Shrirasthu Shubhamasthu: ಶಾರ್ವರಿ ಮಗಳು ನಿಧಿಯನ್ನು ಕಾಪಾಡಿದ ತುಳಸಿ
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ತುಳಸಿ ಮತ್ತು ಸಿರಿ ಇಬ್ಬರೂ ಪಾನಿಪೂರಿ ತಿನ್ನುತ್ತಿರುತ್ತಾರೆ. ರಾತ್ರಿ ತಡವಾದರೂ ಮನೆಗೆ ಬಾರದ ಕಾರಣ, ದತ್ತ ತಾತನಿಗೆ ಊಟ ಯಾರು ಬಡಿಸುತ್ತಾ ಅನ್ನೋ ಯೋಚನೆ. ಇದೇ ವೇಳೆಗೆ ಸಮರ್ಥ್ ಬರುತ್ತಾನೆ. ಆಗ ದತ್ತ ತಾತ ಊಟ ಬಡಿಸುವ ಕೆಲಸವನ್ನು ಸಮರ್ಥ್‌ಗೆ ವಹಿಸುತ್ತಾರೆ.
ಸಂಧ್ಯಾ ಎದುರು ಬಂದಾಗಲೆಲ್ಲಾ ಸಿಡಿ ಸಿಡಿ ಎನ್ನುತ್ತಿರುತ್ತಾನೆ. ಇದನ್ನು ಗಮನಿಸುವ ಸಂಧ್ಯಾ, ತಾತನನ್ನು ಪ್ರಶ್ನೆ ಮಾಡುತ್ತಾಳೆ. ನೀವು ಹೀಗಿದ್ದರೆ ಕಷ್ಟ ಆಗುತ್ತೆ ತಾತ, ಮನೆಯಲ್ಲಿ ನನ್ನನ್ನು ಎಲ್ಲರೂ ಒಪ್ಪಿಕೊಂಡಿದ್ದಾರೆ. ನೀವು ಮಾತ್ರ ಹೀಗಿದ್ದೀರಾ ಎಂದು ಕೇಳುತ್ತಾಳೆ. ಅದಕ್ಕೆ ದತ್ತ ತಾತ, ನನಗೆ ಯಾರನ್ನು ಎಲ್ಲಿಡಬೇಕು ಅಂತ ಗೊತ್ತಿದೆ ಎಂದು ಖಾರವಾಗಿಯೇ ಉತ್ತರ ಕೊಡುತ್ತಾನೆ.

ಇತ್ತ ರಸ್ತೆಯಲ್ಲಿ ಹೋಗುವಾಗ ತುಳಸಿ ಮತ್ತು ಸಿರಿ ನಿಧಿ ಯಾವುದೋ ಹುಡುಗನ ಜೊತೆಗೆ ರಾತ್ರಿ ಹೋಗುವುದನ್ನು ನೋಡುತ್ತಾಳೆ. ನಿಧಿ ಅಪಾಯದಲ್ಲಿರಬಹುದು ಎಂದು ಭಾವಿಸುವ ತುಳಸಿ ಮತ್ತು ಸಿರಿ ಇಬ್ಬರೂ ನಿಧಿಯನ್ನು ಫಾಲೋ ಮಾಡುತ್ತಾರೆ.
ಶಾರ್ವರಿ ಮಗಳು ನಿಧಿ ಹೋಗಿದ್ದೆಲ್ಲಿಗೆ..?
ಸುಮಾರು ದೂರ ಹೋದ ಮೇಲೆ ನಿಧಿ ಹೋಗಿದ್ದ ಬೈಕ್ ಒಂದು ಪಬ್ ಎದುರು ಪಾರ್ಕ್ ಆಗಿರುತ್ತದೆ. ಇಲ್ಲೇ ಇರಬಹುದು ಎಂದು ನಿಧಿಯನ್ನು ರಕ್ಷಿಸಲು ತುಳಸಿ ಮತ್ತು ಸಿರಿ ಪಬ್ ಒಳಗೆ ಹೋಗುತ್ತಾರೆ. ಅಲ್ಲಿ ಆ ಹುಡುಗ ನಿಧಿಗೆ ಡ್ರಿಂಕ್ಸ್ ಕುಡಿಸಿ, ಸ್ನೇಹಿತನ ಬಳಿ ನಿಧಿ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿರುತ್ತಾನೆ. ಇದು ತುಳಸಿಗೆ ಇನ್ನಷ್ಟು ಕೋಪ ತರಿಸುತ್ತದೆ.
ಮಗಳನ್ನು ರಕ್ಷಿಸಿದ ತುಳಸಿ
ಆ ಹುಡುಗ ನಿಧಿಯನ್ನು ಬಲವಂತವಾಗಿ ಕರೆದುಕೊಂಡು ಹೋಗುತ್ತಿರುತ್ತಾನೆ. ನಿಧಿ ಮತ್ತಿನಲ್ಲಿರುತ್ತಾಳೆ. ಈ ದೃಶ್ಯ ನೋಡಿದ ಕೂಡಲೇ ಕೆಂಡಾಮಂಡಲವಾಗುವ ತುಳಸಿ ಆ ಹುಡುಗನ ಕೆನ್ನೆಗೆ ಜೋರಾಗಿ ಬಾರಿಸುತ್ತಾಳೆ. ಇನ್ನೊಂದು ಸಲ ನಿನ್ನನ್ನು ನಿಧಿ ಅಥವಾ ಬೇರೆ ಯಾವುದಾದರೂ ಹುಡುಗಿಯ ಜೊತೆಗೆ ನೋಡಿದರೆ, ಗ್ರಹಚಾರ ಬಿಡಿಸಬೇಕಾಗುತ್ತದೆ ಎಂದು ಎಚ್ಚರಿಸುತ್ತಾಳೆ. ಆ ಹುಡುಗ ನಿಮಗೆ ನಿಧಿ ಏನಾಗಬೇಕು ಎಂದು ಕೇಳಿದ್ದಕ್ಕೆ, ತುಳಸಿ ಅವಳು ನನ್ನ ಮಗಳು ಎಂದು ಧೈರ್ಯವಾಗಿ ಹೇಳುತ್ತಾಳೆ. ಬಳಿಕ ನಿಧಿಯನ್ನು ತುಳಸಿ ಸೇಫ್ ಆಗಿ ಕರೆದುಕೊಂಡು ಬರುತ್ತಾಳೆ.

ಮನೆವರೆಗೂ ಹೋಗಿ ವಾಪಸ್ ಬಂದಿದ್ದೇಕೆ..?
ತುಳಸಿ, ನಿಧಿಯನ್ನು ಮನೆಯ ಬಾಗಿಲವರೆಗೂ ಬಿಟ್ಟು, ಒಳಗೆ ಹೋಗಲು ಹೇಳುತ್ತಾಳೆ. ತಾನು ಬಿಟ್ಟು ಬಂದ ಮನೆಗೆ ವಾಪಸ್ ಹೋಗಬಾರದು ಎಂದು ತೀರ್ಮಾನಿಸಿದ್ದು, ವಾಚ್ ಮ್ಯಾನ್‌ಗೂ ಕೂಡ, ತಾನು ಇಲ್ಲಿಗೆ ಬಂದ ವಿಚಾರ ಯಾರಿಗೂ ಹೇಳಬೇಡ ಎನ್ನುತ್ತಾಳೆ. ಮನೆ ಬಾಗಿಲವರೆಗೂ ಬಂದು ವಾಪಸ್ ಹೋಗುವುದನ್ನು ಅವಿ, ಬಾಲ್ಕನಿಯಿಂದ ನೋಡುತ್ತಾನೆ. ಯಾಕೆ ನಿಧಿಯನ್ನು ಕರೆದುಕೊಂಡು ಬಂದರು, ಹೀಗೆ ಬಾಗಿಲವರೆಗೂ ಬಿಟ್ಟು ಹೋಗಿದ್ಯಾಕೆ? ಎಂದು ಅವಿಗೆ ಅರ್ಥವಾಗುವುದಿಲ್ಲ.
ದತ್ತ ತಾತನಿಗೆ ಅನುಮಾನ ಬಂದಿದ್ಯಾ..?
ಇನ್ನು ಮನೆಗೆ ಬಂದ ಮೇಲೆ ಸಿರಿ, ಅತ್ತೆ ತುಳಸಿಯನ್ನು ಹೊಗಳುತ್ತಿರುತ್ತಾಳೆ. ನಿಮಗೆ ಅಷ್ಟೊಂದು ಧೈರ್ಯ ಇದೆ ಅಂತ ನನಗೆ ಗೊತ್ತೇ ಇರಲಿಲ್ಲ ಎನ್ನುತ್ತಾಳೆ. ತುಳಸಿ ನಮ್ಮವರು ಎಂದು ಬಂದಾಗ ಹಾಗೆ ಪುಟ್ಟ ಮನಸ್ಸು ಕೇಳೋದಿಲ್ಲ ಎಂದು ಹೇಳುತ್ತಾಳೆ. ಆಗ ಸಿರಿ ಆ ಮನೆಯಲ್ಲಿ ನೀವು ಹೇಗಿದ್ದೀರೋ ಗೊತ್ತಿಲ್ಲ. ಆದರೆ, ಎಲ್ಲರೂ ನಿಮ್ಮನ್ನು ಅರ್ಥ ಮಾಡಿಕೊಳ್ಳಲಿ, ನೀವು ಅಲ್ಲಿ ಚೆನ್ನಾಗಿರಲಿ ಅನ್ನೋದೆ ನನ್ನಾಸೆ ಎಂದು ಹೇಳುತ್ತಾಳೆ. ಈ ಮಾತು ಕೇಳುವ ದತ್ತ ತಾತನಿಗೆ ತುಳಸಿ ಮೇಲೆ ಅನುಮಾನ ಬರುತ್ತದೆ. ಹಾಗಾಗಿ ದತ್ತ ತಾತ, ತುಳಸಿ ಜೊತೆಗೆ ಮಾತನಾಡಲು ರೂಮ್ ಒಳಗೆ ಕರೆಯುತ್ತಾನೆ. ಮುಂದೇನಾಗುತ್ತೋ ಗೊತ್ತಿಲ್ಲ.


Click it and Unblock the Notifications











