Sevanthi Serial: 1300 ಎಪಿಸೋಡ್ ಕಂಪ್ಲೀಟ್.. ಹೊಸ ದಾಖಲೆ ಸೃಷ್ಟಿಸಿದ 'ಸೇವಂತಿ' ಧಾರಾವಾಹಿ !
ಕನ್ನಡ ಕಿರುತೆರೆಯಲ್ಲಿಯೇ ಪ್ರಸ್ತುತ ಅತಿ ಹೆಚ್ಚು ಪ್ರಸಾರ ಕಂಡ ಧಾರಾವಾಹಿ ಎಂದು ಎನಿಸಿಕೊಂಡಿದೆ ಸೇವಂತಿ. ಹೌದು, ಇತ್ತೀಚೆಗಷ್ಟೇ ಸಾವಿರದ ಮುನ್ನೂರು ಎಪಿಸೋಡ್‌ಗಳನ್ನು ಯಶಸ್ವಿಯಾಗಿ ಮುಗಿಸಿರುವ ಧಾರಾವಾಹಿ 'ಸೇವಂತಿ'. ಧಾರಾವಾಹಿ ತಂಡ ಈ ಸಂಭ್ರಮವನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
'ಸೇವಂತಿ' ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ನಟಿ ದೀಪಿಕಾ ಅವರು ಕೂಡ ತಮ್ಮ ಅಭಿಮಾನಿಗಳಿಗೆ ಪ್ರೇಕ್ಷಕರಿಗೆ ವಿಶೇಷವಾಗಿ ಧನ್ಯವಾದಗಳು ತಿಳಿಸಿದ್ದಾರೆ. ಅಂದಹಾಗೆ, ತಮಿಳು ಧಾರಾವಾಹಿ 'ರೋಜಾ'ದ ರಿಮೇಕ್ ಧಾರಾವಾಹಿ ಇದಾಗಿದ್ದು ಪ್ರೇಕ್ಷಕರು ಇದನ್ನು ಬಹಳವಾಗಿ ಮೆಚ್ಚಿಕೊಂಡಿದ್ದಾರೆ.

'ಗಟ್ಟಿಮೇಳ', 'ಪಾರು' ಇತ್ಯಾದಿ ಕೆಲವೇ ಕೆಲವು ಧಾರಾವಾಹಿಗಳು ಬಹಳಷ್ಟು ಸಮಯದಿಂದ ಓಡುತ್ತಿರುವ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಇದೀಗ 'ಸೇವಂತಿ' ಧಾರಾವಾಹಿ ಕೂಡ ಆ ಸಾಲಿಗೆ ಸೇರಿರುವುದು ತಂಡಕ್ಕಂತೂ ಖುಷಿ ಕೊಟ್ಟಿದೆ. ಧಾರಾವಾಹಿಯ ಈ ಸುದೀರ್ಘ ಜರ್ನಿಯನ್ನು ನೆನೆದ ಧಾರವಾಹಿ ತಂಡ ಅದರಲ್ಲಾದ ಕೆಲವು ಬದಲಾವಣೆಗಳ ಬಗ್ಗೆಯೂ ನೆನಪಿಸಿಕೊಂಡಿದೆ.
'ಸೇವಂತಿ' ಧಾರಾವಾಹಿಯ ಪ್ರೀಮಿಯರ್ ಶೋ ಸಂದರ್ಭದಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿ ಪಲ್ಲವಿ ಗೌಡ ಅವರು ಕಾಣಿಸಿಕೊಂಡಿದ್ದರೂ ಸಹ ನಂತರ ಕೆಲ ಎಪಿಸೋಡ್ ಗಳ ಕಾಲ ನಟಿ ಮೇಘನಾ ಖುಷಿಯವರು ಆ ಪಾತ್ರವನ್ನು ನಿರ್ವಹಿಸಿದ್ದರು. ಮತ್ತೆ ಇದೀಗ ನಟಿ ದೀಪಿಕಾ ಆ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ನಟ ಶಿಶಿರ್ ಶಾಸ್ತ್ರಿ ಧಾರಾವಾಹಿಯಲ್ಲಿ ನಾಯಕನ ಪಾತ್ರವನ್ನು ನಿರ್ವಹಿಸುತ್ತಿದ್ದು, ಈ ಧಾರಾವಾಹಿಯಲ್ಲಿ ವಕೀಲರ ಪಾತ್ರವನ್ನು ಮಾಡುತ್ತಿದ್ದಾರೆ. ಅಂದಹಾಗೆ ಕನ್ನಡದ ಮೇರು ನಟ ವಿಷ್ಣುವರ್ಧನ್ ಅವರ ಪತ್ನಿ ಭಾರತಿ ವಿಷ್ಣುವರ್ಧನ್ ಈ ಧಾರಾವಾಹಿಯಲ್ಲಿ ನಟಿಸುವ ಮೂಲಕ ಮೊದಲ ಬಾರಿಗೆ ಕಿರುತೆರೆಗೆ ಕಾಲಿಟ್ಟಿದ್ದರು. ಆದರೆ, ಕ್ರಮೇಣ ಭಾರತಿ ವಿಷ್ಣುವರ್ಧನ್ ಪಾತ್ರವನ್ನು ಆಶಾಲತಾ ಅವರು ನಿರ್ವಹಿಸಿದರು.
ಇನ್ನು ವಿಶೇಷವಾದ ವಿಚಾರವೆಂದರೆ ನಟ ಶಿಶಿರ್ ಶಾಸ್ತ್ರಿ ಹಾಗೂ ನಟಿ ದೀಪಿಕಾಗೆ ಇದು ಎರಡನೇ ಬಾರಿಗೆ ಈ ರೀತಿ ಒಟ್ಟಿಗೆ ಒಂದು ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿರುವುದು. ಅಂದರೆ ಇದಕ್ಕೂ ಮೊದಲು ಹಲವು ವರ್ಷಗಳ ಹಿಂದೆ 'ಕುಲವಧು' ಎಂಬ ಧಾರಾವಾಹಿಯಲ್ಲಿ ಇದೇ ಜೋಡಿ ವೇದಾಂತ್ ಹಾಗೂ ಧನ್ಯಾ ಎಂಬ ಪಾತ್ರಗಳಿಗೆ ಬಣ್ಣ ಹಚ್ಚಿ ಜನರ ಮನ ಗೆದ್ದಿದ್ದರು. ಇದೀಗ ಮತ್ತೆ ಈ ಜೋಡಿಯನ್ನು ಈ ರೀತಿ ನೋಡುವುದಕ್ಕೆ ಪ್ರೇಕ್ಷಕರಂತೂ ಫುಲ್ ಖುಷಿ ಪಟ್ಟಿದ್ದಾರೆ.
ಒಬ್ಬ ಅನಾಥ ಹುಡುಗಿ ಒಂದೊಳ್ಳೆಯ ಕುಟುಂಬವನ್ನು ಪಡೆಯಬೇಕೆಂಬ ಆಸೆ ಹೊತ್ತಿರುತ್ತಾಳೆ . ಆದರೆ, ವಿಧಿ ಅವಳ ಹೆಣೆಯಲಿ ಬೇರೆಯೇ ವಿಚಾರಗಳನ್ನು ಬರೆದಿರುತ್ತದೆ ಎಂಬುದೇ ಈ ಧಾರಾವಾಹಿಯ ಮುಖ್ಯ ಕಥಾವಸ್ತುವಾಗಿದ್ದು ಪ್ರೇಕ್ಷಕರ ಮನೆಗೆದ್ದಿರುವುದರಲ್ಲಿ ಡೌಟೇ ಇಲ್ಲ. ಹೀಗೆ ಇನ್ನಷ್ಟು ಭರ್ಜರಿ ಎಪಿಸೋಡ್ ಗಳನ್ನು ಧಾರಾವಾಹಿ ತಂಡ ನೀಡುವಂತಾಗಲಿ.


Click it and Unblock the Notifications











