Shrirastu Shubhamasthu: ಮಾಧವ್ ಕೊಟ್ಟ ದೊಡ್ಡ ಆಫರ್ ಅನ್ನು ಬೇಡ ಎಂದಳಾ ತುಳಸಿ..?
'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ಅಭಿಗೆ ತನ್ನ ತಂದೆಯ ಮೇಲಿನ ಕೋಪ ಹೆಚ್ಚಾಗಿದೆ. ಮನೆಯಲ್ಲಿನ ವಾತಾವರಣ ಮತ್ತೆ ಬಿಸಿಯಾಗಿದೆ. ಇದರಿಂದ ಶಾರ್ವರಿ ಫುಲ್ ಖುಷಿಯಾಗಿದ್ದಾಳೆ. ಶಾರ್ವರಿಗೆ ತನ್ನ ಬಾವ ಮಾಧವ್ ಹಾಗೂ ಅವರ ಮಕ್ಕಳು ಒಟ್ಟಿಗೆ ನಗುನಗುತಾ ಇರುವುದು ಇಷ್ಟವೇ ಇಲ್ಲ. ಹಾಗಾಗಿ ಪದೇ ಪದೆ ಇವರನ್ನು ಬೇರೆ ಮಾಡಲು ಪಿತೂರಿ ಮಾಡುತ್ತಲೇ ಇರುತ್ತಾಳೆ.
ಜನಾರ್ಧನ್ ಜೊತೆಗೆ ಸೀಕ್ರೆಟ್ ಆಗಿ ಸಂಪರ್ಕ ಹೊಂದಿರುವ ಶಾರ್ವರಿ, ಅಭಿ ಮನೆಯಿಂದ ಸಂಪೂರ್ಣವಾಗಿ ದೂರವಾಗುವಂತೆ ಪ್ಲ್ಯಾನ್ ಮಾಡಿದ್ದಾಳೆ. ದತ್ತ ತಾತ ವಾಕಿಂಗ್ ಮಾಡುವಾಗ ಸಹನಾಳನ್ನು ನೋಡುತ್ತಾನೆ. ಸಹನಾ ಬಟ್ಟೆ ಅಂಗಡಿಯಲ್ಲಿ ಶಾಪಿಂಗ್ ಮಾಡುತ್ತಿರುತ್ತಾಳೆ. ಇದನ್ನು ನೋಡಿದ ತಾತನಿಗೆ ಶಾಕ್ ಆಗುತ್ತದೆ. ಅಲ್ಲೇ ಕಾದಿದ್ದು, ಸಹನಾ ಆಚೆ ಬರುವವರೆಗೂ ಇರುತ್ತಾನೆ. ಸಹನಾ ಆಚೆ ಬರುತ್ತಿದ್ದಂತೆ ಅಮ್ಮನ ಬಳಿ ಸುಳ್ಳು ಹೇಳಿ ಹಣ ಕಿತ್ತುಕೊಂಡು, ಇಲ್ಲಿ ಶಾಪಿಂಗ್ ಮಾಡುತ್ತಿದ್ದೀಯಾ ಎಂದು ಪ್ರಶ್ನೆ ಮಾಡುತ್ತಾರೆ.

ಸಹನಾ ತಾತನಿಗೆ ಸ್ವಲ್ಪವೂ ಗೌರವ ಕೊಡದೇ, ಬೇಕಾಬಿಟ್ಟಿ ಮಾತನಾಡುತ್ತಾಳೆ. ತನ್ನ ಹೆಸರಲ್ಲಿ 10 ಲಕ್ಷ ರೂ. ಬಾಂಡ್ ಇಟ್ಟ ಬಗ್ಗೆ ಹೇಳುತ್ತಾಳೆ. ಆಗ ತಾತ ಇದರಿಂದ ಹೀಗೆ ಮಾಡುತ್ತಿದ್ದೀಯಾ. ಆಗ ಬುದ್ಧಿ ಇಲ್ಲದೇ ನಿನ್ನ ಹೆಸರಲ್ಲಿ ಇಟ್ಟೆ. ಆದರೆ ಈಗ ಅದನ್ನು ಬದಲಾಯಿಸುತ್ತಿದ್ದೇನೆ ಎಂದು ಹೇಳುತ್ತಾರೆ. ಇದರಿಂದ ಸಹನಾಗೆ ಶಾಕ್ ಆಗುತ್ತದೆ. ಮತ್ತೆ ನಾಟಕ ಮಾಡಿಕೊಂಡು ಬರಬೇಡ ಎಂದು ದತ್ತ ತಾತ ಬೈದು ಕಳಿಸುತ್ತಾರೆ.
ಇತ್ತ ಮಾಧವ್, ತುಳಸಿಯನ್ನು ಭೇಟಿಯಾಗಲು ಮನೆಗೆ ಬರುತ್ತಾರೆ. ಬಂದು ತುಳಸಿಗೆ ಸೀರೆಯನ್ನು ಕೊಟ್ಟು, ತಮ್ಮ ಕೆಫೆಗೆ ಶೆಫ್ ಆಗುವಂತೆ ಕೇಳುತ್ತಾನೆ. ಈ ಆಫರ್ ಅನ್ನು ಕೇಳಿ ತುಳಸಿ ಖುಷಿಯಾಗುತ್ತಾಳೆ. ಆದರೆ, ಬರೋದಿಕ್ಕೆ ಆಗೋದಿಲ್ಲ. ನಿಮ್ಮ ಜೊತೆಗೆ ಕೆಲಸ ಮಾಡುವುದು ನನಗೂ ಇಷ್ಟವೇ. ಆದರೆ ಏನು ಮಾಡಲಿ ಡಬ್ಬಿ ಕೆಲಸ ಜೊತೆಗೆ ಪದ್ಮ ಅವರ ಬಳಿ ಕೆಲಸಕ್ಕೆ ಈಗ ಸೇರಿದ್ದೀನಿ. ನನಗೆ ಕಷ್ಟವಿದ್ದಾಗ ಸಹಾಯವಾಗಿದ್ದು, ಈಗ ಹೇಗೆ ಬಿಟ್ಟು ಬರಲಿ ಎಂದು ಹೇಳುತ್ತಾಳೆ. ಅದಕ್ಕೆ ಮಾಧವ್ ನೀವು ನಿಧಾನವಾಗಿ ಯೋಚಿಸಿ ಯಾವ ನಿರ್ಧಾರವನ್ನಾದರೂ ತೆಗೆದುಕೊಳ್ಳಿ ಎಂದು ಹೇಳಿ ಬರುತ್ತಾನೆ.
ಇನ್ನು ಸಿರಿ, ತುಳಸಿಗೆ ಕೆಫೆ ಕೆಲಸದಲ್ಲಿ ನಿಮಗೆ 20,000 ಹಣ ಬಂದಿದೆ. ಅದನ್ನು ಕೊಡುತ್ತೀನಿ. ಅದರ ಜೊತೆಗೆ ತಾತನ ಸಾಲ ತೀರಿಸಲು ನನ್ನ ಪಾಲಿನ ಹಣವನ್ನೂ ಕೊಡುತ್ತೀನಿ ಎಂದು ಹೇಳುತ್ತಾಳೆ. ಆಗ ತುಳಸಿ ಬೇಡ. ನಿಮ್ಮ ಪಾಲಿನ ಹಣವನ್ನು ನೀವೇ ಇಟ್ಟುಕೊಳ್ಳಿ ಎಂದು ಹೇಳುತ್ತಾಳೆ. ಇನ್ನು ಪದ್ಮ ಅವರ ಬಗ್ಗೆ ಮಾಧವ್ ಸಂದರ್ಶನದಲ್ಲಿ ಮಾತನಾಡಿದ್ದಕ್ಕೆ ಅವರ ಬಗ್ಗೆ ಪೇಪರ್‌ನಲ್ಲಿ ಲೇಖನ ಬಂದಿರುತ್ತದೆ. ಹೀಗಾಗಿ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿರುತ್ತಾರೆ. ಈ ಖುಷಿಯ ವಿಚಾರವನ್ನು ಪದ್ಮ, ತುಳಸಿ ಬಳಿ ಹೇಳಿಕೊಂಡು ಧನ್ಯವಾದವನ್ನು ಹೇಳುತ್ತಾಳೆ. ಇದರಿಂದ ತುಳಸಿಗೂ ಖುಷಿಯಾಗುತ್ತದೆ.

ದಾರಿ ಮಧ್ಯದಲ್ಲಿ ಮಾಧವ್ ಗಾಡಿ ಕೈಕೊಟ್ಟಿರುತ್ತದೆ. ಮನೆಗೆ ಬರುತ್ತಿದ್ದ ಅವಿ ಇದನ್ನು ನೋಡಿ, ಮಾಧವ್‌ಗೆ ಡ್ರಾಪ್ ಕೊಡುತ್ತಾನೆ. ದಾರಿಯಲ್ಲಿ ಬರುತ್ತಾ ಹೊಸ ಗಾಡಿಯನ್ನು ಖರೀದಿಸಲು ಅವಿ ಸಲಹೆ ಕೊಡುತ್ತಾನೆ. ಮನೆಗೆ ಇಬ್ಬರೂ ಒಟ್ಟಿಗೆ ಬಂದಿದ್ದನ್ನು ನೋಡಿದ ಪೂರ್ಣಿಮಾ ಖುಷಿಪಡುತ್ತಾಳೆ. ಆದರೆ, ಶಾರ್ವರಿ ಸಂಕಟ ಪಡುತ್ತಾಳೆ. ಅಭಿ, ಮಾಧವ್ ದೂರಾಗುವಾಗಲೇ, ಅವಿ ಹತ್ತಿರವಾಗುತ್ತಿದ್ದಾನೆ ಎಂದು ಒದ್ದಾಡುತ್ತಾಳೆ. ಇದರಿಂದ ಶಾರ್ವರಿ ಮುಂದಿನ ಟಾರ್ಗೆಟ್ ಅವಿಯೇ ಆಗುತ್ತಾನಾ ಎಂಬ ಕುತೂಹಲ ಮೂಡಿದೆ.


Click it and Unblock the Notifications











