ಮತ್ತೆ ಕನ್ನಡಕ್ಕೆ ಬಂದ ನಟಿ ವಿದ್ಯಾಶ್ರೀ ಜಯರಾಮ್!
ಮೊದಲೆಲ್ಲಾ ಬಹುತೇಕ ಕಲಾವಿದರು, ಅಕ್ಕ-ತಂಗಿ, ಸೊಸೆ, ಅಣ್ಣ-ತಮ್ಮ, ಮಗ ಎಲ್ಲಾ ಪಾತ್ರಗಳನ್ನು ನಿರ್ವಹಿಸುತ್ತಿದ್ದರು. ಒಂದು ಧಾರಾವಾಹಿಯಲ್ಲಿ ವಿಲನ್ ಆಗಿದ್ದರೆ, ಮತ್ತೊಂದರಲ್ಲಿ ವಿರುದ್ಧ ಪಾತ್ರದಲ್ಲಿ ನಟಿಸಬೇಕಿತ್ತು.
ಆದರೆ, ಈಗ ಹಾಗಲ್ಲ. ಆಕ್ಟಿಂಗ್ ಮಾಡುವುದೆಂದರೆ ಪ್ರತಿಯೊಬ್ಬರಿಗೂ ಇಷ್ಟ. ಕಿರುತೆರೆಯಲ್ಲಿ ಒಂದು ಧಾರಾವಾಹಿಯಲ್ಲಿ ನಟಿಸಿದವರು ಮತ್ತೆ ಕಾಣಿಸುವುದೇ ಅಪರೂಪ. ಕೆಲವರಷ್ಟೇ ಕಿರುತೆರೆಯಲ್ಲಿ ಉಳಿಯುತ್ತಾರೆ. ಇನ್ನು ಕೆಲವರು ಸಿನಿಮಾ, ಪರಭಾಷೆಯಲ್ಲಿ ಬ್ಯುಸಿಯಾಗಿ ಬಿಡುತ್ತಾರೆ.
ಈಗ ಯಾಕೆ ಈ ವಿಚಾರ ಎಂದು ಯೋಚಿಸುತ್ತಿದ್ದೀರಾ..? ಇದಕ್ಕೆ ಕಾರಣ ಇದೆ. ಕಿರುತೆರೆಯ ಹೆಸರಾಂತ ನಟಿ ಒಬ್ಬರು ಮತ್ತೆ ಕನ್ನಡ ಕಿರುತೆರೆಗೆ ಕಮ್ ಬ್ಯಾಕ್ ಮಾಡಲು ಸಜ್ಜಾಗಿದ್ದಾರೆ. ಅದು ಯಾರು ಎಂದು ಮುಂದೆ ಓದೆ...
ಗಗನ ಸಖಿ ಆಗಿದ್ದ ನಟಿ!
ಗಗನಸಖಿಯಾಗಿದ್ದ ಈ ಬೆಡಗಿ ಆಕಸ್ಮಿಕವಾಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟು, ಈಗ ಕನ್ನಡ ಮಾತ್ರವಲ್ಲದೇ, ಮಲಯಾಳಂ ಕಿರುತೆರೆಯಲ್ಲೂ ಮಿಂಚುತ್ತಿದ್ದಾರೆ. ಇದೀಗ ಮತ್ತೆ ಕನ್ನಡ ಕಿರುತೆರೆಗೆ ಕಮ್ ಬ್ಯಾಕ್ ಮಾಡಲಿದ್ದಾರೆ. ಅವರೇ ನಟಿ ವಿದ್ಯಾಶ್ರೀ ಜಯರಾಮ್. ವಿದ್ಯಾಶ್ರೀ ಜಯರಾಮ್ ಗಗನ ಸಖಿಯಾಗಿ 'ಗೋ ಏರ್ ಲೈನ್ಸ್ ಇಂಡಿಯಾ'ದಲ್ಲಿ ಕೆಲಸ ಮಾಡುತ್ತಿದ್ದರು. ಸುಮಾರು ಮೂರು ವರ್ಷಗಳ ಕಾಲ ಗಗನ ಸಖಿಯಾಗಿ ಕಾರ್ಯ ನಿರ್ವಹಿಸಿದ ವಿದ್ಯಾಗೆ ಆ ವೃತ್ತಿಯಲ್ಲಿ ಸಂತೃಪ್ತಿ ಸಿಗದೆ, ನಟಿಯಾಗುವಂತೆ ಪ್ರೇರೇಪಿಸಿತ್ತು.
ರಿಯಾಲಿಟಿ ಶೋಗೆ ಎಂಟ್ರಿಕೊಟ್ಟ ವಿದ್ಯಾಶ್ರೀ!
ನಟಿಸುವ ಆಸೆಯಿಂದ ಮೊದಲು ವಿದ್ಯಾಶ್ರೀ ರಿಯಾಲಿಟಿ ಶೋಗೆ ಎಂಟ್ರಿಕೊಟ್ಟರು. ಖಾಸಗಿ ವಾಹಿನಿಯಲ್ಲಿ ಮೂಡಿ ಬಂದ 'ತಕಧಿಮಿತ' ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದರು. ಇದರಲ್ಲಿ 'ಅಗ್ನಿಸಾಕ್ಷಿ' ಧಾರಾವಾಹಿ ಖ್ಯಾತಿಯ ರಾಜೇಶ್ ಧ್ರುವ ಅವರ ಜೋಡಿಯಾಗಿ ವಿದ್ಯಾಶ್ರೀ ಡ್ಯಾನ್ಸ್ ಮಾಡಿದ್ದರು. ತಕಧಿಮಿತ ಶೋನಿಂದ ಹೊರಬಂದ ಬಳಿಕ ವಿದ್ಯಾಶ್ರೀ ಧಾರಾವಾಹಿಯಲ್ಲಿ ನಟಿಸಲು ಆಡಿಷನ್‌ಗೆ ಹೋಗುತ್ತಿದ್ದರು. ಆದರೆ, ಎಲ್ಲೂ ಕೂಡ ಅವಕಾಶ ಸಿಗಲಿಲ್ಲವಂತೆ.
ಸಾಲು, ಸಾಲು ಧಾರಾವಾಹಿಯಲ್ಲಿ ನಟನೆ!
ಕೊಂಚ ಗ್ಯಾಪ್ ಬಳಿ ಸ್ಟಾರ್ ಸುವರ್ಣದಲ್ಲಿ ಮೂಡಿ ಬಂದ ವರಲಕ್ಷ್ಮಿ ಸ್ಟೋರ್ಸ್ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಒದಗಿ ಬಂತು. ಮೊದಲ ಬಾರಿಗೆ ಪಾಸಿಟಿವ್ ಹಾಗೂ ನೆಗೆಟಿವ್ ಪಾತ್ರಗಳಲ್ಲಿ ಕಾಣಿಸಿಕೊಂಡರು. ಈ ಧಾರಾವಾಹಿಯ ಬಳಿಕ 'ಕಾವ್ಯಾಂಜಲಿ' ಧಾರಾವಾಹಿಯಲ್ಲಿ ಕಾವ್ಯಾ ಪಾತ್ರದಲ್ಲಿ ಮಿಂಚಿದರು. ಇದರಲ್ಲಿ ಕಾವ್ಯಾ ಪಾತ್ರದಲ್ಲಿ ಮನೆ ಮಾತಾದರು. ಬಳಿಕ 'ಮನಸಿನಕರೆ' ಎಂಬ ಧಾರಾವಾಹಿಯಲ್ಲೂ ಕಾವ್ಯಾ ಪಾತ್ರದಲ್ಲಿ ಕಾಣಿಸಿಕೊಂಡರು.
'ಅರ್ಧಾಂಗಿ' ಸೀರಿಯಲ್ ಮೂಲಕ ಕಮ್ ಬ್ಯಾಕ್!
ಹೀಗೆ ಧಾರಾವಾಹಿಗಳ ಮೂಲಕ ಮನೆ ಮಾತಾದ ವಿದ್ಯಾಶ್ರೀ ಅವರು, ಮಳಯಾಳಂ ಕಿರುತೆರೆಗೂ ಎಂಟ್ರಿ ಕೊಟ್ಟರು. ಮಲಯಾಳಂ ಧಾರಾವಾಹಿಯಲ್ಲಿ ಮಿಂಚುತ್ತಿರುವ ನಟಿ ವಿದ್ಯಾಶ್ರೀ ಜಯರಾಮ್ ಅವರಿಗೆ ಸಿನಿಮಾಗಳಿಂದಲೂ ಆಫರ್ ಬರುತ್ತಿದೆ. ಮುಂದಿನ ದಿನಗಳಲ್ಲಿ ವಿದ್ಯಾಶ್ರೀ ಜಯರಾಮ್ ಅವರು ಬೆಳ್ಳಿ ತೆರೆಮೇಲೆ ಮಿಂಚಲಿದ್ದಾರೆ. ಇನ್ನು ಇದೀಗ ಮತ್ತೆ ಕನ್ನಡ ಕಿರುತೆರೆಗೆ ಕಮ್ ಬ್ಯಾಕ್ ಮಾಡಲಿದ್ದಾರೆ. ಈ ಬಗ್ಗೆ ಸ್ವತಃ ವಿದ್ಯಾಶ್ರೀ ಜಯರಾಮ್ ಈ ವಿಚಾರವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. 'ಅರ್ಧಾಂಗಿ' ಧಾರಾವಾಹಿಯಲ್ಲಿ ನಾಯಕಿಯಾಗಿ ಮಿಂಚಲಿದ್ದಾರೆ.


Click it and Unblock the Notifications











