ಬಿಗ್ ಬಾಸ್ ಕನ್ನಡ ಸೀಸನ್ 11ರ 8ನೇ ಸ್ಪರ್ಧಿ ಶಿಶಿರ್ ಶಾಸ್ತ್ರಿ; ಈ ನಟನ ಧಾರಾವಾಹಿ, ಸಿನಿಮಾಗಳ ಬಗ್ಗೆ ಗೊತ್ತೇ?
ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋಗಳ ಪೈಕಿ ಬಿಗ್ ಬಾಸ್ ಕೂಡಾ ಒಂದು. ಬಿಗ್ ಬಾಸ್ ನ ಹನ್ನೊಂದನೇ ಸೀಸನ್ ಇದೀಗ ಆರಂಭಗೊಂಡಿದೆ. ನಿನ್ನೆಯಷ್ಟೇ ಹೊಸ ಸೀಸನ್ ಆರಂಭವಾಗಿದ್ದು ಕಿರುತೆರೆ ನಟ ಶಿಶಿರ್ ಶಾಸ್ತ್ರಿ ಅವರು ದೊಡ್ಮನೆಯೊಳಗೆ ಕಾಲಿಟ್ಟಿದ್ದಾರೆ. ಹೌದು, ಬಿಗ್ ಬಾಸ್ ಸೀಸನ್ 11ರ ಎಂಟನೇ ಸ್ಪರ್ಧಿಯಾಗಿ ಬಿಗ್ ಹೌಸ್ ನೊಳಗೆ ಕಾಲಿಟ್ಟಿದ್ದಾರೆ ಶಿಶಿರ್ ಶಾಸ್ತ್ರಿ.
ಪ್ರಸ್ತುತ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸೇವಂತಿ' ಧಾರಾವಾಹಿಯಲ್ಲಿ ನಾಯಕ ಲಾಯರ್ ಅರ್ಜುನ್ ಪಾತ್ರದಲ್ಲಿ ಬಣ್ಣ ಹಚ್ಚುತ್ತಿದ್ದ ಶಿಶಿರ್ ಶಾಸ್ತ್ರಿ ತಮ್ಮ ನಟನೆಯ ಮೂಲಕ ಗುರುತಿಸಿಕೊಂಡಿರುವ ಹ್ಯಾಂಡ್ ಸಮ್ ಹುಡುಗ. ಇದೀಗ ಶಿಶಿರ್ ಅವರು ಬಿಗ್ ಬಾಸ್ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದು ಆ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆಯಲಿದ್ದಾರೆ.

ಇದರ ಬಗೆಗಿನ ವಿಡಿಯೋವೊಂದನ್ನು ಶಿಶಿರ್ ಶಾಸ್ತ್ರಿಯವರ ಇನ್‌ಸ್ಟಾಗ್ರಾಂ ಅಕೌಂಟ್‌ನಲ್ಲಿ ಪೋಸ್ಟ್ ಆಗಿದೆ. "ಎಲ್ಲರಿಗೂ ನಮಸ್ಕಾರ. ಬಿಗ್ ಬಾಸ್ ಸೀಸನ್ 11 ಹೊಸ ಅಧ್ಯಾಯ. ಈ ಅಧ್ಯಾಯದಲ್ಲಿ ಒಂದು ಹೊಸ ಚಾಪ್ಟರ್ ಓಪನ್ ಮಾಡೋದಕ್ಕೆ ನಾನು ಬರ್ತಿದ್ದೇನೆ ನಿಮ್ಮ ಪ್ರೀತಿಯ ಶಿಶಿರ್. ಈ ಸೀಸನ್ ನಲ್ಲಿ ದಯವಿಟ್ಟು ನಿಮ್ಮ ಎಲ್ಲಾ ಪ್ರೀತಿ, ಸಪೋರ್ಟ್, ಆಶೀರ್ವಾದ ನನ್ನ ಮೇಲಿರಲಿ ಎಂದು ಕೇಳಿಕೊಳ್ಳುತ್ತಿದ್ದೇನೆ. ದಯವಿಟ್ಟು ಈ ಸೀಸನ್‌ನ ಮಿಸ್ ಮಾಡದೆ ನೋಡಿ" ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ಇದರ ಜೊತೆಗೆ "ಇಷ್ಟು ದಿನ ಸೀರಿಯಲ್‌ನಲ್ಲಿ ನೋಡ್ತಾ ಇದ್ರಿ, ಇನ್ಮೇಲೆ ಸೀರಿಯಸ್ಸಾಗಿ ನೋಡಿ! ಸ್ಮಾಲ್ ಸ್ಕ್ರೀನ್‌ನಲ್ಲಿ ಬಿಗ್ ಇಂಪ್ಯಾಕ್ಟ್ ಮಾಡೋಕೆ ಬಿಗ್ ಬಾಸ್ ಮನೆಗೆ ಬಂದ್ರು ಶಿಶಿರ್ ಶಾಸ್ತ್ರಿ" ಎಂದು ಅವರು ಬರೆದುಕೊಂಡಿದ್ದಾರೆ. ಅಂದ ಹಾಗೇ ಬಿಗ್ ಬಾಸ್ ಸೀಸನ್ 11ರ ಎಂಟನೇ ಸ್ಪರ್ಧಿಯಾಗಿ ದೊಡ್ಮನೆಗೆ ಹೋಗಿರುವ ಶಿಶಿರ್ ಕಿರುತೆರೆ ಜೊತೆಗೆ ಹಿರಿತೆರೆಯಲ್ಲೂ ಗುರುತಿಸಿಕೊಂಡಿರುವ ಹುಡುಗ.
'ಸೊಸೆ ತಂದ ಸೌಭಾಗ್ಯ' ಧಾರಾವಾಹಿಯ ರಾಘವ್ ಆಗಿ ಕಿರುತೆರೆಗೆ ಕಾಲಿಟ್ಟಿರುಗ ಶಿಶಿರ್ ಶಾಸ್ತ್ರಿ ಅವರಿಗೆ ಜನಪ್ರಿಯತೆ ನೀಡಿದ್ದು 'ಕುಲವಧು' ಧಾರಾವಾಹಿ. ಹೌದು, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕುಲವಧು' ಧಾರಾವಾಹಿಯಲ್ಲಿ ನಾಯಕ ಗೌರವ್ ಆಗಿ ಅಭಿನಯಿಸಿದ್ದ ಶಿಶಿರ್ ಅವರು ಸದ್ಯ 'ಸೇವಂತಿ' ಧಾರಾವಾಹಿಯ ಅರ್ಜುನ್ ಆಗಿ ಗುರುತಿಸಿಕೊಂಡಿದ್ದಾರೆ.
ಈವೆಂಟ್ ಮ್ಯಾನೇಜ್ ಮೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದ ಶಿಶಿರ್ ಶಾಸ್ತ್ರಿ ಅಚಾನಕ್ ಆಗಿ ನಟನೆಯ ನಂಟು ಬೆಳೆಸಿಕೊಂಡವರು. ಮೊದಲ ಆಡಿಷನ್‌ನಲ್ಲಿ ಪಾಸಾಗಿ ಕಿರುತೆರೆಗೆ ಕಾಲಿಟ್ಟಿರುವ ಶಿಶಿರ್ ಬಣ್ಣದ ಬದುಕಿನಿಂದ ಸಾಕಷ್ಟು ಜೀವನ ಮೌಲ್ಯಗಳನ್ನು ಕಲಿತುಕೊಂಡಿದ್ದಾರೆ. ಇನ್ನು ಇದರ ಜೊತೆಗೆ 'ಬಿಲ್ ಗೇಟ್ಸ್', 'ಮಿಸ್ಟರ್ ಎಲ್ ಎಲ್ ಬಿ' ಸಿನಿಮಾಗಳಲ್ಲಿ ನಟಿಸುವ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಕಮಾಲ್ ಮಾಡಿದ್ದಾರೆ.
ಇನ್ನು ನಟನೆಯ ಹೊರತಾಗಿ ಶಿಶಿರ್ ಶಾಸ್ತ್ರಿ ಅವರು ಭರತನಾಟ್ಯ ಕಲಾವಿದರೂ ಹೌದು. ತನ್ನ ಒಂಭತ್ತನೇ ವಯಸ್ಸಿಗೆ ಭರತನಾಟ್ಯ ಮಾಡಲಾರಂಭಿಸಿದ ಶಿಶಿರ್ ಹತ್ತು ಹಲವು ವೇದಿಕೆಗಳಲ್ಲಿ ಭರತನಾಟ್ಯ ಪ್ರದರ್ಶನ ನೀಡಿ ಸೈ ಎನಿಸಿಕೊಂಡಿದ್ದಾರೆ. ಧಾರಾವಾಹಿಯಲ್ಲಿ ನಟಿಸಲು ಶುರು ಮಾಡಿದ ಬಳಿಕ ಭರತನಾಟ್ಯ ಮಾಡುವುದನ್ನು ಕಡಿಮೆ ಮಾಡಿದ್ದರು ಶಿಶಿರ್. ಭರತನಾಟ್ಯ ಮಾಡಬೇಕು ಎಂದಾದರೆ ಗಡ್ಡ, ಮೀಸೆ ತೆಗೆಯಬೇಕು. ಆದರೆ ಧಾರಾವಾಹಿಯಲ್ಲಿ ನಟಿಸುವ ಕಾರಣ ಅದು ಕಷ್ಟವಾಗುತ್ತಿತ್ತು ಎಂದು ಹೇಳಿಕೊಂಡಿದ್ದಾರೆ. ಸದ್ಯ ಈಗ ಬಿಗ್ ಬಾಸ್ ಮನೆಯಲ್ಲಿ ಹೇಗೆ ಆಟ ಆಡುತ್ತಾರೆಂದು ನೋಡಬೇಕಿದೆ.


Click it and Unblock the Notifications











