ಕನ್ನಡ 'ಬಿಗ್ ಬಾಸ್' ಮನೆಗೆ ಬಾಂಬ್ ಹಾಕುವ ಬೆದರಿಕೆ ಹಾಕಿದ್ದ ವ್ಯಕ್ತಿ ಕಳೆದ ವರ್ಷ ಮಾಡಿದ್ದೇನು ಗೊತ್ತಾ..?
ಬಣ್ಣದ ಸೆಳೆತಕ್ಕೆ ಸಿಲುಕಿದವರಲ್ಲಿಯೇ ಹಲವಾರು ಜನ ''ಬಿಗ್ ಬಾಸ್''ನಲ್ಲಿ ಭಾಗವಹಿಸಬೇಕೆಂದು ಕನಸು ಕಾಣುತ್ತಾರೆ. ಆದರೆ .. ಈ ಸುವರ್ಣ ಅವಕಾಶ ಎಲ್ಲರಿಗೆ ಸಿಗುವುದಿಲ್ಲ. ಯಾಕೆಂದರೆ ''ಬಿಗ್ ಬಾಸ್''ನ ನಿಯಮಾವಳಿಯೇ ಹಾಗೇ ಇದೆ. ಮಾನದಂಡಕ್ಕೆ ಕೇವಲ ಹೆಸರು ಮಾತ್ರ ಮುಖ್ಯವಲ್ಲ ಬದಲಿಗೆ ಆ ಹೆಸರಿಗೊಂದು ಸಮ್ಮೋಹಕವಾದ ಶಕ್ತಿ ಇರಬೇಕು.. ಆ ಹೆಸರು ಕೇಳಿದರೆ ಸಾಕು ಜನಸಾಮಾನ್ಯರು..ಕಾರ್ಯಕ್ರಮ ನೋಡಲು ಬಂದು ಕೂರಬೇಕು.
ಇಲ್ಲದಿದ್ದರೆ ಯಾವುದಾದರೂ ವಿವಾದ ಮಾಡಿಕೊಂಡಿರಬೇಕು. ಸದಾ ಕಾಲ ಕಾಲು ಕೆರೆದು ಜಗಳಕ್ಕೆ ನಿಲ್ಲುವ ವಿವಾದಿತ ವ್ಯಕ್ತಿಯಾಗಿರಬೇಕು.ಹೀಗಿದ್ದಾಗಲೇ ''ಬಿಗ್ ಬಾಸ್'' ಮನೆಗೆ ಹೋಗಲು ಸಾಧ್ಯವಾಗುವುದು ಎನ್ನುವ ಮಾತು ಕಿರುತೆರೆಯಲ್ಲಿ ಕೇಳಿ ಬರುತ್ತೆ. ಹಾಗೇ ನೋಡಿದರೆ ಈ ಮಾತು ನಿಜಾ ಕೂಡ ಹೌದು.

ಇದಕ್ಕೆ ಕೈಗನ್ನಡಿ ಎಂಬಂತೆ ಈ ಹಿಂದೆ ಆ ಭಾಷೆ ಈ ಭಾಷೆ ಎನ್ನದೇ ಎಲ್ಲ ಭಾಷೆಯ ಸ್ಫರ್ಧಿಗಳ ಲಿಸ್ಟ್ ಮೇಲೆ ಕಣ್ಣಾಡಿಸಿದರೆ ಅಲ್ಲಿ ಕಾಂಟ್ರವರ್ಸಿಯಲ್ ವ್ಯಕ್ತಿತ್ವಗಳೇ ಹೆಚ್ಚು ಕಣ್ಣಿಗೆ ಕಾಣಿಸುತ್ತಾವೆ.
ಇನ್ನು ''ಬಿಗ್ ಬಾಸ್'' ಕಾರ್ಯಕ್ರಮ ಕೇವಲ ಸೆಲೆಬ್ರೆಟಿಗಳಿಗೆ .. ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ಸ್‌ಗಳಿಗೆ .. ಜ್ಯೋತಿಷಿಗಳಿಗೆ ಅಷ್ಟೇ ಸೀಮಿತವಾದದ್ದು. ನಿಜಾ.. ಅಲ್ಲಲ್ಲಿ ಜನಸಾಮಾನ್ಯರಿಗೆ ಅವಕಾಶವನ್ನು ನೀಡಲಾಗಿದೆ. ಮಲಯಾಳಂ ಮತ್ತು ತೆಲುಗಿನಲ್ಲಿ ಈ ಬಾರಿ ಕಾಮನ್ ಮ್ಯಾನ್‌ಗಳಿಗೆ ಮುಖ್ಯದ್ವಾರವನ್ನು ತೆಗೆಯಲಾಗಿದೆಯಾದರೂ ಸಾಮಾನ್ಯ ಜನರಿಗೆ ಇಲ್ಲಿ ಅವಕಾಶ ಸಿಗುವುದು ತುಂಬಾನೇ ವಿರಳ.
ಈ ವಿಚಾರ ಗೊತ್ತಿದ್ದರು ಕೂಡ ಕೆಲವರು ''ಬಿಗ್ ಬಾಸ್'' ಕಾರ್ಯಕ್ರಮದ ಕನಸು ಕಾಣ್ತಾರೆ. ನಾನಾ ತರಹದ ಸರ್ಕಸ್ ಮಾಡುತ್ತಾರೆ. ಆ ನಂತರ ಪೊಲೀಸರ ಅತಿಥಿ ಕೂಡ ಆಗುತ್ತಾರೆ. ಉದಾಹರಣೆಗೆ ಅಶೋಕ್ ಅಲಿಯಾಸ್ ಮಮ್ಮಿ ಅಶೋಕ್.
ಹೌದು, ಅಶೋಕ್.. ''ಬಿಗ್ ಬಾಸ್'' ಜ್ವರದಿಂದ ಬಳಲುತ್ತಿರುವ ಯುವಕ. ಹೇಗಾದರೂ ಮಾಡಿ ''ಬಿಗ್ ಬಾಸ್'' ಗಮನ ಸೆಳೆಯಲೇ ಬೇಕು ಎಂದು ನಿರ್ಧಾರ ಮಾಡಿರುವ ಅಶೋಕ್, ''ಬಿಗ್ ಬಾಸ್'' ಮನೆಗೆ ಈ ವರ್ಷ ನನ್ನ ಕರೆದುಕೊಳ್ಳದಿದ್ದರೆ ''ಬಿಗ್ ಬಾಸ್'' ಮನೆಗೆ ಬೆಂಕಿ ಇಡುವ ಮಾತುಗಳನ್ನಾಡಿದ್ದ. ''ಬಿಗ್ ಬಾಸ್'' ಮನೆಯ ಎದುರೇ ನಿಂತು ಅವಾಜ್ ಹಾಕಿದ್ದ.

ಈ ವಿಡಿಯೋವನ್ನು ಗಮನಿಸಿದ ಕುಂಬಳಗೋಡು ಪೊಲೀಸರು ಎನ್.ಸಿ.ಆರ್ (Non-Cognizable Report) ದಾಖಲು ಮಾಡಿಕೊಂಡು ಠಾಣೆಗೆ ಕರೆಸಿ ವಿಚಾರಣೆ ನಡೆಸಿ ಬುದ್ದಿವಾದ ಹೇಳಿ ಕಳುಹಿಸಿದ್ದಾರೆ.ಅಶೋಕ್ ಮಾಡಿದ್ದ ವಿಡಿಯೋವನ್ನು ಹಂಚಿಕೊಂಡಿರುವ ಬೆಂಗಳೂರು ಪೊಲೀಸರು ಆನ್‌ಲೈನ್‌ನಲ್ಲಿ ಹಾಕಿದ ಬೆದರಿಕೆಯನ್ನು ನೇರವಾಗಿ ಮಾಡಿದ ಬೆದರಿಕೆಯಂತೆಯೇ ಗಂಭೀರವಾಗಿ ಪರಿಗಣಿಸಲಾಗುತ್ತದೆ. ಟೈಪ್ ಮಾಡುವ ಮೊದಲು ಯೋಚಿಸಿ - ಏಕೆಂದರೆ ನಿಮ್ಮ ಪೋಸ್ಟ್‌ಗಳು ನಿಮ್ಮನ್ನು ಜೈಲಿಗೆ ಕಳುಹಿಸಬಹುದು ಎಂದು ಪುಂಡರಿಗೆ ಎಚ್ಚರಿಕೆಯನ್ನು ಕೂಡ ನೀಡಿದ್ದಾರೆ.
ಅಂದ್ಹಾಗೇ ''ಬಿಗ್ ಬಾಸ್'' ಮನೆಯ ಎದುರು ಅಶೋಕ್ ನನಗೆ ಅವಕಾಶ ಕೊಡಿ ಎಂದು ಗಂಟಲು ಹರಿದುಕೊಳ್ಳುತ್ತಿರುವುದು ಇದು ಮೊದಲೇನಲ್ಲ. ಕಳೆದ ವರ್ಷ ಕೂಡ ಅಶೋಕ್ ಅಲಿಯಾಸ್ ಮಮ್ಮಿ ಅಶೋಕ್ ಇಂಥಹದ್ದೇ ಕೆಲಸವನ್ನು ಮಾಡಿದ್ದ.
''ಬಿಗ್ ಬಾಸ್'' ಈಗ ಮನೆ ಮುಂದೆ ಪಟಾಕಿ ಹಚ್ಚಿದ್ದ. ಮುಂದಿನ ಸೀಜನ್‌ನಲ್ಲಿ ನನ್ನನ್ನು ಮನೆಯೊಳಗೆ ಕರೆದಿಲ್ಲ ಎಂದರೆ ''ಬಿಗ್ ಬಾಸ್'' ಮನೆಗೆ ಬೆಂಕಿ ಹಚ್ಚುತ್ತೇನೆ ಎಂದು ಕಳೆದ ವರ್ಷ ಕೂಡ ಎಚ್ಚರಿಕೆ ನೀಡಿದ್ದ ಈ ವ್ಯಕ್ತಿ ''ಬಿಗ್ ಬಾಸ್'' ಮನೆಯಲ್ಲಿರುವ ಸ್ಪರ್ಧಿಗಳಿಗೆ ತಲೆ ಇಲ್ಲ ಎಂದುಕೊಂಡಿದ್ದೆ, ನೋಡಿದರೆ ''ಬಿಗ್ ಬಾಸ್''ಗೆ ತಲೆ ಇಲ್ಲ. ಯಾರನ್ನ ಮನೆಯೊಳಗೆ ಕರೆಯಬೇಕು ಯಾರನ್ನು ಕರೆಯಬಾರದು ಎನ್ನುವುದು ಅವರಿಗೆ ಗೊತ್ತಿಲ್ಲ ಎಂದೆಲ್ಲಾ ಮಾತನಾಡಿದ್ದ. ಇಂಥಾ ಅಶೋಕ್ ಕಳೆದ ವರ್ಷದಂತೆ ಈ ವರ್ಷ ಕೂಡ ಹುಚ್ಚಾಟ ಮುಂದುವರೆಸಿದ್ದ. ಆದರೆ.. ದುರಾದೃಷ್ಟ ಈ ಬಾರಿ ಪೊಲೀಸರ ಕಣ್ಣಿಗೆ ಬಿದ್ದಿದ್ದಾನೆ. ಸಿಕ್ಕಿಹಾಕಿಕೊಂಡಿದ್ದಾನೆ.


Click it and Unblock the Notifications











