ದೀಪಾವಳಿಗೆ ಪಟಾಕಿ ಹೊಡೆದರೆ ಮಾತ್ರ ಪರಿಸರ ಮಾಲಿನ್ಯ ಆಗುತ್ತೆ ಎನ್ನುವವರಿಗೆ ಶಾಲಿನಿ ಟಾಂಗ್?
ಬೆಳಕಿನ ಹಬ್ಬ ದೀಪಾವಳಿ ಹತ್ತಿರವಾಗುತ್ತಿದೆ. ದೀಪಾವಳಿ ಅಂದಾಕ್ಷಣ ಪಟಾಕಿ ಸದ್ದು ಜೋರಾಗಿರುತ್ತದೆ. ಈಗಾಗಲೇ ಅಲ್ಲಲ್ಲಿ ಪಟಾಕಿ ಸಿಡಿಸುತ್ತಿದ್ದಾರೆ. ಕೆಲವರು ಪಟಾಕಿ ಅಂಗಡಿಗಳ ಮುಂದೆ ಕ್ಯೂ ನಿಂತಿದ್ದಾರೆ. ನಾನಾ ಬಗೆಯ ಪಟಾಕಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಪಟಾಕಿ ಹೊಡೆದರೆ ಪರಿಸರ ಮಾಲಿನ್ಯ ಆಗುತ್ತದೆ ಎನ್ನುವವರು ಇದ್ದಾರೆ. ಈ ಬಗ್ಗೆ ಕಿರುತೆರೆ ನಟಿ, ನಿರೂಪಕಿ ಶಾಲಿನಿ ಮಾಡಿರುವ ರೀಲ್ಸ್ ವೈರಲ್ ಆಗ್ತಿದೆ.
ಪಟಾಕಿಗಳ ಅತಿಯಾದ ಬಳಕೆಯಿಂದಾಗಿ ವಾಯು, ಶಬ್ದ ಹಾಗೂ ಇತರ ಬಗೆಯ ಮಾಲಿನ್ಯಕ್ಕೆ ಕಾರಣವಾಗುತ್ತದೆ. ಅಷ್ಟೇ ಅಲ್ಲ ಪಟಾಕಿಗಳು ಹಾನಿಕಾರಕ ಅನಿಲಗಳು ಮತ್ತು ಸೂಕ್ಷ್ಮ ಕಣಗಳನ್ನು ಹೊರಸೂಸುತ್ತವೆ. ಇದರಿಂದ ಉಸಿರಾಟದ ಸಂಬಂಧ ಕಾಯಿಲೆಗಳ ಅಪಾಯ ಹೆಚ್ಚು. ಅಷ್ಟೇ ಅಲ್ಲ ಪಟಾಕಿ ಶಬ್ಧದಿಂದ ಪ್ರಾಣಿಗಳು ಸಂಕಷ್ಟ ಎದುರಿಸುತ್ತವೆ. ಇದೇ ಕಾರಣಕ್ಕೆ ಪರಿಸರ ಸ್ನೇಹಿ ಪಟಾಕಿಗಳನ್ನು ಬಳಸಿ, ದೀಪ ಹಚ್ಚಿ ಹಬ್ಬ ಆಚರಿಸಿ ಎಂದು ಕೆಲವರು ಸಲಹೆ ನೀಡುತ್ತಾರೆ.

ಪಟಾಕಿ ಯಾವಾಗ ಹೊಡೆದರೂ ಪರಿಸರ ಮಾಲಿನ್ಯ ಆಗುತ್ತದೆ. ಆದರೆ ದೀಪಾವಳಿಗೆ ಮಾತ್ರ ಪಟಾಕಿ ಹೊಡೆಯಬೇಡಿ ಎನ್ನುವುದು ಯಾವ ನ್ಯಾಯ? ಎಂದು ಕೇಳುವವರು ಇದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ರೀಲ್ಸ್ ಮಾಡಿ ಅರಿವು ಮೂಡಿಸುವ ಪ್ರಯತ್ನವನ್ನು ಕೆಲವರು ಮಾಡುತ್ತಾರೆ. ಅಂತಹವರಿಗೆ ನಟಿ ಶಾಲಿನಿ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ. ಆಕೆಯ ಹೊಸ ವೀಡಿಯೋ ವೈರಲ್ ಆಗುತ್ತಿದೆ.
ನಟಿ, ನಿರೂಪಕಿ ಶಾಲಿನಿ ಸತ್ಯನಾರಾಯಣ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ಪತಿಯ ಜೊತೆ ಸೇರಿ ರೀಲ್ಸ್ ಮಾಡುತ್ತಿರುತ್ತಾರೆ. "ನನಗೊಂದು ಸಣ್ಣ ಡೌಟ್ ಇತ್ತು. ಸ್ಪಷ್ಟನೆ ಕೊಡ್ತೀರಾ. ದೀಪಾವಳಿ ಟೈಮಲ್ಲಿ ಪಟಾಕಿ ಹೊಡೆದರೆ ಪರಿಸರ ಮಾಲಿನ್ಯ ಆಗುತ್ತೆ, ಬೇರೆ ಯಾವ ಸಮಯದಲ್ಲೂ ಏನು ಆಗಲ್ಲ ಅಂತ ರೀಲ್ಸ್ ಮಾಡುವ ಸಮಯ ಬಂದಿದ್ಯಾ? ಅಂತಹ ರೀಲ್ಸ್ ಮಾಡಲು ಶುರು ಮಾಡಬಹುದಾ?" ಎಂದು ಶಾಲಿನಿ ಪ್ರಶ್ನಿಸಿದ್ದಾರೆ.
ನನ್ನ ಅನುಮಾನಕ್ಕೆ ನೀವೇ ಉತ್ತರ ಕೊಡಿ ಎಂದು ವ್ಯಂಗ್ಯವಾಗಿಯೇ ಶಾಲಿನಿ ಕೇಳಿರುವುದು ಗೊತ್ತಾಗುತ್ತಿದೆ. "ಬೇರೆ ಸಮಯದಲ್ಲಿ ಪರಿಸರ ಮಾಲಿನ್ಯ ಆಗಲ್ಲ ಅಲ್ವಾ? ದೀಪಾವಳಿ ಟೈಮಲ್ಲಿ ಮಾತ್ರ ಆಗುತ್ತೆ. ಅದಕ್ಕೆ ರೀಲ್ಸ್ ಮಾಡುವ ಮುಂಚೆ ನಿಮ್ಮನ್ನು ಕೇಳೋಣ ಅನ್ಕೊಂಡೆ. ಆ ರೀತಿ ರೀಲ್ಸ್ ಮಾಡೋದಾ? ಬೇಡ್ವಾ? ನೀವೇ ಹೇಳಿ?" ಎಂದಿದ್ದಾರೆ.
ಸಾಕಷ್ಟು ಜನ ಕಾಮೆಂಟ್ ಮಾಡಿ ಶಾಲಿನಿಗೆ ಬೆಂಬಲ ಸೂಚಿಸಿದ್ದಾರೆ. "ಹೌದು, ಯುದ್ಧ ಆದಾಗಲೂ ಪರಿಸರ ಮಾಲಿನ್ಯ ಆಗೋದಿಲ್ಲ ದೀಪಾವಳಿಯಲ್ಲಿ ಮಾತ್ರ ಆಗುತ್ತೆ" ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. "ಯಾವ ಟೈಮಲ್ಲಿ ಹೊಡೆದ್ರು ಮಾಲಿನ್ಯ ಆಗತ್ತೆ ಶಾಲು .. ಕೆಲವು ಅತೀ ಬುದ್ದಿವಂತರು ಹಂಗೆ ಅಂದುಕೊಂಡಿದ್ದಾರೆ ದೀಪಾವಳಿ ಪಟಾಕಿಯಲ್ಲಿ ಮಾತ್ರ ಆಗೋದು ಅಂತ" ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.
"ಬೇರೆ ಸಮಯಗಳಲ್ಲಿ ಕೂಡ ಪರಿಸರ ಮಾಲಿನ್ಯ ಆಗುತ್ತದೆ ಆದರೆ ದೀಪಾವಳಿ ಸಮಯದಲ್ಲಿ ಹೆಚ್ಚು ಜನ ಪಟಾಕಿ ಹೊಡೆದು ಪರಿಸರ ಮಾಲಿನ್ಯ ಆಗುತ್ತದೆ" ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಆದರೆ ಬಹುತೇಕರು ಶಾಲಿನಿ ಮಾತಿನ ಅರ್ಥದ ಬಗ್ಗೆ ಮೆಚ್ಚಿ ಕಾಮೆಂಟ್ ಮಾಡುತ್ತಿದ್ದಾರೆ. ಭಾರತ ತಂಡ, ಆರ್‌ಸಿಬಿ ತಂಡ ಕ್ರಿಕೆಟ್ ಪಂದ್ಯ ಗೆದ್ದಾಗ, ಯಾರಾದರೂ ಹುಟ್ಟುಹಬ್ಬ ಆಚರಿಸಿಕೊಂಡಾಗ, ರಾಜಕೀಯ ನಾಯಕರು ಸಭೆ ಸಮಾರಂಭಗಳಿಗೆ ಬಂದಾಗ ಅಭಿಮಾನಿಗಳು ಪಟಾಕಿ ಸಿಡಿಸುತ್ತಾರೆ. ಆ ಬಗ್ಗೆ ಯಾರು ಪ್ರಶ್ನಿಸುವುದಿಲ್ಲ, ದೀಪಾವಳಿ ಸಮಯದಲ್ಲಿ ಪಟಾಕಿ ಸಿಡಿಸಿದರೆ ಮಾತ್ರ ಪರಿಸರ ಮಾಲಿನ್ಯ ಎನ್ನುವುದು ಎಷ್ಟು ಸರಿ ಎಂದು ಕೆಲವರು ಕೇಳುತ್ತಿದ್ದಾರೆ.


Click it and Unblock the Notifications











