Shrirasthu Shubhamasthu: ಮತ್ತೆ ಗೆಳೆತನಕ್ಕೆ ಜೊತೆಯಾದ ಮಾಧವ್-ತುಳಸಿ
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಪತ್ರಕರ್ತರ ಎದುರು ಸ್ವಲ್ಪವೂ ಭಯವಿಲ್ಲದೇ ಇದ್ದ ವಿಚಾರವನ್ನು ಇದ್ದ ಹಾಗೆಯೇ ತುಳಸಿ ಮಾತನಾಡಿ ಕಳಿಸುತ್ತಾಳೆ. ಆದರೆ ಮಗ ಅಭಿ ಬಂದು ನನ್ನ ಮದುವೆಯ ದಿನವೇ ನೀವು ಮದುವೆಯಾಗಲು ಕಾರಣವೇನು..? ನನ್ನ ಮದುವೆ ಮುಗಿದ ಬಳಿಕವೇ ಮದುವೆ ಆಗಬಹುದಿತ್ತಲ್ವಾ? ಎಂದು ಕೇಳಿದ್ದಕ್ಕೆ ಮಾಧವ್ ಬದಲು ತುಳಸಿಯೇ ಉತ್ತರ ಕೊಡುತ್ತಾಳೆ.
ಈ ಮದುವೆಯ ವಿಚಾರದಲ್ಲಿ ಮಾಧವ್ ಅವರದ್ದು ಯಾವುದೇ ತಪ್ಪಿರಲಿಲ್ಲ. ನನ್ನ ಮಾವನವರ ಆರೋಗ್ಯದಲ್ಲಿ ಸಮಸ್ಯೆ ಇತ್ತು. ಅವರು ಒತ್ತಾಯ ಮಾಡಿದ್ದಕ್ಕೆ ನಾವು ಮದುವೆಯಾದೆವು ಎನ್ನುತ್ತಾಳೆ.

ಮಾಧವ್ ಅವರಿಗೇನೋ ಬೇರೆ ದಾರಿ ಇರಲಿಲ್ಲ. ಕೊನೆಪಕ್ಷ ನೀವಾದರೂ ಮಾತನಾಡಬಹುದಿತ್ತಲ್ವಾ? ಎಂದು ತುಳಸಿ ಬಳಿ ಶಾರ್ವರಿ ಪ್ರಶ್ನೆ ಮಾಡುತ್ತಾಳೆ. ಆಗ ತುಳಸಿ ನಾನು ನನ್ನ ಪ್ರಯತ್ನ ಮಾಡಿದೆ. ಆದರೆ, ಸಾಧ್ಯವಾಗಲಿಲ್ಲ. ಹಾಗಾಗಿ ನಾವು ಅಂದು ಮದುವೆಯಾಗಬೇಕಾಗಿ ಬಂತು ಎಂದು ಹೇಳುತ್ತಾಳೆ. ಆಗ ಮಕ್ಕಳು ಏನೂ ಮಾತನಾಡುವುದಿಲ್ಲ.
ಮಾಧವ್ ಜೊತೆಯಾದ ತುಳಸಿ
ಸ್ವಲ್ಪ ಸಮಯದ ಬಳಿಕ ಮಧವ್, ತುಳಸಿ ಬಳಿ ಧನ್ಯವಾದ, ನನ್ನ ಪರ ಮಾತನಾಡಿದ್ದಕ್ಕೆ ಎನ್ನುತ್ತಾನೆ. ಆಗ ತುಳಸಿ ನಾನು ನಿಮ್ಮ ಗೆಳತಿ ಸದಾ ನಿಮ್ಮ ಜೊತೆಗೆ ಇರುತ್ತೇನೆ. ಈ ಥ್ಯಾಂಕ್ಸ್ ಎಲ್ಲಾ ನಮ್ಮ ನಡುವೆ ಬೇಡ ಎಂದು ಹೇಳುತ್ತಾಳೆ. ಈ ಮಾತನ್ನು ಕೇಳಿದ ಮಾಧವ್‌ಗೆ ಖುಷಿಯಾಗುತ್ತದೆ. ಇಬ್ಬರ ಗೆಳೆತನ ಮತ್ತೆ ಮುಂದುವರೆದಿದ್ದು, ಪಾಪಮ್ಮ ಇಬ್ಬರನ್ನು ನೋಡಿ ಖುಷಿ ಪಡುತ್ತಾಳೆ. ಈ ವಿಚಾರವನ್ನು ಪೂರ್ಣಿ ಹೇಳಿಕೊಂಡು ಸಂತಸಗೊಳ್ಳುತ್ತಾರೆ.
ಮಾವನನ್ನು ವಹಿಸಿಕೊಂಡ ಪೂರ್ಣಿ
ಇತ್ತ ಶಾರ್ವರಿ ಈಗ ಅಭಿಯನ್ನು ತನ್ನತ್ತ ಸೆಳೆದುಕೊಳ್ಳುವ ಸಲುವಾಗಿ ಬಹಳ ಮುದ್ದಾಗಿ ಮಾತನಾಡಿಸಿ, ಇನ್ಮುಂದೆ ನೀನು ಯಾವುದೇ ಕಾರಣಕ್ಕೂ ಕುಡಿಯಬಾರದು ಎಂದು ಮಾತು ತೆಗೆದುಕೊಳ್ಳುತ್ತಾಳೆ. ಪೂರ್ಣಿಯ ಬಳಿ ಅವಿ ನಡೆದ ಘಟನೆಯನ್ನು ವಿವರಿಸಿ, ನಿಮ್ಮ ಮಾವ ತಪ್ಪು ಮಾಡಿದರು ಎಂದು ಹೇಳುತ್ತಾನೆ. ಆದರೆ ಪೂರ್ಣಿಮಾ ಮಾವನನ್ನು ವಹಿಸಿಕೊಂಡು ಮಾತನಾಡುತ್ತಾಳೆ. ಮಾವ ತಪ್ಪು ಮಾಡಿರುವುದಿಲ್ಲ. ಅವರ ಮಾತುಗಳು ನಿಮಗೆ ಅರ್ಥವಾಗುವುದಿಲ್ಲ ಎಂದು ಅಭಿ ಕೇಳಿದ ಪ್ರಶ್ನೆಗೆ ಉತ್ತರ ಕೊಡದೇ ಸುಮ್ಮನೆ ಇರುತ್ತಾರೆ ಎಂದು ಹೇಳುತ್ತಾಳೆ.

ಮತ್ತೆ ಹಣಕ್ಕೆ ಬೇಡಿಕೆ ಇಟ್ಟ ಸಂಧ್ಯಾ
ತಾನು ಗರ್ಭಿಣಿ ಎಂದು ಸುಳ್ಳು ಹೇಳಿಕೊಂಡು ತವರು ಮನೆಗೆ ಬಂದು ಸೇರಿಕೊಂಡಿರುವ ಸಂಧ್ಯಾ ಈಗ ನಿಧಾನವಾಗಿ ಅಣ್ಣನ ಬಳಿ ಹಣ ಪೀಕಲು ಮುಂದಾಗಿದ್ದಾಳೆ. ಡಾಕ್ಟರ್ ಬಳಿ ಹೋಗಬೇಕಿತ್ತು ಅದಕ್ಕಾಗಿ 10,000 ಸಾವಿರ ರೂಪಾಯಿ ಇದ್ದರೆ ಕೊಡಿ ಎಂದು ಸಮರ್ಥ್ ಬಳಿ ಕೇಳುತ್ತಾಳೆ. ಸಿರಿ ಅದಕ್ಕೆ ಚೆಕಪ್ ಮಾಡಿಸೋಕೆ ಅಷ್ಟೊಂದು ಹಣ ಬೇಕಾಗುತ್ತಾ ಎಂದು ಪ್ರಶ್ನಿಸಿದ್ದಕ್ಕೆ, ನನ್ನ ಅಮ್ಮ ಇದ್ದಿದ್ದರೆ, ಹೀಗೆಲ್ಲಾ ಆಗುತ್ತಿರಲಿಲ್ಲ ಎಂದು ನಾಟಕ ಮಾಡುತ್ತಾಳೆ. ಆಗ ಸಮರ್ಥ್ ತನ್ನ ಬಳಿ ಹಣವಿಲ್ಲದಿದ್ದರೂ ಸ್ನೇಹಿತರ ಬಳಿ ಸಾಲ ಮಾಡಿ ಸಂಧ್ಯಾಗೆ ಹಣ ಕೊಡುತ್ತಾನೆ.
ಸಂಧ್ಯಾ ಮೇಲೆ ಸಿರಿಗೆ ಅನುಮಾನ
ಸಂಧ್ಯಾ ಅಷ್ಟಕ್ಕೇ ಸುಮ್ಮನಾಗದೇ ಇಷ್ಟೇನಾ? ಇನ್ನು ಒಂದು ಹತ್ತು ಸಾವಿರ ಕೊಡಬಹುದಿತ್ತು ಎಂದು ಕೇಳುತ್ತಾಳೆ. ಆಗ ದತ್ತ ತಾತ ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು ಎಂದು ಹೇಳುತ್ತಾನೆ. ಆದರೆ, ಸಂಧ್ಯಾ ನಡವಳಿಕೆಯಲ್ಲಿ ದತ್ತ ತಾತ ಹಾಗೂ ಸಿರಿ ಇಬ್ಬರಿಗೂ ಅನುಮಾನ ಶುರುವಾಗಿದೆ. ಹಾಗಾಗಿ ಸಿರಿ ತಾನೂ ಕೂಡ ಸಂಧ್ಯಾ ಜೊತೆಗೆ ಚೆಕಪ್‌ಗೆ ಹೋಗುವುದಾಗಿ ಹೇಳುತ್ತಾಳೆ. ಸಂಧ್ಯಾ ಈಗ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತಾಳೋ ಕಾದು ನೋಡಬೇಕಿದೆ.


Click it and Unblock the Notifications











