Shrirasthu Shubhamasthu ನೂರು ಎಪಿಸೋಡ್‌ಗಳ ಸಂಭ್ರಮದಲ್ಲಿ 'ಶ್ರೀರಸ್ತು ಶುಭಮಸ್ತು'!
ಜೀ ಕನ್ನಡ ವಾಹಿನಿಯಲ್ಲಿ ಶ್ರೀರಸ್ತು ಶುಭಮಸ್ತು ನೂರು ಎಪಿಸೋಡ್ ಮುಗಿಸಿರುವ ಸಂಭ್ರಮದಲ್ಲಿದೆ. ಹೊಸ ಕಥೆ ಹೊಸ ಕಾನ್ಸೆಪ್ಟ್‌ನೊಂದಿಗೆ ಕನ್ನಡ ಕಿರುತೆರೆಗೆ ಕಾಲಿಟ್ಟ 'ಶ್ರೀರಸ್ತು ಶುಭಮಸ್ತು' ಧಾರಾವಾಹಿ ನೂರು ಯಶಸ್ವಿ ಎಪಿಸೋಡ್‌ಗಳನ್ನು ಮುಗಿಸಿದ್ದು ತಂಡ ಹಾಗೂ ನಟರು ಬಹಳ ಸಂಭ್ರಮದ ಸಂಭ್ರಮ ಪಟ್ಟಿದ್ದಾರೆ.
ಅತ್ತೆ ಸೊಸೆಯ ಒಂದು ಸೂಪರ್ ಕಾಂಬಿನೇಷನ್ ಅನ್ನು ಹೊಂದಿರುವ ಈ ಕಥಾವಸ್ತುವಿನಲ್ಲಿ ವಿಧವೆಯಾದ ಅತ್ತೆ ತುಳಸಿಗೆ ಮದುವೆ ಮಾಡಿಸುವುದಾಗಿ ಸೊಸೆ ಸಿರಿ ಮುಂದಾಗುತ್ತಾಳೆ. ಆದರೆ ಆಕೆಯ ಈ ನಿರ್ಧಾರಕ್ಕೆ ಬಹಳಷ್ಟು ಕಡೆಯಿಂದ ವಿರೋಧ ಬರುತ್ತದೆ. ಆದರೂ ಅತ್ತೆಯ ಮದುವೆ ಮಾಡಿಸಿಯೇ ತೀರುವುದಾಗಿ ಪಣತೊಟ್ಟಿರುವ ಸೊಸೆಯ ಕಥೆ ಇದು.

ಸಾಮಾನ್ಯವಾಗಿ ಅತ್ತೆ ಸೊಸೆ ಜಗಳ ಅತ್ತೆ ಸೊಸೆ ಕಿರಿಕಿರಿ ಇತ್ಯಾದಿ ಕತೆಗಳನ್ನು ಒಳಗೊಂಡಿರುವ ಧಾರಾವಾಹಿಗಳನ್ನು ನೋಡುತ್ತೇವೆ. ಆದರೆ ಈ ಧಾರಾವಾಹಿ ಒಂದು ಹೊಸ ರೀತಿಯ ಆಯಾಮದಲ್ಲಿ ಹೋಗುತ್ತಿರುವುದು ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಬಹಳ ಖುಷಿ ತಂದಿದೆ.
ಮರಾಠಿಯ 'ಅಗ್ಗಭಾಯಿ ಸಸುಬಾಯಿ' ಎಂಬ ಧಾರಾವಾಹಿಯಿಂದ ರಿಮೇಕ್ ಆದ ಈ ಕಥೆಯಲ್ಲಿ ಕನ್ನಡ ಜನತೆಗೆ ಹಿಡಿಸುವಂತಹ ಬಹಳಷ್ಟು ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆಯಂತೆ. ನಿರ್ದೇಶಕ ಸುದೇಶ್ ಕೆ ರವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಕಥೆಯಲ್ಲಿ ಹಿರಿಯ ಕಲಾವಿದೆ ಸುಧಾರಾಣಿ ಅವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ವಿಶೇಷ.

ಇವರ ಸಹನಟರಾದ ಅಜಿತ್ ಹಾಂಧೆ ಅವರು ಧಾರಾವಾಹಿ ಹಾಗೂ ಅದರ ತಂಡದ ಬಗ್ಗೆ ಮಾತನಾಡುತ್ತಾ "ನೂರು ಯಶಸ್ವಿ ಎಪಿಸೋಡ್ ಗಳನ್ನು ಮುಗಿಸಿರುವುದು ನಮ್ಮೆಲ್ಲರಿಗೂ ಸಂತೋಷ ತಂದಿದೆ. ಖಂಡಿತವಾಗಿಯೂ ಇಡೀ ತಂಡದಲ್ಲಿ ಪ್ರತಿಯೊಬ್ಬರ ಶ್ರಮ ಇದರಲ್ಲಿ ಇದ್ದೇ ಇದೆ. ಕನ್ನಡ ಕಿರುತೆರೆಪ್ರಿಯರಿಗೆ ಕಥೆ ಹಿಡಿಸುವಂತೆ ಅದ್ಭುತವಾಗಿ ಕಥೆಯನ್ನು ಕಟ್ಟಿಕೊಡುತ್ತಾ ಬಂದಿರುವ ನಿರ್ದೇಶಕರಿಗೂ ಹಾಗೂ ತಂಡಕ್ಕೂ ನಾನು ಅಭಿನಂದನೆ ಸಲ್ಲಿಸುತ್ತೇನೆ" ಎಂದಿದ್ದಾರೆ.


Click it and Unblock the Notifications











