Shrirastu Shubhamasthu: ಆಸ್ತಿಯಲ್ಲಿ ಪಾಲು ಕೇಳಿದ ಸಂಧ್ಯಾ: ಮಾಧವ್ ಮಾತು ಕೇಳಿ ಶಾರ್ವರಿ ಶಾಕ್
'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ಮಾಧವ್‌ಗೆ ಬಹಳ ಖುಷಿಯಾಗಿದೆ. ತುಳಸಿ ತನ್ನನ್ನು ನೋಡಲು ಬಂದಿದ್ದು ಕೂಡ ಸಂತಸವನ್ನು ತಂದಿದೆ. ಮಾಧವ್‌ನಲ್ಲಿದ್ದ ಗೊಂದಲಕ್ಕೆ ತೆರೆ ಬಿದ್ದಿದ್ದು, ತುಳಸಿ ಅವರನ್ನು ತನ್ನ ಬಾಳ ಸಂಗಾತಿಯನ್ನಾಗಿ ಮಾಡಿಕೊಳ್ಳುವ ಆಸೆಯಲ್ಲಿದ್ದಾನೆ. ತುಳಸಿ ತನ್ನನ್ನು ಅರ್ಥ ಮಾಡಿಕೊಂಡಿರುವುದಕ್ಕೆ ಅವನ ಮನವು ಹಕ್ಕಿಯಂತೆ ಹಾರಾಡುವಂತಾಗಿದೆ. ಇದು ಧಾರಾವಾಹಿ ಕಥೆಯಲ್ಲಿ ಹೊಸ ತಿರುವಿಗೆ ಕಾರಣವಾಗಿದೆ.
ಇತ್ತ ತುಳಸಿ ಮನೆಯಲ್ಲಿ ಸಿರಿ ಬಳಿ ಮಾಧವ್ ಬಗ್ಗೆ ನಡೆದ ಎಲ್ಲಾ ವಿಚಾರವನ್ನು ಹಂಚಿಕೊಳ್ಳುತ್ತಾಳೆ. ಮಾಧವ್ ಕೆಫೆ ಬರದೇ ಇದ್ದದ್ದು, ಯಾವುದೋ ಗುಡ್ಡದಲ್ಲಿ ಕುಳಿತು ಯೋಚಿಸುತ್ತಿದ್ದನ್ನು ಹೇಳುತ್ತಾಳೆ. ಇನ್ನು ಸಂಧ್ಯಾ ತಾತನ ಬಳಿ ಮನೆಯ ಆಸ್ತಿಯಲ್ಲಿ ಭಾಗವನ್ನು ಕೇಳಿರುತ್ತಾಳೆ. ಭಾಗ ಕೊಡುವ ವರೆಗೂ ಈ ಮನೆಯಿಂಧ ಹೋಗುವುದಿಲ್ಲ ಎಂದು ಹೇಳಿರುತ್ತಾಳೆ. ತುಳಸಿಗೆ ಹುಷಾರಿಲ್ಲ ಎಂಬ ಕಾರಣಕ್ಕಾಗಿ ಎಲ್ಲರೂ ಸಂಧ್ಯಾ ಭಾಗ ಕೇಳಿದ್ದ ವಿಚಾರವನ್ನು ಮುಚ್ಚಿಡುತ್ತಾರೆ.

ಊಟ ಮಾಡುವಾಗ ದತ್ತ ತಾತ ಸಂಧ್ಯಾಳನ್ನು ಮನೆಯಿಂದ ಹೊರಗೆ ಕಳಿಸಲು, ನಿನ್ನ ಗಂಡ ಬಂದಿದ್ದಾನಂತೆ, ನಾಳೆ ಬೆಳಗ್ಗೆ ಹೊರಟು ಬಿಡು ಎಂದು ಹೇಳುತ್ತಾನೆ. ತುಳಸಿಗೂ ಖುಷಿಯಾಗುತ್ತದೆ. ದತ್ತ ತಾತನ ಮಾತಿಗೆ ಬಗ್ಗದ ಸಂಧ್ಯಾ, ಈ ಮನೆಯಲ್ಲಿ ನನ್ನ ಪಾಲನ್ನು ಕೊಡುವವರೆಗೂ ನಾನು ಹೋಗಲ್ಲ ಎಂದು ಜೋರಾಗಿ ಕೇಳುತ್ತಾಳೆ. ಇದರಿಂದ ತುಳಸಿಗೆ ಶಾಕ್ ಆಗುತ್ತದೆ.
ಮಗಳಿಗೆ ಬುದ್ಧಿ ಹೇಳಿದ ತುಳಸಿ
ತುಳಸಿ ಮಗಳಿಗೆ ಬೈಯುತ್ತಾಳೆ. ತಾತನ ಬಳಿ ಹೇಗೆ ಮಾತನಾಡಬೇಕು ಎಂದು ಗೊತ್ತಿಲ್ಲ. ಅವರು ಮಾಡಿದ ಆಸ್ತಿಯಲ್ಲಿ ಪಾಲು ಕೇಳುವುದು ತಪ್ಪು ಸಂಧ್ಯಾ. ಅವರು ಇಷ್ಟಪಟ್ಟು ಕೊಟ್ಟರೆ ತಗೋಬೇಕು ಎಂದು ಹೇಳುತ್ತಾಳೆ. ಆದರೆ ಸಂಧ್ಯಾ ಇಲ್ಲ. ನೀವೇನಾದರೂ ಹೇಳಿಕೊಳ್ಳಿ ನನಗೆ ಈ ಮನೆಯಲ್ಲಿ ಅರ್ಧ ಭಾಗ ಬರಬೇಕು. ಇಲ್ಲದಿದ್ದರೆ, ತಾತ ನನ್ನ ಹೆಸರಿನಲ್ಲಿ ಇಟ್ಟಿರುವ ಹತ್ತು ಲಕ್ಷ ರೂಪಾಯಿಯನ್ನಾದರೂ ಕೊಡಬೇಕು ಎಂದು ಜೋರು ಮಾಡುತ್ತಾಳೆ.

ದತ್ತ ತಾತ ನನ್ನ ಆಸ್ತಿಯಲ್ಲಿ ನಿನಗೆ ಬಿಡಿಗಾಸು ಕೂಡ ಕೊಡುವುದಿಲ್ಲ ಎಂದು ಹೇಳುತ್ತಾರೆ. ನಾಳೆ ಸಂಜೆ ಒಳಗೆ ಸಂಧ್ಯಾ ಮನೆಯಿಂದ ಹೊರಡಬೇಕು. ಇಲ್ಲದಿದ್ದರೆ, ಪರಿಣಾಮ ಕೆಟ್ಟದಾಗಿರುತ್ತದೆ ಎಂದು ದತ್ತ ತಾತ ಎಚ್ಚರಿಕೆ ಕೊಟ್ಟಿದ್ದಾರೆ.
ಶಾರ್ವರಿಗೆ ಅನುಮಾನ
ಇನ್ನು ಶಾರ್ವರಿ, ಅಭಿ ಬಿಸಿನೆಸ್‌ಗೆ ಹಣ ಹೂಡಿರುವ ವಿಚಾರವಾಗಿ ಸದ್ಯ ಸುಳ್ಳು ಹೇಳಿ ಅವಿಗೆ ಬೇಸರವಾಗುವಂತೆ ಮಾಡಿರುತ್ತಾಳೆ. ಅವಿ, ಶಾರ್ವರಿ ಚಿಕ್ಕಮ್ಮ ಮನೆಗಾಗಿ ಎಷ್ಟೆಲ್ಲಾ ಮಾಡಿದರೂ ಅವರನ್ನು ನಾವ್ಯಾರೂ ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ಬೇಸರ ಮಾಡಿಕೊಂಡಿರುತ್ತಾನೆ. ಇತ್ತ ಮಾಧವ್ ಅಭಿಯನ್ನು ಬಿಸಿನೆಸ್ ಹೇಗೆ ನಡೆಯುತ್ತಿದೆ ಎಂದು ವಿಚಾರಿಸಿಕೊಳ್ಳುತ್ತಾನೆ. ಜೊತೆಗೆ ಅಭಿ ಮದುವೆ ತಯಾರಿ ಬಗ್ಗೆಯೂ ಶಾರ್ವರಿಗೆ ನೆನಪು ಮಾಡುತ್ತಾನೆ. ಶತ್ರು ಮಗಳನ್ನು ತನ್ನ ಮಗ ಮದುವೆ ಆಗುತ್ತಿದ್ದರೂ ಕೂಡ ಭಾವ ಖುಷಿಯಾಗಿದ್ದಾರಲ್ಲ ಎಂದು ಅನುಮಾನಿಸುತ್ತಾಳೆ.
ಪ್ರೀತಿ ವಿಚಾರ ಹೇಳಿಕೊಂಡ ಮಾಧವ್
ಮಾಧವ್ ಊಟ ಆದ ಬಳಿಕ ತಮ್ಮ ಮಹೇಶನನ್ನು ಗಾರ್ಡನ್‌ಗೆ ಕರೆದುಕೊಂಡು ಬರುತ್ತಾನೆ. ಅಲ್ಲಿ ಮಹೇಶ್‌ಗೆ ತನ್ನ ಪ್ರೀತಿಯ ಬಗ್ಗೆ ಹೇಳಿಕೊಳ್ಳುತ್ತಾನೆ. ತುಳಸಿ ಮೇಲೆ ತನಗೆ ಸ್ನೇಹಕ್ಕಿಂತಲೂ ಹೆಚ್ಚಿನ ಭಾವವಿದೆ. ಅವರ ಬಳಿ ತನ್ನ ಪ್ರೀತಿಯನ್ನು ಹೇಳಿಕೊಳ್ಳಲಾ ಎಂದು ಮಹೇಶ್‌ನನ್ನು ಕೇಳುತ್ತಾನೆ. ಇದೇ ಸಂದರ್ಭದಲ್ಲಿ ಶಾರ್ವರಿ ಅಲ್ಲಿಗೆ ಬರುತ್ತಾಳೆ. ಮಾಧವ್ ಮಾತುಗಳನ್ನು ಕೇಳಿಸಿಕೊಂಡು ಹೊಟ್ಟೆ ಉರಿದುಕೊಳ್ಳುತ್ತಾಳೆ. ಆದರೆ, ಮಹೇಶ್ ನಕ್ಕು ಶಾರ್ವರಿಗೆ ಇನ್ನಷ್ಟು ಉರಿಸುತ್ತಾನೆ.


Click it and Unblock the Notifications











