ಕಿರುತೆರೆಯಲ್ಲಿ ಶಿವಣ್ಣ ಅಂದರ್ ಬಾಹರ್ ಬಿಡುಗಡೆ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಮನೆಮಂದಿಯಲ್ಲಾ ಕುಳಿತು ನೋಡಬಹುದಾದ 'ಅಂದರ್ ಬಾಹರ್' ಚಿತ್ರ ಇದೇ ಮೊಟ್ಟ ಮೊದಲ ಬಾರಿಗೆ ಕಿರುತೆರೆಯಲ್ಲಿ ಬಿಡುಗಡೆಯಾಗುತ್ತಿದೆ. ಶಿವಣ್ಣ ಅಭಿನಯದ ಅಮೋಘ ಚಿತ್ರಗಳಲ್ಲಿ ಇದೂ ಒಂದಾಗಿರುವುದು ವಿಶೇಷ.
ಸ್ಟಾರ್ ನೆಟ್ ವರ್ಕ್ ನ ಸುವರ್ಣ ವಾಹಿನಿಯಲ್ಲಿ ಇದೇ ಭಾನುವಾರ (ಅ.20) ರಂದು ಸಂಜೆ 6ಕ್ಕೆ ಚಿತ್ರವನ್ನು ವೀಕ್ಷಿಸಬಹುದು. ಅಂದರ್ ಬಾಹರ್ ಚಿತ್ರ ಬಿಡುಗಡೆಯಾಗಿ ಆರು ತಿಂಗಳು ಕಳೆದಿದೆ. ಈಗ ಕಿರುತೆರೆಗೆ ಲಗ್ಗೆ ಹಾಕುವ ಮೂಲಕ ಮತ್ತೊಮ್ಮೆ ಅಭಿಮಾನಿಗಳಿಗೆ ವೀಕ್ಷಿಸುವ ಅವಕಾಶ ಸಿಗುತ್ತಿದೆ.
ಈ ಸದಭಿರುಚಿಯ ಚಿತ್ರ ಉತ್ತಮ ವಿಮರ್ಶೆಗೂ ಪಾತ್ರವಾಗಿದೆ. ಶಿವಣ್ಣನ ಜೊತೆ ಪಾರ್ವತಿ ಮೆನನ್ ಅಭಿನಯಿಸಿದ್ದು ತಾರಾಬಳಗದಲ್ಲಿ ಶಶಿಕುಮಾರ್, ಶ್ರೀನಾಥ್, ಅರುಂಧತಿ ನಾಗ್, ಸೃಜನ್ ಲೋಕೇಶ್, ರಘು ರಾಮ್, ಜೋಶ್ವಾ ಮುಂತಾದವರಿದ್ದಾರೆ. [ಅಂದರ್ ಬಾಹರ್ ಚಿತ್ರ್ ವಿಮರ್ಶೆ]ಈ ಹಿಂದೆ ಜೋಗಿ ಚಿತ್ರದಲ್ಲಿ ಶಿವಣ್ಣನಿಗೆ ತಾಯಿಯಾಗಿ ಅಮೋಘ ಅಭಿನಯ ನೀಡಿದ್ದ ಅರುಂಧತಿ ನಾಗ್ ಚಿತ್ರದಲ್ಲಿ ಶಿವಣ್ಣನಿಗೆ ಅಮ್ಮನಾಗಿ ಅಂದರ್ ಬಾಹರ್ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇಲ್ಲೂ ಅಂಡರ್ ವರ್ಲ್ಡ್ ಹಿನ್ನೆಲೆಯೇ ಚಿತ್ರದ ಕಥಾ ಹಂದರ.
ಬರೀ ಮಚ್ಚು ಕೊಚ್ಚು ಹೊಡಿ ಬಡಿ ಸನ್ನಿವೇಶಗಳಷ್ಟೇ ಅಲ್ಲ. ಇಲ್ಲಿ ಕೌಟುಂಬಿಕ ಮೌಲ್ಯಗಳಿಗೂ ಸ್ಥಾನ ನೀಡಲಾಗಿದೆ. ಸೆಂಟಿಮೆಂಟ್, ಪ್ರೀತಿ ಪ್ರೇಮ ಅನುರಾಗ ಅನುಕಂಪ ಎಲ್ಲವೂ ಇವೆ. ವರನಟ ಡಾ.ರಾಜ್ ಕುಮಾರ್ ಅವರ ಆರು ಮಂದಿ ಕಟ್ಟಾ ಅಭಿಮಾನಿಗಳು ನಿರ್ಮಿಸಿರುವ ಚಿತ್ರವಿದು. (ಒನ್ಇಂಡಿಯಾ ಕನ್ನಡ)


Click it and Unblock the Notifications












