ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಿರುತೆರೆ ನಟಿ ದೀಪಾ ಕಟ್ಟೆ
Article desc: ಕನ್ನಡ ಕಿರುತೆರೆ ನಟಿಯರು ಸಾಲು ಸಾಲಾಗಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಕೆಲವರು ಸೆಟ್‌ನಲ್ಲೇ ಪ್ರೀತಿಸಿ ಮದುವೆಯಾದರೆ, ಮತ್ತೆ ಕೆಲವರು ಅರೇಂಜ್ ಮ್ಯಾರೇಜ್ ಆಗುತ್ತಿದ್ದಾರೆ. ಇದೇ ಸಾಲಿಗೆ ನಟಿ ದೀಪಾ ಕಟ್ಟೆ ಕೂಡ ಸೇರುತ್ತಾರೆ. 'ಬ್ರಹ್ಮಗಂಟು' ನಟಿ ಶೋಭಿತಾ ಶಿವಣ್ಣ, 'ನನ್ನರಸಿ ರಾಧೆ' ನಟಿ ಸಹನಾ ಶೆಟ್ಟಿ ಕಳೆದೊಂದು ತಿಂಗಳಲ್ಲಿ ಸದ್ದಿಲ್ಲದೇ ಸಪ್ತಪದಿ ತುಳಿದಿದ್ದಾರೆ.
ಇದೀಗ ನಟಿ ದೀಪಾ ಕಟ್ಟೆ ಅವರು ಕೂಡ ಯಾರಿಗೂ ಸುಳಿವು ಕೊಡದೇ ವಿವಾಹವಾಗಿದ್ದು, ಇದೀಗ ಅವರ ಮದುವೆಯ ಫೋಟೋಗಳು ವೈರಲ್ ಆಗುತ್ತಿದೆ. ಮಲೆನಾಡಿದ ಬೆಡಗಿ ನಟಿ ದೀಪಾ ಕಟ್ಟೆ. ಉಜಿರೆಯಲ್ಲಿ ಓದಿ ಇಂಜಿನಿಯರಿಂಗ್ ಮಾಡಿದ ನಟಿ ದೀಪಾ ಕಟ್ಟೆ ಅವರು ಎಂಎನ್‌ಸಿ ಕಂಪನಿಯೊಂದರಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.

ದೀಪಾ ಕಟ್ಟೆ ಅವರಿಗೆ ನಟನೆ ಮೇಲಿನ ವ್ಯಾಮೋಹ, ಕೆಲಸದಲ್ಲಿನ ಆಸಕ್ತಿಯನ್ನು ಕ್ಷಣ ಕ್ಷಣಕ್ಕೂ ಕುಗ್ಗಿಸುತ್ತಾ ಬಂದಿತ್ತು. ಇನ್ನು ಕಂಪ್ಯೂಟರ್ ಮುಂದೆ ಕುಳಿತರೆ ಆಗದು, ಸ್ಟೇಜ್ ಹತ್ತಲೇಬೇಕು ಎಂದು ತೀರ್ಮಾನಿಸಿದ ದೀಪಾ ಕೆಲಸಕ್ಕೆ ವಿದಾಯ ಹೇಳಿಬಿಟ್ಟರು.
ನಿರೂಪಕಿ ಆಗಿ ಬಂದು ನಟನೆ ಆರಂಭ
ಬಳಿಕ ದೀಪಾ ಕಟ್ಟೆ ಸೀದಾ ಬಂದದ್ದು, ಅಭಿನಯ ತರಂಗದಲ್ಲಿ ಒಂದು ವರ್ಷ ಕಾಲ ಡಿಪ್ಲೊಮಾ ಕೋರ್ಸ್ ಅನ್ನು ಮಾಡಿದರು. ಇದರಲ್ಲಿ ಡಿಪ್ಲೋಮಾ ಪಡೆದ ಮೇಲೆ ನಿರೂಪಕಿಯಾಗಿ ಕಿರುತೆರೆಗೆ ಎಂಟ್ರಿಕೊಟ್ಟರು. ನಂತರ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿದ್ದ 'ಶಾಂತಂ ಪಾಪಂ' ಎಂಬ ಅಪರಾಧಗಳ ಬಗೆಗಿನ ಸಿರೀಸ್ ಮೂಲಕ ನಟನೆಯನ್ನು ಪ್ರಾರಂಭಿಸಿಯೇ ಬಿಟ್ಟರು. ಅಲ್ಲಿಂದ ಕಿರುತೆರೆ ಪಯಣ ಆರಂಭಿಸಿದ ದೀಪಾ ಕಟ್ಟೆ ಬಣ್ಣದ ಲೋಕದ ಜೊತೆಗೆ ಉಳಿದಿದ್ದಾರೆ.

ಹಲವು ಧಾರಾವಾಹಿಗಳಲ್ಲಿ ನಟನೆ
ದೀಪಾ ಕಟ್ಟೆ 'ಮಿಥುನ ರಾಶಿ', 'ಹಿಟ್ಲರ್ ಕಲ್ಯಾಣ', 'ಜೀವ ಹೂವಾಗಿದೆ' ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. 'ಮಿಥುನ ರಾಶಿ' ಧಾರಾವಾಹಿಯಲ್ಲಿ ಮಿಥುನ್ ಚಿಕ್ಕಪ್ಪನ ಮಗಳು ಭಾವನಾ ಪಾತ್ರದಲ್ಲಿ ಕಾಣಿಸಿಕೊಂಡರು. 'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ಶ್ವೇತಾ ಪಾತ್ರಕ್ಕೆ ಬಣ್ಣ ಹಚ್ಚಿದರು. 'ಜೀವ ಹೂವಾಗಿದೆ' ಧಾರಾವಾಹಿಯಲ್ಲಿ ಶಿಲ್ಪಾ ರವಿ ಬದಲು ನಾಯಕಿ ಮಧುಮಿತ ಪಾತ್ರಕ್ಕೆ ಜೀವ ತುಂಬಿದರು. ಇನ್ನು 'ಧ್ರುವ ನಕ್ಷತ್ರ' ಧಾರಾವಾಹಿಯಲ್ಲಿ ಲೀಡ್ ರೋಲ್‌ನಲ್ಲಿ ನಟಿಸಿದರು.
'ದಿಯಾ' ಸಿನಿಮಾದಲ್ಲಿ ನಾಯಕಿ ದಿಯಾ ಸ್ವರೂಪ್ ಚಿಕ್ಕಪ್ಪನ ಮಗಳ ಪಾತ್ರದಲ್ಲೂ ದೀಪಾ ಕಟ್ಟೆ ನಟಿಸಿದ್ದಾರೆ. ಸದ್ಯ ದೀಪಾ ಕಟ್ಟೆ ಅವರು 'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ಸಂಧ್ಯಾ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಂಧ್ಯಾ ಪಾತ್ರವನ್ನು ಜನ ಮೆಚ್ಚಿಕೊಂಡಿದ್ದು, ಇದರಲ್ಲಿ ದೀಪಾ ಕಟ್ಟೆ ಅವರದ್ದು ನೆಗೆಟಿವ್ ರೋಲ್ ಆಗಿದೆ. ಧಾರಾವಾಹಿಯಲ್ಲಿ ತಾತ ಇವಳನ್ನು ಓಡಿ ಹೋದವಳು ಎಂದು ಕರೆಯುತ್ತಿದ್ದು, ಇದೇ ಹೆಸರಿನಲ್ಲಿ ಫೇಮಸ್ ಆಗಿದ್ದಾರೆ.
ಸದ್ದಿಲ್ಲದೇ ಮದುವೆಯಾದ ನಟಿ
ಮೂರು ತಿಂಗಳ ಹಿಂದೆ ಯಾರಿಗೂ ಹೇಳದಂತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ದೀಪಾ ಅವರು ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಮದುವೆ ಫೊಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಉಜಿರೆಯ ಐಟಿ ಉದ್ಯೋಗಿ ಆಗಿರುವ ರಕ್ಷಿತ್ ಯಡಪಡಿತ್ತಾಯ ಅವರನ್ನು ಮದುವೆಯಾಗಿದ್ದಾರೆ. ಬೆಳ್ತಂಗಡಿ ಉಜಿರೆಯ ಜನಾರ್ಧನ ಸ್ವಾಮಿ ದೇವಸ್ಥಾನದ ಕೃಷ್ಣಾನುಗ್ರಹ ಸಭಾ ಗೃಹದಲ್ಲಿ ಅದ್ಧೂರಿಯಾಗಿ ಮದುವೆ ಸಮಾರಂಭ ನಡೆದಿದೆ.
ಮೆಹಂದಿ ಶಾಸ್ತ್ರ, ಹಳದಿ ಶಾಸ್ತ್ರದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ದೀಪಾ ಅವರ ಮದುವೆಗೆ 'ಮಿಥುನರಾಶಿ' ಧಾರಾವಾಹಿಯ ಕಲಾವಿದರು ಆಗಮಿಸಿ ಶುಭ ಹಾರೈಸಿದ್ದಾರೆ.


Click it and Unblock the Notifications











