'ಶಾರದೆ' ಧಾರಾವಾಹಿಯ ನಟಿ ಚೈತ್ರಾ ಸಕ್ಕರಿ: ಈಕೆಯ ಬಾಲ್ಯದ ಕನಸು ಏನಾಗಿತ್ತು ಗೊತ್ತೇ?
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿರುವ ಹೊಚ್ಚ ಹೊಸ ಧಾರಾವಾಹಿಯ ಹೆಸರು 'ಶಾರದೆ'. ಅಮ್ಮ ಮಗಳ ಕಥಾಹಂದರವನ್ನೊಳಗೊಂಡಿರುವ ಈ ಧಾರಾವಾಹಿಯ ಪ್ರೋಮೋ ಈಗಾಗಲೇ ರಿಲೀಸ್ ಆಗಿದ್ದು ಸಖತ್ ಸದ್ದು ಮಾಡುತ್ತಿದೆ. ಧಾರಾವಾಹಿಯ ಪ್ರೋಮೋದಲ್ಲಿ ಅಮ್ಮ, ಮಗಳು ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿರುವುದನ್ನು ತೋರಿಸಿದ್ದಾರೆ.
ಬಸ್ಸಿನಲ್ಲಿರುವ ಸಹ ಪ್ರಯಾಣಿಕರು ಆ ಪುಟ್ಟ ಹುಡುಗಿಯ ನಿನ್ನ ಹೆಸರು ಏನು ಎಂದು ಕೇಳುತ್ತಾರೆ. ಆಗ ಆ ಪುಟ್ಟು ಹುಡುಗಿ ಹಾಡು ಹೇಳುತ್ತಾ ತನ್ನ ಪರಿಚಯ ಮಾಡಿಕೊಳ್ಳುತ್ತಾಳೆ. ಬಸ್ ಇಳಿದ ನಂತರ ಅಮ್ಮ ತನ್ನ ಮಗಳನ್ನು ಒಂದೆಡೆ ಕೂರಿಸಿ ತನ್ನ ಗಂಡನನ್ನು ಹುಡುಕಿಕೊಂಡು ಹೋಗುತ್ತಾಳೆ. ವಿಪರ್ಯಾಸವೆಂದರೆ ಅವನು ಮತ್ತೊಂದು ಮದುವೆಯಾಗಿರುತ್ತಾನೆ.

ಮನೆಗೆ ಬಂದ ಆಕೆಯನ್ನು ನೋಡಿದ ಆತ ನನಗೆ ನೀನು ಬೇಡ ಎಂದು ಸಿಟ್ಟಿನಿಂದ ಹೇಳಿ ಬಾಗಿಲು ಹಾಕಿ ಅವಳನ್ನು ಕಳಿಸುತ್ತಾನೆ. ನಂತರ ಮಗಳ ಬಳಿ ಬಂದ ತಾಯಿಯ ಹತ್ತಿರ ಮಗಳು ಅಮ್ಮ, ಅಪ್ಪ ಎಲ್ಲಿ?ಹಿಂದಿನಿಂದ ಬರ್ತಾ ಇದ್ದಾರಾ ಎಂದು ಕಾತರದಿಂದ ಕೇಳುತ್ತಾಳೆ. ಅಪ್ಪಾ, ಅಪ್ಪಾ ಎಂದು ಕೂಗುತ್ತಾಳೆ. ಆದರೆ ಅಪ್ಪ ಮಾತ್ರ ಬರುವುದಿಲ್ಲ. ಆಗ ಅಮ್ಮ ಇನ್ನು ಮುಂದೆ ಅಮ್ಮ, ಅಪ್ಪ ಎಲ್ಲ ನಾನೇ ಎನ್ನುತ್ತಾಳೆ. ಧಾರಾವಾಹಿಯ ಪ್ರೋಮೋ ಅದ್ಭುತವಾಗಿದ್ದು ಅದೊಂದು ಅಮ್ಮ ಮಗಳ ನಡುವಿನ ಕಥೆ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ.
ಪ್ರೋಮೋದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿರುವ ಬೆಡಗಿ ಹೆಸರು ಚೈತ್ರಾ ಸಕ್ಕರಿ. ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ನಯನತಾರಾ' ಧಾರಾವಾಹಿಯಲ್ಲಿ ನಾಯಕಿ ನಯನಾ ಆಗಿ ಅಭಿನಯಿಸಿ ಸೈ ಎನಿಸಿಕೊಂಡಿರುವ ಚೈತ್ರಾ ಇದೀಗ 'ಶಾರದೆ' ಧಾರಾವಾಹಿಯ ಮೂಲಕ ಕಿರುತೆರೆಗೆ ಮರಳಿದ್ದಾರೆ.

'ನಯನತಾರಾ' ಧಾರಾವಾಹಿಯ ನಂತರ ಕನ್ನಡ ಕಿರುತೆರೆಯಲ್ಲಿ ಕಾಣಿಸಿಕೊಂಡಿರದ ಚೈತ್ರಾ ಸಕ್ಕರಿ ಪರಭಾಷೆಯ ಕಿರುತೆರೆಯಲ್ಲಿ ಮಿಂಚಿದ್ದೇ ಹೆಚ್ಚು. ಹೌದು, ತೆಲುಗಿನ 'ದೇವತಲರ ದಿವಿಂಚಂಡಿ' ಧಾರಾವಾಹಿಯಲ್ಲಿ ನಾಯಕಿಯಾಗಿ ತೆಲುಗು ಕಿರುತೆರೆಯಲ್ಲಿ ಕಾಣಿಸಿಕೊಂಡ ಈಕೆ ತಮ್ಮ ನಟನೆಯ ಮೂಲಕ ವೀಕ್ಷಕರ ಮನ ಸೆಳೆದರು.
ತದ ನಂತರ ತಮಿಳು ಕಿರುತೆರೆಗೆ ಪಾದಾರ್ಪಣೆ ಮಾಡಿದ ಈಕೆ 'ಪುನ್ನಗೈ ಪೂವೇ' ಧಾರಾವಾಹಿಯಲ್ಲಿಯೂ ನಟಿಸುವ ಸುವರ್ಣಾವಕಾಶ ಪಡೆದುಕೊಂಡರು. ತೆಲುಗು, ತಮಿಳು ಧಾರಾವಾಹಿಯ ನಂತರ ಮತ್ತೆ ಕನ್ನಡಕ್ಕೆ ಮರಳಿರುವ ಚೈತ್ರಾ ಸಕ್ಕರಿಗೆ ಮೊದಲಿನಿಂದಲೂ ನೃತ್ಯದತ್ತ ವಿಶೇಷ ಒಲವಿತ್ತು. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕುಣಿಯೋಣು ಬಾರಾ' ರಿಯಾಲಿಟಿ ಶೋವಿನಲ್ಲಿ ಭಾಗವಹಿಸಿದ್ದರು. ನಂತರ ಕಿರುತೆರೆಯತ್ತ ಮುಖ ಮಾಡಿದ ಈಕೆ ನಟನೆಯ ಮೂಲಕ ಗಮನ ಸೆಳೆಯುತ್ತಿದ್ದಾರೆ.
ಅಸಲಿಗೆ ಶಾಲಾ ವಿದ್ಯಾರ್ಥಿನಿಯಾಗಿದ್ದಾಗ ಡ್ಯಾನ್ಸ್ ಟೀಚರ್ ಆಗಬೇಕು ಎಂಬ ಕನಸು ಕಂಡಿದ್ದರು ಚೈತ್ರಾ ಸಕ್ಕರಿ. ಡ್ಯಾನ್ಸ್ ಶಾಲೆಯನ್ನು ಕೂಡಾ ತೆರೆಯಬೇಕು ಎಂಬ ಕನಸು ಕಂಡಿದ್ದ ಈಕೆ ಸುಮಾರು ವರ್ಷ ಡ್ಯಾನ್ಸ್ ಅಭ್ಯಾಸವನ್ನು ಕೂಡಾ ಮಾಡಿದ್ದರು. ಮುಂದೆ ಕಾರಣಾಂತರಗಳಿಂದ ಡ್ಯಾನ್ಸ್ ಕ್ಲಾಸ್ ಹೋಗುವುದನ್ನು ಕೂಡಾ ಬಿಟ್ಟರು. ಕಾಲೇಜು ವಿದ್ಯಾರ್ಥಿನಿಯಾಗಿದ್ದಾಗಲೇ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟ ಈಕೆ ಎರಡು ಸಿನಿಮಾಗಳಲ್ಲಿಯೂ ನಾಯಕಿಯಾಗಿ ನಟಿಸಿದ್ದರು.
ಕಿರುತೆರೆ, ಹಿರಿತೆರೆ ಎರಡರಲ್ಲಿಯೂ ಬಣ್ಣ ಹಚ್ಚಿ ಸೈ ಎನಿಸಿಕೊಂಡಿರುವ ಚೈತ್ರಾ ಅವರಿಗೆ ನಟಿಸಲು ಕಿರುತೆರೆಯಾಗಬೇಕು, ಅಲ್ಲ ಹಿರಿತೆರೆಯಾಗಬೇಕು ಎಂಬ ವ್ಯತ್ಯಾಸವೇನೂ ಇಲ್ಲ. ಅಭಿನಯ ಎರಡೂ ಕಡೆ ಒಂದೇ ಇರುತ್ತದೆ ಎಂದು ಹೇಳುವ ಆಕೆಗೆ ಪ್ರಾಮುಖ್ಯತೆ ಇರುವ ಪಾತ್ರದಲ್ಲಿ ಕಾಣಿಸಿಕೊಳ್ಳುವ ಬಯಕೆ. ನಟನೆಯ ಹೊರತಾಗಿ ಇನ್‌ಸ್ಟಾಗ್ರಾಂನಲ್ಲಿಯೂ ಸದ್ದು ಮಾಡುತ್ತಿರುವ ಬೆಡಗಿ ಈಕೆ. ಇನ್‌ಸ್ಟಾಗ್ರಾಂನಲ್ಲಿ ಕೊಂಚ ಮಟ್ಟಿಗೆ ಆ್ಯಕ್ಟೀವ್ ಆಗಿರುವ ಈಕೆ ಸಮಯ ಸಿಕ್ಕಾಗಲೆಲ್ಲಾ ರೀಲ್ಸ್ ಮಾಡಿ ಅಪ್ ಲೋಡ್ ಮಾಡುತ್ತಿರುತ್ತಾರೆ.


Click it and Unblock the Notifications











