ಶಿವ-ಪಾರ್ವತಿ ಮದುವೆಯಾದ ಸ್ಥಳದಲ್ಲೇ, ಸದ್ದಿಲ್ಲದೇ ಮದುವೆಯಾದ ಬಿಗ್ ಬಾಸ್ ಸ್ಫರ್ಧಿ ; ಕೊನೆಗೂ ಬಯಲಾಯ್ತು ಸೌಂದರ್ಯ ರಹಸ್ಯ
ಪ್ರೀತಿ ಎಂಬ ಎರಡಕ್ಷರವನ್ನು ನಿರೂಪಿಸುವುದು ತುಂಬಾ ಕಷ್ಟ. ಯಾಕೆಂದರೆ.. ಪ್ರೀತಿಯನ್ನು ಪದಗಳಲ್ಲಿ ಹಿಡಿದಿಡಲು ಸಾಧ್ಯ ಇಲ್ಲ. ಅದನ್ನು ಅನುಭವಿಸಿಯೇ ತೀರಬೇಕು. ಇನ್ನೂ ನಿಜವಾದ ಪ್ರೀತಿ ಅಂದರೆ ಅದು ಹೃದಯದ ಬಡಿತ ಅಲ್ಲ. ನನ್ನ ಹೃದಯದ ಬಡಿತ ನಿನ್ನದೇ ಹೆಸರು ಹೇಳುತ್ತಿದೆ ಅಂದರೆ ಅದು ನಿಜವೂ ಅಲ್ಲ. ಯಾಕೆಂದರೆ ನಿಜವಾದ ಪ್ರೀತಿ ಎನ್ನುವುದು ಪರಿಪೂರ್ಣ ಪ್ರಣಯ.
ಆದರೆ ಅದನ್ನು ಗುರುತಿಸುವುದು ಸುಲಭ ಅಲ್ಲ. ಪ್ರೀತಿ ಒಂದು ಸುಂದರ ಅನುಭವ, ಅದನ್ನು ಖುಷಿಯಿಂದ ಅನುಭವಿಸಬೇಕು. ಕಷ್ಟದಲ್ಲಾದರೂ, ಸುಖದಲ್ಲಾದರೂ ಒಬ್ಬರಿಗೊಬ್ಬರು ಜೊತೆಯಾಗಿ ನಂಬಿಕೆಯಿಂದ ಇದ್ದರೆ ಮಾತ್ರ ಪ್ರೇಮದಾನಂದವನ್ನು ಸವಿಯಲು ಸಾಧ್ಯ. ಸದ್ಯ ಇಂತಹದ್ದೇ ಆನಂದದ ಅಲೆಯಲ್ಲಿ ಮೊನ್ನೆವರೆಗೆ ತೇಲುತ್ತಿದ್ದ ವಿಶಾಲ್ ನಿಕಮ್ ಮತ್ತು ಅಕ್ಷಯಾ ಹಿಂಡಾಲ್ಕರ್ ಮದುವೆಯ ಬಂಧನಕ್ಕೊಳಗಾಗಿದ್ದಾರೆ.

ಹೌದು, ವಿಶಾಲ್ ನಿಕಮ್ ಮತ್ತು ಅಕ್ಷಯಾ ಹಿಂಡಾಲ್ಕರ್.. ಮರಾಠಿ ಕಿರುತೆರೆಯ ಪ್ರಖ್ಯಾತ ತಾರೆಯರು. ''ಬಿಗ್ ಬಾಸ್'' ಮರಾಠಿ ಸೀಸನ್ 3ರಲ್ಲಿ ಭಾಗವಹಿಸಿ ಟ್ರೋಫಿಯನ್ನು ಮುಡಿಗೇರಿಸಿಕೊಂಡ ವಿಶಾಲ್ ನಿಕಮ್ ಮರಾಠಿಯ ಖ್ಯಾತ ಧಾರಾವಾಹಿಗಳಾದ ''ದಖ್ಖಂಚ ರಾಜ ಜ್ಯೋತಿಬಾ''.. ' 'ಜೈ ಭವಾನಿ ಜೈ ಶಿವಾಜಿ''.. ''ಸತ ಜಲ್ಮಾಚ್ಯ ಗಾತಿ'' ಯ ಪ್ರಮುಖ ಪಾತ್ರಧಾರಿ ಕೂಡ ಹೌದು.
ಇನ್ನು ಕೇವಲ ಕಿರುತೆರೆ ಮಾತ್ರವಲ್ಲ ''ಮಿಥುನ್''.. ''ಬಲೂಚ್''.. ಮತ್ತು ''ಧುಮಸ್'' ಅಂತಹ ಮರಾಠಿ ಚಿತ್ರಗಳಲ್ಲಿ ಕೂಡ ವಿಶಾಲ್ ನಿಕಮ್ ಕಾಣಿಸಿಕೊಂಡಿದ್ದಾರೆ.
ಮತ್ತೊಂದು ಕಡೆ ಅಕ್ಷಯಾ ಹಿಂಡಾಲ್ಕರ್ ''ಪುಷ್ಪ- ಇಂಪಾಸಿಬಲ್''.. ಸತ ಜಲ್ಮಾಚ್ಯ ಗಾತಿ''.. ''ಪುನಃ ಕರ್ತವ್ಯ ಆಹೆ'' ಅಂತಹ ಧಾರಾವಾಹಿಯಲ್ಲಿ ನಾಯಕಿಯಾಗಿ ಮಿಂಚಿದ್ದಾರೆ. ''ರಾಕಿ'' ಚಿತ್ರದ ಮೂಲಕ ಚಿತ್ರರಂಗದಲ್ಲಿಯೂ ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದಾರೆ.
ಇಂಥಾ ವಿಶಾಲ್ ನಿಕಮ್ ಮತ್ತು ಅಕ್ಷಯಾ ಹಿಂಡಾಲ್ಕರ್ ಸದ್ದಿಲ್ಲದೇ ಫೆಬ್ರವರಿ 10 ರಂದು ಉತ್ತರಾಖಂಡದಲ್ಲಿ ಮದುವೆಯಾಗಿದ್ದಾರೆ. ವಿಶೇಷ ಅಂದರೆ ಇವರ ಮದುವೆ ಉತ್ತರಾಖಂಡದ ಪ್ರಾಚೀನ ಮತ್ತು ಪ್ರಸಿದ್ದ ತ್ರಿಯುಗಿ ನಾರಾಯಣ್ ದೇವಸ್ಥಾನದಲ್ಲಿ ನಡೆದಿದೆ.ಈ ಸ್ಥಳದಲ್ಲಿಯೇ ಶಿವ ಮತ್ತು ಪಾರ್ವತಿ ದೇವಿಯ ವಿವಾಹ ನೆರವೇರಿತ್ತು ಎನ್ನುವ ಪ್ರತೀತಿ ಇದೆ. ನಿಶ್ಚಿತಾರ್ಥ ಸಮಾರಂಭ ಗಂಗಾ ಘಾಟ್ ಬಳಿ ನಡೆದಿದ್ದು ಮತ್ತೊಂದು ವಿಶೇಷ.

ಅಂದ್ಹಾಗೇ ''ಬಿಗ್ ಬಾಸ್'' ಮರಾಠಿಯ ಮನೆಯಲ್ಲಿದ್ದಾಗಲೇ ವಿಶಾಲ್ ತಮ್ಮ ಪ್ರೇಮ ಸಂಬಂಧದ ಕುರಿತು ಚರ್ಚೆ ಮಾಡಿದ್ದರು. ಆದರೆ, ಅಕ್ಷಯಾ ಅವರ ಹೆಸರನ್ನೇಳದೇ ಅವರನ್ನು ''ಸೌಂದರ್ಯ'' ಎಂದು ಕರೆದಿದ್ದರು. ಅಂದಿನಿಂದ ಇವರ ಅಭಿಮಾನಿಗಳು ಯಾರು ಈ ಸೌಂದರ್ಯ ಎಂದು ತಲೆಗೆ ಹುಳ ಬಿಟ್ಕೊಂಡಿದ್ದರು.
ಆ ನಂತರ ''ಬಿಗ್ ಬಾಸ್'' ಮನೆಯಲ್ಲಿ ವಿಶಾಲ್ ಅವರ ಆಪ್ತ ಸ್ನೇಹಿತನಾಗಿದ್ದ ವಿಕಾಸ್ ಪಾಟೀಲ್, ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಶಾಲ್ ನಿಕಮ್ ಅವರ ಸೌಂದರ್ಯ ಬೇರೆ ಯಾರು ಅಲ್ಲ ಬದಲಿಗೆ ಅಕ್ಷಯಾ ಹಿಂಡಾಲ್ಕರ್ ಎಂದು ಹೇಳಿದ್ದರು. ಇದಕ್ಕೆ ಪೂರಕವಾಗಿ ವಿಶಾಲ್ ನಿಕಮ್ ಮತ್ತು ಅಕ್ಷಯಾ ಆಗಾಗ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾದರು ಕೂಡ.
ಈ ಹಿನ್ನೆಲೆ ಹಲವರು ವಿಶಾಲ್ ನಿಕಮ್ ಅವರ ಸೌಂದರ್ಯ ಅಕ್ಷಯಾ ಹಿಂಡಾಲ್ಕರ್ ಅವರೇ ಎಂದುಕೊಂಡಿದ್ದರು. ಕೊನೆಗೂ ಈಗ ಅಭಿಮಾನಿಗಳು ಅಂದುಕೊಂಡಂತೆ ಆಗಿದೆ. ಸೌಂದರ್ಯ ರಹಸ್ಯ ಕೂಡ ಬಯಲಾಗಿದೆ.
ಇನ್ನುಳಿದಂತೆ ವಿಶಾಲ್ ನಿಕಮ್ ಮತ್ತು ಅಕ್ಷಯಾ ಹಿಂಡಾಲ್ಕರ್ 2019ರಲ್ಲಿ ''ಸಾಥ್ ಜನ್ಮಾಚಾ ಘಾತಿ'' ಎಂಬ ಧಾರಾವಾಹಿಯಲ್ಲಿ ಜೊತೆಯಾಗಿ ಅಭಿನಯಿಸಿದ್ದರು. ಯುವರಾಜ್ ಮತ್ತು ಶ್ರುತಿ ಪಾತ್ರಗಳನ್ನು ನಿರ್ವಹಿಸಿದ್ದರು. ಈ ಸಮಯದಲ್ಲಿಯೇ ಇವರಿಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಅಂದಿನಿಂದ ಇಂದಿನವರೆಗೆ ಕದ್ದು ಮುಚ್ಚಿ ಪ್ರೀತಿ ಮಾಡುತ್ತಾ ತಮ್ಮ ಸಂಬಂಧವನ್ನು ಗೌಪ್ಯವಾಗಿ ಇಟ್ಟಿದ್ದ ಇವರಿಬ್ಬರು ಇದೀಗ ಮದುವೆಯ ಬಂಧನಕ್ಕೊಳಗಾಗಿದ್ದಾರೆ. ಹೊಸ ಬದುಕಿಗೆ ಮುನ್ನುಡಿ ಬರೆದಿದ್ದಾರೆ. ಸದ್ಯ ಹಲವರು ಈ ನವಜೋಡಿಗೆ ಶುಭಾಶಯಗಳನ್ನು ಕೋರುತ್ತಿದ್ದಾರೆ.


Click it and Unblock the Notifications











