'ಅಮೃತ ವರ್ಷಿಣಿ' ನಟಿ 'ರಜಿನಿ' ತುಮಕೂರಿನ ಕುವರಿ: ಆರ್ಕೆಸ್ಟ್ರಾದಲ್ಲಿ ಕಷ್ಟಪಟ್ಟು ಹಾಡ್ತಿದ್ರು!
ಕಿರುತೆರೆ, ಬೆಳ್ಳಿತೆರೆ ಎರಡರಲ್ಲೂ ಬ್ಯುಸಿಯಾಗಿದ್ದಾರೆ ನಟಿ ರಜಿನಿ. ನೂರಾರು ಕನಸುಗಳನ್ನು ಹೊತ್ತು ಬಣ್ಣದ ಲೋಕಕ್ಕೆ ಬಂದವರು. ಇದೀಗ ಅವರ ಕನಸುಗಳು ನನಸಾಗುತ್ತಿದ್ದು, ಹಲವು ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ಇತ್ತೀಚೆಗೆ ಹಲವು ಕಿರುತೆರೆ ನಟ-ನಟಿಯರು ಬೆಳ್ಳೆತೆರೆಯಲ್ಲೂ ಕಾಣಿಸಿಕೊಂಡಿದ್ದಾರೆ. ಅದರಲ್ಲಿ ರಜಿನಿ ಕೂಡ ಒಬ್ಬರು. ಹೊಸ ಮುಖಗಳಿಗಾಗಿ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಸದಾ ಹುಡುಕಾಟ ಇದ್ದೇ ಇರುತ್ತದೆ. ಹಾಗಾಗಿ ಒಂದು ಸಿನಿಮಾ ಮಾಡಿದ ಕೆಲ ನಟಿಯರು ಮತ್ತೊಂದರಲ್ಲಿ ಕಾಣಿಸಿಕೊಳ್ಳುವುದಿಲ್ಲ.
ಇನ್ನು ಕೆಲ ಧಾರಾವಾಹಿಗಳಲ್ಲಿ ಲೀಡ್ ರೋಲ್ ಮಾಡಿದವರು, ಮತ್ತೊಂದು ಧಾರಾವಾಹಿಯಲ್ಲಿ ಮಾಡಬೇಕು ಎಂದರೆ, ಸಾಕಷ್ಟು ಸಮಯ ಬೇಕಾಗುತ್ತದೆ. ಯಾಕೆಂದರೆ ಅವರ ಪಾತ್ರಗಳು ಜನರ ಮನದಲ್ಲಿ ಗಟ್ಟಿಯಾಗಿ ನೆಲೆಯೂರಿ ಬಿಟ್ಟಿರುತ್ತದೆ. ಹಾಗಾಗಿ ಅವಕಾಶಗಳು ದೊರೆಯುವುದು ಕಷ್ಟ.
ಆರ್ಕೆಸ್ಟ್ರಾದಿಂದ ಬಣ್ಣದ ಲೋಕಕ್ಕೆ ಬಂದ ನಟಿ!
ಆರ್ಕೆಸ್ಟ್ರಾಗಳಲ್ಲಿ ಹಾಡು ಹೇಳುತ್ತಾ ಕಷ್ಟದ ಜೀವನ ನಡೆಸಿದವರು ರಜಿನಿ. ಸಾಕಷ್ಟು ಕನಸುಗಳನ್ನು ಹೊತ್ತು ಕಿರುತೆರೆಗೆ ಎಂಟ್ರಿಕೊಟ್ಟರು. ಸ್ಟಾರ್ ಸುವರ್ಣದಲ್ಲಿ ಮೂಡಿ ಬಂದ 'ಅಮೃತ ವರ್ಷಿಣಿ' ಧಾರಾವಾಹಿ ಮೂಲಕ ಮನೆ ಮಾತಾದರು. ಧಾರಾವಾಹಿಗಳಷ್ಟೇ ಅಲ್ಲದೇ, ರಿಯಾಲಿಟಿ ಶೋಗಳಲ್ಲೂ ಕಮಾಲ್ ಮಾಡಿದ್ದ ರಜಿನಿ, ಇದೀಗ ಸಿನಿಮಾರಂಗದಲ್ಲೂ ಮಿಂಚುತ್ತಿದ್ದಾರೆ. ಮೂರು ವರ್ಷಕ್ಕೂ ಹೆಚ್ಚು ಕಾಲ ಮೂಡಿ ಬಂದ ಧಾರಾವಾಹಿಯಲ್ಲಿ ರಜಿನಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು.
ರಿಯಾಲಿಟಿ ಶೋಗಳಲ್ಲೂ ರಜಿನಿ ಕಮಾಲ್!
ಕೆಲ ರಿಯಾಲಿಟಿ ಶೋಗಳಲ್ಲಿ ರಜಿನಿ ಕಾಣಿಸಿಕೊಂಡರು. 'ಸ್ಟಾರ್ ಸಿಂಗರ್', 'ಡ್ಯಾನ್ಸಿಂಗ್ ಸ್ಟಾರ್ಸ್', 'ಮಜಾ ಟಾಕೀಸ್', 'ಕುಕ್ಕರಿ ಶೋ'ಗಳಲ್ಲಿ ಭಾಗವಹಿಸಿದ್ದರು. 'ಕುಕ್ಕರಿ ಶೋ' ಒಂದನ್ನು ರಜಿನಿ ಅವರೇ ಹೋಸ್ಟ್ ಮಾಡಿದ್ದರು ಕೂಡ. ಭರತನಾಟ್ಯ ಹಾಗೂ ಪಾಶ್ಚಾತ್ಯ ನೃತ್ಯವನ್ನೂ ರಜಿನಿ ಅವರು ಕರಗತ ಮಾಡಿಕೊಂಡಿದ್ದಾರೆ. ತುಮಕೂರು ಮೂಲದ ರಜಿನಿ ಈಗ ಸಿನಿಮಾ ಕಿರುತೆರೆಯಲ್ಲಿ ಸಖತ್ ಬ್ಯುಸಿಯಾಗಿರುವ ನಟಿ.
ರಜಿನಿ ಕೈಯಲ್ಲಿ ಹಲವು ಅವಕಾಶಗಳು ಇವೆ!
ಹಂತ ಹಂತವಾಗಿ ಬೆಳೆಯುತ್ತಿರುವ ನಟಿ ರಜಿನಿಯನ್ನು ಇಂದಿಗೂ ಪ್ರೇಕ್ಷಕರು ಮರೆತಿಲ್ಲ. ಕಿರುತೆರೆಯಲ್ಲಿ ಹಾಗೂ ಸಿನಿಮಾದಲ್ಲಿ ಬ್ಯುಸಿಯಾಗಿರುವ ರಜಿನಿ ಚೊಚ್ಚಲ ಸಿನಿಮಾ 'ಅಂಬುಜ' ರಿಲೀಸ್‌ಗೆ ಸಜ್ಜಾಗಿದೆ. ಈ ಚಿತ್ರದಲ್ಲಿ ಖಡಕ್ ಹೆಣ್ಣು ಮಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದರ ಜೊತೆಗೆ ಮುಂದಿನ ದಿನಗಳಲ್ಲಿ ರಜಿನಿ 'ಅಸುರನ ಕೈಯಲ್ಲಿ ಪಾರಿಜಾತ' ಎಂಬ ಸಿನಿಮಾದಲ್ಲಿ ನಟಿಸಲಿದ್ದಾರೆ. ಈ ಸಿನಿಮಾದಲ್ಲೂ ರಜಿನಿ 'ಪಾರಿಜಾತ' ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರೊಂದಿಗೆ ಇದೀಗ 'ಡವ್ ಮಂಜ' ಎಂಬ ಸಿನಿಮಾದಲ್ಲೂ ನಟಿಸಿದ್ದಾರೆ.
ರಜಿನಿ ಕೈಯಲ್ಲಿರುವ ಧಾರಾವಾಹಿಗಳು!
ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವ 'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ರಜಿನಿ ಅಂತರಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಕೆಲ ಸೀನ್‌ಗಳಲ್ಲಿ ಕಾಣಿಸಿಕೊಂಡಿದ್ದು, ಮತ್ತೆ ಮುಂದಿನ ದಿನಗಳಲ್ಲಿ ತಮ್ಮ ಪಾತ್ರವನ್ನು ನಿರ್ವಹಿಸಲಿದ್ದಾರೆ. ಇನ್ನು ಇದೀಗ ಸ್ಟಾರ್ ಸುವರ್ಣದ ಹೊಸ ಧಾರಾವಾಹಿಯಲ್ಲೂ ಹಳ್ಳಿ ಮಗಳ ಪಾತ್ರದಲ್ಲಿ ರಜಿನಿ ನಟಿಸಲಿದ್ದಾರೆ.


Click it and Unblock the Notifications











