ಬಿಗ್‌ಬಾಸ್‌ಗೆ ಹೋದ ಐಶ್ವರ್ಯಾ ಸಿಂಧೋಗಿ; ಶಿವಗಾಮಿಯಾಗಿ ಬಂದ ಮಾನಸ ಮನೋಹರ್
ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳ ಪೈಕಿ 'ಶಾಂಭವಿ' ಯೂ ಒಂದು. ಸೂಪರ್ ನ್ಯಾಚುರಲ್ ಧಾರಾವಾಹಿ ಶಾಂಭವಿಯಲ್ಲಿ ನಾಯಕಿ ಶಿವಗಾಮಿ ಆಗಿ ಅಭಿನಯಿಸುತ್ತಿದ್ದ ಐಶ್ವರ್ಯಾ ಶಿಂಧೋಗಿ ಇದೀಗ ಬಿಗ್ ಬಾಸ್ ಮನೆಯಲ್ಲಿದ್ದಾರೆ. ಹೌದು, ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 11 ರ ಸ್ಪರ್ಧಿಯಾಗಿ ದೊಡ್ಮನೆಯೊಳಗೆ ಕಾಲಿಟ್ಟಿದ್ದಾರೆ ಐಶ್ವರ್ಯ ಶಿಂಧೋಗಿ. ಇದರ ಬೆನ್ನಲ್ಲೇ ಶಾಂಭವಿ ಪಾತ್ರದಲ್ಲಿ ಬದಲಾವಣೆಯೂ ಆಗಿದೆ.
ಶಾಂಭವಿ ಆಗಿ ಅಭಿನಯಿಸುತ್ತಿರುವ ಐಶ್ವರ್ಯಾ ಶಿಂಧೋಗಿ ಅವರು ಬಿಗ್ ಬಾಸ್ ಮನೆಯೊಳಗೆ ಹೋಗಿರುವ ಕಾರಣ ಇನ್ನು ಮುಂದೆ ಮಾನಸ ಮನೋಹರ್ ಅವರು ಶಿವಗಾಮಿಯಾಗಿ ಕಾಣಿಸಿಕೊಳ್ಳಲಿದ್ಡಾರೆ. ಅಂದ ಹಾಗೆ ಸದ್ಯ ಮಾನಸ ಮನೋಹರ್ ಅವರು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮಿ ನಿವಾಸ' ಧಾರಾವಾಹಿಯಲ್ಲಿ ನಾಯಕ ಸಿದ್ದೇಗೌಡರ ಅತ್ತಿಗೆ ಆಗಿ ಅಭಿನಯಿಸುತ್ತಿದ್ದಾರೆ.

ಅತಿಥಿ ಪಾತ್ರದ ಮೂಲಕ ಕಿರುತೆರೆಗೆ ಕಾಲಿಟ್ಟಿರುವ ಮಾನಸ ಮನೋಹರ್ ಮನೋ ನಟನೆಯ ಮೂಲಕ ವೀಕ್ಷಕರ ಮನ ಸೆಳೆದಿರುವ ಬೆಡಗಿ. 'ಅಶ್ವಿನಿ ನಕ್ಷತ್ರ' ಧಾರಾವಾಹಿಯಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಕಿರುತೆರೆಗೆ ಕಾಲಿಟ್ಟಿದ್ದ ಮಾನಸ ಮನೋಹರ್ ಎಂಬಿಎ ಪದವೀಧರೆ ಹೌದು. ತದ ನಂತರ 'ಶುಭವಿವಾಹ' ಧಾರಾವಾಹಿಯಲ್ಲಿ ಸಣ್ಣ ಪಾತ್ರದಲ್ಲಿ ನಟಿಸಿರುವ ಮಾನಸ ನಂತರ ನಟಿಸಿದ್ದು ಮೀರಾಳಾಗಿ.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಜೊತೆಜೊತೆಯಲಿ' ಧಾರಾವಾಹಿಯಲ್ಲಿ ನಾಯಕ ಆರ್ಯವರ್ಧನ್ ಪರ್ಸನಲ್ ಅಸಿಸ್ಟೆಂಟ್ ಮೀರಾಳಾಗಿ ಮಾನಸ ಮನೋಹರ್ ಅಭಿನಯಿಸಿದ್ದರು. ಅಂದ ಹಾಗೇ ಮೀರಾ ಪಾತ್ರ ಪಾಸಿಟಿವ್ ಮತ್ತು ನೆಗೆಟಿವ್ ಶೇಡ್ ಹೊಂದಿತ್ತು ಎಂಬುದು ವಿಶೇಷ. ಏಕಕಾಲಕ್ಕೆ ಎರಡು ರೀತಿಯ ಪಾತ್ರಗಳಿಗೆ ಜೀವ ತುಂಬಿ ಸೈ ಎನಿಸಿಕೊಂಡಿದ್ದರು ಮಾನಸ.
ತದ ನಂತರ ಭಕ್ತಿಪ್ರಧಾನ ಧಾರಾವಾಹಿ 'ಯಡಿಯೂರು ಶ್ರೀಸಿದ್ಧಲಿಂಗೇಶ್ವರ' ಧಾರಾವಾಹಿಯಲ್ಲಿಯೂ ಈಕೆ ಅಭಿನಯಿಸಿದ್ದು ಕಿರುತೆರೆ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. 'ಲಕ್ಷ್ಮಿನಿವಾಸ' ಧಾರಾವಾಹಿಯಲ್ಲಿ ನಟಿಸುತ್ತಿರುವ ಮಾನಸ ಮನೋಹರ್ ಅಲ್ಲೂ ಕೂಡಾ ನೆಗೆಟಿವ್ ಹಾಗೂ ಪಾಸಿಟಿವ್ ಪಾತ್ರಗಳಿಗೆ ಜೀವ ತುಂಬುತ್ತಿದ್ದಾರೆ.

ಇದರ ಜೊತೆಗೆ ಇದೀಗ ಶಿವಗಾಮಿಯಾಗಿ ವೀಕ್ಷಕರನ್ನು ರಂಜಿಸಲಿರುವ ಮಾನಸ ಮನೋಹರ್ 2014ರಲ್ಲಿ ನಡೆದ ಮಿಸ್ ಕರ್ನಾಟಕ ಸ್ಪರ್ಧೆಯಲ್ಲಿ 'ಮಿಸ್ ಕರ್ನಾಟಕ' ಪ್ರಶಸ್ತಿ ಪಡೆದ ಬೆಡಗಿ. ಗೌರೀಶ್ ಅಕ್ಕಿ ನಿರ್ದೇಶನದ 'ಸಿನಿಮಾ ಮೈ ಡಾರ್ಲಿಂಗ್' ಸಿನಿಮಾದಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿರುವ ಮಾನಸ ಮನೋಹರ್ ಸದ್ಯ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ.


Click it and Unblock the Notifications











