಚಿಕ್ಕಮಲ್ಲಿಗೆ' ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೀರೋ ಆಗಿ ಗುರುತಿಸಿಕೊಂಡ ಶ್ರವಂತ್, 'ನಾವಿಕ', 'ನೆನಪಿದೆಯ', 'ಪರಾರಿ' ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. 'ರಂಗನಾಯಕಿ' ಧಾರಾವಾಹಿಯನ್ನು ನಿರ್ದೇಶನ ಮಾಡುವ ಮೂಲಕ ನಿರ್ದೇಶನದಲ್ಲೂ ತೊಡಗಿಕೊಂಡಿದ್ದರು.


Click it and Unblock the Notifications











