ತಮಿಳು ಶೋನಲ್ಲಿ ಶಿವಾನಿಗೆ ಕನ್ನಡ ಹಾಡು ಹಾಡುವ ಅವಕಾಶ ಸಿಕ್ಕಿದ್ದು ಶಾಕ್ ತಂದಿತ್ತು ಎಂದ ತಾಯಿ
ಕನ್ನಡ ಪ್ರತಿಭೆಗಳು ಬೇರೆ ರಾಜ್ಯ, ದೇಶಗಳಲ್ಲಿ ತಮ್ಮ ಪ್ರತಿಭೆಯ ಮೂಲಕ ಗುರ್ತಿಸಿಕೊಂಡಿದ್ದಾರೆ. ಜೀ ಕನ್ನಡ 'ಸರಿಗಮಪ ಲಿಟಲ್ ಚಾಂಪ್ಸ್' ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿ ಶಿವಾನಿ ನವೀನ್ ರನ್ನರ್ ಅಪ್ ಆಗಿದ್ದರು. ಇದೀಗ ಪರಭಾಷೆಯಲ್ಲಿ ಆಕೆ ಮ್ಯಾಜಿಕ್ ಮಾಡಿದ್ದಾರೆ. ತಮಿಳು ಸರಿಗಮಪ ಸೀಸನ್ -5ಕ್ಕೆ ಕನ್ನಡ ಹಾಡು ಹಾಡಿ ಆಯ್ಕೆ ಆಗಿದ್ದಾರೆ.
ಹೌದು ತಮಿಳು ಸರಿಗಮಪ ವೇದಿಕೆಯಲ್ಲಿ ಶಿವಾನಿ ನವೀನ್ 'ಸೋಜುಗದ ಸೂಜು ಮಲ್ಲಿಗೆ' ಹಾಡು ಹಾಡಿರುವ ವೀಡಿಯೋ ವೈರಲ್ ಆಗುತ್ತಿದೆ. ಶೋ ತೀರ್ಪುಗಾರರು ಎದ್ದು ನಿಂತು ಚಪ್ಪಾಳೆ ತಟ್ಟಿ ಶಿವಾಜಿ ಗಾಯನಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಬಹಳ ಅದ್ಭುತವಾಗಿ ಹಾಡು ಹಾಡಿ ಆಕೆ ಮೋಡಿ ಮಾಡಿದ್ದಾರೆ. ಸಹ ಸ್ಪರ್ಧಿಗಳು, ಸೆಟ್‌ನಲ್ಲಿದ್ದ ಸಂಗೀತ ಪ್ರೇಮಿಗಳು ಎದ್ದು ನಿಂತು ಸಂಭ್ರಮಿಸಿದ್ದಾರೆ. ಆ ವೀಡಿಯೋ ಸಖತ್ ವೈರಲ್ ಆಗುತ್ತಿದೆ.

ಈಗಾಗಲೇ ಕೆಲ ಆಲ್ಬಮ್ ಹಾಡುಗಳಿಗೆ ಶಿವಾನಿ ದನಿಯಾಗಿದ್ದಾರೆ. ಇನ್ನು ಮುಂದೆ ತಮಿಳು ಸಂಗೀತ ಪ್ರೇಮಿಗಳನ್ನು ತಮ್ಮ ಗಾಯನದ ಮೂಲಕ ಮಂತ್ರಮುಗ್ಧರನ್ನಾಗಿಸಲು ಸಜ್ಜಾಗಿದ್ದಾರೆ. ಈಗಾಗಲೇ ಶೋಗೆ ಆಡಿಷನ್ ಕೊಟ್ಟು ಆಯ್ಕೆ ಆಗಿದ್ದಾರೆ. ಮೆಗಾ ಆಡಿಷನ್‌ನಲ್ಲಿ ಮೊದಲು 'ವಾಗೈ ಸೂಡ ವಾ' ಚಿತ್ರದ 'ಪೋರಾನೆ ಪೋರಾನೆ' ಹಾಡನ್ನು ಆಕೆ ಹಾಡಿದ್ದರು. ಮೂವರು ತೀರ್ಪುಗಾರರು ಆಕೆಯನ್ನು ಆಯ್ಕೆ ಮಾಡಿದ್ದರು. ಆದರೆ ಕನ್ನಡ ಗಾಯಕ ವಿಜಯ ಪ್ರಕಾಶ್ ಆಯ್ಕೆ ಮಾಡದೇ ವೇಯ್ಟಿಂಗ್ ಲಿಸ್ಟ್‌ನಲ್ಲಿ ಕೂರಿಸಿದ್ದರು.
ಆಯ್ಕೆ ಆಗದೇ ಇದ್ದಿದ್ದಕ್ಕೆ ಶಿವಾನಿ ಬೇಸರಗೊಂಡಿದ್ದರು. ಬಳಿಕ ವಾಪಸ್ ಕರೆದು 'ಸೋಜುಗದ ಸೂಜು ಮಲ್ಲಿಗೆ' ಹಾಡು ಹಾಡಲು ವಿಜಯ್ ಪ್ರಕಾಶ್ ಹೇಳಿದ್ದರು. ಆಕೆಯ ಹಾಡು ಹಾಡಲು ಆರಂಭಿಸುತ್ತಿದ್ದಂತೆ ಇಡೀ ಸೆಟ್‌ನಲ್ಲಿ ಮಿಂಚಿನ ಸಂಚಲನವಾಗಿತ್ತು. ಅದರಲ್ಲೂ ಹೈ ನೋಟ್ಸ್ ಹಾಡಿದಾಗ ತೀರ್ಪುಗಾರರು ಹುಬ್ಬೇರಿಸಿದ್ದರು. ನಿರೂಪಕಿ ಬಂದು ಅಪ್ಪಿಕೊಂಡರು. ಬಳಿಕ ಶೋಗೆ ಆಯ್ಕೆ ಆಗಿರುವ ವಿಚಾರ ಗೊತ್ತಾಗುತ್ತಿದ್ದಂತೆ ಶಿವಾನಿ ಹಾಗೂ ಆಕೆಯ ಪೋಷಕರು ಭಾವುಕರಾಗಿದ್ದರು.
ಶಿವಾನಿಯ ಗಾಯನದ ಶಕ್ತಿ ಎಂಥದ್ದು ಎಂದು ಈ ವೇದಿಕೆಯಲ್ಲಿ ಎಲ್ಲರಿಗೂ ಕೇಳಿಸಬೇಕಿತ್ತು. ಹಾಗಾಗಿ ಇಂತಹ ಟ್ವಿಸ್ಟ್ ಕೊಟ್ಟೆ ಎಂದು ವಿಜಯ್ ಪ್ರಕಾಶ್ ಹೇಳಿದ್ದಾರೆ. ಮೇ 24ರಿಂದ ಸರಿಗಮಪ ತಮಿಳು ಸೀಸನ್ 5 ಆರಂಭವಾಗಿದೆ. ಮುಂದೆ ತಮಿಳು ಗೀತೆಗಳನ್ನು ಹಾಡಿ ಶಿವಾಜಿ ಸ್ಪರ್ಧೆಯಲ್ಲಿ ಸದ್ದು ಮಾಡಲು ಸಜ್ಜಾಗಿದ್ದಾರೆ. ತಮಿಳು ವೇದಿಕೆಯಲ್ಲಿ ಕನ್ನಡ ಹಾಡು ಹಾಡುವ ಅವಕಾಶ ಸಿಕ್ಕಿದ್ದಕ್ಕೆ ಗಾಯಕಿ ಶಿವಾನಿ ಅವರ ತಾಯಿ ಸಂಜನಾ ಸಂತಸ ವ್ಯಕ್ತಪಡಿಸಿದ್ದಾರೆ.
ಹೀಗೆ ತಮಿಳು ವೇದಿಕೆಯಲ್ಲಿ ಶಿವಾನಿಗೆ ಕನ್ನಡ ಹಾಡು ಹಾಡುವ ಅವಕಾಶ ಸಿಕ್ಕಿದ್ದು ಕನ್ನಡಿಗರಿಗೂ ಅಚ್ಚರಿ ತಂದಿದೆ. ಈ ಬಗ್ಗೆ ಫಿಲ್ಮಿಬೀಟ್ ಕನ್ನಡ ಶಿವಾನಿ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿತು. ಶೋ ನಿಯಮದ ಪ್ರಕಾರ ಸದ್ಯಕ್ಕೆ ಶಿವಾನಿ ಏನು ಮಾತನಾಡುವಂತಿಲ್ಲ ಎಂದು ಆಕೆಯ ತಾಯಿ ಸಂಜನಾ ತಿಳಿಸಿದ್ದಾರೆ. "ಇಂತಹ ಅವಕಾಶ ಸಿಕ್ಕಿದ್ದು ನಿಜಕ್ಕೂ ನಮಗೆ ಶಾಕ್ ತಂದಿತ್ತು. ತಮಿಳು ವೇದಿಕೆಯಲ್ಲಿ ಶಿವಾನಿ ಕನ್ನಡ ಹಾಡು ಹಾಡಿದ್ದು, ಅದಕ್ಕೆ ಸಿಕ್ಕ ಪ್ರತಿಕ್ರಿಯೆ. ಆಕೆ ಆಯ್ಕೆ ಆಗಿದ್ದು ನಿಜಕ್ಕೂ ಕಣ್ಣಲ್ಲಿ ನೀರು ತರಿಸಿತ್ತು. ಸದ್ಯಕ್ಕೆ ಇಷ್ಟು ಮಾತ್ರ ಹೇಳಲು ಸಾಧ್ಯ" ಎಂದು ಸಂಜನಾ ನವೀನ್ ಹೇಳಿದ್ದಾರೆ.


Click it and Unblock the Notifications











