Shwetha Prasad: 2 ವರ್ಷ ಯೋಗ ನಿಲ್ಲಿಸಿದ್ದೇಕೆ ನಟಿ ಶ್ವೇತಾ ಪ್ರಸಾದ್? ಹೊಸ ಅಧ್ಯಾಯ ಆರಂಭ!
ಮುದ್ದಾದ ನಟನೆಯ ಮೂಲಕ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿದ್ದ ಶ್ವೇತಾ ಪ್ರಸಾದ್ ಅವರು ಯೋಗಪಟುವೂ ಹೌದು. ವಿಶೇಷವಾಗಿ ಯೋಗ ತರಬೇತಿಯನ್ನು ಪಡೆದುಕೊಂಡಿದ್ದ ಶ್ವೇತಾ ಪ್ರಸಾದ್ ಮೊಣಕಾಲಿನ ಗಾಯದಿಂದ ಬಳಲುತ್ತಿದ್ದ ಕಾರಣ ಯೋಗಭ್ಯಾಸ ಮಾಡುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದರು. ಇದೀಗ ಆಕೆ ಗುಣಮುಖರಾಗಿದ್ದು ಮತ್ತೆ ಯೋಗ ಮಾಡಲು ಶುರು ಮಾಡಿಕೊಂಡಿದ್ದಾರೆ. ಮಾತ್ರವಲ್ಲದೇ ಎರಡು ವರ್ಷಗಳ ನಂತರ ಮತ್ತೆ ಯೋಗಾಭ್ಯಾಸ ಮಾಡುತ್ತಿರುವ ಸಂತಸದ ವಿಚಾರವನ್ನು ಅವರು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಹೌದು, ಇನ್‌ಸ್ಟಾಗ್ರಾಂನಲ್ಲಿ ತಮ್ಮ ಯೊಗ ತರಬೇತಿಯ ಪ್ರಮಾಣ ಪತ್ರವನ್ನು ಹಂಚಿಕೊಂಡಿದ್ದ ಶ್ವೇತಾ "ಎರಡು ವರ್ಷಗಳಾಯಿತು. ನಾನು ತುಂಬಾ ಚೆನ್ನಾಗಿ ಯೋಗ ತರಬೇತಿಯಲ್ಲಿ ಪಾಲ್ಗೊಂಡಿದ್ದೇನೆ. ಜೊತೆಗೆ ಎರಡನೇ ಸ್ಥಾನವನ್ನು ಕೂಡಾ ಗಿಟ್ಟಿಸಿಕೊಂಡಿದ್ದೇನೆ. ಈ ಕೋರ್ಸ್ ತುಂಬಾ ಚೆನ್ನಾಗಿತ್ತು. ಬೆಳಗ್ಗೆ 5 ಗಂಟೆ ಯಿಂದ ಸಂಜೆ 7.30 ತನಕ ಕ್ಲಾಸ್, ಮತ್ತೊಮ್ಮೆ ವಿದ್ಯಾರ್ಥಿ ಜೀವನ, ತಾನೊಬ್ಬಳು ನಟಿ ಎಂಬುದನ್ನು ಮರೆತು ಕ್ಲಾಸ್ ಹಾಗೂ ರಸ್ತೆಯನ್ನು ಗುಡಿಸಿದ್ದೇನೆ." ಎಂದು ಬರೆದುಕೊಂಡಿದ್ದಾರೆ.

ಹೊಸ ಆರಂಭದ ಕಡೆಗೆ ಮೊದಲ ಹೆಜ್ಜೆ
ಇದರ ಜೊತೆಗೆ "ಸಾತ್ವಿಕ ಆಹಾರ, ಭಜನೆ, ಭಗವದ್ಗೀತಾ ಪಠಣ, ಮಂತ್ರಗಳು ಮತ್ತು ಶ್ಲೋಕಗಳನ್ನು ಪಠಿಸುತ್ತಾ ತರಬೇತಿಯನ್ನು ಪೂರ್ಣಗೊಳಿಸಿದ್ದೇನೆ. ಇದನ್ನೆಲ್ಲಾ ನಾನು ಮಾಡಿದ್ದೇನೆ ಎಂಬುದರ ಬಗ್ಗೆ ನಿಜವಾಗಿಯೂ ನನಗೆ ತುಂಬಾ ಹೆಮ್ಮೆಯಿದೆ. ಇದು ಹೊಸ ಆರಂಭದ ಕಡೆಗೆ ನನ್ನ ಮೊದಲ ಹೆಜ್ಜೆಯಾಗಿತ್ತು" ಎಂದು ವಿವರವಾಗಿ ಬರೆದುಕೊಂಡಿದ್ದಾರೆ ಶ್ವೇತಾ ಪ್ರಸಾದ್.
ಗಾಯದಿಂದ ಖಿನ್ನತೆಗೆ ಒಳಗಾಗಿದ್ದೆ
"ಯೋಗ ಕೋರ್ಸ್ ಮುಗಿದ ತಕ್ಷಣ, ನನಗೆ ಮೊಣಕಾಲು ಗಾಯವಾಯಿತು. ಇದರಿಂದಾಗಿ ಯೋಗ ಅಭ್ಯಾಸವನ್ನು ನಿಲ್ಲಿಸಬೇಕಾಯಿತು. ಜೊತೆಗೆ ಸುಮಾರು 6 ತಿಂಗಳ ಕಾಲ ಫಿಸಿಯೋಥೆರಪಿಗೆ ಹೋಗುವ ಅನಿವಾರ್ಯತೆ ಎದುರಾಯಿತು. ನಾನು ಈ ತರಬೇತಿ ಪಡೆದ ಬಳಿಕ ಮುಂದಿನ ಕೋರ್ಸ್ ಅನ್ನು ತೆಗೆದುಕೊಳ್ಳಲು ಉತ್ಸುಕಳಾಗಿದ್ದೆ. ಆದರೆ, ಆಕಸ್ಮಿಕವಾಗಿ ಆದ ಗಾಯವು ತುಂಬಾ ಖಿನ್ನತೆಯನ್ನುಂಟು ಮಾಡಿತು." ಎಂದು ಬರೆದುಕೊಂಡಿದ್ದಾರೆ.
ಮತ್ತೆ ಯೋಗ ಆರಂಭಿಸಿದ್ದಕ್ಕೆ ಖುಷಿಯಿದೆ
"ಈ ಘಟನೆ ನಡೆದು ಇದೀಗ ಎರಡು ವರ್ಷಗಳು ಕಳೆದಿವೆ. ನನ್ನ ಮೊಣಕಾಲು ಬಹುತೇಕ ವಾಸಿಯಾಗಿದೆ. ಮೊದಲಿನಿಂದ ಮತ್ತೆ ಯೋಗಭ್ಯಾಸವನ್ನು ಪ್ರಾರಂಭಿಸಲು ನಾನು ತಯಾರಿದ್ದೇನೆ. ಎರಡು ವರ್ಷದ ಬಳಿಕ ಮತ್ತೆ ಯೋಗಾಭ್ಯಾಸ ಶುರು ಮಾಡುತ್ತಿರುವುದಕ್ಕೆ ಖುಷಿಯಾಗುತ್ತಿದೆ." ಎಂದು ಹೇಳಿಕೊಂಡಿದ್ದಾರೆ ಶ್ವೇತಾ ಪ್ರಸಾದ್.

ಜಾಹ್ನವಿಯಾಗಿ ಕಿರುತೆರೆಗೆ ಎಂಟ್ರಿ
ಶ್ರುತಿ ನಾಯ್ಡು ನಿರ್ದೇಶನದ 'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ನಾಯಕಿ ಜಾಹ್ನವಿಯಾಗಿ ಅಭಿನಯಿಸುವ ಮೂಲಕ ಕಿರುತೆರೆಗೆ ಕಾಲಿಟ್ಟ ಶ್ವೇತಾ ಪ್ರಸಾದ್ ಎಂದೂ ನಟಿಯಾಗಬೇಕು ಎಂದು ಬಯಸಿದವರಲ್ಲ. ಬದಲಿಗೆ ಆಕಸ್ಮಿಕವಾಗಿ ದೊರೆತ ಅವಕಾಶದಿಂದ ನಟನೆಗೆ ಬಂದ ಆಕೆ ಮೊದಲ ಧಾರಾವಾಹಿಯಲ್ಲಿಯೇ ನಾಯಕಿಯಾಗಿ ನಟಿಸುವ ಸುವರ್ಣಾವಕಾಶ ಪಡೆದುಕೊಂಡರು.
ರಾಧಾ ಮಿಸ್ ಆಗಿ ಫೇಮಸ್ಸು
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ರಾಧಾ ರಮಣ' ಧಾರಾವಾಹಿಯಲ್ಲಿ ಕನ್ನಡ ಮಿಸ್ ಆರಾಧನಾ ಆಗಿ ನಟಿಸಿದ ಆಕೆ ಆ ಪಾತ್ರದ ಮೂಲಕ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾದರು. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ರಾಧೆ ಶ್ಯಾಮ' ಧಾರಾವಾಹಿಯಲ್ಲಿ ಅತಿಥಿ ಪಾತ್ರದ ಮೂಲಕ ವೀಕ್ಷಕರ ಮನ ಸೆಳೆದರು. ಮುಂದೆ ಸಿನಿಮಾಗೂ ಪಾದಾರ್ಪಣೆ ಮಾಡಿದ ಶ್ವೇತಾ 'ಕಳ್ಬೆಟ್ಟದ ದರೋಡೆಕೋರರು' ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿ ಸೈ ಎನಿಸಿಕೊಂಡರು.


Click it and Unblock the Notifications











