ಸಿನಿಮಾ, ವೆಬ್ ಸೀರಿಸ್‌ನಲ್ಲಿ ಮೋಡಿ ಮಾಡ್ತಿರೋ ಕಿರುತೆರೆ ನಟ ಅರ್ಫತ್ ಶರೀಫ್
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ 'ಶ್ರೀರಸ್ತು ಶುಭಮಸ್ತು' ಧಾರಾವಾಹಿಯು ವಿಭಿನ್ನ ಕಥಾಹಂದರದ ಜೊತೆಗೆ ಪಾತ್ರವರ್ಗದ ಮೂಲಕವೂ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಅದರಲ್ಲೂ ನಾಯಕ ಮಾಧವನ ಹಿರಿಮಗ ಅವಿನಾಶ್ ಆಗಿ ಅಭಿನಯಿಸುತ್ತಿರುವ ಅರ್ಫತ್ ಶರೀಫ್ ಮನೋಜ್ಞ ನಟನೆಯ ಮೂಲಕ ಕರುನಾಡಿನಾದ್ಯಂತ ಮನೆ ಮಾತಾಗುತ್ತಿದ್ದಾರೆ.
ಕುಟುಂಬದವರ ಜೊತೆಗೆ ತುಂಬಾ ಪ್ರೀತಿ ಹೊಂದಿರುವ ಅವಿನಾಶ್‌ಗೆ ಪತ್ನಿ ಪೂರ್ಣಿ ಅಂದರೆ ಪಂಚಪ್ರಾಣ. ಪತ್ನಿಯ ಖುಷಿಗಾಗಿ ಏನು ಬೇಕಾದರೂ ಮಾಡಲು ತಯಾರಿರುವ ಅವಿನಾಶ್‌ಗೆ ತಂದೆ ಮಾಧವನನ್ನು ಕಂಡರೆ ಕೆಂಡದಷ್ಟೂ ಕೋಪ. ತನ್ನ ತಾಯಿಯ ಸಾವಿಗೇ ತನ್ನ ತಂದೆಯೇ ಕಾರಣ ಎಂದು ನಂಬಿರುವ ಅವಿನಾಶ್‌ಗೆ ತಂದೆಯ ನೆರಳು ಕಂಡರೆ ಆಗದು. ಬ್ಯುಸಿನೆಸ್ ಮ್ಯಾನ್ ಅವಿನಾಶ್ ಆಗಿ ಅಭಿನಯಿಸಿ ಸೈ ಎನಿಸಿಕೊಂಡಿರುವ ಅರ್ಫತ್ ಶರೀಫ್ ಅವರಿಗೆ ನಟನಾ ಕ್ಷೇತ್ರ ಹೊಸದಲ್ಲ.
'ನನ್ನರಸಿ ರಾಧೆ' ಧಾರಾವಾಹಿಯಲ್ಲಿ ನಟನೆ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ನನ್ನರಸಿ ರಾಧೆ' ಧಾರಾವಾಹಿಯಲ್ಲಿ ನಾಯಕಿ ಇಂಚರಾಳ ಮಾವನ ಮಗ ಆಗಿ ಅಭಿನಯಿಸಿದ್ದ ಅರ್ಫತ್ ಶರೀಫ್ ಅಲ್ಲಿ ವಿಲನ್ ಆಗಿ ನಟಿಸಿದ್ದರು. 'ನನ್ನರಸಿ ರಾಧೆ' ಧಾರಾವಾಹಿಯಲ್ಲಿ ಖಳನಾಯಕರಾಗಿ ನಟಿಸಿದ್ದ ಅರ್ಫತ್ ಶರೀಫ್ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾದರು.

ಸಿನಿಮಾದಲ್ಲಿಯೂ ಮೋಡಿ
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬ್ಲಾಕ್ ಬಾಸ್ಟರ್ ಸಿನಿಮಾ 'ಕೆಜಿಎಫ್ 2'ನಲ್ಲಿ ಅಭಿನಯಿಸುವ ಸುವರ್ಣಾವಕಾಶ ಪಡೆದುಕೊಂಡಿರುವ ಅರ್ಫತ್ ಶರೀಫ್ ಪೊಲೀಸ್ ಪಾತ್ರದಲ್ಲಿ ಮಿಂಚಿದ್ದರು. ಇನ್ನು ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರವನ್ನೊಳಗೊಂಡ 'ಕಥಾಲೇಖನ' ಸಿನಿಮಾದಲ್ಲಿ ನಾಯಕರಾಗಿ ಅಭಿನಯಿಸಿದ್ದರು.
ಜಾಹೀರಾತಿನಲ್ಲೂ ಮಿಂಚಿಂಗ್
ಇದರ ಜೊತೆಗೆ 'ಚಾರ್ಕೋಲ್' ಎಂಬ ವೆಬ್ ಸೀರಿಸ್‌ನಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಅರ್ಫತ್ ಶರೀಫ್ ಕೆಲವೊಂದು ಜಾಹೀರಾತುಗಳಲ್ಲಿ ಅಭಿನಯಿಸಿದ್ದಾರೆ. ಟೊಯೋಟಾ, ಪೈಂಟ್, ಟಿವಿಎಸ್, ಬ್ರಾಂಡ್ FMSGM ಜಾಹೀರಾತುಗಳಲ್ಲೂ ಕಾಣಿಸಿಕೊಂಡಿದ್ದಾರೆ.


Click it and Unblock the Notifications











