Shrirastu Shubhamasthu: ಅನುಮಾನದ ಜೊತೆಗೆ ಕುತೂಹಲ ಮೂಡಿಸಿದ ಶಾರ್ವರಿ ಮಾತು
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಮದುವೆಯಾದ ಬಳಿಕ ತುಳಸಿ ಮೊದಲ ಬಾರಿಗೆ ಗಂಡ ಮಾಧವ್ ಜೊತೆಗೆ ತವರು ಮನೆಗೆ ಆಗಮಿಸಿದ್ದಾಳೆ. ಆದರೆ, ತುಳಸಿಗೆ ಎದುರಾದವರೆಲ್ಲಾ ಈ ವಯಸ್ಸಲ್ಲಿ ಇದೆಲ್ಲಾ ಬೇಕಿತ್ತಾ? ಎಂಬಂತೆ ಮುಖ ಮಾಡುತ್ತಾರೆ. ಇದರಿಂದ ತುಳಸಿಗೆ ಹಿಂಸೆ ಆಗುತ್ತಿರುವುದನ್ನು ಮಾಧವ್ ಗಮನಿಸುತ್ತಾರೆ.
ಅಷ್ಟರಲ್ಲಿ ದತ್ತ ತಾತ ಹೊರಗೆ ಬಂದು ಮಾಧವ್ ಹಾಗೂ ತುಳಸಿಯನ್ನು ಖುಷಿಯಿಂದ ಸ್ವಾಗತಿಸುತ್ತಾರೆ. ಆಗ ತುಳಸಿ ಗಮನ ಮನೆಯವರತ್ತ ಜಾರುತ್ತದೆ. ದತ್ತ ತಾತ ವರಮಹಾಲಕ್ಷ್ಮೀ ಹಬ್ಬಕ್ಕೆ ಎಲ್ಲಾ ತಯಾರಿ ಮಾಡಿಕೊಂಡಿರುತ್ತಾರೆ. ತುಳಸಿ ಮತ್ತು ಮಾಧವ್ ಬಂದ ಕೂಡಲೇ ಪುರೋಹಿತರು ವರಮಹಾಲಕ್ಷೀಯ ಪೂಜೆಯನ್ನು ಮಾಡಿಸುತ್ತಾರೆ.

ಅದ್ಧೂರಿಯಾಗಿ ನಡೀತು ಲಕ್ಷ್ಮೀ ಪೂಜೆ
ತುಳಸಿ ಮತ್ತು ಮಾಧವ್ ದೇವರಿಗೆ ಹೂವು ಹಾಕುವಾಗ ಅಕಸ್ಮಾತ್ ಆಗಿ ತುಳಸಿ, ಮಾಧವ್ಗೆ ಹಾಕುತ್ತಾಳೆ. ಇದನ್ನು ನೋಡಿ ಎಲ್ಲರೂ ಖುಷಿ ಪಡುತ್ತಾರೆ. ಮಾಧವ್ ಅವರಿಗೆ ತುಳಸಿ ಸಿಕ್ಕಿರುವುದು ಪುಣ್ಯ. ತುಳಸಿಯನ್ನು ಹೀಗೆ ಮುತ್ತೈದೆ ಆಗಿ ನೋಡುವುದು ಬಹಳ ಖುಷಿಯಾಗುತ್ತದೆ ಎಂದು ಗೋದಾವರಿ ಹೇಳುತ್ತಾಳೆ. ಈ ಮಾತಿಗೆ ಸಿರಿ ಕೂಡ ಅಮ್ಮನೂ ಮಾಧವ್ ಅವರನ್ನು ಮದುವೆಯಾಗಲು ಅಷ್ಟೇ ಪುಣ್ಯ ಮಾಡಿದ್ದಾರೆ ಎಂದು ಹೇಳುತ್ತಾಳೆ. ಒಟ್ನಲ್ಲಿ ಮನೆಯವರೆಲ್ಲರೂ ತುಳಸಿ ಮತ್ತು ಮಾಧವ್ ಮದುವೆ ಆಗಿರುವುದಕ್ಕೆ ಖುಷಿಯಾಗಿದ್ದಾರೆ.
ಒಟ್ಟಿಗೆ ಊಟ ಮಾಡಿದ ಮಾಧವ್-ತುಳಸಿ
ಪೂಜೆ ಎಲ್ಲಾ ಮುಗಿದ ಮೇಲೆ ಮಾಧವ್ ಮತ್ತು ತುಳಸಿ ಇಬ್ಬರನ್ನು ಊಟಕ್ಕೆ ಕೂರಿಸುತ್ತಾರೆ. ಇದು ತುಳಸಿಗೆ ಮುಜುಗರ ಉಂಟು ಮಾಡುತ್ತದೆ. ತುಳಸಿ ಇಲ್ಲ ಬೇಡ ಎಂದು ಎಷ್ಟೇ ಹೇಳಿದರೂ ಕೂಡ ಸಿರಿ ಬಿಡುವುದಿಲ್ಲ. ನೀವಿಬ್ಬರೂ ಕೂಡ ಈಗ ಮದುವೆಯಾಗಿದ್ದೀರಾ. ಅದರಲ್ಲೂ ಇವತ್ತು ಹಬ್ಬ, ಹಾಗಾಗಿ ಒಟ್ಟಿಗೆ ಕುಳಿತು ಊಟ ಮಾಡಲೇಬೇಕು ಎಂದು ಹೇಳುತ್ತಾಳೆ. ತುಳಸಿ ಎಲ್ಲರ ಬಲವಂತಕ್ಕೆ ಬೇರೆ ದಾರಿ ಇಲ್ಲದೇ ಊಟಕ್ಕೆ ಕೂರುತ್ತಾಳೆ. ಗೋದಾವರಿ ಮೊಮ್ಮಗನಿಗೆ ತುಳಸಿ ಹೋಳಿಗೆ ತಿನ್ನಿಸಿ ಬಳಿಕ ತಾನೂ ಊಟ ಮಾಡುತ್ತಾಳೆ. ಎಲ್ಲರೂ ತುಳಸಿ ಮುತ್ತೈದೆ ಆಗಿರುವುದಕ್ಕೆ ಸಂತಸ ಪಡುತ್ತಾರೆ.
ಗಾಬರಿಯಾಗಿರುವ ಅವಿನಾಶ್
ಇತ್ತ ಅಭಿ, ದೀಪಿಕಾಳನ್ನು ಭೇಟಿ ಆಗಬೇಕು ಎಂದು ಯಾರಿಗೂ ಹೇಳದೇ ಮನೆಯಿಂದ ಹೊರಗೆ ಹೊರಟಿದ್ದಾನೆ. ಆದರೆ ಅವಿ, ಅಭಿ ಎಲ್ಲಿಗೆ ಹೋಗಿದ್ದಾನೆ ಎಂದು ತಿಳಿಯದೇ ಗಾಬರಿಯಾಗಿದ್ದಾನೆ. ಮನೆಯಲ್ಲಿ ಶಾರ್ವರಿ ಹಾಗೂ ಪೂರ್ಣಿಮಾ ಬಳಿ ಹೇಳಿಕೊಳ್ಳುತ್ತಿರುತ್ತಾನೆ. ಅಭಿ ನನ್ನಂತೆ ಅಲ್ಲ. ಅವನು ಬಹಳ ಸೆನ್ಸಿಟಿವ್. ಅವನಿಗೆ ಈ ಸಂದರ್ಭಗಳನ್ನು ಎದುರಿಸಲು ಬರುವುದಿಲ್ಲ. ಏನಾದರೂ ಮಾಡಿಕೊಳ್ಳುತ್ತಾನೆ ಅನ್ನೋ ಭಯ. ಅಭಿ ನನಗೆ ಮಗ ಇದ್ದಂತೆ. ಅವನಿಗೆ ಏನಾದರೂ ಆದರೆ ನನಗೆ ಸಹಿಸಿಕೊಳ್ಳಲು ಆಗುವುದಿಲ್ಲ ಎಂದು ತನ್ನ ಆತಂಕ ವ್ಯಕ್ತ ಪಡಿಸುತ್ತಾನೆ.

ಹುಳ ಬಿಟ್ಟ ಶಾರ್ವರಿ
ಈ ವೇಳೆ ಸಿಕ್ಕಿದ್ದೇ ಅವಕಾಶ ಎಂದು ತಿಳಿದ ಶಾರ್ವರಿ ಮನೆಯವರ ತಲೆಗೆ ಹುಳ ಬಿಡುತ್ತಾಳೆ. ಇಷ್ಟು ವರ್ಷ ಎಲ್ಲವೂ ನನ್ನ ಕಂಟ್ರೋಲ್‌ನಲ್ಲಿ ಇತ್ತು. ಆದರೆ, ಈಗ ನಾನೇನು ಮಾಡಲಿ. ಮೊದಲೆಲ್ಲಾ ಯಾವುದಾದರೂ ಸಮಸ್ಯೆ ಆದ್ರೆ ನಾನೇ ಸಲೀಸಾಗಿ ಸರಿ ಮಾಡುತ್ತಿದ್ದೆ. ಆದರೆ ಈಗ ಹಾಗಿಲ್ಲ. ಅದೊಂದು ಘಟನೆ ನಡೆಯದೇ ಹೋಗಿದ್ದರೆ, ಈಗ ಇಷ್ಟೆಲ್ಲಾ ಸಮಸ್ಯೆ ಆಗುತ್ತಲೇ ಇರಲಿಲ್ಲ. ಅದೊಂದು ನನ್ನ ಕೈಮೀರಿ ನಡೆದು ಹೋಯಿತು ಎಂದು ಹೇಳುತ್ತಾಳೆ. ಆ ಒಂದು ಘಟನೆ ಯಾವುದು ಎಂದು ಪೂರ್ಣಿಮಾಳಿಗೆ ಕುತೂಹಲವನ್ನು ಉಂಟು ಮಾಡುತ್ತದೆ.


Click it and Unblock the Notifications











