'ಶಾಂತಂ ಪಾಪಂ' ಕಿರುತೆರೆ ಶೋನಲ್ಲಿ ರೇಣುಕಾಸ್ವಾಮಿ ಹಾಗೂ ದರ್ಶನ್ ಪ್ರಕರಣ?
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ. ಪ್ರಕರಣದಲ್ಲಿ ನಟ ದರ್ಶನ್ ಹೆಸರು ಕೇಳಿ ಬಂದಿರುವುದು ಎಲ್ಲಗ ಗಮನ ಸೆಳೆದಿದೆ. ಸದ್ಯ 14 ಜನ ಆರೋಪಿಗಳನ್ನು 12 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಕೋರ್ಟ್ ಒಪ್ಪಿಸಿದೆ. ಮತ್ತೊಂದು ಕಡೆ ಪೊಲೀಸರು ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ.
ಪವಿತ್ರಾ ಗೌಡಗೆ ಕೆಟ್ಟದಾಗಿ ಮೆಸೇಜ್ ಮಾಡಿದ ಕಾರಣಕ್ಕೆ ರೇಣುಕಾಸ್ವಾಮಿಯನ್ನು ಅಪಹರಿಸಿ ಕೂಡಿ ಹಾಕಿ ಥಳಿಸಲಾಗಿದೆ. ಈ ವೇಳೆ ಆತನ ಪ್ರಾಣ ಹೋಗಿದೆ ಎಂದು ಹೇಳಲಾಗುತ್ತಿದೆ. ಆದರೆ ನಟ ದರ್ಶನ್ ಸೂಚನೆ ಮೇರೆಗೆ ಈ ಕೃತ್ಯ ಎಸಗಿದ್ದಾಗಿ ಕೆಲ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಹಾಗಾಗಿ ನಟ ದರ್ಶನ್ ಅವರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದರು. ಘಟನೆ ನಡೆದ ಸ್ಥಳಕ್ಕೆ ಆರೋಪಿಗಳನ್ನು ಕರೆದುಕೊಂಡು ಹೋಗಿ ಸ್ಥಳ ಮಹಜರು ಮಾಡಿಸಿದ್ದರು.

ಘಟನೆ ನಡೆದ ದಿನ ದರ್ಶನ್ ಎಲ್ಲೆಲ್ಲಿ ಹೋಗಿದ್ದರು? ಏನೆಲ್ಲಾ ಮಾಡಿದ್ದರು? ಎನ್ನುವ ಬಗ್ಗೆಯೂ ತನಿಖೆ ನಡೆಸಿದ್ದಾರೆ. ಇನ್ನು ರೇಣುಕಾಸ್ವಾಮಿ ಹತ್ಯೆ ನಡೆದ ಪಟ್ಟಣಗೆರೆ ಶೆಡ್‌ನಲ್ಲಿ ಪೊಲೀಸರು ತಪಾಸಣೆ ನಡೆಸಿ ಸಾಕಷ್ಟು ಸಾಕ್ಷ್ಯಧಾರಗಳನ್ನು ಸಂಗ್ರಹಿಸಿದ್ದಾರೆ. ಹೆಚ್ಚಿನ ತನಿಖೆ ಮುಂದುವರೆದಿದೆ. ಸದ್ಯ ನಟ ದರ್ಶನ್, ಪ್ರೇಯಸಿ ಪವಿತ್ರಾ ಗೌಡ ಸೇರಿದಂತೆ ಆರೋಪಿಗಳೆಲ್ಲಾ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಚಾರಣಾಧೀನ ಕೈದಿಗಳಾಗಿದ್ದಾರೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಬಗ್ಗೆ ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ಸಿನಿಮಾ ಮಾಡುತ್ತಾರಾ? ಎನ್ನುವ ಚರ್ಚೆ ನಡೀತಿತ್ತು. ಕಾರಣ ಆರ್‌ಜಿವಿ ಈ ಪ್ರಕರಣದ ಬಗ್ಗೆ ಮಾತನಾಡಿದ್ದಾರೆ. ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು ಸಿನಿಮಾ ಮಾಡುವ ಬಗ್ಗೆ ಅವರು ನಿರಾಕರಿಸಿದ್ದಾರೆ. ಸಿನಿಮಾ ಮಾಡುವಂತಹ ಸಂಗತಿ ಈ ಪ್ರಕರಣದಲ್ಲಿ ಇಲ್ಲ ಎಂದಿದ್ದಾರೆ. ಆದರೆ ಇದೀಗ ರೇಣುಕಾಸ್ವಾಮಿ ಹತ್ಯೆ ಪ್ರಕರಣವನ್ನು ನೆನೆಪಿಸುವ ಕಾರ್ಯಕ್ರಮ ಕಿರುತೆರೆಯಲ್ಲಿ ಪ್ರಸಾರವಾಗಿದೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ 'ಶಾಂತಂ ಪಾಪಂ' ಕ್ರೈಂ ಕಥಾನಕದ ಶೋ ಜನಪ್ರಿಯವಾಗಿದೆ. ಇತ್ತೀಚೆಗೆ ಪ್ರಸಾರವಾದ ಎಪಿಸೋಡ್ ರೇಣುಕಾಸ್ವಾಮಿ ಹತ್ಯೆ ಪ್ರಕರಣವನ್ನೇ ಹೋಲುವಂತಿದೆ. ಇದೇ ವಿಚಾರವನ್ನು ಸಾಕಷ್ಟು ಜನ ಕಾಮೆಂಟ್ ಮಾಡಿ ತಿಳಿಸುತ್ತಿದ್ದಾರೆ.ರೇಣುಕಾಸ್ವಾಮಿ ಪ್ರಕರಣಕ್ಕೂ ಈ ಡೇಡ್ ಡೆವಿಲ್ ದೇವದಾಸ್ ಎಪಿಸೋಡ್‌ಗೂ ಸಾಕಷ್ಟು ಸಾಮ್ಯತೆಗಳು ಇದ್ದಾವೆ. ಅದನ್ನು ಮುಂದೆ ಓದಿ.
ಸಮಾಜದಲ್ಲಿ ನಡೆಯುವ ಅಪರಾಧ ಕೃತ್ಯಗಳ ನೈಜ ಘಟನೆಗಳನ್ನು ಆಧರಿಸಿ 'ಶಾಂತಂ ಪಾಪಂ' ಧಾರಾವಾಹಿ ಕಥೆಯಂತೆ ಸಿರೀಸ್ ರೂಪದಲ್ಲಿ ಮೂಡಿ ಬರುತ್ತಿದೆ. ಒಂದು ಅಥವಾ ಎಪಿಸೋಡ್‌ಗಳಲ್ಲಿ ಒಂದೊಂದು ಅಪರಾಧ ಕೃತ್ಯವನ್ನು ಬಿಚ್ಚಿಡಲಾಗುತ್ತಿದೆ. ಆ ಮೂಲಕ ಸಮಾಜದಲ್ಲಿ ಏನೆಲ್ಲಾ ನಡೆಯುತ್ತಿದೆ? ದುಷ್ಟರು ಹೇಗೆಲ್ಲಾ ಜನರನ್ನು ಯಾಮಾರಿಸುತ್ತಾರೆ? ನೇಮು ಫೇಮಿಗಾಗಿ ಏನೆಲ್ಲಾ ಅಪರಾಧಗಳನ್ನು ಮಾಡುತ್ತಾರೆ? ಅದನ್ನು ಮುಚ್ಚಿಡಲು ಹೇಗೆಲ್ಲಾ ಪ್ರಯತ್ನಿಸುತ್ತಾರೆ ಎನ್ನುವುದನ್ನು ಕಣ್ಣಿಗೆ ಕಟ್ಟಿದಂತೆ ತೋರಿಸಲಾಗುತ್ತಿದೆ.

ಸದ್ಯ ರೇಣುಕಾಸ್ವಾಮಿ ಪ್ರಕರಣವನ್ನು ಹೋಲುವ ಡೇರ್ ಡೆವಿಲ್ ದೇವದಾಸ್ ಎಪಿಸೋಡ್‌ನಲ್ಲಿ ದಾಸ್ ಒಬ್ಬ ಶ್ರೀಮಂತ. ಆದರೆ ಕೊಲೆ ಆರೋಪದಲ್ಲಿ ಆತನ ಬಂಧನವಾಗುತ್ತದೆ. ಮೊದಲಿಗೆ ಪೊಲೀಸರು ಆತನನ್ನು ಬಂಧಿಸದಂತೆ ಭಾರೀ ಒತ್ತಡ ಬರುತ್ತದೆ. ಆದರೆ ಅದಕ್ಕೆಲ್ಲಾ ಕ್ಯಾರೇ ಅನ್ನದೇ ಪೊಲೀಸರು ವಶಕ್ಕೆ ಪಡೆದು ತನಿಖೆ ಆರಂಭಿಸುತ್ತಾರೆ. ಅದಾಗಲೇ ಮದುವೆ ಆಗಿದ್ದರೂ ಖ್ಯಾತ ಉದ್ಯಮಿ ದಾಸ್ ಒಬ್ಬ ನಟಿಯ ಮೋಹ ಪಾಶಕ್ಕೆ ಸಿಲುಕಿರುತ್ತಾನೆ.
ಆ ನಟಿಗೆ ಒಬ್ಬ ಅನಾಮಿಕನಿಂದ ಕೆಟ್ಟ ಕೆಟ್ಟ ಮೆಸೇಜ್‌ಗಳು ಬರಲು ಆರಂಭಿಸುತ್ತದೆ. ಫೇಕ್ ಅಕೌಂಟ್‌ಗಳಿಂದ ಅಸಭ್ಯ ಮೆಸೇಜ್ ಮಾಡಿ ಕಿರುಕುಳ ನೀಡುತ್ತಿರುತ್ತಾನೆ. ಅದನ್ನು ಆಕೆ ದಾಸ್ ಮುಂದಿಡುತ್ತಾಳೆ. ಅದನ್ನು ಕೇಳಿದ ಆತ ಯಾವ ನಿರ್ಣಯ ಕೈಗೊಳ್ಳುತ್ತಾನೆ ಎನ್ನುವುದು ಇನ್ನುಳಿದ ಕಥೆ. ದಾಸ್ ತಮ್ಮ ಆಪ್ತರಿಗೆ ಹೇಳಿ ಕೆಟ್ಟದಾಗಿ ಮೆಸೇಜ್ ಮಾಡಿದ ಕಿಡಿಗೇಡಿಯನ್ನು ಅಪಹರಿಸಿ ಕರೆತರುವಂತೆ ಹೇಳುವುದು, ಆತನನ್ನು ಕರೆತಂದು ಒಂದು ಶೆಡ್ ಮುಂದೆ ಥಳಿಸುವುದನ್ನು ಪ್ರೋಮೊದಲ್ಲಿ ನೋಡಬಹುದು. ಇದನ್ನೆಲ್ಲಾ ನೋಡಿದವರು ಇದು ರೇಣುಕಾಸ್ವಾಮಿ ಕಥೆನೇ? ಎಂದು ಊಹಿಸಿಕೊಳ್ಳುತ್ತಿದ್ದಾರೆ.


Click it and Unblock the Notifications









