ಡಿಕೆಡಿ ಪ್ರೀತಂ ಅನ್ನು ದತ್ತು ಪಡೆದ ಶಿವಣ್ಣ-ಗೀತಕ್ಕ; ವೈರಲ್ ಆಗ್ತಿದೆ ಸೆಂಚುರಿ ಸ್ಟಾರ್ ವಿಡಿಯೋ
ಜೀ ಕನ್ನಡ ರಿಯಾಲಿಟಿ ಶೋ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಇತ್ತೀಚೆಗಷ್ಟೇ ಮುಕ್ತಾಯಗೊಂಡಿದೆ. ಇಷ್ಟು ದಿನ ವೇದಿಕೆ ಮೇಲೆ ಸ್ಪರ್ಧಿಗಳು ಡ್ಯಾನ್ಸ್‌ನಿಂದ ಗಮನ ಸೆಳೆದಿದ್ದರು. ಕಿರುತೆರೆ ವೀಕ್ಷಕರನ್ನು ರಂಜಿಸಿದ್ದರು. ವೇದಿಕೆ ಮೇಲೆ ಹೆಜ್ಜೆ ಹಾಕುತ್ತಿರುವ ಸ್ಪರ್ಧಿಗಳ ಅದ್ಭುತ ಡ್ಯಾನ್ಸ್ ಪರ್ಫಾಮೆನ್ಸ್‌ಗೆ ವೀಕ್ಷಕರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದರು.
'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್'ನ ಈ ಸೀಸನ್‌ನಲ್ಲಿ ವಿಶೇಷವಾಗಿ ಗಮನ ಸೆಳೆದಿದ್ದು ಬಾಲಕ ಪ್ರೀತಂ. ಇಡೀ ಶೋ ಮುಗಿಯುವರೆಗೂ ಶಿವರಾಜ್‌ಕುಮಾರ್ ಹಾಗೂ ಪ್ರೀತಂ ಬಾಂಧವ್ಯ ಗಮನ ಸೆಳೆದಿತ್ತು. ಶಿವಣ್ಣ ಅಷ್ಟೇ ಅಲ್ಲ ಪತ್ನಿ ಗೀತಾ ಶಿವರಾಜ್‌ಕುಮಾರ್ ಕೂಡ ಪ್ರೀತಂ ಅನ್ನು ಇಷ್ಟ ಪಟ್ಟಿದ್ದರು. ಡಿಕೆಡಿ ಗ್ರ್ಯಾಂಡ್ ಫಿನಾಲೆ ಮುಗಿಯುವ ವೇಳೆ ವೇದಿಕೆ ಮೇಲೆ ಪ್ರೀತಂ ಜೊತೆಗಿನ ಬಾಂಧವ್ಯವನ್ನು ಮುಂದುವರೆಸಿದ್ದಾರೆ.

ಪ್ರೀತಂ ಹಾವ-ಭಾವಗಳನ್ನು, ಅವನು ಆಡುವ ಮಾತುಗಳನ್ನು ಶಿವಣ್ಣ ಹಾಗೂ ಗೀತಾ ಶಿವರಾಜ್‌ಕುಮಾರ್ ಎಂಜಾಯ್ ಮಾಡುತ್ತಿದ್ದರು. ಈಗ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ರಿಯಾಲಿಟಿ ಶೋ ಮುಕ್ತಾಯ ಈ ಸಮಯದಲ್ಲಿ ಶಿವಣ್ಣ ಹಾಗೂ ಗೀತಕ್ಕ ಇಬ್ಬರೂ ಒಂದು ಖಡಕ್ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಪ್ರೀತಂನನ್ನು ದತ್ತು ತೆಗೆದುಕೊಳ್ಳುವ ನಿರ್ಧಾರ ಮಾಡಿದ್ದಾರೆ. ಆ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಫಿನಾಲೆ ಎಷ್ಟು ಎನರ್ಜೆಟಿಕ್ ಆಗಿತ್ತೋ ಅಷ್ಟೇ ಎಮೋಷನಲ್ ಆಗಿತ್ತು. ಪುಟ್ಟ ಬಾಲಕ ಪ್ರೀತಂ ಮುಗ್ಧತೆಗೆ ಕಿರುತೆರೆ ವೀಕ್ಷಕರಷ್ಟೇ ಅಲ್ಲ. ಡಿಕೆಡಿಯ ಸ್ಪರ್ಧಿಗಳು ಕೂಡ ಫಿದಾ ಆಗಿದ್ದರು. ಅವನ ಪ್ರತಿಯೊಂದು ಹೆಜ್ಜೆಯನ್ನೂ ಎಂಜಾಯ್ ಮಾಡಿದ್ದರು. ಅದರಲ್ಲೂ ಶಿವಣ್ಣ ಅಂತೂ ಪ್ರೀತಂ ಜೊತೆ ಕಳೆದ ಪ್ರತಿಯೊಂದು ಕ್ಷಣವನ್ನು ಎಂಜಾಯ್ ಮಾಡಿದ್ದರು. ಈ ಹಿಂದೆ ಕೂಡ ಶಿವಣ್ಣ ಹಾಗೂ ಪ್ರೀತಂ ಅವರ ವಿಡಿಯೋಗಳು ವೈರಲ್ ಆಗಿದ್ದವು.
ಹೀಗಾಗಿ ಡಿಕೆಡಿ ಗ್ರ್ಯಾಂಡ್ ಫಿನಾಲೆಯಲ್ಲಿ ಶಿವಣ್ಣ ಪ್ರೀತಂ ಅನ್ನು ದತ್ತು ತೆಗೆದುಕೊಳ್ಳುವುದಕ್ಕೆ ನಿರ್ಧರಿಸಿದ್ದಾರೆ. ಆ ವೇದಿಕೆ ಮೇಲೆ ಶಿವಣ್ಣ ಹೇಳಿದ ಮಾತುಗಳು ಹೀಗಿವೆ. "ಇವನು ಸ್ಪೆಷಲ್ ಚೈಲ್ಡ್ ಯಾವಾಗಲೂ ಜೊತೆಯಲ್ಲಿಯೇ ಇರುತ್ತಾನೆ. ದೇವರು ಎಲ್ಲಿವರೆಗೂ ಶಕ್ತಿ ಕೊಡುತ್ತಾನೋ ಅಲ್ಲಿವರೆಗೂ ಪ್ರೀತಂ ನನಗೆ ಹಾಗೂ ಗೀತಾ ಸೇರಿದವನು. ಅವನ ಫ್ಯಾಮಿಲಿ ಆಗಲಿ, ಅವನ ಇಬ್ಬರು ಸಹೋದರರು ಇದ್ದಾರೆ. ಅವರೆಲ್ಲರನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಎಂದು ನಿರ್ಧಾರ ಮಾಡಿದ್ದೀನಿ." ಎಂದು ಹೇಳಿದ್ದಾರೆ.
ಹಾಗೇ ಪ್ರೀತಂ ಅಲ್ಲಿ ಅಪ್ಪಾಜಿಯನ್ನು ಕಂಡಿದ್ದಾರೆ ಶಿವಣ್ಣ. "ಈ ಸೀಸನ್‌ನಲ್ಲಿ ನನಗೆ ಪ್ರೀತಂ ರೂಪದಲ್ಲಿ ಒಬ್ಬರು ದೇವರ ರೂಪದಲ್ಲಿ ಬಂದಿರೋದು ನಮ್ಮ ಪುಣ್ಯ ಅಂತ ಭಾವಿಸುತ್ತೇವೆ. ನನಗಷ್ಟೇ ಅಲ್ಲ, ನಮ್ಮ ಎಲ್ಲ ಸ್ಪರ್ಧಿಗಳಿಗೂ ಪ್ರೀತಂ ಅಂದರೆ ಪ್ರಾಣ. ಅವನು ಎಲ್ಲೋ ಒಂದು ಕಡೆ ಪವರ್ ತರುತ್ತಾನೆ. ಏನು ಅಂತ ಗೊತ್ತಿಲ್ಲ. ಅವನ ಹತ್ತಿರ ಏನೋ ಒಂದು ವಿಷಯವಿದೆ. ಎಲ್ಲೋ ಒಂದು ಕಡೆ ಒಂದೆರಡು ನಿಮಿಷ ಅಪ್ಪಾಜಿ ಮೈಮೇಲೆ ಬಂದು ಹೋಗಿರಬೇಕು. ಅದಕ್ಕೆ ಆ ಪ್ರೀತಿಯನ್ನು ಅಷ್ಟು ಈಸಿಯಾಗಿ ಸಾರುತ್ತಿದ್ದಾನೆ. ಪ್ರೀತಂ ಲವ್ ಯು.. ಲವ್ ಯು.. ಲವ್ ಯು.." ಎಂದು ಶಿವಣ್ಣ ಹೇಳಿದ್ದಾರೆ.
ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಹಿಂದೆ ಕೂಡ ಪ್ರೀತಂ ಡ್ಯಾನ್ಸ್‌ಗೆ ಎದ್ದು ಚಪ್ಪಾಳೆ ತಟ್ಟಿದ್ದ ಶಿವಣ್ಣನ ವಿಡಿಯೋ ವೈರಲ್ ಆಗಿತ್ತು. ಹಾಗೇ ಶಿವಣ್ಣನ ತೋಳಿನಲ್ಲಿ ಪ್ರೀತಂ ನಿದ್ದೆ ಮಾಡಿದ್ದ ವಿಡಿಯೋ ಕೂಡ ಮೆಚ್ಚುಗೆ ಪಡೆದಿತ್ತು. ಶಿವಣ್ಣ ಹಾಗೂ ಗೀತಾ ಶಿವರಾಜ್‌ಕುಮಾರ್ ಇಬ್ಬರ ಈ ನಡೆಯನ್ನು ಮೆಚ್ಚಿಕೊಂಡಿದ್ದಾರೆ. ಪ್ರೀತಂ ಅಷ್ಟೇ ಅಲ್ಲದೆ, ಅವನ ಇಬ್ಬರು ಸಹೋದರರ ಜವಾಬ್ದಾರಿಯನ್ನು ನೋಡಿಕೊಳ್ಳುವುದಕ್ಕೆ ಮುಂದೆ ಬಂದಿಕ್ಕೆ ಭೇಷ್ ಎಂದಿದ್ದಾರೆ.


Click it and Unblock the Notifications















