ಬಿಗ್ ಬಾಸ್ ಸ್ಫರ್ಧಿ ದಾಂಪತ್ಯದಲ್ಲಿ ಬಿರುಕು, ವಿಚ್ಛೇದನ ಘೋಷಿಸಿ ಆ ನಂತರ ಪೋಸ್ಟ್ ಡಿಲೀಟ್ ಮಾಡಿದ ನಟಿ..!
ದಾಂಪತ್ಯದಲ್ಲಿ ಚಿಕ್ಕ-ಚಿಕ್ಕ ವಿರಸಗಳು ಸಾಂಗತ್ಯದ ಅರ್ಥವನ್ನು ಗಟ್ಟಿ ಮಾಡುತ್ತವೆ. ಇಬ್ಬರ ನಡುವಿನ ಹೊಂದಾಣಿಕೆಯನ್ನು ಹೆಚ್ಚಿಸುತ್ತವೆ. ಇಬ್ಬರ ನಡುವೆ ಇರುವ ತಪ್ಪು ಅಭಿಪ್ರಾಯಗಳನ್ನು-ಗ್ರಹಿಕೆಗಳನ್ನು ಸರಿಪಡಿಸಿಕೊಂಡು ಹೋಗುವುದರಲ್ಲಿಯೇ ದಾಂಪತ್ಯದ ಅರ್ಥ ಅಡಗಿದೆ ಎನ್ನುವುದು ಅನೇಕರ ಅಭಿಪ್ರಾಯ.ಆದರೆ ಕೆಲ ಒಮ್ಮೆ ಈ ದಾಂಪತ್ಯದಲ್ಲಿ ಮೂಡುವ ಬಿರುಕನ್ನು ಆರಂಭದಲ್ಲಿಯೇ ಸರಿಪಡಿಸಿಕೊಳ್ಳದಿದ್ದರೆ ಅದು ಹಾದಿ ತಪ್ಪಿ ಎಲ್ಲಿಗೋ ಹೋಗಿ ತಲುಪುವ ಅಪಾಯ ಇದ್ದೇ ಇರುತ್ತೆ.
ಅರ್ಧದಲ್ಲಿಯೇ ಸಂಬಂಧಗಳು ಕಳಚಿ ಹೋಗುತ್ತವೆ. ಇದಕ್ಕೆ ಲಕ್ಷ್ಮಿ ಪ್ರಿಯಾ ದಾಂಪತ್ಯ ಜೀವನ ಸದ್ಯದ ಮತ್ತೊಂದು ಉದಾಹರಣೆ. ಹೌದು, ಲಕ್ಷ್ಮಿ ಪ್ರಿಯಾ.. ಮಲಯಾಳಂನ ಜನಪ್ರಿಯ ನಟಿ. ಬರಹಗಾರ್ತಿಯಾಗಿ ಕೂಡ ಗುರುತಿಸಿಕೊಂಡಿರುವ ಲಕ್ಷ್ಮಿ ಪ್ರಿಯಾ ಮಲಯಾಳಂನ ಬಿಗ್ ಬಾಸ್ ಸೀಸನ್ ನಾಲ್ಕರ ಸ್ಫರ್ಧಿ ಕೂಡ ಹೌದು. ಬಿಗ್ ಬಾಸ್ ನಾಲ್ಕರಲ್ಲಿ ಮೂರನೇ ರನ್ನರ್ ಅಪ್ ಆದವರು ಇವರು.

ಇಂಥಾ ಲಕ್ಷ್ಮಿ ಪ್ರಿಯಾ ತಮ್ಮ ಪತಿ ಜಯೇಶ್ ಜೊತೆಗಿನ 20 ವರ್ಷಗಳ ದಾಂಪತ್ಯ ಜೀವನಕ್ಕೆ ಗುಡ್ ಬೈ ಹೇಳುವ ನಿರ್ಧಾರವನ್ನು ಮಾಡಿದ್ದಾರೆ. ಈ ಕುರಿತು ತಮ್ಮ ಫೇಸ್‌ಬುಕ್‌ನಲ್ಲಿ ಸುದಿರ್ಘವಾದ ಲೇಖನವನ್ನು ಬರೆದಿದ್ದಾರೆ. ವಿಚ್ಛೇದನದ ವಿಚಾರ ಘೋಷಿಸಿದ್ದಾರೆ. ಆದರೆ ಆ ನಂತರ ಅದೇನಾಯ್ತೋ, ತಮ್ಮ ಬರಹವನ್ನು ಲಕ್ಷ್ಮಿ ಪ್ರಿಯಾ ಡಿಲೀಟ್ ಮಾಡಿದ್ದಾರೆ. ಆದರೆ ಸ್ಕ್ರೀನ್ ಶಾಟ್ ಮಾತ್ರ ಈಗ ಹರಿದಾಡುತ್ತಿದೆ. ವೈರಲ್ ಆಗಿದೆ.
ವೈರಲ್ ಆದ ಸ್ಕ್ರೀನ್ ಶಾಟ್‌ನಲ್ಲಿ ಏನಿದೆ ?
ತಪ್ಪುಗಳು ಮತ್ತು ಅಪರಾಧಗಳು ಎಲ್ಲವೂ ಅವನದ್ದೇ. ನಾನು ನನ್ನ ಜೀವನದಲ್ಲಿ ತುಂಬಾ ದ್ವೇಷಿಸುವ ಕೆಲವನ್ನು ಈಗ ಮಾಡಬೇಕಾಗಿ ಬಂದಿದೆ. 40ರ ಹರೆಯದಲ್ಲಿ ನನ್ನ ಬದುಕಿನ ಅತ್ಯಂತ ಕಠಿಣ ನಿರ್ಧಾರವನ್ನು ನಾನು ತೆಗೆದುಕೊಳ್ಳಬೇಕಾಗಿದೆ, ನಾನು ನನ್ನ ನಂಬಿಕೆಯ ಮೇಲೆ ನಿಂತಿದ್ದೇನೆ, ಹಲವು ಬಾರಿ ಯೋಚಿಸಿದ್ದೇನೆ,
ಸಾಮಾನ್ಯವಾಗಿ ಸಾಮಾಜಿಕ ಜಾಲತಾಣದಲ್ಲಿ ನನ್ನ ಕುಟುಂಬರ ಕುರಿತು ನಾನು ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳುವುದಿಲ್ಲ ಯಾಕೆಂದರೆ ಜೀವನದಲ್ಲಿ ಗೌಪ್ಯತೆ ಕಾಯ್ದುಕೊಂಡಾಗ ಅದು ಅತ್ಯಂತ ಸುಂದರವಾಗಿರುತ್ತೆ ಎಂದು ನಂಬಿದವಳು ನಾನು, 20 ವರ್ಷಗಳಿಂದ ಸಾಮರಸ್ಯ ಮತ್ತು ಸಂಘರ್ಷಗಳಿಂದ ಕೂಡಿದ್ದ ನನ್ನ ವೈವಾಹಿಕ ಜೀವನವನ್ನು ಕೊನೆಗೊಳಿಸುವ ಕುರಿತು ನಾನು ಮಾತನಾಡುತ್ತಿದ್ದೇನೆ ಎಂದು ಲಕ್ಷ್ಮಿ ಪ್ರಿಯಾ ಬರೆದುಕೊಂಡಿದ್ದರು.
ಮುಂದುವರೆದು ಈಗೀಗ ವಿಚ್ಛೇದನದ ಪ್ರಮಾಣ ಹೆಚ್ಚಾಗುತ್ತಿದೆ. ಯಾಕೆಂದರೆ ಮೊದಲು ಹದಿಹರೆಯದಿಂದ ಈ ವಯಸ್ಸಿನವರೆಗೆ ಸಂಬಂಧ ಮುಂದುವರೆದಂತೆ ದಾಂಪತ್ಯದಲ್ಲಿ ಭಾವನಾತ್ಮಕವಾದ ಬಾಂಧವ್ಯ ಹೆಚ್ಚಾಗುತ್ತಿತ್ತು. ಆದರೆ ಈಗ ನಾವು ಆ ಸಂಪರ್ಕವನ್ನು ಎಲ್ಲೋ ಕಳೆದುಕೊಂಡಿದ್ದೇವೆ, ತಪ್ಪುಗಳು ಮತ್ತು ದೋಷಗಳೆಲ್ಲ ನನ್ನದೇ, ಆದ್ದರಿಂದ ಎಷ್ಟೇ ಪ್ರಯತ್ನ ಮಾಡಿದರು ಏನೂ ಅರ್ಥವಾಗದ ಈ ಜೀವನದಿಂದ ನಾನು ವಿಮುಖಳಾಗುತ್ತಿದ್ದೇನೆ.
ನಾನು ಅವರನ್ನು ಬಿಟ್ಟು ಹೋಗುತ್ತೇನೆಂದು ನನ್ನ ಕನಸು ಮನಸಿನಲ್ಲಿಯೂ ಅಂದುಕೊಂಡಿರಲಿಲ್ಲ. ಪ್ರತಿಯೊಂದು ಪ್ರಾರಂಭಕ್ಕೂ ಒಂದು ಅಂತ್ಯ ಇದ್ದೇ ಇರುತ್ತೆ ಈಗ ನಾವು ದೂರವಾಗುವ ಸಮಯ ಬಂದಿದೆ. ದಯವಿಟ್ಟು ನನ್ನ ಈ ನಿರ್ಧಾರದ ಹಿಂದಿನ ಕಾರಣವನ್ನು ಯಾರು ಕೇಳಬೇಡಿ. ಭಾವನಾತ್ಮಕ ಬಂಧವನ್ನು ನಾನು ಇಂದು ಕಳೆದುಕೊಂಡೆ ಎಂದು ಲಕ್ಷ್ಮಿ ಪ್ರಿಯಾ ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದರು.
ಇಷ್ಟೇ ಅಲ್ಲದೇ ನಮ್ಮ ಗೌಪ್ಯತೆಯನ್ನು ನೀವು ಗೌರವಿಸಬೇಕು ಮತ್ತು ನಮ್ಮ ಮಕ್ಕಳು ಕೂಡ ನಮ್ಮ ಈ ನಿರ್ಧಾರವನ್ನು ಗೌರವಿಸಬೇಕು ಎಂದು ನಾವು ಕೇಳಿಕೊಳ್ಳುತ್ತೇವೆ ಎಂದು ಬರೆದುಕೊಂಡಿದ್ದ ಲಕ್ಷ್ಮಿ ಪ್ರಿಯಾ ಆ ನಂತರ ಕೆಲವೇ ಕ್ಷಣಗಳಲ್ಲಿ ತಮ್ಮ ಈ ಪೋಸ್ಟ್ ಡಿಲೀಟ್ ಮಾಡಿದರು. ಹೀಗಾಗಿ ಇದೀಗ ಮಲಯಾಳಂ ಕಿರುತೆರೆ ಮತ್ತು ಹಿರಿತೆರೆಯಲ್ಲಿ ಲಕ್ಷ್ಮಿ ಪ್ರಿಯಾ ಮತ್ತು ಜಯೇಶ್ ಅವರ ದಾಂಪತ್ಯ ಜೀವನ ಚರ್ಚೆಗೀಡಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಕೂಡ ಲಕ್ಷ್ಮಿ ಪ್ರಿಯಾ ಅವರ ಈ ನಡೆ ಮತ್ತು ನುಡಿಯ ಕುರಿತು ಚರ್ಚೆ ನಡೆಯುತ್ತಿದೆ.
ಅಂದ್ಹಾಗೇ ಲಕ್ಷ್ಮಿ ಪ್ರಿಯಾ ಮತ್ತು ಜಯೇಶ್ 2005ರಲ್ಲಿ ಮದುವೆಯಾಗಿದ್ದರು. ವಿಶೇಷ ಅಂದರೆ ಲಕ್ಷ್ಮಿ ಪ್ರಿಯಾ ಮುಸ್ಲಿಂ ಕುಟುಂಬದಲ್ಲಿ ಜನಿಸಿದವರು. ಜಯೇಶ್ ಜೊತೆ ಮದುವೆಯಾದ ನಂತರ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಲಕ್ಷ್ಮಿ ಪ್ರಿಯಾ ಎರಡು ದಶಕಗಳಿಂದ ಹಿಂದೂ ಸಂಪ್ರದಾಯಗಳನ್ನು ಪಾಲಿಸುತ್ತಾ, ಹಬ್ಬ ಹರಿದಿನಗಳನ್ನು ಆಚರಿಸುತ್ತಾ ಬಂದಿದ್ದಾರೆ.
ಇನ್ನು ಇಬ್ಬರದ್ದು ಪ್ರೇಮ ವಿವಾಹ. ಆದರೆ ಈಗ ಆ ಪ್ರೀತಿ ಕಮರಿದೆ. ಇಬ್ಬರಿಗೆ ಒಬ್ಬಳು ಮಗಳಿದ್ದು, ಮಗಳ ಭವಿಷ್ಯದ ದೃಷ್ಟಿಯಿಂದ ವಿಚ್ಛೇದನದ ನಿರ್ಧಾರದಿಂದ ಇಬ್ಬರು ಹಿಂದೆ ಸರಿಯುತ್ತಾರಾ ಎನ್ನುವುದನ್ನು ಈಗ ಕಾದು ನೋಡಬೇಕಿದೆ.


Click it and Unblock the Notifications











