ಗೇಮ್ ಓವರ್ ; ಕೇವಲ 3.31% ವೋಟ್ ಪಡೆದು ಬಿಗ್ ಬಾಸ್ ಮನೆಯಿಂದ ಹೊರ ಬಂದ ವೈಲ್ಡ್ ಕಾರ್ಡ್ ಸ್ಫರ್ಧಿ
''ಬಿಗ್ ಬಾಸ್'' ಮನೆಗೆ ಪ್ರತಿ ವರ್ಷ ಹಲವರು ಅತ್ಯುತ್ಸಾಹದಿಂದ ಹೋಗುತ್ತಾರೆ. ಮನೆಯೊಳಗೆ ತೆರಳುವ ಮುನ್ನ ವೇದಿಕೆಯಲ್ಲಿ ಮಾತನಾಡುವಾಗ ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸುತ್ತಾರೆ. ಮನೆಯಲ್ಲಿ ನಡೆಯುವ ರಂಪ-ರಾಮಾಯಣದಲ್ಲಿ ಕೂಡ ಭಾಗವಹಿಸುತ್ತಾರೆ. ಮನೆಯಲ್ಲಿ ಸ್ಫರ್ಧಿಗಳ ನಡುವೆ ಬೆಂಕಿಯನ್ನು ಕೂಡ ಹಚ್ಚುವುದರಲ್ಲಿ ಮುಂದಿರುತ್ತಾರೆ. ಆದರೆ.. ಮನೆಯೊಳಗೆ ಹೋದ ಸ್ಫರ್ಧಿಗಳಲ್ಲಿ ಪ್ರತಿವಾರ ಯಾರಾದರೂ ಒಬ್ಬರು ಮನೆ ಹೊರಗಡೆ ಬರಲೇಬೇಕು. ಅದೇ ನಿಯಮ.
ಹೀಗಾಗಿಯೇ ಪ್ರತಿ ವಾರ ಜೊಳ್ಳುಗಳನ್ನ ಉದುರಿಸಿ ಗಟ್ಟಿ ಕಾಳು ಉಳಿಸಿಕೊಳ್ಳಲು ''ಬಿಗ್ ಬಾಸ್'' ಜರಡಿ ಹಿಡಿಯುತ್ತೆ. ಒಬ್ಬರನ್ನು ಮನೆಯ ಹೊರಗೆ ದಬ್ಬಲಾಗುತ್ತೆ. ಹೀಗೆ ಪಕ್ಕದ ಆಂಧ್ರದ ಬಿಗ್ ಬಾಸ್ ಮನೆಯಿಂದ ಈ ವಾರ ರಮ್ಯಾ ಮೋಕ್ಷ ಹೊರಗಡೆ ಬಂದಿದ್ದಾರೆ.

ಹೌದು, ರಮ್ಯಾ ಮೋಕ್ಷ. ಚಿಟ್ಟಿ ಪಿಕಲ್ಸ್ ರಮ್ಯಾ ಎಂದೇ ಹೈದರಾಬಾದ್‌ನಲ್ಲಿ ಜನಜನಿತರಾದ ಚೆಲುವೆ. ತಮ್ಮ ಸಹೋದರಿಯರ ಜೊತೆ ಸೇರಿ ಉಪ್ಪಿನಕಾಯಿ ಮಾರುತ್ತಲೇ ಮಾಡೆಲಿಂಗ್ ಕ್ಷೇತ್ರದಲ್ಲಿ ಕೂಡ ಮಿಂಚಿದ ರಮ್ಯಾ ''ವಚಿನವಾಡು ಗೌತಮ್'' ಚಿತ್ರದ ಮೂಲಕ ಚಿತ್ರರಂಗವನ್ನು ಕೂಡ ಪ್ರವೇಶಿಸಿದ್ದರು.
ಇಂಥಾ ರಮ್ಯಾ ಮೋಕ್ಷ ಈ ಬಾರಿ ''ಬಿಗ್ ಬಾಸ್'' ಮನೆಯನ್ನು ವೈಲ್ಡ್ ಕಾರ್ಡ್ ಮೂಲಕ ಪ್ರವೇಶ ಮಾಡಿದ್ದರು. ಗೆಲ್ಲುವ ವಿಶ್ವಾಸವನ್ನು ಕೂಡ ವ್ಯಕ್ತಪಡಿಸಿದ್ದರು. ಆದರೆ. ದುರಾದೃಷ್ಟವಶಾತ್. ಇವರ ಆಟ ಮನೆ ಪ್ರವೇಶಿಸಿದ ಎರಡೇ ವಾರಕ್ಕೆ ಮುಕ್ತಾಯವಾಗಿದೆ. ರಮ್ಯಾ ಮೋಕ್ಷ ಅವರನ್ನು ನಾಗಾರ್ಜುನ ಅವರ ನೇತೃತ್ವದ ಮನೆಯಿಂದ ಹೊರಗಡೆ ಕಳುಹಿಸಲಾಗಿದೆ.
ಅಂದ್ಹಾಗೇ ತೆಲುಗಿನಲ್ಲಿ ''ಬಿಗ್ ಬಾಸ್'' 50 ದಿನಗಳನ್ನು ಪೂರೈಸಿದೆ. ಈ 50 ದಿನಗಳಲ್ಲಿ ಈಗಾಗಲೇ ಆರು ಜನ ಸ್ಫರ್ಧಿಗಳಿಗೆ ಮನೆಯಿಂದ ಗೇಟ್ ಪಾಸ್ ನೀಡಲಾಗಿದೆ. ಇನ್ನು ಕಳೆದ ವಾರ ರಮ್ಯಾ ಮೋಕ್ಷ ಅವರ ಜೊತೆ ವೈಲ್ಡ್ ಕಾರ್ಡ್ ಮೂಲಕ ''ಬಿಗ್ ಬಾಸ್'' ಮನೆ ಪ್ರವೇಶ ಮಾಡಿದ್ದ ಆಯೇಶಾ ಜೀನತ್ ಅನಾರೋಗ್ಯದಿಂದ ಕುಸಿದು ಬಿದ್ದಿದ್ದರು. ವರದಿಗಳ ಪ್ರಕಾರ ಆಯೇಶಾ ಅವರಿಗೆ ಟೈಫಾಯಿಡ್ ಜ್ವರ ಇರುವ ಲಕ್ಷಣ ಕಂಡು ಬಂದಿದೆ.
ಈ ಹಿನ್ನೆಲೆ ಆಯೇಶಾ ಕೂಡ ''ಬಿಗ್ ಬಾಸ್'' ತೊರೆದು ತಮ್ಮ ಮನೆಗೆ ಮರಳಿ ಹೋಗಿದ್ದಾರೆ. ಹೀಗಾಗಿ ಈ ವಾರ ಎಲಿಮಿನೇಷನ್ ಇರುವುದಿಲ್ಲ ಎಂದೇ ಎಲ್ಲರು ಅಂದುಕೊಂಡಿದ್ದರು.

ರಮ್ಯಾ ಮೋಕ್ಷ ಅವರ ಜೊತೆ ರೀತು ಚೌಧರಿ, ಸಾಯಿ ಶ್ರೀನಿವಾಸ್, ದಿವ್ಯಾ ನಿಖಿತಾ, ತನುಜಾ, ರಾಮು ರಾಥೋಡ್, ಸಂಜನಾ ಗಲ್ರಾಣಿ ಮತ್ತು ಪವನ್ ಕಲ್ಯಾಣ್ ಪಡಾಲಾ ಸೇರಿದಂತೆ ಒಟ್ಟು ಎಂಟು ಸ್ಪರ್ಧಿಗಳು ನಾಮಿನೇಟ್ ಆಗಿದ್ದರೂ ಕೂಡ ನಾಗಾರ್ಜುನ ಎಲ್ಲರನ್ನೂ ಉಳಿಸಿಕೊಂಡು ಮುಂದಿನ ವಾರ ಯಾರಾದರೂ ಒಬ್ಬ ಸ್ಫರ್ಧಿಯನ್ನು ಎಲಿಮಿನೇಟ್ ಮಾಡುತ್ತಾರೆ ಎಂದು ನೋಡುಗರು ಲೆಕ್ಕಾಚಾರ ಹಾಕಿದ್ದರು.
ಆದರೆ ಈ ಲೆಕ್ಕಾಚಾರ ಉಲ್ಟಾ ಆಗಿದ್ದು ರಮ್ಯಾ ಮೋಕ್ಷ ಪ್ರೇಕ್ಷಕರ ಪ್ರೀತಿಯನ್ನು ಗಳಿಸುವಲ್ಲಿ ವಿಫಲರಾಗಿದ್ದಾರೆ. ಮನೆಯಿಂದ ಹೊರ ಬಂದಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ನಡೆದ ಮತದಾನದಲ್ಲಿ ಇವರಿಗೆ ಕೇವಲ 3.31% ಮತಗಳು ಮಾತ್ರ ಸಿಕ್ಕಿವೆ. ಇವರ ಜೊತೆ ಡೇಂಜರ್ ಝೋನ್‌ನಲ್ಲಿದ್ದ ರಾಮು ರಾಥೋಡ್ 6.49%, ಸಾಯಿ ಶ್ರೀನಿವಾಸ್ 4.83% ಮತಗಳನ್ನು ಪಡೆಯುವ ಮೂಲಕ ಈ ವಾರ ಸುರಕ್ಷಿತರಾಗಿದ್ದಾರೆ.
ಅಂದ್ಹಾಗೇ ರಮ್ಯಾ ಮೋಕ್ಷ ಮನೆಯಿಂದ ಹೊರ ಬಂದಿರುವ ಕುರಿತು ತೆಲುಗು ''ಬಿಗ್ ಬಾಸ್'' ಇನ್ನೂ ಅಧಿಕೃತ ಆದೇಶ ಹೊರಡಿಸಿಲ್ಲವಾದರೂ ರಮ್ಯಾ ಮೋಕ್ಷ ಮನೆಯಾಚೆ ಬಂದಿದ್ದಾರೆ ಎಂದು ತೆಲುಗು ಮಾಧ್ಯಮಗಳು ವರದಿ ಮಾಡಿವೆ. ಇಂದು (ಅಕ್ಟೋಬರ್ 26) ವಾರಾಂತ್ಯದ ಕಥೆಯಲ್ಲಿ ರಮ್ಯಾ ಮೋಕ್ಷ ಅವರನ್ನು ನಾಗಾರ್ಜುನ ವೇದಿಕೆಗೆ ಕರೆದು ಮಾತನಾಡುವ ಸಾಧ್ಯತೆ ಇದೆ. ಮುಂದಿನ ವಾರ ಯಾರು ಹೊರ ಬರುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications










