ಬಿಗ್ ಬಾಸ್ ಗೆದ್ದ ಚೆಲುವೆಗೆ ಗೋಮಾಂಸ ತಿನ್ನುವಂತೆ ಒತ್ತಾಯ ಮಾಡಿದ ನಟ ; ಭುಗಿಲೆದ್ದ ಆಕ್ರೋಶ
ಭಾರತ ಜಾತ್ಯತೀತ ರಾಷ್ಟ್ರ. ಇಲ್ಲಿಯ ಸಂಸ್ಕೃತಿ ಪ್ರಪಂಚಕ್ಕೆ ಮಾದರಿ. ಹಲವು ಭಾಷೆ, ಜಾತಿಗಳಿಂದ ಕೂಡಿದ್ದರೂ ಏಕತೆ ಸಾಧಿಸಿದ ದೇಶ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ಈ ದೇಶದಲ್ಲಿ ಆಹಾರ ಕೇವಲ ಆಹಾರವಲ್ಲ. ಅದೊಂದು ಭಾವನೆ. ಧರ್ಮ ಮತ್ತು ಸಂಪ್ರದಾಯದ ಜೊತೆ ಬೆಸೆದುಕೊಂಡಿರುವ ಸೂಕ್ಷ್ಮ ವಿಚಾರ. ಇಲ್ಲಿ ಒಬ್ಬರ ಪಾಲಿಗೆ ಪವಿತ್ರವಾದ ವಿಚಾರ ಮತ್ತೊಬ್ಬರ ಪಾಲಿಗೆ ಜೀವನ ಕ್ರಮ. ಈ ವೈವಿಧ್ಯತೆಯೇ ಭಾರತದ ಪ್ರಜಾಪ್ರಭುತ್ವದ ಶಕ್ತಿಯೂ ಹೌದು.
'
ಆದರೆ ಇದೇ ವಿಚಾರ ಹಲವು ಬಾರಿ ಸಂಘರ್ಷಕ್ಕೂ ಕಾರಣವಾಗಿದೆ.ಯಾಕೆಂದರೆ ಭಾರತದಲ್ಲಿ ಆಹಾರದ ಆಯ್ಕೆಯು ಕೇವಲ ವೈಯಕ್ತಿಕ ಹಕ್ಕಲ್ಲ, ಅದು ಆಗಾಗ ರಾಜಕೀಯ ಬಣ್ಣವನ್ನೂ ಪಡೆದುಕೊಳ್ಳುತ್ತದೆ. ಅದರಲ್ಲೂ ವಿಶೇಷವಾಗಿ ಗೋಮಾಂಸದ ವಿಚಾರ ಬಂದಾಗ, ದೇಶದ ವಿವಿಧ ರಾಜ್ಯಗಳಲ್ಲಿ ಭಿನ್ನಾಭಿಪ್ರಾಯ ಭುಗಿಲೇಳುತ್ತವೆ. ಚರ್ಚೆಗಳು ತೀವೃಗೊಳ್ಳುತ್ತವೆ.

ಇದಕ್ಕೆ ಕೈಗನ್ನಡಿ ಎಂಬಂತೆ ದೇಶದಲ್ಲಿ ಗೋವುಗಳ ರಕ್ಷಣೆಗೆ ಗೋ ಹತ್ಯೆ ನಿಷೇಧ ಕಾಯ್ದೆ ತರಬೇಕು.ಕಸಾಯಿ ಖಾನೆಗಳನ್ನು ಮುಚ್ಚಿಸಬೇಕು ಎನ್ನುವ ಕೂಗು ಹಿಂದು ಸಂಘಟನೆಗಳಿಂದ ಆಗಾಗ ಕೇಳಿ ಬರುತ್ತಲೇ ಇರುತ್ತೆ. ದೇಶದ ಕೆಲ ರಾಜ್ಯಗಳಲ್ಲಿ ಗೋ ಹತ್ಯೆ ನಿಷೇಧವನ್ನು ಮಾಡಲಾಗಿದೆ ಕೂಡ. ವಿಪರ್ಯಾಸ ಅಂದರೆ ಆದಾಗ್ಯೂ ದನದ ಮಾಂಸ ರಫ್ತಿನಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ.
2024-25ರಲ್ಲಿ ಸುಮಾರು 3.9 ಶತಕೋಟಿ ಡಾಲರ್ ಮೌಲ್ಯದ ಮಾಂಸವನ್ನು ಭಾರತ ರಫ್ತು ಮಾಡಿದೆ. ಇನ್ನು ಕೇರಳದ ವಿಚಾರಕ್ಕೆ ಬಂದರೆ ಕೇರಳದಲ್ಲಿ ಗೋಮಾಂಸ ಸೇವನೆ ಸಾಮಾನ್ಯ. ಧರ್ಮದ ಭೇದ ಭಾವ ಇಲ್ಲದೆ ಇಲ್ಲಿ ಎಲ್ಲರು ಗೋಮಾಂಸ ತಿನ್ನುತ್ತಾರೆ. ಹಾಗಂಥ ಎಲ್ಲರೂ ಇಲ್ಲಿ ತಿನ್ನುವುದಿಲ್ಲ. ತಿನ್ನಲೇಬೇಕು ಎಂಬ ನಿಯಮವೂ ಇಲ್ಲ. ಯಾಕೆಂದರೆ ಆಹಾರ ಅವರವರ ಆಯ್ಕೆ. ಸದ್ಯ ಈ ಆಹಾರದ ಆಯ್ಕೆ ಮತ್ತೊಮ್ಮೆ ಚರ್ಚೆಗೆ ಮುನ್ನುಡಿಯನ್ನು ಬರೆದಿದೆ.
ಹೌದು, ಅಸಲಿಗೆ ''ಬಿಗ್ ಬಾಸ್'' ಮಲಯಾಳಂನ 7ನೇ ಸೀಸನ್‌ನ ವಿನ್ನರ್ ಅನುಮೋಲ್ ಅನುಕುಟ್ಟಿ ತಮ್ಮ ಆಪ್ತ ಸ್ನೇಹಿತ ಮತ್ತು ''ಬಿಗ್ ಬಾಸ್ 1''ರ ಸ್ಫರ್ಧಿ ಶಿಯಾಸ್ ಕರೀಮ್ ಜೊತೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು.
ಮೇಲ್ನೋಟಕ್ಕೆ ಮದುವೆ ಸಮಾರಂಭದಂತೆ ಕಾಣಿಸುವ ಈ ಕಾರ್ಯಕ್ರಮದಲ್ಲಿ ಶಿಯಾಸ್ ಕರೀಮ್ ಅವರು ಅನುಮೋಲ್ ಗೆ ದನದ ಮಾಂಸವನ್ನು ತಿನ್ನುವಂತೆ ಪದೇ ಪದೇ ಒತ್ತಾಯಿಸಿದ್ದಾರೆ. ಅನುಮೋಲ್ ನಿರಾಕರಿಸಿದರೂ ಶಿಯಾಸ್ ಪ್ಲೇಟ್‌ನ ಹತ್ತಿರಕ್ಕೆ ತೆಗೆದುಕೊಂಡು ಹೋಗಲು ಮುಂದಾಗುತ್ತಾರೆ. ಇಷ್ಟಕ್ಕೆ ಸುಮ್ಮನಾಗದ ಶಿಯಾಸ್ ಕರೀಮ್ ನೀನೇನು ಬಿಜೆಪಿ ಬೆಂಬಲಿಗಳಾ? ಎಂದು ವ್ಯಂಗ್ಯವಾಗಿ ಪ್ರಶ್ನೆಯನ್ನು ಕೂಡ ಕೇಳಿದ್ದಾರೆ.

ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಶಿಯಾಸ್ ಬಿಜೆಪಿ ಪಕ್ಷದ ಹೆಸರು ತೆಗೆದುಕೊಂಡ ಹಿನ್ನೆಲೆ ವಿವಾದ ಗಂಭೀರವಾದ ಸ್ವರೂಪವನ್ನು ಕೂಡ ಪಡೆದಿದೆ. ಹಲವರು ಸದ್ಯ ಶಿಯಾಸ್ ಕರೀಮ್ ಅವರ ವಿರುದ್ಧ ಕಿಡಿ ಕಾರುತ್ತಿದ್ದಾರೆ. ಆಹಾರದ ಆಯ್ಕೆಯ ಆಧಾರದ ಮೇಲೆ ಒಬ್ಬರ ರಾಜಕೀಯ ನಿಲುವನ್ನು ನಿರ್ಧರಿಸುವುದು ಅಥವಾ ವ್ಯಂಗ್ಯ ಮಾಡುವುದು ಎಷ್ಟು ಸರಿ ಎಂಬ ಪ್ರಶ್ನೆಯನ್ನು ಕೂಡ ಕೇಳುತ್ತಿದ್ದಾರೆ. "ದಿ ಕೇರಳ ಸ್ಟೋರಿ" ಹ್ಯಾಶ್‌ಟ್ಯಾಗ್‌ನೊಂದಿಗೆ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಸದ್ದು ಮಾಡುತ್ತಿದೆ.
ಇನ್ನೊಂದೆಡೆ ಅನುಮೋಲ್ ದನದ ಮಾಂಸವನ್ನು ಬೇಯಿಸುತ್ತಿರುವ, ತಿನ್ನುತ್ತಿರುವ ಹಳೆಯ ವಿಡಿಯೋಗಳನ್ನು ಕೂಡ ಕೆಲವರು ಹಂಚಿಕೊಳ್ಳುತ್ತಿದ್ದು ಮೊದಲಿಂದ ಅನುಮೋಲ್ ದನದ ಮಾಂಸ ತಿನ್ನುತ್ತಾ ಬಂದಿದ್ದಾರೆ. ಈ ವಿಚಾರ ಗೊತ್ತಿದ್ದೇ ಶಿಯಾಸ್ ಕರೀಮ್ ಅವರಿಗೆ ಮಾಂಸ ತಿನ್ನುವಂತೆ ಹೇಳಿದ್ದಾರೆಯೇ ಹೊರತು ಒತ್ತಾಯ ಮಾಡಿಲ್ಲ ಎಂಬ ವಾದವನ್ನು ಕೂಡ ಮಾಡುತ್ತಿದ್ಧಾರೆ.
ಸದ್ಯ ತಮ್ಮ ಈ ವೈರಲ್ ವಿಡಿಯೋ ಮತ್ತು ಅದರ ಸುತ್ತ ನಡೆಯುತ್ತಿರುವ ಚರ್ಚೆಗೆ ಶಿಯಾಸ್ ಕರೀಮ್ ಅವರಾಗಲಿ ಅಥವಾ ಅನುಮೋಲ್ ಅವರಾಗಲಿ ಪ್ರತಿಕ್ರಿಯೆಯನ್ನು ನೀಡಿಲ್ಲ. ಇನ್ನುಳಿದಂತೆ ಶಿಯಾಸ ಕರೀಮ್ ಹಿಂದೆ 2023ರಲ್ಲಿ ಅ*ತ್ಯಾಚಾರ ಮತ್ತು ವಂಚನೆಯ ಪ್ರಕರಣದಲ್ಲಿ ಬಂಧಿಯಾಗಿದ್ದರು. ಅವರ ಜಿಮ್‌ನಲ್ಲಿ ಕೆಲಸ ಮಾಡುತ್ತಿದ್ದ ತರಬೇತುದಾರರೊಬ್ಬರು ಶಿಯಾಸ ವಿರುದ್ಧ ಗಂಭೀರ ಆರೋಪ ಮಾಡಿದ್ದರು. 2021ರಿಂದ ಮದುವೆಯ ಭರವಸೆ ನೀಡಿ ಹಲವಾರು ಬಾರಿ ಲೈಂ*ಗಿಕ ಶೋಷಣೆ ಮಾಡಿದ್ದಾರೆ ಎಂದು ಅವರು ತಮ್ಮ ಆರೋಪದಲ್ಲಿ ವಿವರಿಸಿದ್ದರು. ಬಂಧನದ ನಂತರ ಅವರಿಗೆ ಜಾಮೀನು ಸಿಕ್ಕಿತ್ತು. ಈ ವಿಚಾರ ಕೇರಳದಲ್ಲಿ ಸದ್ದು ಮಾಡಿತ್ತು.


Click it and Unblock the Notifications