ಹುಟ್ಟಿದ್ದು ಕುಂದಾಪುರ, ಬೆಳೆದಿದ್ದು ಬೆಂಗಳೂರು 'ಶ್ರಾವಣಿ ಸುಬ್ರಹ್ಮಣ್ಯ'ದ ಸುಬ್ಬು ಕಿರುತೆರೆಯಲ್ಲಿ ಹೀರೋ ಆಗಿದ್ದೇಗೆ?
ಪೋಷಕ ಪಾತ್ರಗಳ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿದ ನಟ ಅಮೋಘ್ ಆದಿತ್ಯ ಇಂದು ಹ್ಯಾಂಡ್ ಸಮ್ ಹುಡುಗ ಹೀರೋ. 'ಶ್ರಾವಣಿ ಸುಬ್ರಹ್ಮಣ್ಯ' ಧಾರಾವಾಹಿಯಲ್ಲಿ ಸುಬ್ರಹ್ಮಣ್ಯನಾಗಿ ನಟಿಸಿ ಕಿರುತೆರೆ ವೀಕ್ಷಕರನ್ನು ಅಮೋಘ ಆದಿತ್ಯ ರಂಜಿಸುತ್ತಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಶ್ರಾವಣಿ ಸುಬ್ರಹ್ಮಣ್ಯ' ಧಾರಾವಾಹಿಯಲ್ಲಿ ನಾಯಕ ಸುಬ್ರಹ್ಮಣ್ಯನಾಗಿ ಅಮೋಘ ಆದಿತ್ಯ ನಟಿಸುತ್ತಿದ್ದಾರೆ.
ಸುಬ್ಬು ಆಲಿಯಾಸ್ ಸುಬ್ರಹ್ಮಣ್ಯನಾಗಿ ಕಿರು ಪರದೆಯಲ್ಲಿ ಸಖತ್ ಸದ್ದು ಮಾಡುತ್ತಿರುವ ಈ ಚಾಕಲೇಟ್ ಹುಡುಗನ ಹುಟ್ಟೂರು ಉಡುಪಿ ಜಿಲ್ಲೆಯ ಕುಂದಾಪುರ. ಮಹಾನಗರಿ ಬೆಂಗಳೂರಿನಲ್ಲಿ ಬೆಳೆದಿರುವ ಈತ ಪದವೀಧರ ಹೌದು. ಬೆಂಗಳೂರಿನ ಜಯನಗರದಲ್ಲಿರುವ ವಿಜಯ ಕಾಲೇಜಿನಲ್ಲಿ ಕಲಿತಿರುವ ಅಮೋಘ ಆದಿತ್ಯ ಬಿಕಾಂ ಪದವಿಯನ್ನು ಪಡೆದಿರುವ ಹುಡುಗ.

ಮೊದಲಿನಿಂದಲೂ ರಂಗಭೂಮಿಯ ನಂಟು ಹೊಂದಿದ್ದ ಅಮೋಘ ಆದಿತ್ಯ ಕಿರುತೆರೆಗೆ ಕಾಲಿಟ್ಟಿದ್ದು 'ಶಾಂತಂ ಪಾಪಂ' ಧಾರಾವಾಹಿಯ ಮೂಲಕ. ತದ ನಂತರ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಹೂಮಳೆ', 'ದೊರೆಸಾನಿ' ಧಾರಾವಾಹಿಗಳಲ್ಲಿ ನಟಿಸಿರುವ ಇವರು ನಟನೆಯ ಮೂಲಕ ಕಿರುತೆರೆಯಲ್ಲಿ ಮನೆ ಮಾತಾದರು.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸತ್ಯ' ಧಾರಾವಾಹಿಯಲ್ಲಿಯೂ ಅಮೋಘ ಆದಿತ್ಯ ನಟಿಸಿದ್ದರು. ನಾಯಕ ಕಾರ್ತಿಕ್ ಚಿಕ್ಕಪ್ಪನ ಮಗಳು ರಿತು ಪ್ರಿಯಕರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಪ್ರಬುದ್ಧತೆ ತುಂಬಿದ ಹುಡುಗನ ಪಾತ್ರದಲ್ಲಿ ಕಾಣಿಸಿಕೊಂಡ ಅಮೋಘ ಅಲ್ಲೂ ವೀಕ್ಷಕರ ಮನ ಸೆಳೆದರು. ತದ ನಂತರ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಗೀತಾ' ಧಾರಾವಾಹಿಯಲ್ಲಿ ನಾಯಕ ವಿಜಯ್ ತಂಗಿ ಶ್ರುತಿ ಪ್ರಿಯಕರನಾಗಿ ಅಮೋಘ ನಟಿಸಿದ್ದರು. ಇದರಲ್ಲಿ ಅದೇ ಮೊದಲ ಬಾರಿಗೆ ಸೈಕೋಪಾತ್ ಪಾತ್ರದ ಮೂಲಕ ಕಿರುತೆರೆಯಲ್ಲಿ ಮಿಂಚಿದರು.
'ಅಂತರಪಟ', 'ಲಕ್ಷ್ಮಿ ಟಿಫನ್ ರೂಂ' ಹೀಗೆ ಬೆರಳೆಣಿಕೆಯಷ್ಟು ಧಾರಾವಾಹಿಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಅಮೋಘ ಆದಿತ್ಯ ಇದೀಗ ನಾಯಕನಾಗಿ ಬಡ್ತಿಯನ್ನು ಕೂಡಾ ಪಡೆದಿದ್ದಾರೆ. ಮೊದಲ ಬಾರಿಗೆ ಪೂರ್ಣ ಪ್ರಮಾಣದ ನಾಯಕನಾಗಿ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಅಮೋಘ ಆದಿತ್ಯ ಇಂದು ವೀಕ್ಷಕರ ಪಾಲಿಗೆ ಪ್ರೀತಿಯ ಸುಬ್ಬು. ಅಷ್ಟರಮಟ್ಟಿಗೆ ಆ ಪಾತ್ರ ವೀಕ್ಷಕರ ಮನ ಸೆಳೆದಿದೆ.

ಆದರೆ ಅಮೋಘ ಅವರು ನಟನೆಗೆ ಕಾಲಿಟ್ಟ ಆರಂಭದ ದಿನಗಳಲ್ಲಿ ಮನೆಯವರು ಪ್ರೋತ್ಸಾಹ ನೀಡುತ್ತಿರಲಿಲ್ಲವಂತೆ. ಬದಲಿಗೆ ಬಣ್ಣದ ಲೋಕದ ನಂಟು ನಮ್ಮಂಥವರಿಗಲ್ಲ, ಅದು ಎಲ್ಲಾ ಕೈಯಲ್ಲಿ ದುಡ್ಡು ಇದ್ದವರಿಗೆ ಎಂದು ಹೇಳುತ್ತಿದ್ದರಂತೆ. ತಂಗಿ ಮತ್ತು ಸ್ನೇಹಿತರು ನೀಡಿದ ಬೆಂಬಲ, ಪ್ರೋತ್ಸಾಹದಿಂದ ನಟನೆಗೆ ಕಾಲಿಟ್ಟ ಅಮೋಘ ಇಂದು ಇಲ್ಲಿ ಜನಪ್ರಿಯತೆ ಗಿಟ್ಟಿಸಿಕೊಳ್ಳುವಷ್ಟು ಎತ್ತರಕ್ಕೆ ಬೆಳೆದಿದ್ದಾರೆ.
'ಶ್ರಾವಣಿ ಸುಬ್ರಹ್ಮಣ್ಯ' ಧಾರಾವಾಹಿಗೂ ಮೊದಲು ಒಂದು ಧಾರಾವಾಹಿಗೆ ಅಮೋಘ ಆದಿತ್ಯ ಆಡಿಶನ್ ನೀಡಿದ್ದರು. ವಿಪರ್ಯಾಸವೆಂದರೆ ಇನ್‌ಸ್ಟಾಗ್ರಾಂನಲ್ಲಿ ಸಾಕಷ್ಟು ಸಂಖ್ಯೆಯ ಫಾಲೋವರ್ಸ್ ಇಲ್ಲ ಎಂಬ ಕಾರಣದಿಂದ ಆಯ್ಕೆ ಮಾಡಿರಲಿಲ್ವಂತೆ. ಈ ವಿಷಯವನ್ನು ಈ ಹಿಂದೆ ನೀಡಿದ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ.
ಇನ್ನು 'ಶ್ರಾವಣಿ ಸುಬ್ರಹ್ಮಣ್ಯ' ಧಾರಾವಾಹಿಯ ಸುಬ್ಬು ಪಾತ್ರಕ್ಕೆ ಅಮೋಘ ಆದಿತ್ಯ ಆಯ್ಕೆಯಾದಾಗಲೂ ಅಷ್ಟೇ, ಧಾರಾವಾಹಿ ಶುರುವಾದ ಆರಂಭದ ದಿನಗಳಲ್ಲಿ ನಾಯಕನನ್ನು ಬದಲಾಯಿಸಿ ಎಂಬ ಮಾತುಗಳು ಕೇಳಿ ಬರುತ್ತಿತ್ತಂತೆ. ದಿನ ಕಳೆದಂತೆ ಕಿರುತೆರೆ ವೀಕ್ಷಕರು ಸುಬ್ಬುವನ್ನು ಮೆಚ್ಚಿಕೊಂಡಿದ್ದಾರೆ. ಅಮೋಘ ಅವರ ನಟನೆಯನ್ನು ಒಪ್ಪಿಕೊಂಡಿದ್ದಾರೆ. ಒಟ್ಟಿನಲ್ಲಿ ಕಿರುತೆರೆಯಲ್ಲಿ ಬ್ಯುಸಿಯಾಗಿರುವ ಅಮೋಘ ಆದಿತ್ಯ ಅವರ ನಟನೆಯ ಮೂಲಕ ಗುರುತಿಸಿಕೊಂಡಿರುವುದಂತೂ ನಿಜ.


Click it and Unblock the Notifications











