Shree gowri: ಕಾರ್ಗತ್ತಲಲ್ಲಿ ಒಬ್ಬಂಟಿಯಾಗಿ ಗೌರಿ ಹೋದದ್ದೆಲ್ಲಿಗೆ..? ಏನಾಗಿದೆ ಹೆಗಡೆ ಮನೆಗೆ..?
ಶ್ರೀಗೌರಿ ಹೊಚ್ಚ ಹೊಸ ಧಾರಾವಾಹಿ ಈ ವಾರದಿಂದ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಧಾರಾವಾಹಿಯ ಮೊದಲ ಸಂಚಿಕೆಯು ಅದ್ಭುತವಾಗಿ ಮೂಡಿ ಬಂದಿದ್ದು, ವೀಕ್ಷಕರು ಇಷ್ಟಪಟ್ಟಿದ್ದಾರೆ.
ಮೊದಲ ಸಂಚಿಕೆಯಲ್ಲೇ ನಾಯಕಿಗೆ ಬಂದ ಸಂಬಂಧವನ್ನು ಆಕೆಯ ತಂದೆಯೇ ತಿರಸ್ಕರಿಸಿದ್ದಾರೆ. ಇದನ್ನು ನೋಡಿದ ವೀಕ್ಷಕರ ಮನದಲ್ಲಿ ನೂರೆಂಟು ಪ್ರಶ್ನೆಗಳು ಹುಟ್ಟಿಕೊಂಡಿವೆ.
ಸರ್ವಗುಣ ಸಂಪನ್ನೆಯಾಗಿರುವ ಗೌರಿಯಲ್ಲಿರುವ ಕೊರತೆ ಏನಿರಬಹುದು..? ಯಾಕೆ ಅವಳನ್ನು ಕಂಡರೆ ಅಜ್ಜಿಗೆ ಅಷ್ಟು ತಾತ್ಸಾರ ಎಂದು ಯೋಚಿಸಲು ಶುರು ಮಾಡಿದ್ದಾರೆ.

ಊರಿಗೆ ಉಪಕಾರಿಯಾಗಿರುವ ನಾಯಕ
ಧಾರಾವಾಹಿಯಲ್ಲಿ ನಾಯಕ ಅಪ್ಪು ಊರಿಗೆ ಉಪಕಾರಿ, ಮನೆಗೆ ಮಾರಿಯಾಗಿದ್ದಾನಂತೆ. ಹಾಗಂತ ಆತನ ತಾಯಿ ಮಂಗಳ ಊರು ತುಂಬಾ ಬೈಯುತ್ತಾ ಓಡಾಡುತ್ತಿದ್ದಾಳೆ. ನಾಟಿ ವೈದ್ಯ ಕಲಿತಿರುವ ಮಂಗಳಮ್ಮ, ಊರಲ್ಲಿರುವವರಿಗೆ ಯಾರಿಗೆ ಏನೇ ಸಮಸ್ಯೆ ಆದರೂ ನಾಟಿ ಔಷಧಿಯನ್ನು ಕೊಡುತ್ತಾಳೆ. ಮಂಗಳಮ್ಮನ ಮಗ ಅಪ್ಪು ಕೂಡ ಊರ ಜನರಿಗೆ ಸಹಾಯ ಮಾಡಲು ಸದಾ ಕಾಲ ಕಾದು ಕುಳಿತಿರುತ್ತಾನೆ. ಆದರೆ, ಮಗ ಮದುವೆಯಾಗಬೇಕು ಎಂದು ಆಸೆ ಪಡುತ್ತಿರುವ ಮಂಗಳಮ್ಮನಿಗೆ ನಿತ್ಯ ನಿರಾಸೆ ಆಗುತ್ತಿದೆ. ಅಪ್ಪುಗೆ ಮದುವೆ ಮಾಡಿಕೊಳ್ಳುವುದಕ್ಕೆ ಸ್ವಲ್ಪವೂ ಇಷ್ಟವಿಲ್ಲ. ಅಮ್ಮ ಪದೇ ಪದೇ ಮದುವೆಯಾಗು ಎಂದಾಗೆಲ್ಲಾ ಸಾಯುವ ಮಾತನಾಡಿ ದಿನ ದೂಡುತ್ತಿದ್ದಾನೆ.
ಮಗನ ಮದುವೆ ಮಾಡುವ ಆಸೆ
ಅಪ್ಪುಗೆ ತಾನು ಬಿಟ್ಟರೆ ಮತ್ಯಾರೂ ಇಲ್ಲ ಎಂಬ ಕಾರಣಕ್ಕೆ ಮಂಗಳಮ್ಮ ಆದಷ್ಟು ಬೇಗ ಮಗನಿಗೆ ಮದುವೆ ಮಾಡಬೇಕು. ಅವನನ್ನು ಪ್ರೀತಿ, ಕಾಳಜಿಯಿಂದ ನೋಡಿಕೊಳ್ಳುವವರು ಒಬ್ಬರು ಇದ್ದರೆ, ಮಗನ ಬಾಳು ಸುಂದರವಾಗಿರುತ್ತೆ ಎಂದು ಆಸೆ ಪಟ್ಟಿದ್ದಾಳೆ. ಆದರೆ, ಅಪ್ಪು ಯಾರನ್ನು ಮದುವೆಯಾಗುತ್ತಾನೆ ಎಂಬುದನ್ನು ಕಾದು ನೋಡಬೇಕಿದೆ. ಇನ್ನು ಅಪ್ಪು ಕಂಬಳ ಹಾಯಿಸುವುದರಲ್ಲಿ ಎತ್ತಿದ ಕೈ. ಹೀಗಾಗಿ ಅಪ್ಪುಗೂ ಶತ್ರುಗಳಿದ್ದು, ಹೇಗಾದರೂ ಮಾಡಿ ಈ ಸಲದ ಕಂಬಳಕ್ಕೆ ಅಪ್ಪು ಹಾಜರಾಗದಂತೆ ನೋಡಿಕೊಳ್ಳಬೇಕು ಎಂದಿದ್ದಾರೆ. ಇತ್ತ ಮಂಗಳಮ್ಮನಿಗೂ ಮಗ ಕಂಬಳಕ್ಕೆ ಹೋಗುವುದು ಕೊಂಚವೂ ಇಷ್ಟವಿಲ್ಲ.

ಗೌರಿ ಬಾಳಲ್ಲೊಂದು ಕಪ್ಪು ಚುಕ್ಕೆ
ಇತ್ತ ಗೌರಿಯ ಎಲ್ಲರ ಜೊತೆಗೂ ನಗುನಗುತಾ ಮಾತನಾಡುತ್ತಾಳೆ. ತಾಯಿ ಇಲ್ಲದಿದ್ದರೂ ಕೂಡ ಗೌರಿಯನ್ನು ರಘುರಾಮ್ ಹೆಗಡೆ ಮನೆಯವರೆಲ್ಲಾ ಬಹಳ ಪ್ರೀತಿಯಿಂದ ಬೆಳೆಸಿದ್ದಾರೆ. ಗೌರಿ ಯಾರಿಗೂ ಅನ್ಯಾಯವಾಗಲು ಬಿಡುವುದಿಲ್ಲ. ಒಂದು ಇರುವೆಗೂ ನೋವಾಗದಂತೆ ನಡೆದುಕೊಳ್ಳುವ ಗೌರಿ ಬಾಳಲ್ಲೂ ಕಪ್ಪು ಚುಕ್ಕೆ ಒಂದಿದೆ. ಗೌರಿಗೆ ಇನ್ನೂ ಮದುವೆಯಾಗದಿರುವುದಕ್ಕೆ ಕಾರಣವಿದೆ. ಅದೇನೆಂದರೆ, ಹೆಗಡೆ ಮನೆಯವರಿಗೆ ಪ್ರತಿ ದಿನ ರಾತ್ರಿಯೂ ಕೂಡ ಗ್ರಹಣ ಹಿಡಿಯುತ್ತದೆ ಎಂದು ಹೇಳಳಾಗಿದೆ. ಹಾಗೆಂದರೆ ಅರ್ಥವೇನು ಎಂಬುದು ಕೂಡ ಗೊತ್ತಾಗಿಲ್ಲ.
ಗೌರಿ ರಾತ್ರಿ ವೇಳೆ ಹೋಗಿದ್ದೆಲ್ಲಿಗೆ..?
ಹೊಸ ಎಪಿಸೋಡ್‌ನಲ್ಲಿ ಗೌರಿ ಕಾಲಿಗೆ ಅವಳ ಅಜ್ಜ ಕೋಳ ಹಾಕಿ ಬೀಗ ಹಾಕುತ್ತಾರೆ. ಗೌರಿಯೂ ಖುಷಿಯಿಂದಲೇ ಇರುತ್ತಾಳೆ. ಆದರೆ, ಎಲ್ಲರೂ ಮಲಗಿದ ಬಳಿಕ ಗೌರಿ ಒಬ್ಬಳೆ ಎದ್ದು ನಡೆದುಕೊಂಡು ಹೋಗಿದ್ದಾಳೆ. ಲ್ಯಾಂಪ್ ಹಿಡಿದು ನದಿ ಬಳಿ ಹೋಗಿ ಅಲ್ಲೊಂದು ದೋಣಿ ಏರಿ ಸಾಗಿದ್ದಾಳೆ. ಗೌರಿ ಅಜ್ಜ ಅವಳನ್ನು ಕೂಗಿ ಕೂಗಿ ಕರೆದಾಗ ಗೌರಿ ಟಾಟಾ ಮಾಡಿ ನೀರಿಗೆ ಬೀಳುತ್ತಾಳೆ. ಪ್ರೋಮೋ ನೋಡಿದವರು, ಗೌರಿಗೆ ನಿದ್ದೆಯಲ್ಲಿ ಓಡಾಡುವ ಖಾಯಿಲೆ ಇರಬಹುದು. ಅದಕ್ಕೆ ಅವಳ ಕಾಲುಗಳಿಗೆ ಕೋಳ ಹಾಕಲಾಗುತ್ತದೆ ಎಂದು ಭಾವಿಸಿದ್ದಾರೆ. ಆದರೆ, ಇದರ ಹಿಂದಿನ ಕಥೆಯ ಬಗ್ಗೆ ತಿಳಿಯಲು ಮಿಸ್ ಮಾಡದೇ ಧಾರಾವಾಹಿಯನ್ನು ನೋಡಬೇಕಿದೆ.


Click it and Unblock the Notifications











